ಶುಕ್ರವಾರ, ಮಾರ್ಚ್ 9, 2018

ಕೃಷಿಯಲ್ಲಿ ಸುಣ್ಣದ ಬಳಕೆ ಏಕೆ-ಹೇಗೆ ? Lime In Agriculture



                          ಕೃಷಿಯಲ್ಲಿ ಸುಣ್ಣದ ಬಳಕೆ ಏಕೆ-ಹೇಗೆ ?  






ಬರಹ: ಕೂಡಂಡ ರವಿ,







 ಕೊಡಗು ಜಿಲ್ಲೆಯ ಬಹುತೇಕ ಕೃಷಿಕರು ವಿವಿಧ ಬೆಳೆಗಳಿಗೆ ಸುಣ್ಣವನ್ನು ಬಳಸುತ್ತಾರೆ. ಸರ್ವೇ ಸಾಮಾನ್ಯವಾಗಿ ಕಾಫಿ, ಅಡಿಕೆ, ಬಾಳೆ, ಭತ್ತ, ಶುಂಠಿ ಸೇರಿದಂತೆ ವಿವಿಧ ಬೆಳೆಗಳಿಗೆ ಇದನ್ನು ಬಳಸುತ್ತಿರುವುದು ಕಾಣಬರುತ್ತಿದೆ.

ಸುಣ್ಣದ ವಿಧಗಳು: 

ಜಿಲ್ಲೆಯ ಬೆಳೆಗಾರರು ಸಾಮಾನ್ಯವಾಗಿ ಕೃಷಿ ಸುಣ್ಣ, ಡೋಲೋಮೈಟ್ ಸುಣ್ಣ ಮತ್ತು ಚಿಪ್ಪು ಸುಣ್ಣವನ್ನು ಬಳಸುತ್ತಿರುವರು. ಕೃಷಿ ಸುಣ್ಣದ ಬಳಕೆಯಿಂದ ಕ್ಯಾಲ್ಸಿಯಂ ಕಾರ್ಬೋನೇಟ್, ಡೊಲೋಮೈಟ್ ಸುಣ್ಣದ ಬಳಕೆಯಿಂದ ಬೆಳೆಗಳಿಗೆ ಕ್ಯಾಲ್ಸಿಯಂ ಕಾರ್ಬೋನೇಟ್, ಮತ್ತು ಮೆಗ್ನೇಷಿಯಂ ಕಾರ್ಬೋನೆಟ್‍ಗಳು ದೊರೆಯುತ್ತವೆ.






ಕೊಡಗು ಸೇರಿದಂತೆ ಮಳೆ ಹೆಚ್ಚಾಗಿ ಬೀಳುವ ಪ್ರದೇಶಗಳಲ್ಲಿ ಮಣ್ಣಿನ ರಸಸಾರವು ಕೊಚ್ಚಿಹೋಗುತ್ತದೆ. ರೈತರು ನಿರಂತರವಾಗಿ ತಮ್ಮ ತೋಟ ಗದ್ದೆಗಳಿಗೆ ರಾಸಾಯನಿಕ ಗೊಬ್ಬರಗಳನ್ನು ಹಾಕುವುದರಿಂದ ಮಣ್ಣಿನಲ್ಲಿ ರಸಸಾರ(ಪಿ.ಹೆಚ್ ಮೌಲ್ಯ) ವ್ಯತ್ಯಾಸವಾಗುತ್ತದೆ. ಇದನ್ನು ತಡೆಯುವ ಸಲುವಾಗಿ ಕನಿಷ್ಠ ಪ್ರತಿ ಮೂರು ವರ್ಷಗಳಿಗೊಮ್ಮೆ, ರೈತಾಪಿ ವರ್ಗದವರು ತಮ್ಮ ಗದ್ದೆ ತೋಟಗಳಿಗೆ ನಿಗದಿತ ಪ್ರಮಾಣದಲ್ಲಿ ಸುಣ್ಣ ಹಾಕುವಂತೆ ಕೃಷಿ ವಿಜ್ಞಾನಿಗಳು ಸಲಹೆ ನೀಡುತ್ತಾರೆ.








