ಕಾಫಿ ಖರೀದಿ: ಬೆಳೆಗಾರರ ಸುಲಿಗೆ !
ಮೋಸದ ಸಂಕೋಲೆಯಲ್ಲಿ ಬಂಧಿಯಾದ ಬೆಳೆಗಾರ !
ತೂಕ, ಔಟ್ ಟರ್ನ್, ತೇವಾಂಶ, ಹಸ್ಕ್ಗಳಿಂದ ಮೋಸ
ಬರಹ: ಕೂಡಂಡ ರವಿ, ಹೊದ್ದೂರು. ಕೊಡಗು.
ಕಾಫಿ ಮಾರಾಟದ ