ಶುಕ್ರವಾರ, ಮಾರ್ಚ್ 9, 2018

ಕೃಷಿಯಲ್ಲಿ ಸುಣ್ಣದ ಬಳಕೆ ಏಕೆ-ಹೇಗೆ ? Lime In Agriculture



                          ಕೃಷಿಯಲ್ಲಿ ಸುಣ್ಣದ ಬಳಕೆ ಏಕೆ-ಹೇಗೆ ?  






ಬರಹ: ಕೂಡಂಡ ರವಿ,







 ಕೊಡಗು ಜಿಲ್ಲೆಯ ಬಹುತೇಕ ಕೃಷಿಕರು ವಿವಿಧ ಬೆಳೆಗಳಿಗೆ ಸುಣ್ಣವನ್ನು ಬಳಸುತ್ತಾರೆ. ಸರ್ವೇ ಸಾಮಾನ್ಯವಾಗಿ ಕಾಫಿ, ಅಡಿಕೆ, ಬಾಳೆ, ಭತ್ತ, ಶುಂಠಿ ಸೇರಿದಂತೆ ವಿವಿಧ ಬೆಳೆಗಳಿಗೆ ಇದನ್ನು ಬಳಸುತ್ತಿರುವುದು ಕಾಣಬರುತ್ತಿದೆ.

ಸುಣ್ಣದ ವಿಧಗಳು: 

ಜಿಲ್ಲೆಯ ಬೆಳೆಗಾರರು ಸಾಮಾನ್ಯವಾಗಿ ಕೃಷಿ ಸುಣ್ಣ, ಡೋಲೋಮೈಟ್ ಸುಣ್ಣ ಮತ್ತು ಚಿಪ್ಪು ಸುಣ್ಣವನ್ನು ಬಳಸುತ್ತಿರುವರು. ಕೃಷಿ ಸುಣ್ಣದ ಬಳಕೆಯಿಂದ ಕ್ಯಾಲ್ಸಿಯಂ ಕಾರ್ಬೋನೇಟ್, ಡೊಲೋಮೈಟ್ ಸುಣ್ಣದ ಬಳಕೆಯಿಂದ ಬೆಳೆಗಳಿಗೆ ಕ್ಯಾಲ್ಸಿಯಂ ಕಾರ್ಬೋನೇಟ್, ಮತ್ತು ಮೆಗ್ನೇಷಿಯಂ ಕಾರ್ಬೋನೆಟ್‍ಗಳು ದೊರೆಯುತ್ತವೆ.






ಕೊಡಗು ಸೇರಿದಂತೆ ಮಳೆ ಹೆಚ್ಚಾಗಿ ಬೀಳುವ ಪ್ರದೇಶಗಳಲ್ಲಿ ಮಣ್ಣಿನ ರಸಸಾರವು ಕೊಚ್ಚಿಹೋಗುತ್ತದೆ. ರೈತರು ನಿರಂತರವಾಗಿ ತಮ್ಮ ತೋಟ ಗದ್ದೆಗಳಿಗೆ ರಾಸಾಯನಿಕ ಗೊಬ್ಬರಗಳನ್ನು ಹಾಕುವುದರಿಂದ ಮಣ್ಣಿನಲ್ಲಿ ರಸಸಾರ(ಪಿ.ಹೆಚ್ ಮೌಲ್ಯ) ವ್ಯತ್ಯಾಸವಾಗುತ್ತದೆ. ಇದನ್ನು ತಡೆಯುವ ಸಲುವಾಗಿ ಕನಿಷ್ಠ ಪ್ರತಿ ಮೂರು ವರ್ಷಗಳಿಗೊಮ್ಮೆ, ರೈತಾಪಿ ವರ್ಗದವರು ತಮ್ಮ ಗದ್ದೆ ತೋಟಗಳಿಗೆ ನಿಗದಿತ ಪ್ರಮಾಣದಲ್ಲಿ ಸುಣ್ಣ ಹಾಕುವಂತೆ ಕೃಷಿ ವಿಜ್ಞಾನಿಗಳು ಸಲಹೆ ನೀಡುತ್ತಾರೆ.








 ಸಾಮಾನ್ಯವಾಗಿ ಮಣ್ಣಿನ ರಸಸಾರವು 5.8ರಿಂದ 6.2ರ ಮಧ್ಯೆ ಇರಬೇಕು. ಆದರೆ, ರೈತಾಪಿ ವರ್ಗದವರು ನಿರಂತರವಾಗಿ ಸುಣ್ಣ ಬಳಸದೇ ರಾಸಾಯನಿಕ ಗೊಬ್ಬರ ಬಳಸುವುದರಿಂದ ಮತ್ತು ಅಧಿಕ ಮಳೆಯಿಂದಾಗಿ ಮಣ್ಣಿನ ಪಿ. ಹೆಚ್. ಮೌಲ್ಯದಲ್ಲಿ ಏರುಪೇರಾಗುತ್ತದೆ. ಇದರ ಪರಿಣಾಮ ಬೆಳೆಗಾರರು ಹಾಕಿದ ಗೊಬ್ಬರವನ್ನು ತೋಟ ಮತ್ತು ಗದ್ದೆಗಳಲ್ಲಿರುವ ಬೆಳೆಗಳು ಪಡೆಯಲು ವಿಫಲವಾಗುತ್ತದೆ. ಗೊಬ್ಬರವು ಪೋಲಾಗುತ್ತದೆ. ಇವೆಲ್ಲದರ ಪರಿಣಾಮ ನಿಗದಿತ ಬೆಳೆಗಳಲ್ಲಿ ಇಳುವರಿಯ ಪ್ರಮಾಣ ಗಣನೀಯವಾಗಿ ಕುಸಿಯುತ್ತದೆ. 







 ಮಣ್ಣು ಪರೀಕ್ಷೆ ಅತ್ಯಗತ್ಯ: 

