ಬುಧವಾರ, ಜುಲೈ 11, 2018

ಅಡಿಕೆಗೆ ಅಪಾಯಕಾರಿ ಬೇರುಹುಳ-ನಿಯಂತ್ರಣ

 

                ಅಡಿಕೆಗೆ ಅಪಾಯಕಾರಿ ಬೇರುಹುಳ-ನಿಯಂತ್ರಣ

                                   ಬರಹ : ಕೂಡಂಡ ರವಿ, ಹೊದ್ದೂರು, ಕೊಡಗು 


ಬಹುವಾರ್ಷಿಕ ಬೆಳೆಯಾದ ಅಡಿಕೆ ಕರ್ನಾಟಕದ ಪ್ರಮುಖ ವಾಣಿಜ್ಯ ಬೆಳೆಗಳಲ್ಲಿ ಒಂದು. ಬಹುತೇಕ ಬೆಳೆಗಾರರ ಬೆನ್ನೆಲುಬು. ಕರಾವಳಿ, ಮಲೆನಾಡು, ಬಯಲು ಸೀಮೆಯ ಪ್ರದೇಶಗಳಲ್ಲಿ ಇದನ್ನು ಬೆಳೆಯಲಾಗುತ್ತದೆ. ಸರ್ವೆ ಸಾಮಾನ್ಯವಾಗಿ ಬಹುತೇಕ ಬೆಳೆಗಳನ್ನು ಕಾಡುವಂತೆ, ಅಡಿಕೆ ಬೆಳೆಯನ್ನೂ ವಿವಿಧ ರೋಗಗಳು ಕಾಡುತ್ತವೆ. ಇವುಗಳಲ್ಲಿ ಪ್ರಮುಖವಾದವುಗಳು 2-3 ರೀತಿಯ ಕೀಟಗಳಿವೆ. ಅಡಿಕೆ ಬೆಳೆಗಾರರನ್ನು ಅಧಿಕವಾಗಿ ಚಿಂತೆಗೀಡು ಮಾಡಿರುವ ಬೇರುಹುಳಗಳ ಭಾಧೆ, ಕೊಳೆರೋಗ , ಹಳದಿ ಎಲೆ ರೋಗಗಳು ಹೆಚ್ಚಿನ ಪ್ರಮಾಣದ ಬೆಳೆಹಾನಿಗೆ ಪ್ರಮುಖ ಕಾರಣ ಎನ್ನಬಹುದಾಗಿದೆ.
ಬೇರುಹುಳಗಳ ಅಧಿಕ ಬಾಧೆಯಿಂದಾಗಿ ಅಡಿಕೆಯ ಇಳುವರಿಯು ತೀವ್ರ ಕುಸಿತ ಕಾಣುವಂತಾಗಿದೆ. ಇದು ಬೆಳೆಗಾರರ ಮೇಲೆಯೂ ಮಾರಕ ಪರಿಣಾಮ ಬೀರುತ್ತಿದೆ. ಎಲ್ಲಾ ಬೆಳೆಗಳಂತೆ ಅಡಿಕೆ ಬೆಳೆಗೂ ಬೇರುಗಳು ಅತ್ಯಂತ ಪ್ರಮುಖ ಅಂಗ. ಬೇರಿಗೆ ಹಾನಿಯಾದಲ್ಲಿ ಬೆಳೆಯು ವೃದ್ಧಿಯಾಗುವುದಾದರೂ ಹೇಗೆ ? ಆದರೆ, ಬಹುತೇಕ ಸಂದರ್ಭಗಳಲ್ಲಿ ಅಡಿಕೆ ಬೆಳೆಯ ಬೇರಿಗೆ ಹಾನಿಯಾಗಿದೆ ಎಂದು ಬೆಳೆಗಾರರಿಗೆ ತುಂಬಾ ತಡವಾಗಿ ತಿಳಿಯುತ್ತದೆ.


ಬೇರು ಹುಳಗಳ ಬಾಧೆ ಪತ್ತೆ ? 

