ಸೋಮವಾರ, ಏಪ್ರಿಲ್ 23, 2018

ನೀರಿಲ್ಲದ ನಾಳೆ !? Waterless 2marow ....!?

ನೀರಿಲ್ಲದ ನಾಳೆಯುಂಟೇ .... !?       Waterless  2marow ....!? 





                                             ವಿಶ್ವ ಜಲದಿನದ ವಿಶೇಷ ಲೇಖನ 



ಹನಿ ನೀರೂ ಬಂಗಾರ......!                                *   ಜಲ ರಕ್ಷಿತೋ ರಕ್ಷಿತ:
     ಜಲವಿಲ್ಲದೆ ಜೀವವಿಲ್ಲ.                                         *  ಜಲ ರಕ್ಷಣೆ – ಜನತೆಯ ಹೊಣೆ


                                                           ಬರಹ: ಕೂಡಂಡ ರವಿ, ಹೊದ್ದೂರು




ನೀರಿನ ಮಹತ್ವದ ಅರಿವು


 ನೀರೇ ಇಲ್ಲದಾಗ, ನೀರು  ಅತೀಯಾದಾಗ ಮಾತ್ರ ನೀರಿನ ಮಹತ್ವದ ಅರಿವು ಜನತೆಗೆ ಆಗುವುದು. ಉಳಿದ ದಿನಗಳಲ್ಲಿ ನೀರಿನ ಬಗ್ಗೆ ಜನತೆಗೆ ಅಸಡ್ಡೆ ? !

ನಾವು ಆಹಾರವಿಲ್ಲದೆ, ಹಲವಾರು ದಿನಗಳ ಕಾಲ ಬದುಕಬಲ್ಲೆವು. ಆದರೆ, ನೀರಿಲ್ಲದೆ, ಬಹುಶ್ಯ ಬದುಕುವುದು ಅಸಾಧ್ಯ. ಈ ಹಿನ್ನೆಲೆಯಲ್ಲಿ “ ನೀರನ್ನು ಜೀವಜಲವೆಂದು “ ಪರಿಗಣಿಸಲಾಗುತ್ತದೆ. ಭೂಮಿಯಲ್ಲಿ ಶೇಕಡಾ 71 ಭಾಗ ನೀರಿದೆ. ಅದರಲ್ಲಿ ಮಾನವನ ಬಳಕೆಗೆ ಯೋಗ್ಯವಾದ ನೀರಿನ ಪ್ರಮಾಣ ಶೇಕಡಾ 3ರಷ್ಟು ಮಾತ್ರ. ಇರುವ ನೀರು ಹತ್ತಾರು ಕಾರಣಗಳಿಂದಾಗಿ ಕಲುಶಿತವಾಗುತ್ತಿದೆ. ಮಿತಿ ಮೀರಿದ ನಗರೀಕರಣ, ಅರಣ್ಯಗಳ ನಾಶ, ಏಕ ರೀತಿ ಅರಣ್ಯ, ನೆಡುತೋಪುಗಳು, ನೀರಿನ ಇಂಗುವಿಕೆಯ ಕ್ಷೀಣ, ಲಗಾಮು ಇಲ್ಲದೆ ಬೋರ್ವೆಲ್ ಕೊರೆತ, ಇಂತಹ ಹಲವಾರು ಕಾರಣಗಳಿಂದ ಶುದ್ಧ ನೀರಿನ ಲಭ್ಯತೆ ಕಡಿಮೆಯಾಗುತ್ತಿದೆ. 