ಬೆಳೆಗಾರರು ಕಾಲ-ಕಾಲಕ್ಕೆ ತಕ್ಕಂತೆ ತಮ್ಮ ಜಮೀನುಗಳ ಮಣ್ಣನ್ನು ಪರೀಕ್ಷೆ ಮಾಡಿಸಬೇಕು. ಅದರ ಫಲಿತಾಂಶವನ್ನು ಆದರಿಸಿ ತಜ್ಞರು ಶಿಫಾರಸ್ಸು ಮಾಡಿದಂತೆ ಕಾಲಕ್ಕನುಗುಣವಾಗಿ ಗೊಬ್ಬರ, ಸುಣ್ಣ ಇತ್ಯಾದಿಗಳನ್ನು ನೀಡಬೇಕು. ಇದನ್ನು ಅನುಸರಿಸದೇ ರೈತಾಪಿವರ್ಗದವರು ಮನಸೋ ಇಚ್ಛೆ ಗೊಬ್ಬರ-ಸುಣ್ಣ ಹಾಕಿದಲ್ಲಿ ಹಣ, ಶ್ರಮ ವ್ಯರ್ಥವಾಗುತ್ತದೆ. ಅಧಿಕ ರಾಸಾಯನಿಕ ಗೊಬ್ಬರ ಬಳಕೆಯಿಂದಾಗಿ ಮಣ್ಣಿನಲ್ಲಿ ರಸಸಾರದ ಸಮತೋಲನ ತಪ್ಪಿ, ಭೂಮಿಯು ಬರಡಾಗುವ ಸಾಧ್ಯತೆ ಇದೆ. ಕೆಲವೆಡೆಗಳಲ್ಲಿ ಶುಂಠಿ ಬೆಳೆದ ಪ್ರದೇಶಗಳಲ್ಲಿ ಭೂಮಿ ಬಂಜರಾಗುತ್ತಿರುವುದು ಇದೇ ಕಾರಣದಿಂದಲೇ. ಇದು ಅಧಿಕ ರಾಸಾಯನಿಕ ಗೊಬ್ಬರದ ದುರ್ಬಳಕೆಯ ಒಂದು ಉದಾಹರಣೆ ಮಾತ್ರ. ಮೂರು ವರ್ಷಗಳಿಗೊಮ್ಮೆ ಸುಣ್ಣ: ಮಣ್ಣು ಪರೀಕ್ಷೆಯನ್ನು ಆಧಾರವಾಗಿಟ್ಟು ಕೊಂಡು ಜಿಲ್ಲೆಯ ಕೃಷಿಕ ಬಾಂಧವರು ಪ್ರತಿ ಮೂರು ವರ್ಷಗಳಿಗೊಮ್ಮೆ ಪ್ರತಿ ಎಕರೆಗೆ ಸುಮಾರು ಅರ್ಧ ಟನ್‍ನಿಂದ ಒಂದು ಟನ್‍ವರೆಗೆ ಸುಣ್ಣ ನೀಡಬೇಕು. ಮೂರು ವರ್ಷಗಳಿಗೊಮ್ಮೆ ಕೃಷಿ ಸುಣ್ಣವನ್ನು ಜಮೀನಿಗೆ ನೀಡಿದರೆ, ನಂತರದ ಮೂರು ವರ್ಷಕ್ಕೆ ಡೋಲೋಮೈಟ್ ಸುಣ್ಣ ನೀಡಬೇಕು. ಚಿಪ್ಪು ಸುಣ್ಣವು ದುಬಾರಿಯಾಗಿರುವುದರಿಂದ ಬೆಳೆಗಾರರು ಅದನ್ನು ಬಳಸಬಾರದು




.
 ಸಿಂಪಡಣೆ ಸುಣ್ಣವನ್ನು ಬೋಡೋ ದ್ರಾವಣದ ಮಿಶ್ರಣಕ್ಕೆ ಮಾತ್ರ ಬಳಸಬೇಕು. ಉಳಿದ ಉದ್ದೇಶಗಳಿಗೆ ಇದನ್ನು ಬಳಸುವುದು ಸೂಕ್ತವಲ್ಲ. ಈ ಸುಣ್ಣವನ್ನು ಅಧಿಕ ಪ್ರಮಾಣದಲ್ಲಿ ಜಮೀನಿನಲ್ಲಿ ಬಳಸುವುದರಿಂದ ಬೆಳೆಗಳ ಸೂಕ್ಮ ಮತ್ತು ಸಣ್ಣಬೇರುಗಳಿಗೆ ಹಾನಿಯಾಗಬಹುದು ನಿಯಮಿತವಾಗಿ ಜಮೀನಿಗೆ ಸುಣ್ಣವನ್ನು ಬಳಸುವುದರಿಂದಾಗಿ ಸೂಕ್ಮಾಣು ಜೀವಿಗಳ ಪ್ರಮಾಣ ಹೆಚ್ಚಾಗುತ್ತದೆ. ಈ ಹಿನ್ನೆಲೆಯಲ್ಲಿ ಎಲ್ಲಾ ಕೃಷಿಕರು ಸೂಕ್ತ ಸಮಯದಲ್ಲಿ ಸುಣ್ಣವನ್ನು ತಪ್ಪದೇ ಬಳಸಬೇಕು.




 ಸುಣ್ಣವನ್ನೂ ಪರೀಕ್ಷೆ ಮಾಡಿಸಿ

: ಸುಣ್ಣದಲ್ಲಿ ರಸಸಾರದ ಪ್ರಮಾಣ ಶೇ.80 ಇರುತ್ತದೆ. ಕೆಲವರು ಕೊಡಗು ಜಿಲ್ಲೆಯ ವಿವಿಧೆಡೆಗಳಿಗೆ ಸುಣ್ಣವನ್ನು ಸರಬರಾಜು ಮಾಡುತ್ತಿದ್ದಾರೆ. ಕೃಷಿಕರಿಗೆ ಸುಣ್ಣದ ಗುಣಮಟ್ಟದ ಬಗ್ಗೆ ಸಂಶಯ ಬಂದಲ್ಲಿ ಸಮೀಪದ (ಕೊಡಗಿನ ಕೃಷಿಕರು ಚೆಟ್ಟಳ್ಳಿಯ) ಪರೀಕ್ಷಾ ಕೇಂದ್ರದಲ್ಲಿ ಸುಣ್ಣವನ್ನು ಪರೀಕ್ಷೆ ಮಾಡಿಸಿದ ಬಳಿಕವಷ್ಟೇ ಬಳಸುವುದು ಸೂಕ್ತ. ಜಿಲ್ಲೆಯ ಬೆಳೆಗಾರರು ಚಿಪ್ಪು ಸುಣ್ಣವನ್ನು ಬಳಸುವುದಾದರೇ, ಪ್ರತಿ ಏಕರೆಗೆ ಅರ್ಧ ಟನ್ ಸುಣ್ಣವನ್ನು ಬಳಸಬೇಕು. ಸುಣ್ಣ-ಸೂಕ್ತ ಸಮಯ: ಕಾಫಿ, ಅಡಿಕೆ, ಭತ್ತ ಇತ್ಯಾದಿ ಬೆಳೆಗಳ ಕೊಯ್ಲು ಮುಗಿದ ನಂತರ ಸುಣ್ಣವನ್ನು ಜಮೀನಿಗೆ ಚೆಲ್ಲಬೇಕು. ಹೂಮಳೆ ಬರುವುದಕ್ಕೂ ಮುನ್ನಾ ತೋಟದೆಲ್ಲೆಡೆ ಸಮಾನವಾಗಿ ಹರಡುವಂತೆ ಸುಣ್ಣವನ್ನು ಮಣ್ಣಿಗೆ ಸೇರಿಸಬೇಕು. ಆದರೆ, ಕಾಳುಮೆಣಸಿನ ಬಳ್ಳಿಗಳ ಬುಡಕ್ಕೆ ಸುಣ್ಣ ತಾಗದಂತೆ ಎಚ್ಚರಿಕೆ ವಹಿಸಬೇಕು. ಸುಣ್ಣದ ಧೂಲು ಮಾತ್ರ ಅದರ ಬುಡ ತಾಕುವಂತೆ ಸುಣ್ಣ ಎರೆಚಬಹುದಾಗಿದೆ. ತುಂತುರು ನೀರಾವರಿ ಮಾಡುವ ಬೆಳೆಗಾರರು ಅದಕ್ಕೂ ಮುನ್ನಾ ಸುಣ್ಣ ಹಾಕುವುದು ಒಳ್ಳೆಯದು. ಸುಣ್ಣ ಹಾಕುವಾಗ ಮಣ್ಣಿನಲ್ಲಿ ತೇವಾಂಶವಿದ್ದಲ್ಲಿ ಉತ್ತಮ. ತೋಟಗಳಿಗೆ ಸುಣ್ಣ ಹಾಕಿದ ತಿಂಗಳ ಬಳಿಕವೇ ಗೊಬ್ಬರ ನೀಡಬೇಕು.