ಅಡಿಕೆ ಗಿಡವು ಬೇರುಹುಳದ ಬಾಧೆಗೆ ಒಳಗಾಗಿದೆ ಎಂಬುವುದು ಮೇಲ್ನೋಟಕ್ಕೆ ಕಾಣÀಬರುವುದೇ ಇಲ್ಲ.
ಅಡಿಕೆ ಗಿಡಗಳಲ್ಲಿ ಫಸಲು ನೀಡುವ “ ಹಿಂಗಾರ” ದ ಕೊರತೆಯೇ ಬೇರುಹುಳ ಬಾಧೆಯ ಪ್ರಮುಖ ಲಕ್ಷಣ.
ಎಲೆಯು ಹಳದಿಯಾಗುವುದು, ಎಲೆಗಳು ಕಿರಿದಾಗುವುದು, ಎಲೆಗಳ ಸಂಖ್ಯೆಯು ಕ್ಷೀಣಿಸುವುದು ಈ ರೋಗದ ಮತ್ತೊಂದು ಲಕ್ಷಣ.
ಅಡಿಕೆ ಗಿಡದ ಬೆಳವಣಿಗೆಯ ವೇಗವು ಕುಂಠಿತಗೊಳ್ಳುತ್ತವೆ. ಇದರ ಲಕ್ಷಣವಾಗಿ ಮರದಲ್ಲಿ ಗಿಣ್ಣುಗಳ ಅಂತರ ತೀರಾ ಕಡಿಮೆಯಾಗುವುದು.
ಅಡಿಕೆ ಗಿಡ- ಮರದ ತುದಿ ಮೊನಚಾಗುವುದು ಕೂಡಾ ಈ ರೋಗದ ಲಕ್ಷಣವೆಂದು ಬೆಳೆಗಾರರು ಗಮನಿಸಬೇಕಾದ ಅಂಶ.

ಅಡಿಕೆ ಬೆಳೆಗಾರರನ್ನು ಆಪತ್ತಿನಿಂದ ಸಂರಕ್ಷಿಸಲು ವಿಜ್ಞಾನಿಗಳು ಅವಿರತ ಶ್ರಮಿಸುತ್ತಿದ್ದಾರೆ. ರಾಜ್ಯದ ಕೃಷಿ ವಿಶ್ವವಿದ್ಯಾನಿಲಯಗಳು,  ಶಿವಮೊಗ್ಗದ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾನಿಲಯ, ಶಿವಮೊಗ್ಗದ ವಲಯ ಕೃಷಿ ಮತ್ತು ತೋಟಗಾರಿಕಾ ಸಂಶೋಧನಾ ಕೇಂದ್ರ,  ಕಾಸರಗೋಡಿನಲ್ಲಿರುವ ಅಡಿಕೆ ಬೆಳೆಯ ಸಂಶೋಧನಾ ಕೇಂದ್ರದಂತಹ ಹಲವಾರು ಸಂಸ್ಥೆಗಳು ಮುಂಚೂಣಿಯಲ್ಲಿರುವ ಪ್ರಮುಖ ಸಂಸ್ಥೆಗಳಾಗಿವೆ. ಈ ಸಂಸ್ಥೆಗಳ ನಿರಂತರ ಸಂಶೋಧನೆಗಳ ಫಲವಾಗಿ ಅಡಿಕೆ ಬೆಳೆಯನ್ನು ಕಾಡುವ “ಪ್ರಮುಖ ಶತ್ರು ಬೇರುಹುಳದ ಬಗ್ಗೆ ? “ ಎಂಬ ಬಗ್ಗೆ ಶಿವಮೊಗ್ಗದ ತೋಟಗಾರಿಕಾ ವಿಶ್ವವಿದ್ಯಾನಿಲಯದ ಕೀಟಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಕಲ್ಲೇಶ್ವರಸ್ವಾಮಿ ನೀಡಿದ ಮಾಹಿತಿ ಇಲ್ಲಿದೆ.

ಬೇರು ಹುಳಗಳ  ಪ್ರಭೇಧಗಳು ? 

ಅಡಿಕೆ ಬೆಳೆಗೆ ಅಧಿಕ ಮಳೆ ಬೀಳುವ ಮಲೆನಾಡು ಮತ್ತು ಕರಾವಳಿ ಪ್ರದೇಶಗಳಲ್ಲಿ ಬೇರುಹುಳದ ಬಾಧೆ ಅಧಿಕ. ಇವುಗಳನ್ನು ಯಕೋಪ್ಲೋರೀಸ್ ಲೆಕೆಡೋಫೋರಾ, ಯುಕೋಫೋರೀಸ್ ಬರ್ಮಿಯಸ್ಟ್ರೀ, ಯುಕೋಫೋಲೀಸ್ ಪೋಮಿಯೋ ಫೋರಾ ಪ್ರಭೇಧಗಳೆಂದು ವಿಜ್ಞಾನಿಗಳು ವರ್ಗಿಕರಿಸಿ, ಹೆಸರಿಸಿದ್ದಾರೆ.
ಲ್ಯೋಕೋ ಪೋಲೀಸ್ ಕೋನಿಯೋ ಫೋರಾ ಎಂಬ ಪ್ರಭೇಧದ ಬೇರು ತಿನ್ನುವ ಹುಳಗಳು ಕರಾವಳಿ ಪ್ರದೇಶದಲ್ಲಿ ಕಾಣಬರುತ್ತಿದೆ. ಇದು ವರ್ಷದ ಜೀವನಚಕ್ರವನ್ನು ಹೊಂದಿದೆ. ಮಲೆನಾಡಿನಲ್ಲಿ ಕಂಡುಬರುವ ಬೇರು ತಿನ್ನುವ ಹುಳಗಳಿಗೆ ಲ್ಯೂಕೋಪೋಲೀಸ್ ಲೆಪಿಡೋಪೋರಾ , ಲ್ಯೋಕೋ ಪೋಲೀಸ್ ಬರ್ಮಿಸ್ಟ್ರಿ ಎಂದು ಹೆಸರಿವೆ.  ಇವು 2 ವರ್ಷಗಳ ಜೀವನ ಚಕ್ರವನ್ನು ಹೊಂದಿವೆ. ಈ ಹುಳಗಳು ಬಹುತೇಕ ಸಮಯ ಭೂಮಿಯೊಳಗೆ ಕಳೆಯುವುದರಿಂದ ಮಾನವನಿಗೆ ಇವುಗಳ ಇರುವಿಕೆ ಕಾಣಬರುವುದು ತೀರಾ ಕಡಿಮೆ. ಅಥವಾ ತಿಳಿಯುವುದೇ ಇಲ್ಲ ಎನ್ನಬಹುದಾಗಿದೆ. ಈ ಹುಳಗಳ ಬಾಧೆಗೆ ಒಳಗಾದ ಅಡಿಕೆ ತೋಟಗಳ ಮಾಲೀಕರು ಆರ್ಥಿಕ ಸಂಕಟಕ್ಕೆ ಸಿಲುಕುವುದಂತೂ ಖಚಿತ.

ಹಾರುವ ದುಂಬಿಗಳು

ಈ ರೀತಿಯ ಹುಳಗಳು ತಮ್ಮ ತೋಟವನ್ನು ಬಾಧಿಸುತ್ತಿವೆಯೋ ಎಂದು ಪತ್ತೆ ಹಚ್ಚುವುದು ಬೆಳೆಗಾರ ಪಾಲಿಗೆ ಸವಾಲಿನ ಕಾರ್ಯವೇ ಸರಿ. ಈ ಹುಳಗಳು (ದುಂಬಿಗಳು)  ಮಳೆಗಾಲದಲ್ಲಿ ಭೂಮಿಯಿಂದ ಹೊರಬರುತ್ತವೆ. ಇವು ಸಾಮಾನ್ಯವಾಗಿ ಅಡಿಕೆ ತೋಟದ ಅಂಚಿನಲ್ಲಿರುವ ಮರಗಳ ಮೇಲೆ, ಸಣ್ಣ- ಪುಟ್ಟ ಅಡಿಕೆ ಮರಗಳ ಮೇಲೆ ಕುಳಿತಿರುತ್ತವೆ. ಸಂಜೆ ವೇಳೆಯಲ್ಲಿ ಭೂಮಿಯಿಂದ ಹೊರಬಂದು ಇವು ತಮ್ಮ ಸಂಗಾತಿಗಳೊಡನೆ ಮಿಲನ ನಡೆಸಿ ಮತ್ತು ಬೆಳಗಾಗುವ ವೇಳೆಗೆ ಮತ್ತೆ ಭೂಮಿಯೊಳಗೆ ಸೇರುತ್ತವೆ ! ಹೆಣ್ಣು ದುಂಬಿಯು  ಮಣ್ಣಿನ ಮಡಿಕೆ ರಚಿಸಿ ಅದರಲ್ಲಿ ಬಿಳಿ ಬಣ್ಣದ ಮೊಟ್ಟೆಯನ್ನಿಡುತ್ತದೆ. ತನ್ನ ಜೀವಿತಾವಧಿಯಲ್ಲಿ ಮಣ್ಣಿನ ಸುಮಾರು 2 ಅಡಿಗಳ ಆಳದವರೆಗೂ ಹೋಗಿ ಸುಮಾರು 30 ಮೊಟ್ಟೆಗಳನ್ನು ಇಡುತ್ತವೆ. 15 ದಿನಗಳಲ್ಲಿ ಹೊರಬರುವ ಹುಳವು ಬಿಳಿ ಮತ್ತು ಕಂದು ಮೈಬಣ್ಣ ಹೊಂದಿರುತ್ತದೆ. 45 ದಿನಗಳಲ್ಲಿ ದ್ವಿತೀಯ ಹಂತ ತಲುಪುತ್ತವೆ. 75 ದಿನಗಳಲ್ಲಿ ಮೂರನೇ ಹಂತ ತಲಪುತ್ತವೆ. 14 ರಿಂದ 18 ತಿಂಗಳ ಕಾಲ ಜೀವಿಸುತ್ತದೆ, ಈ ಸಮಯದಲ್ಲಿ ಹುಳಗಳು ಬೇರಿಗೆ ತೊಂದರೆ ನೀಡುತ್ತದೆ. ಅಡಿಕೆ ಗಿಡಗಳ ಬೇರನ್ನೇ ತಿನ್ನಲಾರಂಭಿಸುತ್ತವೆ. ಮಳೆಗಾಲದಲ್ಲಿ ದುಂಬಿಯಾಗಿ ಹೊರ ಬಂದು ಹಾರಾಡುತ್ತವೆ.

 ಬೇರುಹುಳಗಳ ನಿರ್ವಹಣೆ ? 

ಸೋಲಾರ್ ಕೀಟ ನಾಶಕ ಯಂತ್ರವನ್ನು ಪ್ರತಿ ಏಕರೆಗೆ ಒಂದರಂತೆ ಅಳವಡಿಸಿದ್ದಲ್ಲಿ ಇದರ ಸಂಪೂರ್ಣ ನಿಯಂತ್ರಣ ಸಾಧ್ಯ. ಆದರೆ, ಈ ಕ್ರಮವನ್ನು ಸಾಮೂಹಿಕವಾಗಿ ಬೆಳೆಗಾರರು ಬಳಸಿದ್ದಲ್ಲಿ ಇದರ ಹತೋಟಿ ಖಚಿತ. (ವಿವರಗಳಿಗೆ ಕರಿಬಸಪ್ಪ – ಮೊಬೈಲ್ – 9880973218 ಅವರನ್ನು ಸಂಪರ್ಕಿಸಿ)
ಸೋಲಾರ್ ಕೀಟ ನಾಶಕ ಯಂತ್ರ


ಮುಸಂಜೆಯ ವೇಳೆ ಅಡಿಕೆ ತೋಟಗಳಲ್ಲಿ, ಅದರ ಅಕ್ಕ-ಪಕ್ಕಗಳ ಮರ-ಗಿಡಗಳ ಮೇಲೆ ಕುಳಿತಿರುತ್ತವೆ. ಈ ದುಂಬಿಗಳನ್ನು  ಟಾರ್ಛ್ ಬೆಳಕಿನ ಸಹಾಯದಿಂದ ಪತ್ತೆ ಮಾಡಿ.   ಕೈಯಿಂದ ಇಲ್ಲವೆ ಬಲೆಗಳನ್ನು ಬಳಸಿ ಹಿಡಿದು ಕೊಂದುಹಾಕಬೇಕು. ಇದು ಸುಲಭದ ಕಾರ್ಯವಂತೂ ಖಂಡಿತಾ ಅಲ್ಲ.
ದುಂಬಿಯ ಕಾಟ ಹೆಚ್ಚಾಗಿರುವ ಸಮಯದಲ್ಲಿ (ಮಳೆಗಾಲದಲ್ಲಿ) ಅಡಿಕೆ ತೋಟವನ್ನು ಶುಚಿಯಾಗಿರಿಸಬೇಕು.ಇದರಿಂದ ದುಂಬಿಯ ಕಾಟವು ಬೆಳೆಗಾರರಿಗೆ ಕಂಡುಬರುವುದರಿಂದ ಇದರ ಹತೋಟಿ ಮಾಡುವುದು ಸುಲಭ.
ಈ ದುಂಬಿಗಳು ಅಡಿಕೆ ತೋಟದಲ್ಲಿ ಬಿಲಮಾಡಿ ವಾಸಿಸುವುದರಿಂದ ಅಗತೆ ಮಾಡಿ ಇವುಗಳನ್ನು ನಾಶ ಪಡಿಬಹುದು. ಆದರೆ, ನೆನಪಿರಲಿ ಅಗತೆಯನ್ನು 2 ಅಡಿಗಿಂತಲೂ ಅಧಿಕ ಆಳದವರೆಗೆ ಮಾಡಬೇಕಾಗುತ್ತದೆ.
ಅಡಿಕೆ ತೋಟದ ಅಗತೆಗೆ ಜುಲೈ ಎರಡನೇ ವಾರದಿಂದ ಆಗಸ್ಟ್ ಕೊನೆ ವಾರದವರೆಗೆ ಸೂಕ್ತ ಸಮಯ.

ಜೈವಿಕ ನಿಯಂತ್ರಣ

ಅಡಿಕೆ ತೋಟ ಸಂಪೂರ್ಣ ತೋಯುವಂತೆ (ನೆನೆಯುವಂತೆ) ಜಂತುಹುಳದ ಪುಡಿಯನ್ನು ನೀರಿನಲ್ಲಿ ಬೆರೆಸಿ ಸಿಂಪಡಣೆ ಮಾಡಿ. ಈ ಜಂತುಹುಳಗಳು ಮಣ್ಣಿನಲ್ಲಿರುವ ಬೇರು ಕೊರೆಯುವ ಹುಳಗಳ ಲಾರ್ವಾ (ಮರಿ)ಗಳ ದೇಹದೊಳಗೆ ಸೇರಿ ಅವುಗಳನ್ನು ತಿನ್ನುತ್ತವೆ.

ರಾಸಾಯನಿಕ ನಿಯಂತ್ರಣ

ಮಳೆಗಾಲದ ಆರಂಭದ ದಿನಗಳಲ್ಲಿ ಅಡಿಕೆ ಮರಗಳ ಬುಡಗಳಿಗೆ ಹರಳು ಉಪ್ಪು ಹಾಕಿ ಹುಳಗಳನ್ನು ನಿಯಂತ್ರಿಸಬಹುದಾಗಿದೆ.

ಆಧಾರಿತ ಬರಹ