 ನೀರಿನ ಇಂಗುವಿಕೆಯ ಕೊರತೆ
ಸಕಾಲಿವಾಗಿ ಮಳೆ ಬರುತ್ತಿಲ್ಲ. ಬಂದರೂ ಅದರ ಪ್ರಮಾಣ ಜನತೆಯ ನಿರೀಕ್ಷೆಯ ಪ್ರಮಾಣದಲ್ಲಿರುವುದಿಲ್ಲ. ಅತಿವೃಷ್ಟಿ, ಅನಾವೃಷ್ಠಿಗಳು ರೈತಾಪಿ ವರ್ಗದವರನ್ನು ಕಂಗೆಡಿಸುವಂತೆ ಮಾಡಿದೆ. ಕೃಷಿಯನ್ನೇ ನಂಬಿದವರ ಬಾಳು ಗೋಳಾಗುತ್ತಿದೆ. ಪರಿಣಾಮ ಪ್ರತಿವರ್ಷವೂ ರೈತರ ಆತ್ಮಹತ್ಯೆಯ ಪ್ರಮಾಣ ಏರುತ್ತಾ ಸಾಗುತ್ತಿದೆ. ಕಾಡೆಲ್ಲಾ ಬೋಳಾಗುತ್ತಿದೆ. ಅಭಯಾರಣ್ಯಗಳು ಅಧಿಕಾರಿಗಳ ಮತ್ತು ಕೆಲವು ಪರಿಸರವಾದಿಗಳ ಸ್ವಾರ್ಥಕ್ಕೆ ಸಿಲುಕಿ ತೇಗದ ನಡುತೋಪುಗಳಾಗುತ್ತಿದೆ. ಇವೆಲ್ಲ ಕಾರಣಗಳಿಂದಾಗಿ ನೀರಿನ ಇಂಗುವಿಕೆಯ ಪ್ರಮಾಣ ದಿನೇ ದಿನೇ ಇಳಿಕೆಯಾಗುತ್ತಿದೆ. ಈ ಬಗ್ಗೆ ಸಕಲರೂ ಜಾಗೃತಗೊಳ್ಳಬೇಕಿದೆ. ಅನುಕೂಲವಾದೆಡೆಗಳಲ್ಲಿ ಗಿಡಗಳನ್ನು ನೆಟ್ಟು ಪೋಷಿಸಬೇಕಿದೆ. ಸಾಲುಮರದ ತಿಮ್ಮಕ್ಕ 384 ಆಲದ ಮರಗಳನ್ನು ನೆಟ್ಟು ಅಪೂರ್ವ ಸಾಧನೆ ಮಾಡಿದ್ದಾರೆ. ನಾವೇನು ಮಾಡಿದ್ದೇವೆ ? ನಾವು ಅದೇ ರೀತಿ ಮರ-ಗಿಡ ನೆಟ್ಟಲ್ಲಿ ಒಂದಿಷ್ಟು ನೀರು ಇಂಗೀತು.

ಪೂರ್ವಜರ ಕಾಳಜಿ

ನಮ್ಮ  ಋಷಿ-ಮುನಿಗಳು, ಪೂರ್ವಜರು ಪರಿಸರದ ಬಗ್ಗೆ ಅಪಾರ ಕಾಳಜಿ ಹೊಂದಿದ್ದರು. ಅವರು ಪ್ರಕೃತಿಯ ಆರಾಧಕರಾಗಿದ್ದರು. ಆರಾಧಿಸುವಂತೆ ಪ್ರೇರೇಪಿಸುತ್ತಿದ್ದರು. ನದಿಗಳನ್ನು ಪವಿತ್ರತೆಯಿಂದ ಪೂಜಿಸಿ ಧನ್ಯರಾಗುತ್ತಿದ್ದರು. ಈ ಹಿನ್ನಲೆಯಲ್ಲಿ ‘ಗಂಗೇಚ ಯಮುನೇಚ ಗೋದಾವರಿ ಸಿಂಧೂ’ ಎಂಬ ಶೋಕ್ಲವು ಇದೆ. ಕೊಡಗಿನಲ್ಲಿರುವ ದೇವರಕಾಡುಗಳು ಪ್ರಾಕೃತಿಕ ಮಳೆಕೊಯ್ಲಿನ “ಖಜಾನೆಗಳು”. ಈ ಹಿನ್ನಲೆಯಲ್ಲಿ ಹಲವಾರು ಪೂಜನೀಯ ದೇವರ ಕಲ್ಲುಗಳು ಬಸರಿ, ಹಲಸು, ಹೆಬ್ಬಲಸು ಮುಂತಾದ ಮರಗಳ ಬುಡಗಳಲ್ಲಿದ್ದು ಆರಾಧಿಸಲ್ಪಡುತ್ತಿವೆ. ಹಲವಾರು ಮಂದ್‍ಮಾನಿಗಳಲ್ಲಿ ಮರಗಳಿವೆ.ಈ ಹಿನ್ನಲೆಯಲ್ಲಿಯೇ “ವೃಕ್ಷೋ ರಕ್ಷಿತೋ ರಕ್ಷಿತಃ “ ಎಂಬ ನಾಣ್ನುಡಿಯು ಪ್ರಚಲಿತದಲ್ಲಿದೆ. ಇವೆಲ್ಲವೂ ಪರೋಕ್ಷವಾಗಿ ನೀರಿಂಗಿಸಲು ಪ್ರೇರಣೆ ನೀಡುವ ಅಂಶಗಳಾಗಿವೆ.


