ಸೋಮವಾರ, ಜೂನ್ 11, 2018

ಹಣ ಖರ್ಚು ಹೇಗೆ ?

            ಹಣ  ಖರ್ಚು  ಮಾಡುವುದು ಹೇಗೆ ? 

                                    ಬದುಕಿಗೆ ನೀತಿ ಪಾಠ 


ಬದುಕನ್ನು ಸುಲಲಿತವಾಗಿ ಸಾಗಿಸಲು ಹಣ ಅಗತ್ಯ. ಇದನ್ನು ಹಲವರು ಹಲವಾರು ರೀತಿಯಲ್ಲಿ ಸಂಪಾದಿಸುವರು. ಆದರೆ, ಬಹುತೇಕ ಮಂದಿ ಇದನ್ನು ಸರಿಯಾದ ರೀತಿಯಲ್ಲಿ ವಿನಿಯೋಗಿಸಲು ತಿಳಿಯದೇ ಒದ್ದಾಡುವರು. ಬದುಕನ್ನು ಸುಸೂತ್ರವಾಗಿ ನಡೆಸಲು ಸಮರ್ಪಕ ಯೋಜನೆ ಮತ್ತು ದೂರದರ್ಶಿತ್ವ ಮತ್ತು ಸಾಕಷ್ಟು ಮುಂಜಾಗೂರಕತೆ ಅವಶ್ಯ. ಇವುಗಳಿದ್ದಲ್ಲಿ ಬದುಕಿನ ಸಾಫಲ್ಯತೆ ಸಾಧ್ಯ ಎಂಬುವುದನ್ನು ಅರಿಯದೇ ಬೇಜವಾಬ್ಧಾರಿಯಿಂದ ವರ್ತಿಸುವವರೂ  ಇದ್ದಾರೆ.


ಇವರಿಗೆ ಮಾರ್ಗದರ್ಶನ ನೀಡುವಂತಹ ಇತಿಹಾಸದ ಸುಪ್ರಸಿದ್ಧ ಕಥೆ ಇದೆ. ರಾಜಭೋಜನು ಒಮ್ಮೆ ನದಿಯ ತೀರದಲ್ಲಿ ವಿಹರಿಸುತ್ತಿದ್ದನು. ಅಲ್ಲಿ ತಲೆಯ ಮೇಲೆ ಕಟ್ಟಿಗೆಯ ಹೊರೆಯ ಹೊತ್ತು ಸಾಗುತ್ತಿದ್ದ ಒಬ್ಬ ವೃದ್ಧನು ಆತನಿಗೆ ಎದುರಾದನು. ಆತನ ಮೈ ಬೆವರಿ ತೊಯ್ದಿದಿದ್ದರೂ, ಪ್ರಸನ್ನನಾಗಿದ್ದನು. ರಾಜನು ಆತನನ್ನು  ನೀನು ಯಾರು ?  ಎಂದು ಪ್ರಶ್ನಿಸಿದನು. ರಾಜನ ಪರಿಚಯವಿಲ್ಲದ ವೃದ್ಧನು  ನಾನು ಭೋಜರಾಜ  ಎಂದು ಉತ್ತರಿಸಿದನು. ನಿನ್ನ ದಿನದ ಸಂಪಾದನೆಯೆಷ್ಟು ? ಎಂದು ರಾಜನು ಮತ್ತೆ ಪ್ರಶ್ನಿಸಿದ.  ಆಗ ಕಟ್ಟಿಗೆ ಹೊರೆ ಹೊತ್ತಿದ್ದ ಕಾರ್ಮಿಕನು ನನ್ನ ದಿನದ ಸಂಪಾದನೆ 6 ಪೈಸೆಗಳು  ಎಂದುತ್ತರಿಸಿದ. ಅದನ್ನು ನೀನು ಹೇಗೆ ಖಚರ್ು ಮಾಡುವೆ ? ಎಂದಾಗ ಆತ ಉತ್ತರಿಸಿದನು.  ನಾನು ಒಂದು ಪೈಸೆ ಸಾಲಗಾರನಿಗೆ, ಒಂದು ಪೈಸೆ ನನ್ನ ಬಂಡವಾಳದ ಮಾಲೀಕರಿಗೆ, ಒಂದು ಪೈಸೆ ಮಂತ್ರಿಗೆ, ಒಂದು ಪೈಸೆ ಉಳಿತಾಯ ಖಾತೆಗೆ, ಒಂದು ಪೈಸೆ ಅತಿಥಿಗಳ ಸೇವೆಗೆ, ಒಂದು ಪೈಸೆಯನ್ನು ನನ್ನ ಸ್ವಂತದ ಖರ್ಚಿಗಾಗಿ ವಿನಿಯೋಗಿಸುವೆ ಎಂದನು.

ರಾಜನು  ಸ್ವಲ್ಪ ವಿವರವಾಗಿ ಬಿಡಿಸಿ ಹೇಳಯ್ಯ  ಎಂದನು. ಆಗ ಕಟ್ಟಿಗೆಯವನು  ನನ್ನ ಮಾತಾ ಪಿತರೇ ನನ್ನ ಬಂಡವಾಳದ ಮಾಲೀಕರು. ಅವರು ನನ್ನ ಪಾಲನೆ ಪೋಷಣೆಗಾಗಿ ಸಾಕಷ್ಟು ವಿನಿಯೋಗ ಮಾಡಿದ್ದಾರೆ. ನನ್ನ ಪತ್ನಿಯೇ ನನ್ನ ಮಂತ್ರಿಯಾಗಿದ್ದು, ಯೋಗ್ಯ ಸಲಹೆ ನೀಡುವಳು. ಸಾಲಗಾರರೆಂದರೆ, ನನ್ನ ಮಕ್ಕಳು. ಅವರು ದೊಡ್ಡವರಾಗಿ ನನ್ನ ಋಣವನ್ನು ಸಂದಾಯ ಮಾಡಲಿದ್ದಾರೆ.
 ರಾಜನು  ನೀನೆಷ್ಟು ಉಳಿತಾಯ ಮಾಡಿರುವೆ  ಎಂದಾಗ ಆ ವ್ಯಕ್ತಿ  ಉತ್ತರಿಸಿದ. ತನ್ನ ಭವಿಷ್ಯತ್ತಿಗೆಂದು ಉಳಿಸುವವನು ಮಹಾ ಪೆದ್ದ.  ಅನಿಶ್ಚಿತತೆಯಿಂದ ತುಂಬಿದ ಈ ಬದುಕಲಿನಲ್ಲಿ ಒಂದು ಪೈಸೆಯನ್ನು ನನ್ನ ಆ ಖಜಾನೆಯಲ್ಲಿ ಜಮಾ ಮಾಡುವೆ ಎಂದನು. ರಾಜನು ದಯವಿಟ್ಟು ಮುಂದುವರಿಸಿರಿ  ಎಂದನು.
ಮುದುಕ ಮುಂದುವರಿಸಿದ  ಒಂದು ಪೈಸೆ ಅತಿಥಿಗಳ ಸೇವೆಗಾಗಿ ಇರಿಸುತ್ತೇನೆ. ಗೃಹಸ್ಥನಾದುದರಿಂದ ಅತಿಥಿಗಳ ಸೇವೆ ನನ್ನ ಕರ್ತವ್ಯ. ಮತ್ತೊಂದು ಪೈಸೆಯನ್ನು ನನ್ನ ದೈನಂದಿನ ಖರ್ಚಿಗೆ  ಮೀಸಲಿಡುತ್ತೇನೆ. ರಾಜ ಭೋಜನು  ಶಹಬ್ಬಾಸ್  ಎಂದು ಮೆಚ್ಚುಗೆ ವ್ಯಕ್ತಪಡಿಸಿದನು.



ಇದೊಂದು ಪುರಾತನ ಪುರಾಣದ ಕಥೆಯಾದರೂ, ಇದರಲ್ಲಿ ಗಳಿಕೆ ಮತ್ತು ಅದರ ಖರ್ಚಿನ ಬೃಹತ್
 ಸಾರವೇ ಅಡಗಿದೆ. ನಾವೂ ಕೂಡಾ ನಮ್ಮ ಸಂಪಾದನೆಯ ಜೊತೆಗೆ ಖರ್ಚನ್ನು ಸೂಕ್ತ ಯೋಜನೆಯೊಂದಿಗೆ ರೂಪಿಸಿದಲ್ಲಿ ಬಾಳು ಬಂಗಾರವಾಗುವುದು. ಸಂಪಾದನೆಯು ಸದ್ವಿನಿಯೋಗವಾಗುವುದು. ಕಾಸು ಉಳಿಸುವುದೇ ಕಾಯಕ ಎಂದು ಕೊಂಡು   ಕಾಸು- ಕಾಸಿಗೂ ಗಂಟು ಹಾಕುವವರೂ ತಮ್ಮೊಂದಿಗೆ ಪೈಸೆಯನ್ನೂ ತಮ್ಮೊಂದಿಗೆ ಒಯ್ಯಲಾರರು.

  ಕಡು ಬಡವರಾದರೂ, ಶ್ರೇಷ್ಠ ಗುಣದ ವ್ಯಕ್ತಿಯನ್ನೇ ಆದರ್ಶವೆಂದು ಪಾಲಿಸುವವರು, ಜಗದಲ್ಲಿ ಆನೇಕರಿದ್ದಾರೆ.   ಸಂಪತ್ತಿನ ಸದ್ವಿನಿಯೋಗವೇ ನಿಜವಾದ ಸಂಪತ್ತು.   ಹಣ ಗಳಿಸುವುದು ಹೇಗೆ  ಎಂದು ಹಲವು ಕಡೆ ಮಾಹಿತಿ ನಮಗೆ ಲಭ್ಯ.  ಈ ವಿಚಾರದಲ್ಲಿ ಹಲವಾರು ಪುಸ್ತಕಗಳು ಹೊರ ಬಂದಿವೆ. ಆದರೆ,  ಹಣವನ್ನು ಹೇಗೆ ಖರ್ಚು   ಮಾಡುವುದು ಎಂಬ ಬಗ್ಗೆ ವಿವರಗಳು ಬಹುತೇಕ ಕಡೆಗಳಲ್ಲಿ ಅಲಭ್ಯ. ಅದರೆ, ಸದುಪಯೋಗ ಹೇಗೆ ಎಂದು ವಿವರಣೆ ನೀಡುವವರು ತೀರಾ ದುರ್ಲಭ ಅಲ್ಲವೇ ?


 ಆಧಾರಿತ ಬರಹ : ಕೂಡಂಡ ರವಿ, ಹೊದ್ದೂರು.