 ಸಾಮಾನ್ಯವಾಗಿ ಮಣ್ಣಿನ ರಸಸಾರವು 5.8ರಿಂದ 6.2ರ ಮಧ್ಯೆ ಇರಬೇಕು. ಆದರೆ, ರೈತಾಪಿ ವರ್ಗದವರು ನಿರಂತರವಾಗಿ ಸುಣ್ಣ ಬಳಸದೇ ರಾಸಾಯನಿಕ ಗೊಬ್ಬರ ಬಳಸುವುದರಿಂದ ಮತ್ತು ಅಧಿಕ ಮಳೆಯಿಂದಾಗಿ ಮಣ್ಣಿನ ಪಿ. ಹೆಚ್. ಮೌಲ್ಯದಲ್ಲಿ ಏರುಪೇರಾಗುತ್ತದೆ. ಇದರ ಪರಿಣಾಮ ಬೆಳೆಗಾರರು ಹಾಕಿದ ಗೊಬ್ಬರವನ್ನು ತೋಟ ಮತ್ತು ಗದ್ದೆಗಳಲ್ಲಿರುವ ಬೆಳೆಗಳು ಪಡೆಯಲು ವಿಫಲವಾಗುತ್ತದೆ. ಗೊಬ್ಬರವು ಪೋಲಾಗುತ್ತದೆ. ಇವೆಲ್ಲದರ ಪರಿಣಾಮ ನಿಗದಿತ ಬೆಳೆಗಳಲ್ಲಿ ಇಳುವರಿಯ ಪ್ರಮಾಣ ಗಣನೀಯವಾಗಿ ಕುಸಿಯುತ್ತದೆ. 







 ಮಣ್ಣು ಪರೀಕ್ಷೆ ಅತ್ಯಗತ್ಯ: 

ಬೆಳೆಗಾರರು ಕಾಲ-ಕಾಲಕ್ಕೆ ತಕ್ಕಂತೆ ತಮ್ಮ ಜಮೀನುಗಳ ಮಣ್ಣನ್ನು ಪರೀಕ್ಷೆ ಮಾಡಿಸಬೇಕು. ಅದರ ಫಲಿತಾಂಶವನ್ನು ಆದರಿಸಿ ತಜ್ಞರು ಶಿಫಾರಸ್ಸು ಮಾಡಿದಂತೆ ಕಾಲಕ್ಕನುಗುಣವಾಗಿ ಗೊಬ್ಬರ, ಸುಣ್ಣ ಇತ್ಯಾದಿಗಳನ್ನು ನೀಡಬೇಕು. ಇದನ್ನು ಅನುಸರಿಸದೇ ರೈತಾಪಿವರ್ಗದವರು ಮನಸೋ ಇಚ್ಛೆ ಗೊಬ್ಬರ-ಸುಣ್ಣ ಹಾಕಿದಲ್ಲಿ ಹಣ, ಶ್ರಮ ವ್ಯರ್ಥವಾಗುತ್ತದೆ. ಅಧಿಕ ರಾಸಾಯನಿಕ ಗೊಬ್ಬರ ಬಳಕೆಯಿಂದಾಗಿ ಮಣ್ಣಿನಲ್ಲಿ ರಸಸಾರದ ಸಮತೋಲನ ತಪ್ಪಿ, ಭೂಮಿಯು ಬರಡಾಗುವ ಸಾಧ್ಯತೆ ಇದೆ. ಕೆಲವೆಡೆಗಳಲ್ಲಿ ಶುಂಠಿ ಬೆಳೆದ ಪ್ರದೇಶಗಳಲ್ಲಿ ಭೂಮಿ ಬಂಜರಾಗುತ್ತಿರುವುದು ಇದೇ ಕಾರಣದಿಂದಲೇ. ಇದು ಅಧಿಕ ರಾಸಾಯನಿಕ ಗೊಬ್ಬರದ ದುರ್ಬಳಕೆಯ ಒಂದು ಉದಾಹರಣೆ ಮಾತ್ರ. ಮೂರು ವರ್ಷಗಳಿಗೊಮ್ಮೆ ಸುಣ್ಣ: ಮಣ್ಣು ಪರೀಕ್ಷೆಯನ್ನು ಆಧಾರವಾಗಿಟ್ಟು ಕೊಂಡು ಜಿಲ್ಲೆಯ ಕೃಷಿಕ ಬಾಂಧವರು ಪ್ರತಿ ಮೂರು ವರ್ಷಗಳಿಗೊಮ್ಮೆ ಪ್ರತಿ ಎಕರೆಗೆ ಸುಮಾರು ಅರ್ಧ ಟನ್‍ನಿಂದ ಒಂದು ಟನ್‍ವರೆಗೆ ಸುಣ್ಣ ನೀಡಬೇಕು. ಮೂರು ವರ್ಷಗಳಿಗೊಮ್ಮೆ ಕೃಷಿ ಸುಣ್ಣವನ್ನು ಜಮೀನಿಗೆ ನೀಡಿದರೆ, ನಂತರದ ಮೂರು ವರ್ಷಕ್ಕೆ ಡೋಲೋಮೈಟ್ ಸುಣ್ಣ ನೀಡಬೇಕು. ಚಿಪ್ಪು ಸುಣ್ಣವು ದುಬಾರಿಯಾಗಿರುವುದರಿಂದ ಬೆಳೆಗಾರರು ಅದನ್ನು ಬಳಸಬಾರದು