ನೀರಿನ ಮಹತ್ವದ ಅರಿವು

ನಮಗೆ ನೀರೇ ಇಲ್ಲದಾಗ, ನೀರು ಅತಿಯಾದಾಗ ಮಾತ್ರ ನೀರಿನ ಮಹತ್ವದ ಅರಿವು ಜನತೆಗೆ ಆಗುವುದು. ಉಳಿದ ದಿನಗಳಲ್ಲಿ ನೀರಿನ ಬಗ್ಗೆ ಜನತೆಗೆ ಅಸಡ್ಡೆ ? !
ಮಳೆಯ ನೀರನ್ನು ಇಂಗಿಸಿ.

ನೀರಿನ ಅಭಾವ ಹೆಚ್ಚಾಗುತ್ತಿರುವುದರಿಂದ ನೀರಿನ ಮಿತ ಬಳಕೆ, ನೀರಿಂಗಿಸುವ ಬಗ್ಗೆ ಜನಜಾಗೃತಿ ಮೂಡುತ್ತಿದೆ. ಆಧುನಿಕ ಭಗೀರಥರೆಂದು ಖ್ಯಾತರಾದ ರಾಜಸ್ಥಾನದ ರಾಜೇಂದ್ರ ಸಿಂಗ್, ಕರ್ನಾಟಕ ಚಿತ್ರದುರ್ಗದ ಜಿಯೋ ರೈನ್ ವಾಟರ್ ಬೋರ್ಡ್‍ನ  ದೇವರಾಜರೆಡ್ಡಿ, ಪುತ್ತೂರಿನ ಅಡಿಕೆ ಪತ್ರಿಕೆಯ ಸಂಪಾದಕರಾದ ಶ್ರೀಪಡ್ರೆ ಜನತೆಯಲ್ಲಿ ಜಲಜಾಗೃತಿ ಮೂಡಿಸುತ್ತಿದ್ದಾರೆ. ವಿವಿಧ ಮಾಧ್ಯಮಗಳಲ್ಲಿಯೂ ಈ ಬಗ್ಗೆ ಅರಿವು ಮೂಡಿಸಲಾಗುತ್ತಿದೆ.  ಯೂಟ್ಯೂಬ್, ಫೇಸ್‍ಬುಕ್, ಟ್ವಟ್ಟರ್, ರೇಡಿಯೋ, ಟಿ.ವಿ, ವೆಬ್ ಟಿ.ವಿ, ಮುಂತಾದವುಗಳಲ್ಲಿ ಹೇರಳ ಮಾಹಿತಿಯ ಮಹಾಪೂರವೇ ಆಸಕ್ತರಿಗೆ ಲಭ್ಯವಿದೆ. ಹಲವಾರು ಮುದ್ರಣ ಮಾಧ್ಯಮಗಳು ಈ ನಿಟ್ಟಿನಲ್ಲಿ ಅಪಾರ ಶ್ರಮವಹಿಸುತ್ತಿವೆ. 


ಶ್ರೀಪಡ್ರೆಯವರು ನೀರಿನ ಮಹತ್ವ, ನದಿಗಳ ಜೋಡಣೆ, ಅಡ್ಡ ಬೋರು ಮುಂತಾದ ವಿಚಾರಗಳ ಬಗ್ಗೆ ಹಲವಾರು ಪುಸ್ತಕಗಳನ್ನು ಬರೆದಿರುವರು. ಚಿತ್ರದುರ್ಗದ ದೇವರಾಜರೆಡ್ಡಿಯವರು ಬರೆದ ಮಳೆಕೊಯ್ಲಿನ ಕುರಿತಾದ ಪುಸ್ತಕವು 12 ಮುದ್ರಣವನ್ನು ಕಾಣುತ್ತಿದೆ. 

ಮಳೆಕೊಯ್ಲು ಕಡ್ಡಾಯ

ಕರ್ನಾಟಕದ ಪ್ರತಿಮನೆ, ಬಾವಿ, ಬೋರ್ವೆಲ್‍ಗಳಿಗೆ ಮಳೆ ಕೊಯ್ಲುವನ್ನು ಕಡ್ಡಾಯಗೊಳಿಸಬೇಕು. ಎಲ್ಲಕ್ಕೂ ಸರಕಾರವನ್ನೇ ನಂಬುವ ಬದಲು ನಾವೇ ಸ್ವಯಂ ಪ್ರೇರಿತರಾಗಿ ಮುಂದಾಗಬೇಕು. ಎಲಲೆಡೆ ಮಳೆಕೊಯ್ಲು ಪ್ರೇರಣಾ ಸಂಘ ಸ್ಥಾಪಿಸಿ, ಜಲಜಾಗೃತಿ ಮೂಡಿಸಬೇಕು. ಗ್ರಾಮ, ಪಂಚಾಯಿತಿ, ಹೋಬಳಿ, ತಾಲೂಕು, ಜಿಲ್ಲೆ, ರಾಜ್ಯಮಟ್ಟದಲ್ಲಿ ಕಾರ್ಯೋನ್ಮುಖವಾಗಬೇಕಿದೆ. ಆಯಾ ಪ್ರದೇಶಗಳ ಸಂಘಗಳು,  ಸ್ವಯಂ ಸೇವಾ ಸಂಸ್ಥೆಗಳು, ಶಾಲಾ ಕಾಲೇಜು ವಿದ್ಯಾರ್ಥಿಗಳೊಂದಗೆ ಸೇರಿ ವಿಶೇಷ ಅಭಿಯಾನ ಕೈಗೊಳ್ಳಬೇಕಿದೆ. ಕಾಲೇಜುಗಳ ಎನ್‍ಎಸ್‍ಎಸ್ ಶಿಬಿರಗಳಲ್ಲಿ ಈ ಬಗ್ಗೆ ಪ್ರಾತ್ಯಕ್ಷಿಕೆ ನೀಡಬೇಕು. ಪ್ರತಿ ಮನೆಯಲ್ಲೂ ನೀರಿನ ಮಿತ ಬಳಕೆ, ಮಳೆ ನೀರು ಕೊಯ್ಲು, ಕಲುಶಿತ ನೀರಿನ ತಡೆ ಮುಂತಾದವುಗಳ ಬಗ್ಗೆ ಅರಿವು ಮೂಡಿಬೇಕು. ನಮ್ಮ ಪಠ್ಯಕ್ರಮದಲ್ಲಿಯೂ ಈ ಕುರಿತಾದ ಪಾಠದ ಸೇರ್ಪಡೆಯಾಗಬೇಕಿದೆ.

ನಮ್ಮ ಪ್ರಧಾನಿಯವರು ತಮ್ಮ “ಮನ್ ಕೀ ಬಾತ್ “ ಕಾರ್ಯಕ್ರಮದಲ್ಲಿ  ಹಲವಾರು ಉತ್ತಮ ವಿಚಾರಗಳ ಬಗ್ಗೆ ಪ್ರಸ್ತಾಪಿಸಿದ್ದರೂ, ಈವರೆಗೆ ಮಳೆಕೊಯ್ಲುವಿನ ಬಗ್ಗೆ ಪ್ರಸ್ತಾಪಿಸದೇ ಇರುವುದು ವಿಷಾದನೀಯ ಅಂಶ. ಈ ಬಾರಿ ವಿಶ್ವ ಜಲದಿನದ ಸಂದರ್ಭದಲ್ಲಾದರೂ, ಈ ಬಗ್ಗೆ ಪ್ರಸ್ತಾಪ ಮಾಡುವರು ಎಂಬ ನಿರೀಕ್ಷೆ ಇದೆ. 

 ಕುಡಿಯಲು ಕಾವೇರಿ ನೀರು ಬೇಡ !

ಉದಾಹರಣೆಗಾಗಿ ಬೆಂಗಳೂರನ್ನು ತೆಗೆದುಕೊಳ್ಳೋಣ. ಅಲ್ಲಿ ವರ್ಷಕ್ಕೆ ಸರಾಸರಿ ಸುಮಾರು 750 ಮಿಲಿ ಮೀಟರ್ ಮಳೆಯಾಗುತ್ತದೆ. ಅಲ್ಲಿನ ಎಲ್ಲಾ ಮನೆಗಳಿಗೆ ಮಳೆ ನೀರಿನ ಕೊಯ್ಲನ್ನು ಅಳವಡಿಸಿದಲ್ಲಿ ವಾರ್ಷಿಕ ಸುಮಾರು 15 ಟಿಎಂಸಿ ನೀರು ದೊರೆಯಲಿದೆ. ಆ ನಗರಕ್ಕೆ ವಾರ್ಷಿಕವಾಗಿ ಕುಡಿಯಲು ಬೇಕಾದ ನೀರು 115 ರಿಂದ 20 ಟಿಎಂಸಿ ನೀರು ಬೇಕಾಗಬಹುದು. ಉಳಿದ ನೀರಿಗಾಗಿ ಮಾತ್ರ ಅಲ್ಲಿನ ಜನತೆ ಬೇರೆ ಮೂಲಗಳ ಮೊರೆ ಹೋಗಬೇಕಾದೀತು.
 ಇದೇ ರೀತಿ ಮಲೆ(ಮಳೆ)ನಾಡು ಪ್ರದೇಶಗಳಲ್ಲಿ ಅಪಾರ ಪ್ರಮಾಣದ ಮಳೆ ಬೀಳುತ್ತದೆ. ಅಂದರೇ  ವಾರ್ಷಿಕ ಸರಾಸರಿ ಸುಮಾರು 2500 ಮಿಲಿ ಮೀಟರ್. ಇದನ್ನು ಬಾವಿ, ಬೋರ್‍ವೆಲ್, ಹಾಳು ಬಿದ್ದ ಬೋರ್‍ವೆಲ್‍ಗಳಿಗೆ ಮರುಪೂರಣ ಮಾಡಿದ್ದಲ್ಲಿ ಅಂತರ್ ಜಲದ ಮಟ್ಟವು ಗಣನೀಯವಾಗಿ ಏರುತ್ತದೆ.


ಕೊಡಗಿನ ಉದಾಹರಣೆಗಳು

ಕೊಡಗಿನ ವೀರಾಜಪೇಟೆ ತಾಲೂಕಿನ  ಅಮ್ಮತ್ತಿಯಲ್ಲಿ ಕೊಡವ ಸಮಾಜ ಕಲ್ಯಾಣ ಮಂಟಪವಿದೆ. ಅಲ್ಲಿ ಸುಮಾರು 10- 12 ವರ್ಷಗಳ ಹಿಂದೆ “ಮಳೆಕೊಯ್ಲುನ್ನು “ ಮಾಡಲಾಗಿದೆ. ಅಲ್ಲಿನ ಛಾವಣಿಗೆ ಬಿದ್ದ ಮಳೆ ನೀರನ್ನು ತೆರೆದ ಬಾವಿಗೆ ಮರುಪೂರಣ ಮಾಡಲಾಗುತ್ತಿದೆ. ಇದರಿಂದಾಗಿ ಕಲ್ಯಾಣ ಮಂಟಪದ ಅವರಣದಲ್ಲಿರುವ ಎರಡು ಬೋರ್ ವೆಲ್, ತೆರೆದ ಬಾವಿಗಳಲ್ಲಿ ನೀರಿನ ಪ್ರಮಾಣದಲ್ಲಿ ಗಣನೀಯ ಏರಿಕೆ ಕಂಡುಬಂದಿದೆ ಎಂದು ಕೊಡವ ಸಮಾಜದ ಅಧ್ಯಕ್ಷ ಬೋಸ್ ದೇವಯ್ಯ, ವ್ಯವಸ್ಥಾಪಕ ಕುಂಞಂಡ ದೇವಯ್ಯ ವಿವರವಿತ್ತರು

.ಶಾಲೆಯಲ್ಲಿ ಜಲಪಾಠ

ಮಡಿಕೇರಿ ತಾಲೂಕಿನ ಮೂರ್ನಾಡು ಸಮೀಪದ ಹೊದ್ದೂರು ಪ್ರಾಥಮಿಕ ಶಾಲೆಯಲ್ಲಿ ಮಳೆ ಕೊಯ್ಲು ಮಾಡಲಾಗಿದೆ. ಅಲ್ಲಿನ ಶಾಲೆಯ ಮೇಲ್ಛಾವಣಿಗೆ ಬಿದ್ದ ಸಂಪೂರ್ಣ ನೀರನ್ನು ಶುದ್ಧೀಕರಿಸಲಾಗುತ್ತದೆ. ಬಳಿಕ ಅದನ್ನು ನೇರವಾಗಿ ಬಾವಿಗೆ ಮರು ಪೂರಣ ಮಾಡಲಾಗುವುದು. ಇದರಿಂದಾಗಿ ಶಾಲೆಯ ಬಾವಿ ಮಾತ್ರವಲ್ಲ, ಅಕ್ಕ-ಪಕ್ಕಗಳ ಇತರ ಬಾವಿ ಮತ್ತು ಬೋರ್‍ವೆಲ್‍ಗಳಲ್ಲಿಯೂ ನೀರಿನ ಪ್ರಮಾಣದಲ್ಲಿ ಗಣನೀಯ ಏರಿಕೆಯಾಗಿದೆ ಎಂದು ಮುಖ್ಯೋಪಾಧ್ಯಾಯರು ಮಾಹಿತಿ ನೀಡಿದ್ಧಾರೆ.

ಮಾಜಿ ಯೋಧರ ಯಶೋಗಾಥೆ

ಮಡಿಕೇರಿ ತಾಲೂಕಿನ ಮೂರ್ನಾಡುವಿಗೆ ಸನಿಹದ ಕಿಗ್ಗಾಲುವಿನ ಮಾಜಿ ವಾಯುಪಡೆಯ ಯೋಧ ಗಿರೀಶ್ ತಮ್ಮ ಮನೆಯಲ್ಲಿ ಮಳೆಕೊಯ್ಲನ್ನು ಅಳವಡಿಸಿದ್ದಾರೆ. ಇವರು ತಮ್ಮ ಮನೆಯ ಮೇಲ್ಛಾವಣಿಗೆ ಬೀಳುವ ಮಳೆಯ ನೀರನ್ನು ಶೋಧಕ ಮೂಲಕ ಶೋಧಿಸಿ ನೇರವಾಗಿ ತಮ್ಮ ಕುಡಿಯುವ ನೀರಿನ ಬಾವಿಗೆ ಹರಿಸುತ್ತಿದ್ದಾರೆ. ಇದರಿಂದಾಗಿ ಅವರ ಬಾವಿಯ ನೀರು ಮಾತ್ರವಲ್ಲ, ಆ ವ್ಯಾಪ್ತಿಯ ಜಲಮಟ್ಟದಲ್ಲಿ ಅನಿರೀಕ್ಷಿತ ಪ್ರಗತಿ ಕಂಡುಬಂದಿದೆ ಎಂದು ಅವರ ಪುತ್ರ, ಮೂರ್ನಾಡು ಪದವಿ ಕಾಲೇಜಿನ ಉಪನ್ಯಾಸಕ ಹರೀಶ್ ತಮ್ಮ  ಅನಿಸಿಕೆಗಳನ್ನು ಹಂಚಿಕೊಂಡರು. 