 (ಮಾಹಿತಿ ಕೃಪೆ: ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರಿನ ಕೇಂದ್ರೀಯ ಕಾಫಿ ಸಂಶೋಧನಾ ಕೇಂದ್ರದ ಹಿರಿಯ ವಿಜ್ಞಾನಿ ನಾಗರಾಜ್ ನೀಡಿದ ಮಾಹಿತಿ ಆಧರಿಸಿ ಲೇಖನವನ್ನು ಸಿದ್ಧಪಡಿಸಲಾಗಿದೆ.)

                        Pepper Nursery   ಕಾಳು ಮೆಣಸು - ಸಸ್ಯಾಭಿವೃದ್ಧಿ      

ಕೊಡಗಿನಲ್ಲಿ ಕಾಳು ಮೆಣಸು ಬಳ್ಳಿಗಳ ಸಸ್ಯಾಭಿವೃದ್ಧಿಗೆ  ಈ ತಿಂಗಳು ಸೂಕ್ತ ಕಾಲವಾಗಿದೆ. ಈ ಹಿನ್ನೆಲೆಯಲ್ಲಿ ಕೃಷಿ ವಿಜ್ಞಾನಿಗಳು, ಪರಿಣಿತರು ಆಸಕ್ತರಿಗೆ ಈ ಕೆಳಕಂಡ ವಿವರಗಳನ್ನು ನೀಡಿದ್ದಾರೆ.

ಸಸ್ಯಾಭಿವೃದ್ಧಿ

ಉಪಯುಕ್ತವಿರುವ ಸಸ್ಯಗಳನ್ನು ಆರಿಸಿ ಕ್ರಮಬದ್ಧ ರೀತಿಯಲ್ಲಿ ವೃದ್ಧಿಪಡಿಸುವುದಕ್ಕೆ ಸಸ್ಯಾಭಿವೃದ್ಧಿ ಎನ್ನುತ್ತೇವೆ. ಆದರೆ, ವಾಣಿಜ್ಯವಾಗಿ ಹೆಚ್ಚಿನ ಇಳುವರಿಯನ್ನು ಪಡೆಯಲು ಹರಿದಾಡುವ ಕಾಂಡದ ತುಂಡುಗಳನ್ನು ಬಳಸುವುದು ಸೂಕ್ತ. 
ವಿವಿಧ ಬಗೆಯ ಕಾಂಡಗಳು : ಕಾಳುಮೆಣಸಿನಲ್ಲಿ ಐದು ವಿವಿಧ ಬಗೆಯ ಕಾಂಡಗಳನ್ನು ಗುರುತಿಸಬಹುದು. ಈ ಕಾಂಡಗಳು ಜೀವ ಶಾಸ್ತ್ರೀಯವಾಗಿ ವಿಭಿನ್ನ ಕಾರ್ಯಗಳನ್ನು ನಿರ್ವಹಿಸುತ್ತವೆ.


ಮುಖ್ಯ ಕಾಂಡಗಳು

ಇದು ಭೂಮಿಯಿಂದ ನೇರವಾಗಿ ಬೆಳೆದು ಆಧಾರ ಮರಕ್ಕೆ ಅಂಟಿಕೊಂಡಿರುತ್ತದೆ.
ಹರಿದಾಡುವ ಕಾಂಡಗಳು: ಇದು ಮುಖ್ಯವಾಗಿ ಕಾಂಡದ ಕೆಳಭಾಗದಲ್ಲಿ ನೆಲದ ಮೇಲೆ ಹರಡಿಕೊಂಡು ಹೋಗುತ್ತವೆ. ಇಂತಹ ಹರಿದಾಡುವ ಕಾಂಡಗಳನ್ನು ಕಾಳುಮೆಣಸಿನ ಗಿಡಗಳನ್ನು ಉತ್ಪಾದಿಸಲು ಬಳಸಬೇಕು.
ಫಸಲು ಬಿಡುವ ಕಾಂಡಗಳು: ಈ ಕಾಂಡಗಳಿಂದ ಕಾಳುಮೆಣಸಿನ ಹೂಗೊಂಚಲುಗಳು ಮೂಡುತ್ತವೆ. ಆದ್ದರಿಂದ ಫಸಲು ಬಿಡುವ ಕಾಂಡಗಳನ್ನು ಪೆÇದೆ ಮೆಣಸು ಗಿಡಗಳನ್ನು ಉತ್ಪಾದಿಸಲು ಬಳಸಬೇಕು.


ಮೇಲಕ್ಕೆ ಹಬ್ಬುವ ಕಾಂಡಗಳು (ಚಿಗುರು ಬಳ್ಳಿ)

 ಈ ಕಾಂಡಗಳು ಮುಖ್ಯ ಕಾಂಡದಿಂದ ನೇರವಾಗಿ ಆಧಾರ ಮರಕ್ಕೆ ಅಂಟಿಕೊಂಡು ಬೆಳೆಯುತ್ತವೆ.
ನೇತಾಡುವ ಕಾಂಡಗಳು: ಈ ಕಾಂಡಗಳು ಫಸಲನ್ನು ಬಿಡದೆ ಕಡೆ ನೇತಾಡುತ್ತಿರುತ್ತವೆ. ಕಾಳುಮೆಣಸಿನಲ್ಲಿ ಹಲವು ಬಗೆಯ ಕಾಂಡಗಳಿದ್ದರೂ ಪ್ರತಿಯೊಂದು ಕಾಂಡಗಳು ವಿಶಿಷ್ಟವಾದ ಕಾರ್ಯಗಳನ್ನು ನಿರ್ವಹಿಸುತ್ತವೆ. ಕಾಳುಮೆಣಸಿನ ಸಸ್ಯಾಭಿವೃದ್ದಿಗಾಗಿ ಹರಿದಾಡುವ ಕಾಂಡಗಳನ್ನು ಮಾತ್ರ ಉಪಯೋಗಿಸಬೇಕು.

ಸಸ್ಯಾಭಿವೃದ್ದಿ ಕ್ರಮ-ವಿವಿಧ ಹಂತಗಳು

ತಾಯಿ ಬಳ್ಳಿಯನ್ನು ಗುರುತಿಸುವುದು.: ಸಸ್ಯಾಭಿವೃದ್ಧಿಗಾಗಿ ವಿಶೇಷವಾದ ಗುಣಗಳಿರುವ ತಾಯಿ ಬಳ್ಳಿಗಳನ್ನು ಗುರುತಿಸಬೇಕು. ಅಂದರೆ ಅಧಿಕ ಇಳುವರಿ ಕೊಡುವ 5 ರಿಂದ 12 ವರ್ಷದೊಳಗಿನ ಸದೃಡವಾಗಿ ಬೆಳೆದ, ಅತಿ ಹೆಚ್ಚು ಕಾಯಿಗೊಂಚಲುಗಳಿರುವ ಹಾಗೂ ರೋಗ ಮುಕ್ತ ಮತ್ತು ರೋಗಗಳನ್ನು ಸಹಿಸಿಕೊಳ್ಳುವ, ನೆಲದ ಮೇಲೆ ಹರಿದು ಹೋಗುವ ಹಂಬು ಬಳ್ಳಿಗಳನ್ನು ಗುರುತಿಸಬೇಕು. ಗುರುತಿಸಿದ ಬಳ್ಳಿಗಳನ್ನು ಡಿಸೆಂಬರ್ – ಜನವರಿ ತಿಂಗಳಿನಲ್ಲಿ ಸುರಳಿ ಸುತ್ತಿ ಆಧಾರ ಮರಕ್ಕೆ ಕಟ್ಟಿ ಇಟ್ಟುಕೊಳ್ಳಬೇಕು. ಗುರುತಿಸಿದ ಹಂಬು ಬಳ್ಳಿಯು ನೆಲದಲ್ಲಿ ಹರಡಿ ಬೇರು ಬಿಡದ ಹಾಗೆ ನೋಡಿಕೊಳ್ಳಬೇಕು.