.
 ಸಿಂಪಡಣೆ ಸುಣ್ಣವನ್ನು ಬೋಡೋ ದ್ರಾವಣದ ಮಿಶ್ರಣಕ್ಕೆ ಮಾತ್ರ ಬಳಸಬೇಕು. ಉಳಿದ ಉದ್ದೇಶಗಳಿಗೆ ಇದನ್ನು ಬಳಸುವುದು ಸೂಕ್ತವಲ್ಲ. ಈ ಸುಣ್ಣವನ್ನು ಅಧಿಕ ಪ್ರಮಾಣದಲ್ಲಿ ಜಮೀನಿನಲ್ಲಿ ಬಳಸುವುದರಿಂದ ಬೆಳೆಗಳ ಸೂಕ್ಮ ಮತ್ತು ಸಣ್ಣಬೇರುಗಳಿಗೆ ಹಾನಿಯಾಗಬಹುದು ನಿಯಮಿತವಾಗಿ ಜಮೀನಿಗೆ ಸುಣ್ಣವನ್ನು ಬಳಸುವುದರಿಂದಾಗಿ ಸೂಕ್ಮಾಣು ಜೀವಿಗಳ ಪ್ರಮಾಣ ಹೆಚ್ಚಾಗುತ್ತದೆ. ಈ ಹಿನ್ನೆಲೆಯಲ್ಲಿ ಎಲ್ಲಾ ಕೃಷಿಕರು ಸೂಕ್ತ ಸಮಯದಲ್ಲಿ ಸುಣ್ಣವನ್ನು ತಪ್ಪದೇ ಬಳಸಬೇಕು.