ತಮಿಳುನಾಡು ವಿಶ್ವಕ್ಕೆ ಮಾದರಿ 

ಜನತೆ ಸಂಘಟಿತರಾದಲ್ಲಿ ಏನ್ನನ್ನಾದರೂ ಮಾಡಬಹುದು ಎಂಬುವುದಕ್ಕೆ ತಮಿಳುನಾಡು ಇಡೀ ವಿಶ್ವಕ್ಕೆ ಮಾದರಿ. ಜಯಲಲಿತಾ ತಮಿಳುನಾಡಿನ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಚೆನೈನ ಎಲ್ಲಾ ಮನೆಗಳಿಗೂ ಮಳೆಕೊಯ್ಲನ್ನು ಕಡ್ಡಾಯಗೊಳಿಸಿದರು. ಇದಾದ ಎರಡು ವರ್ಷಗಳ ತರುವಾಯ ಚೆನೈನ ಒಂದು ಭಾಗದಲ್ಲಿ ನೀರಿನ ಅಂತರ್ ಜಲದ ಮಟ್ಟದ ಪ್ರಮಾಣವನ್ನು ಅಳೆಯಲಾಯಿತು. ಈ ಸಂದರ್ಭ ಸುಮಾರು 6 ರಿಂದ 8 ಮೀಟರ್ ಏರಿಕೆಯಾಗಿರುವುದು ಕಂಡುಬಂತು.
ಇವುಗಳು ಕೇವಲ ಉದಾಹರಣೆಗಳಷ್ಟೆ. ಶ್ರೀ ಸಾಮಾನ್ಯನೂ ಅಸಾಮಾನ್ಯ ಸಾಧನೆ ಮಾಡಲು ಸಾಧ್ಯವಿದೆ. ಸಾಧಿಸುವ ಛಲ, ನಿರಂತರ ಪ್ರಯತ್ನ, ಶ್ರದ್ಧೆ ಇರಬೇಕಷ್ಟೆ. 

ನೀರಿಲ್ಲದ ನಾಳೆಯಿಲ್ಲ. 

ಪ್ರತಿವರ್ಷವೂ ಜಲದ ಮಹತ್ವವನ್ನು ಜಗತ್ತಿಗೆ ಸಾರಿ ಹೇಳುವ ದೃಷ್ಟಿಯಿಂದ “ವಿಶ್ವಜಲ ದಿನ” ವನ್ನು ಪ್ರತಿವರ್ಷವೂ ಮಾರ್ಚ್ 22ರಂದು ಆಚರಿಸಲಾಗುತ್ತದೆ. ತನ್ಮೂಲಕ ಜನತೆಯನ್ನು “ಜಲಸಾಕ್ಷರ”ರನ್ನಾಗಿಸಲಾಗಲು ಶ್ರಮಿಸಲಾಗುವುದು. ವರ್ಷಗಳು ಉರುಳಿದಂತೆ ಜಗದಲದಲ್ಲಿ ಶುದ್ಧ ನೀರಿನ ಲಭ್ಯತೆ ಕಡಿಮೆಯಾಗುತ್ತಲಿದೆ. ಇದರಿಂದ ಈ ದಿನಾಚರಣೆಗೆ ಮಹತ್ವ ಹೆಚ್ಚಾಗುತ್ತಿದೆ. ಈ ದಿನಾಚರಣಾ ಸಮಯದಲ್ಲಿ ಈ ಕುರಿತಾದ ಲೇಖನಗಳು, ಬರಹಗಳು, ನುಡಿಚಿತ್ರ, ಕಿರುಚಿತ್ರಗಳ ಮೂಲಕ ಮಾಹಿತಿ ನೀಡಲಾಗುತ್ತದೆ. ಈ ವರ್ಷದ ಫೋಷಾವಾಕ್ಯ “ ನೀರಿಗಾಗಿ ಪ್ರಕೃತಿ “ ಎಂಬುದಾಗಿದೆ. ನೀರಿನ ಬಗ್ಗೆ ಮಾಹಿತಿ ನೀಡುವ ಲೇಖನಗಳಿಗೆ ಭಾರೀ ಬೇಡಿಕೆ ಇದೆ.
  "ಬೋರ್ ವೆಲ್ ಮುಚ್ಚುವ ಮುನ್ನಾ ನೂರಾರು ಬಾರಿ ಯೋಚಿಸಿ"  ಎಂಬ ನನ್ನ ಬ್ಲಾಗ್ ಸುಮಾರು 14 ಸಾವಿರಕ್ಕೂ ಅಧಿಕ ಜನರಿಂದ ವಿಶ್ವವ್ಯಾಪಿಯಾಗಿ  ವಾಚಿಸಲ್ಪಟ್ಟಿದೆ ! ( ಮಾರ್ಚ್ – 20, 2018ರವರೆಗೆ )

ನೀವೇನು ಮಾಡಬಹುದು

ನಿಮ್ಮ ಮನೆಯ ಮೇಲ್ಛಾವಣಿ, ಹೊಲ, ತೋಟಗಳಲ್ಲಿ ನೀರನ್ನು ಹರಿದು ಹಳ್ಳ-ಕೊಳ್ಳ ಸೇರಲು ಬಿಡಬೇಡಿ. ಹನಿ ನೀರನ್ನು ಇಂಗಿಸುವ ಪ್ರಯತ್ನ ಮಾಡಿ. ಸಾಧ್ಯವಾರೆ, ನಿಮ್ಮ ನೆರೆಹೊರೆಯವರ ಸಹಕಾರದೊಡನೆ ಈ ಕೆಲಸವನ್ನು ಸಾಮೂಹಿಕವಾಗಿ ಮಾಡಿ.    ಜಲಸಾಕ್ಷರತಾ ಸ್ವಸಹಾಯ ಸಂಘಗಳನ್ನು ಸ್ಥಾಪಿಸಿ. ನಾಳೆಗಾಗಿ “ ಜಲ ರಕ್ಷಣೆ - ನಮ್ಮೆಲ್ಲರ ಹೊಣೆ “ ಎಂಬ ಜಲ ಅಭಿಯಾನವನ್ನು ಆರಂಭಿಸಿ. ಈ ಕಾರ್ಯಕ್ಕೆ ನಿಮ್ಮ ಪ್ರದೇಶದ ಸಂಘ- ಸಂಸ್ಥೆಗಳ, ವಿದ್ಯಾರ್ಥಿಗಳ ನೆರವು ಪಡೆಯಿರಿ. ನುರಿತ ತಜ್ಞರಿಂದ ಅರಿವು ಕಾರ್ಯಕ್ರಮ ಆಯೋಜಿಸಿ. 



“ ಪ್ರತಿ ದಿನವೂ ಜಲದಿನವಾಗಬೇಕು. ನೀರಿನ ಕಳಕಳಿ ಕೇವಲ ದಿನಕ್ಕೆ ಸೀಮಿತವಾಗದಿರಲಿ. ಮಳೆಗಾಲದಲ್ಲಿ ಧಾರಾಳ ದೊರೆಯುವ ನೀರನ್ನು ಉಳಿಸುವ , ಇಂಗಿಸುವ ಕುರಿತು ಯೋಚಿಸಿ. ಹಣ ಖರ್ಚು ಮಾಡಲು ನೂರಾರು ಬಾರಿ ಯೋಚಿಸುವಂತೆ ನೀರು ಬಳಸುವಾಗಲೂ ಚಿಂತಿಸಿ.” 


  ಶ್ರೀ ಪಡ್ರೆ,  ಜಲತಜ್ಞ , ಪುತ್ತೂರು. 




“ನೀರನ್ನು ಗೆಲ್ಲುವ ಪ್ರಯತ್ನ ನಿರಂತರವಾಗಿ ನಡೆಸಬೇಕು. ವೈಜ್ಞಾನಿಕವಾಗಿ ನೀರಿನ ಮರುಪೂರಣ, ಇಂಗಿಸುವಿಕೆಯ ಬಗ್ಗೆ ಜನತೆಯಲ್ಲಿ ವ್ಯಾಪಕವಾಗಿ ಅರಿವು ಮೂಡಿಸಬೇಕು. ನೀರನ್ನು ಅರಿತು ಬಳಸುವಂತೆ ಮುಂದಿನ ಪೀಳಿಗೆಗೆ ತಿಳಿಹೇಳಬೇಕು.”


ಎಂ. ದೇವರಾಜರೆಡ್ಡಿ, ಜಲತಜ್ಞ, ಚಿತ್ರದುರ್ಗ. ಮೊ. 9448125498