ಮಿಶ್ರಣ ತಯಾರಿಕೆ

 ಕಾಡು ಮಣ್ಣು, ಕೊಟ್ಟಿಗೆ ಗೊಬ್ಬರ ಹಾಗೂ ಮರಳನ್ನು 2:1:1 ರ ಪ್ರಮಾಣದಲ್ಲಿ ಪದರ ಪದರವಾಗಿ ಹಾಕಿ 30 ದಿನಗಳವರೆಗೆ ಬಿಡಬೇಕು. ಈ ಮಿಶ್ರಣದ ಮೇಲೆ ಚೆನ್ನಾಗಿ ನೀರನ್ನು ಹಾಕಿದ ಮೇಲೆ ಕಪ್ಪು ಪಾಲಿಥೀನ್ ಹಾಳೆಯಿಂದÀ  ಗಾಳಿ ಹೋಗದಂತೆ 30 ದಿನಗಳು ಮುಚ್ಚುವುದರಿಂದ ಮಿಶ್ರಣದ ಉಷ್ಣಾಂಶ ಹೆಚ್ಚಾಗಿ ಕಳೆಯ ಬೀಜಗಳು ಹಾಗೂ ಮಣ್ಣಿನಲ್ಲಿರುವ ಕೀಟಗಳ ಮೊಟ್ಟೆಗಳು ಮತ್ತು ರೋಗಾಣುಗಳು ಸಾಯುತ್ತವೆ. ಈ ರೀತಿ ಮಾಡಿದ ಮಿಶ್ರಣದಿಂದ ರಂಧ್ರವಿರುವ 5 7 ಇಂಚುಗಳ ಅಳತೆಯಿರುವ ಪಾಲಿಥೀನ್ ಚೀಲಗಳನ್ನು ಬಿಗಿಯಾಗಿ ತುಂಬಿಸಬೇಕು. ಈ ಮಿಶ್ರಣವನ್ನು ಪಾಲಿಥೀನ್ ಚೀಲಗಳಿಗೆ ತುಂಬುವ ಮೊದಲು ಸ್ವಲ್ಪ ಪ್ರಮಾಣದ ಶಿಲಾರಂಜಕ ಮತ್ತು ಟ್ರೈಕೊಡರ್ಮಾವೆಂಬ ಜೈವಿಕ ಜೀವಾಣು ಅಥವಾ ಸೂಕ್ಷ್ಮಾಣು ಜೀವಿಗಳ ಸಮೂಹವನ್ನು ಮಿಶ್ರಣಕ್ಕೆ ಸೇರಿಸಿ ಪಾಲಿಥೀನ್ ಚೀಲಗಳಿಗೆ ತುಂಬಬೇಕು.
ಕಾಂಡಗಳ ತಯಾರಿಕೆ: ಆಯ್ಕೆ ಮಾಡಿದ ಹಂಬು ಬಳ್ಳಿಯ ಕಾಂಡಗಳನ್ನು ತಾಯಿ ಬಳ್ಳಿಯಿಂದ ಬೇರ್ಪಡಿಸಿ 1/3 ನೇ ಮಧ್ಯ ಭಾಗದ ತುಂಡುಗಳನ್ನು ಕತ್ತರಿಸಿ ತೆಗೆಯಬೇಕು. ಯಾಕೆಂದರೆ ಗೆಡ್ಡೆಯ ಹಾಗೂ ತುದಿಯ ಭಾಗದ ತುಂಡುಗಳಿಂದ ಸರಿಯಾದ ಬೇರುಗಳು ಮೂಡುವುದಿಲ್ಲ. ಮಧ್ಯಭಾಗದ ತುಂಡುಗಳಿಂದ ಎಲ್ಲಾ ಎಲೆಗಳನ್ನು ಬೇರ್ಪಡಿಸಿ ಒಂದು ಗೆಣ್ಣುಗಳಿರುವಂತೆ ಕತ್ತರಿಸಿ, ತುಂಡಿನ ಕೆಳಭಾಗವನ್ನು (ನೆಡುವ ಭಾಗ) ಚೂಪಾಗಿಸಬೇಕು. ಇದು ಹೆಚ್ಚು ಬೇರು ಬಿಡುವಿಕೆಯಲ್ಲಿ ಸಹಕಾರಿಯಾಗುತ್ತದೆ.

ಕಾಂಡಗಳ ಉಪಚಾರ

ನಾಟಿಗೆ ಉಪಯೋಗಿಸುವ ತುಂಡುಗಳ ತೇವಾಂಶವು ಕಡಿಮೆಯಾಗದಂತೆ ಎಚ್ಚರ ವಹಿಸಬೇಕು.ಈ ಕಾಂಡದ ತುಂಡುಗಳನ್ನು ನರ್ಸರಿಗಳಲ್ಲಿರುವ ಪಾಲಿಥೀನ್ ಚೀಲಗಳಲ್ಲಿ ನಾಟಿಮಾಡುವ ಮೊದಲು 2 ಗ್ರಾಂ ಕಾರ್ಬೆಂಡೆಜಿಮ್ ಎಂಬ ಶಿಲೀಂದ್ರನಾಶಕವನ್ನು ಪ್ರತಿ ಲೀಟರ್ ನೀರಿನಲ್ಲಿ ಮಿಶ್ರಣ ಮಾಡಿದ ದ್ರಾವಣದಲ್ಲಿ 15 ನಿಮಿಷಗಳ ಕಾಲ ಅದ್ದಬೇಕು. ಇದರಿಂದ ಶಿಲೀಂದ್ರದಿಂದ ಬರುವ ರೋಗಗಳನ್ನು ಹತೋಟಿಯಲ್ಲಿಡಬಹುದು.  ಅನಂತರ ಶಿಲೀಂದ್ರದ ದ್ರಾವಣದಲ್ಲಿ ಉಪಚರಿಸಿದ ಕಾಂಡದ ತುಂಡುಗಳನ್ನು ಹೊರ ತೆಗೆದು, ಶೀಘ್ರವಾಗಿ ಬೇರು ಬರಲು ಕಾಂಡದ 2 ಸೆಂ.ಮಿ. ಕೆಳಭಾಗವನ್ನು 1 ನಿಮಿಷಗಳ ಕಾಲ 1000 ಪಿ.ಪಿ.ಎಂ ಐ.ಬಿ.ಎ ಎಂಬ ಬೇರು ಪ್ರಚೋದಕದಲ್ಲಿ ಬಳ್ಳಿಯ ಕಡ್ಡಿಯನ್ನು ತಾಕಿಸಿಬೇಕು.  1000 ಪಿ.ಪಿ.ಎಂ ಐ.ಬಿ.ಎ ದ್ರಾವಣವನ್ನು ತಯಾರಿಸಲು 1 ಗ್ರಾಂ ಐ.ಬಿ.ಎ ಪುಡಿಯನ್ನು ಸ್ವಲ್ಪ ಆಲ್ಕೋಹಾಲ್‍ನಲ್ಲಿ ಕರಗಿಸಿ 1 ಲೀಟರ್ ಸ್ವಚ್ಚವಾದ ನೀರಿನಲ್ಲಿ ಚೆನ್ನಾಗಿ ಬೆರೆಸಬೇಕು.

 ತುಂಡುಗಳನ್ನಾಟಿ

ಸುಧಾರಿತ ಪದ್ಧತಿಯನ್ನು ಅನುಸರಿಸಿ ತಯಾರಿಸಿ ತುಂಬಿದ ಪಾಲಿಥೀನ್ ಚೀಲಗಳಲ್ಲಿ ಉಪಚಾರ ಮಾಡಿದ ಒಂದು ಕಣ್ಣಿನ 2 ತುಂಡುಗಳನ್ನು ಚೀಲದ ಮಧ್ಯಭಾಗದಲ್ಲಿರಿಸಿ ಉಳಿದ ಪಾಲಿಥೀನ್ ಚೀಲದ ಭಾಗವನ್ನು ಮಿಶ್ರಣದಿಂದ ತುಂಬಿಸಬೇಕು. ಇದು ಚಿಗುರೊಡೆಯಲು ಹಾಗೂ ಬೇರು ಬಿಡಲು ಸಹಕಾರಿಯಾಗುತ್ತದೆ
.
ಪಾಲಿಥೀನ್ ಚೀಲಗಳ ಜೋಡಣೆ  
ನಾಟಿ ಮಾಡಿದ ಪಾಲಿಥೀನ್ ಚೀಲಗಳಿಗೆ ಚೆನ್ನಾಗಿ ನೀರು ಉಣಿಸಿ ನಂತರ ಪಾಲಿಥೀನ್ ಚೀಲಗಳನ್ನು ಸಾಲಾಗಿ ಜೋಡಿಸಿ ಪಾಲಿಥೀನ್ ಹಾಳೆಯಿಂದ ಕಮಾನ್ ಹಾಕಾರದಲ್ಲಿ ಮುಚ್ಚಬೇಕು. 15 ರಿಂದ 20 ದಿನಗಳ ನಂತರ ಪಾಲಿಥೀನ್ ಹಾಳೆಯನ್ನು ತೆಗೆದು ಬೆಳೆದಿರುವ ಕಳೆಗಳನ್ನು ತೆಗೆದು ನೀರು ಕೊಟ್ಟು ಪುನ; ಮುಚ್ಚಬೇಕು. ನೀರನ್ನು ಕೊಡುವುದರಿಂದ ಆದ್ರತೆ ಹೆಚ್ಚಾಗಿ 25 ರಿಂದ 30 ದಿನಗಳÀಲ್ಲಿ ಚಿಗುರೊಡೆದು ಬೇರನ್ನು ಬಿಡÀಲಾರಂಬಿಸುತ್ತವೆ.  ಈ ಹಂತದಲ್ಲಿ ಮುಚ್ಚಿದ ಪಾಲಿಥೀನ್ ಹಾಳೆಯನ್ನು ತೆಗೆದು ನೀರನ್ನು ಕೊಡಲು ಪ್ರಾರಂಭಿಸಬೇಕು. ತದನಂತರ ಬೆಳೆದು ತೋಟದಲ್ಲಿ ನಾಟಿ ಮಾಡಲು ಸಿದ್ದವಾಗುತ್ತವೆÉ.
ಗಿಡಗಳ ನಿರ್ವಹಣೆ: ಕಾಂಡದ ತುಂಡುಗಳು ಬೇರು ಬಿಟ್ಟು ಚಿಗುರಿ 3 – 4 ಎಲೆಗಳು ಬಂದ ಮೇಲೆ ಗಿಡಗಳು ಸದೃಡವಾಗಿ ಬೆಳೆಯಲು ನೀರಿನಲ್ಲಿ ಕರಗುವ ರಸಗೊಬ್ಬರಗಳಾದ 19:19:19 (5 ಗ್ರಾಂ ಪ್ರತಿ ಲೀ. ನೀರಿಗೆ) ದ್ರಾವಣವನ್ನು 2 ರಿಂದ 3 ಬಾರಿ 15 ದಿನಗಳ ಅಂತರದಲ್ಲಿ ಎಲೆಗಳ ಮೇಲೆ ಸಿಂಪಡಿಸಬೇಕು.

ರೋಗ-ಕೀಟಗಳ ನಿರ್ವಹಣೆ 

ಬೇರು ಬಿಟ್ಟ ಕಾಂಡಗಳನ್ನು ಅತಿ ಹೆಚ್ಚು ನೆರಳಿರುವ ಪ್ರದೇಶಗಳಲ್ಲಿ ಇಟ್ಟರೆ ರಸ ಹೀರುವ ಕೀಟಗಳಾದ ಥ್ರೀಪ್ಸ್ ಮತ್ತು ಹಿಟ್ಟು ತಿಗಣೆಗಳ ಬಾಧೆಯು ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ. ಇವುಗಳ ಹತೋಟಿಗಾಗಿ 2 ಮಿ.ಲಿ ಡೈಮಿಥೋಯೆಟ್ ಅಥವಾ 0.5 ಮಿ.ಮಿ. ಇಮೀಡಾಕ್ಲೋಪ್ರಿಡ್ ಕೀಟನಾಶಕವನ್ನು ಪ್ರತಿ ಲೀ. ನೀರಿಗೆ ಬೆರಸಿ ಸಿಂಪಡಿಸಬೇಕು.  ನರ್ಸರಿ ಪ್ರದೇಶದಲ್ಲಿ ಅತಿಯಾದ ನೆರಳು ಮತ್ತು ಆದ್ರತೆ ಇದ್ದರೆ ಶಿಲೀಂದ್ರದಿಂದ ಬರುವ ರೋಗಗಳಾದ ಎಲೆಕೊಳೆ ರೋಗ ಹಾಗೂ ಬೇರು ಕೊಳೆ ರೋಗ ಕಾಣಿಸಿಕೊಳ್ಳುತ್ತದೆ. ಇವುಗಳ ಹತೋಟಿಗಾಗಿ 3 ಗ್ರಾಂ ತಾಮ್ರದ ಆಕ್ಸಿಕ್ಲೋರೈಡ್‍ನ್ನು ಪ್ರತಿ ಲೀ. ನೀರಿಗೆ ಬೆರಸಿ ಸಿಂಪಡಿಸಬೇಕು.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ - ವೀರೇಂದ್ರ ಕುಮಾರ್. ಕೆ.ವಿ ಮತ್ತು ಡಾ.ಸಾಜೂ ಜಾರ್ಜ್ ಐ.ಸಿ.ಎ.ಆರ್-ಕೃಷಿ ವಿಜ್ಞಾನ ಕೇಂದ್ರ, ಗೋಣಿಕೊಪ್ಪಲು , ದೂರವಾಣಿ: 08274-247274

ಬುಧವಾರ, ಮಾರ್ಚ್ 7, 2018

ಆನ್ಲೈನ್‍ನಲ್ಲಿ ಅಮರ ಚಿತ್ರ ಕಥೆಗಳು... ! Amara Chithra Katha in Online


                                                 ಆನ್ಲೈನ್‍ನಲ್ಲಿ ಅಮರ ಚಿತ್ರ ಕಥೆಗಳು... ! 


ಬರಹ: ಕೂಡಂಡ ರವಿ



50 ವರ್ಷಗಳ ಹಿಂದೆ ಆರಂಭವಾದ ಅಮರ ಚಿತ್ರ ಕಥೆಯ ಮೂಲ ಉದ್ಧೇಶ ಅಬಾಲ ವೃದ್ಧರಲ್ಲಿ ಓದುವ ಪ್ರವೃತ್ತಿಯನ್ನು ಬೆಳೆಸುವುದಾಗಿತ್ತು.  ತನ್ಮೂಲಕ ಜ್ಞಾನ ಸಂವರ್ಧನೆ ಜೊತೆಗೆ ಭಾರತೀಯ ಪುರಾಣಗಳ ಬಗ್ಗೆ ಓದುಗರಲ್ಲಿ ಅರಿವು ಮೂಡಿಸುವುದಾಗಿತ್ತು. ಈ  ಹಾಸ್ಯ ಸರಣಿ ಪುಸ್ತಕಗಳು ಮಹಾಕಾವ್ಯಗಳು, ಪುರಾಣಗಳು, ನೀತಿಕಥೆಗಳು, ಹಾಸ್ಯ ಸೇರಿದಂತೆ ವಿವಿಧ ಪ್ರಕಾರಗಳಲ್ಲಿ ಕೇಂದ್ರೀಕೃತವಾಗಿದೆ. ಇದು ಭಾರತದ ಪ್ರಥಮ ಮತ್ತು ಅತ್ಯಂತ ಜನಪ್ರಿಯವಾದ ಚಿತ್ರ ಕಥಾ ಸರಣಿಯಾಗಿದೆ.


100 ಮಿಲಿಯನ್  ಮಾರಾಟ ! 
ಈವರೆಗೆ ಸುಮಾರು 100 ಮಿಲಿಯನ್‍ಗಿಂತಲೂ ಅಧಿಕ ಪ್ರತಿಗಳು 50ಕ್ಕೂ ಅಧಿಕ ಭಾಷೆಗಳಲ್ಲಿ ನೂರಾರು ಬಗೆಯ ಹಾಸ್ಯಮಯ, ವಿನೋದಮಯ ಪುಸ್ತಕಗಳನ್ನು ಸರಣಿ ರೂಪದಲ್ಲಿ ಪ್ರಕಟಿಸಿವೆ. ಇವುಗಳು ಅಂದಿನ ಕಾಲಘಟ್ಟದಲ್ಲಿ ಬೃಹತ್ ಪುಸ್ತಕ ಮಳಿಗೆಗಳಿಂದ ಸಣ್ಣ ಪುಟ್ಟ ಅಂಗಡಿಗಳವರೆಗೆ ಎಲ್ಲಾ ಕಡೆ ಧಾರಾಳವಾಗಿ ದೊರೆಯುತ್ತಿದ್ದವು. ಇವುಗಳಲ್ಲಿ ಸಂಪೂರ್ಣ ಕಥೆಯು ಸಚಿತ್ರದಿಂದ ಕೂಡಿದ್ದು, ಅಬಾಲ ವೃದ್ಧಾದಿಗಳನ್ನು ಸಲೀಸಾಗಿ ಓದಿಸಿಕೊಂಡು ಹೋಗುವಂತಿತ್ತು. ಅನಂತ್ ಪೈಯವರ ಪರಿಶ್ರಮದಿಂದಾಗಿ ಭಾರತದ ಮಹಾಕಾವ್ಯಗಳು, ಪುರಾಣಗಳು, ಇತಿಹಾಸಗಳು, ಸಾಹಿತ್ಯ ಲೋಕದಲ್ಲಿ ಬೃಹತ್ ಸುನಾಮಿಯನ್ನೇ ಎಬ್ಬಿಸಿತು. ಈ ಮಾಲಿಕೆಯು ಕೋಟ್ಯಾಂತರ ಮನೆ-ಮನಗಳಿಗೆ ಅತ್ಯಂತ ವೇಗವಾಗಿ ಲಗ್ಗೆಯಿಟ್ಟಿತು.



ಭಾರತೀಯ ಪರಂಪರೆಯ ಪರಿಚಯ
 “ಭಾರತದ ಖಜಾನೆಗಳು“ ಎಂಬ ಹೆಸರಿನಲ್ಲಿ  ವಿಶ್ವಮಟ್ಟದಲ್ಲಿ ತನ್ನ ಚಂದಾದಾರಿಕೆಯನ್ನು ಆರಂಭಿಸಿತು. ಪರಿಣಾಮವಾಗಿ ಎಲ್ಲಾ ವಯಸ್ಸಿನವರೂ ಈ ಮಾಲಿಕೆಗಳ ಪುಸ್ತಕಗಳನ್ನು ಖರೀದಿಸಿ ಓದಲು  ತೊಡಗಿದರು. ಪರಿಣಾಮ ಭವ್ಯ ಭಾರತದ ಪರಂಪರೆಯು ಎಲ್ಲರ ಮನಗಳಲ್ಲಿ ಹಾಸುಹೊಕ್ಕಾಂತಾಯಿತು ! ಇದು ಅಂದಿನ ಕಾಲದಲ್ಲಿ ಎಷ್ಟು ಅದೆಷ್ಟು ಪ್ರಭಾವಶಾಲಿಯಾಗಿತೆಂದರೆ, ಬಹುತೇಕ ವಾಣಿಜ್ಯ ಉತ್ಪನ್ನಗಳು ತಮ್ಮ ವಸ್ತುಗಳಲ್ಲಿ ಅಮರ ಚಿತ್ರ ಕಥೆಗಳ ಚಿತ್ರಗಳನ್ನು ಮುದ್ರಿಸುವಂತಾಗಿತ್ತು ! ಇದು ಆರಂಭವಾದ ಕೆಲವೇ ಸಮಯದಲ್ಲಿ ಹಲವಾರು ತಲೆಮಾರುಗಳ ಓದುಗರಿಗೆ ಅಚ್ಚುಮೆಚ್ಚಿನ ವಸ್ತುವಾಗಿ ಮಾರ್ಪಟ್ಟಿತ್ತು. ಬಳಿಕ  ಪ್ರಾದೇಶಿಕ ಭಾಷೆಗಳಿಗೂ ಈ ಕಥಾ ಸಾಮ್ರಾಜ್ಯದ ವಿಸ್ತರಣೆಯಾಯಿತು. ಅದಕ್ಕೆ ಸರಿಸಮಾನವಾಗಿ ಆಯಾ ಪ್ರಾದೇಶಿಕ ವೀರರು-ಶೂರರು, ರಾಜ- ಮಹಾರಾಜರು ಸೇರಿದಂತೆ ಹಿಂದೂ ದೇವಾನುದೇವತೆಗಳಾದ ಕೃಷ್ಣ, ರಾಮ, ದುರ್ಗಾ ಸೇರಿದಂತೆ ಶಾಸ್ತೀಯ ಕಥೆಗಳೂ ಚಿತ್ರಿಸಲ್ಪಟ್ಟವು. 1970ರ  ದಶಕದಲ್ಲಿ ಮಧ್ಯಯುಗದ ರಾಜರುಗಳಾದ ಶಿವಾಜಿ, ಅಕ್ಬರ್ ಮತ್ತು ಭಗತ್ ಸಿಂಗ್, ಗಾಂಧೀಜಿ ಸೇರಿದಂತೆ ವಿವಿಧ ಸ್ವಾತಂತ್ರ್ಯ ಹೋರಾಟಗಾರನ್ನು ಒಳಗೊಂಡಂತೆ ಭಾರತೀಯ ಐತಿಹಾಸಿಕ ಅಂಶಗಳ ಸೇರ್ಪಡೆ ಮಾಡಲಾಯಿತು.  ತರುವಾಯ ಸಮಾಜ ಸುಧಾರಕರು ಕಥೆಗಳು ಸೇರ್ಪಡೆಗೊಂಡವು.  ಕಳೆದ ಕೆಲ ದಶಕಗಳಲ್ಲಿ ಈ ಇಂಗ್ಲೀಷ್ ಭಾಷೆಯ ಕಾಮಿಕ್ಸ್ ಸರಣಿಯು ಮಧ್ಯಮ ವರ್ಗದ ಭಾರತ ಮತ್ತು ಜಾಗತಿಕ ಭಾರತೀಯ ವಲಸಿಗರೊಂದಿಗೆ ವ್ಯಾಪಕವಾಗಿ ಜನಪ್ರಿಯವಾಯಿತು.



ಸರಳ ಭಾಷಾ ಶೈಲಿ
ಇದು ಒಂದು ರೀತಿಯಲ್ಲಿ ಎಲ್ಲಾ ವಯೋಮಾನದ ಓದುಗರ ಧಾರ್ಮಿಕ ಮತ್ತು ರಾಷ್ಟ್ರೀಯ ಶಿಕ್ಷಣದ ಮೂಲಭೂತ ಪಠ್ಯಗಳು ಎಂಬಂತಾದವು. ಈ ಸರಣಿಯ ಕಥಾ ಮಾಲಿಕೆಗಳು ವಿದ್ವಾಂಸರಿಗೆ ಗಂಭೀರ ಅಧ್ಯಯನ ಮಾಡಲು ಹೊಸ ವಿಷಯ ಮತ್ತು ಪ್ರೇರಪಣೆಯನ್ನು ನೀಡಿತು ಎನ್ನಬಹುದು. ಇದು ಅತ್ಯಂತ ಸರಳವಾದ ಭಾಷೆಯಲ್ಲಿದ್ದು, ಮಕ್ಕಳು, ಜನಸಾಮಾನ್ಯರು, ಯಾರ ಸಹಾಯವಿಲ್ಲದೆ ಮನೋರಂಜನೆ ಮತ್ತು ಜ್ಞಾನವನ್ನು ಪಡೆಯಬಹುದಾಗಿದೆ.  ಅಂದು ಈ ಕಾಮಿಕ್ ಪುಸ್ತಕಗಳನ್ನು ಜನತೆಯೇ, ಗ್ರಂಥಾಲಯಗಳ ಸಹಾಯವಿಲ್ಲದೇ ನೇರವಾಗಿ ಎರವಲು ಪಡೆಯುತ್ತಿದ್ದರು. ಇದರಲ್ಲಿ ಪಂಚತಂತ್ರ ಕಥೆಗಳನ್ನು ಮತ್ತು ನೀತಿಕಥೆಗಳನ್ನು ಸುಮಾರು 50ಕ್ಕೂ ಅಧಿಕ ಭಾಷೆಗಳಿಗೆ ಭಾಷಾಂತರಿಸಲಾಗಿದೆ. ಬಣ್ಣ-ಬಣ್ಣದ ಚಿತ್ರಗಳು ಮಕ್ಕಳ ಮನಸೂರೆಗೊಳ್ಳುವಲ್ಲಿ ಯಶಸ್ವಿಯಾಯಿತು. ಅತ್ಯಂತ ಕಡಿಮೆ ಪುಟಗಳನ್ನು ಹೊಂದಿದ ಕಿರು ಹೊತ್ತಿಗೆಗಳು ಅತ್ಯಂತ ಕಡಿಮೆ ಸಮಯದಲ್ಲಿ ಎಲ್ಲರ ಹೃನ್ಮನವನ್ನು ಸೂರೆಗೊಂಡವು. ಮಕ್ಕಳಿಗೆಂದು ಖರೀದಿಸಿ ತಂದ ಪುಸ್ತಕಗಳು ಪೋಷಕರ ಮನಗೆಲ್ಲಲಾರಂಭಿಸಿದವು. ಪರಿಣಾಮ ಹಿರಿಯರು ಸಹಾ ಈ ಪುಸ್ತಕಗಳನ್ನು ಕೊಳ್ಳಲಾರಂಭಿಸಿದರು. ಈ ಕಾಮಿಕ್ ಸರಣಿ ಕಾಲಕಳೆದಂತೆ ಬ್ರಹ್ಮಾಂಡದ ಸುತ್ತಲೂ ತಿರುಗಿತು. ಇದರಲ್ಲಿ ಫ್ಯಾಂಟಮ್, ಮಾಂಡ್ರೆಕ್ ಸೇರಿದಂತೆ ಇತರ ಕಥೆಗಳು ಸೇರಿಕೊಂಡವು. ಇವು ಅಂದಿನ ದಿನಗಳಲ್ಲಿ ಅದೆಷ್ಟು ಜನಪ್ರಿಯವಾಗಿತ್ತೆಂದರೆ ಹೊಸ ಸರಣಿಯ ಪುಸ್ತಕಗಳು ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಬಿಸಿ ದೋಸೆಯಂತೆ ಮಾರಾಟವಾಗಿ ಬಿಡುತ್ತಿದ್ದವು.
ಡಿಜಿಟಲ್ ಅಂಗಡಿಯಲ್ಲಿ: ಎಎಂಕೆ ಕಾಮಿಕ್ಸ್ ಅಪ್ಲಿಕೇಶನ್ಸ್ ಅಮರ ಚಿತ್ರ  ಕಥೆಯ ಡಿಜಿಟಲ್ ಅಂಗಡಿ. ಈಗ ಆಂಡ್ರಾಯಿಡ್ ಟ್ಯಾಬ್ಲೆಟ್‍ಗಳು, ಮತ್ತು ಮೊಬೈಲ್‍ಗಳಿಗಾಗಿ ದೊರೆಯುತ್ತದೆ.ಇದರ ಮೂಲಕ ಹಲವಾರು ಕಾಮಿಕ್ ಕಥೆಗಳನ್ನು ಉಚಿತವಾಗಿ ಡೌನ್‍ಲೋಡ್ ಮಾಡಬಹುದು. ಇದರಲ್ಲಿ ಮಾಸಿಕ, ವಾರ್ಷಿಕ ಚಂದಾದಾರಿಕೆಯು ಲಭ್ಯವಿದೆ. ಹೊಸ ಓದುಗರಿಗೆ ಚಂದಾ ತೀರಾ ಕಡಿಮೆ ಇದೆ. ಜೊತೆಗೆ ಫೇಸ್‍ಬುಕ್‍ನ ಪುಟದಲ್ಲಿ ಅಮರ ಚಿತ್ರ ಕಥೆಯು ಲಭ್ಯವಿದೆ. ಈ ಪುಸ್ತಕ ಸರಣಿಯನ್ನು ಪ್ರಪಂಚದಾದ್ಯಂತದ ಶಿಕ್ಷಕರು ಕಲಿಕೆಗಾಗಿಯೂ ಶಿಫಾರಸ್ಸು ಮಾಡಿದ್ದಾರೆ.



ವೈವಿಧ್ಯಮಯ ಆವೃತ್ತಿಗಳು 

  ವೆಬ್ ಸೈಟ್‍ನಲ್ಲಿ ಓದುಗರಿಗೆ ಅನುಕೂಲವಾಗುವಂತೆ ಅಮರ ಚಿತ್ರಕಥೆಗಳು ಪಿಡಿಎಫ್, ಇ ಪಬ್, ಪ್ಲೈನ್ ಟೆಕ್ಸ್ಟ್ , ಡೈಸಿ ಮತ್ತು ಕಿಂಡಲ್ ಆವೃತ್ತಿಗಳಲ್ಲಿ ಲಭ್ಯವಿದೆ. ಪ್ರತಿ ಪುಸ್ತಕವು ಸುಮಾರು 4 ರಿಂದ 9, 500 ಕೆ. ಬಿ  ಗಾತ್ರವನ್ನು ಹೊಂದಿದೆ. ಇದಕ್ಕೆ ಸಂಬಂಧಿಸಿದಂತೆ ಹಲವಾರು ಅಂತರ್ ಜಾಲತಾಣಗಳಿವೆ. ಕೆಲವು ಮಕ್ಕಳಿಗಾಗಿ ಶೇಕಡಾ 60ರವರೆಗೆ ರಿಯಾಯ್ತಿಯನ್ನು ನೀಡುತ್ತಿವೆ. ಕೆಲವು ವೆಬ್‍ಸೈಟ್‍ಗಳಲ್ಲಿ ಪುಸ್ತಕಗಳು 31 ರೂಪಾಯಿಗಳಿಂದ ಆರಂಭ. “ ಯೂ ಟ್ಯೂಬ್”  ಸೇರಿದಂತೆ ವಿವಿಧ ಕಡೆಗಳಲ್ಲಿ ಆಮರ ಚಿತ್ರ ಕಥೆಗಳ ಆನಿಮೇಟೆಡ್ ವಿಡಿಯೋ ಕಥೆಗಳು, ಚಲನಚಿತ್ರಗಳು ಉಚಿತವಾಗಿ ದೊರೆಯುತ್ತವೆ.
ಜನಪ್ರಿಯತೆಯ ಉತ್ತುಂಗದಲ್ಲಿ: ಅಂದಿನ ಕಾಲದಲ್ಲಿ  ವಿವಿಧ ಪತ್ರಿಕೆಗಳಲ್ಲಿ ಬರುತ್ತಿದ್ದ ಮೊದ್ದುಮಣಿ, ಡಾಬೂ, ಮಜನೂ, ಕಪೀಶ, ಫ್ಯಾಂಟಮ್, ಶೂಜ, ವಿಕ್ರಮ್, ಪುಟ್ಟೂ ಮುಂತಾದ ಕಾರ್ಟೂನ್ ಪಾತ್ರಗಳಿಗೆ ಜೀವ ತುಂಬಿದ್ದ ಕಲಾವಿದರೆಂದರೆ ಪ್ರಾಣ್ ಕುಮಾರ್ ಶರ್ಮ. ಉದಯವಾಣಿಯಲ್ಲಿ ಪ್ರಕಟವಾಗುತ್ತಿದ್ದ  ರಾಮು-ಶ್ಯಾಮು ಅಂಕಲ್ ಪೈಯವರ ರಚನೆಯಾಗಿತ್ತು.  ಇವುಗಳು ಅಂದಿನ ದಿನಗಳಲ್ಲಿ ಜನಪ್ರಿಯತೆಯ ಉತ್ತುಂಗವನ್ನೇರಿತ್ತು ಎಂಬುವುದನ್ನು ಓದುಗರು ಇಂದಿಗೂ ನೆನಪಿಸಿಕೊಳ್ಳುತ್ತಿದ್ದಾರೆ.
 
ಅಜರಾಮರ ಅಂಕಲ್ ಪೈ 
 ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದ್ರೆಯ ಅನಂತ್ ಪೈ 1967ರಲ್ಲಿ ಅಮರ ಚಿತ್ರ ಕಥೆಯ ಮೂಲ ಸೃಷ್ಟಿಕರ್ತೃ.  ಇವರು ಅಂಕಲ್ “ಪೈ” ಎಂದು ಪ್ರಖ್ಯಾತರಾಗಿದ್ದರು. ಇವರನ್ನು ಭಾರತದ ಕಾಮಿಕ್ಸ್ ಕಥೆಗಳ “ಪಿತಾಮಹ” ಎನ್ನಬಹುದು. ಇದೀಗ ಈ ಕಥಾ ಸರಣಿಗೆ 50ರ ಸಂಭ್ರಮ (ಸುವರ್ಣ ಮಹೋತ್ಸವ ವರ್ಷ) . ಪೈ ಅಮರ ಚಿತ್ರ ಕಥೆಗಳನ್ನು ಓದುಗರಿಗೆ ನೀಡಿ ಓದುಗರ ಮನದಲ್ಲಿ ಅಜರಾಮರರಾದರು. ಈ ಮೂಲಕ ಅವರನ್ನು ನೆನಪಿಸಿಕೊಳ್ಳುತ್ತಾ ಅಗಲಿದ ಆತ್ಮಕ್ಕೆ “ಅಕ್ಷರಾಂಜಲಿ” ಸಮರ್ಪಿಸೋಣ. ಭಾರತದ ಶಿಕ್ಷಣ ವ್ಯವಸ್ಥೆಯೂ ಇಂದೂ ಸಹಾ ಬ್ರಿಟಿಷ್ ಆಡಳಿತ ಶಾಹಿಗಳು ಹಿಂದೆ ನಿರ್ದೆಶಿಸಿದ ಪಠ್ಯಕ್ರಮವನ್ನು ಹೊಂದಿವೆ. ಇದನ್ನು ಅಮರ ಚಿತ್ರ ಕಥೆಗಳನ್ನು ಬಳಸಿ,  ಕೊಂಚ ಬದಲಾಯಿಸಲೂ ಸಾಧ್ಯತೆಗಳಿವೆ. ಈ ಬಗ್ಗೆ ಪಠ್ಯ ಪುಸ್ತಕ ರಚನಾ ಮಂಡಳಿ, ಪ್ರಾಥಮಿಕ ಶಾಲಾ ಆಡಳಿತ ಮಂಡಳಿಗಳು ಚಿಂತನ-ಮಂಥನ ನಡೆಸುವ ಅವಶ್ಯಕತೆ ಇದೆ.