 ಸುಣ್ಣವನ್ನೂ ಪರೀಕ್ಷೆ ಮಾಡಿಸಿ

: ಸುಣ್ಣದಲ್ಲಿ ರಸಸಾರದ ಪ್ರಮಾಣ ಶೇ.80 ಇರುತ್ತದೆ. ಕೆಲವರು ಕೊಡಗು ಜಿಲ್ಲೆಯ ವಿವಿಧೆಡೆಗಳಿಗೆ ಸುಣ್ಣವನ್ನು ಸರಬರಾಜು ಮಾಡುತ್ತಿದ್ದಾರೆ. ಕೃಷಿಕರಿಗೆ ಸುಣ್ಣದ ಗುಣಮಟ್ಟದ ಬಗ್ಗೆ ಸಂಶಯ ಬಂದಲ್ಲಿ ಸಮೀಪದ (ಕೊಡಗಿನ ಕೃಷಿಕರು ಚೆಟ್ಟಳ್ಳಿಯ) ಪರೀಕ್ಷಾ ಕೇಂದ್ರದಲ್ಲಿ ಸುಣ್ಣವನ್ನು ಪರೀಕ್ಷೆ ಮಾಡಿಸಿದ ಬಳಿಕವಷ್ಟೇ ಬಳಸುವುದು ಸೂಕ್ತ. ಜಿಲ್ಲೆಯ ಬೆಳೆಗಾರರು ಚಿಪ್ಪು ಸುಣ್ಣವನ್ನು ಬಳಸುವುದಾದರೇ, ಪ್ರತಿ ಏಕರೆಗೆ ಅರ್ಧ ಟನ್ ಸುಣ್ಣವನ್ನು ಬಳಸಬೇಕು. ಸುಣ್ಣ-ಸೂಕ್ತ ಸಮಯ: ಕಾಫಿ, ಅಡಿಕೆ, ಭತ್ತ ಇತ್ಯಾದಿ ಬೆಳೆಗಳ ಕೊಯ್ಲು ಮುಗಿದ ನಂತರ ಸುಣ್ಣವನ್ನು ಜಮೀನಿಗೆ ಚೆಲ್ಲಬೇಕು. ಹೂಮಳೆ ಬರುವುದಕ್ಕೂ ಮುನ್ನಾ ತೋಟದೆಲ್ಲೆಡೆ ಸಮಾನವಾಗಿ ಹರಡುವಂತೆ ಸುಣ್ಣವನ್ನು ಮಣ್ಣಿಗೆ ಸೇರಿಸಬೇಕು. ಆದರೆ, ಕಾಳುಮೆಣಸಿನ ಬಳ್ಳಿಗಳ ಬುಡಕ್ಕೆ ಸುಣ್ಣ ತಾಗದಂತೆ ಎಚ್ಚರಿಕೆ ವಹಿಸಬೇಕು. ಸುಣ್ಣದ ಧೂಲು ಮಾತ್ರ ಅದರ ಬುಡ ತಾಕುವಂತೆ ಸುಣ್ಣ ಎರೆಚಬಹುದಾಗಿದೆ. ತುಂತುರು ನೀರಾವರಿ ಮಾಡುವ ಬೆಳೆಗಾರರು ಅದಕ್ಕೂ ಮುನ್ನಾ ಸುಣ್ಣ ಹಾಕುವುದು ಒಳ್ಳೆಯದು. ಸುಣ್ಣ ಹಾಕುವಾಗ ಮಣ್ಣಿನಲ್ಲಿ ತೇವಾಂಶವಿದ್ದಲ್ಲಿ ಉತ್ತಮ. ತೋಟಗಳಿಗೆ ಸುಣ್ಣ ಹಾಕಿದ ತಿಂಗಳ ಬಳಿಕವೇ ಗೊಬ್ಬರ ನೀಡಬೇಕು.









 (ಮಾಹಿತಿ ಕೃಪೆ: ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರಿನ ಕೇಂದ್ರೀಯ ಕಾಫಿ ಸಂಶೋಧನಾ ಕೇಂದ್ರದ ಹಿರಿಯ ವಿಜ್ಞಾನಿ ನಾಗರಾಜ್ ನೀಡಿದ ಮಾಹಿತಿ ಆಧರಿಸಿ ಲೇಖನವನ್ನು ಸಿದ್ಧಪಡಿಸಲಾಗಿದೆ.)

1 ಕಾಮೆಂಟ್‌: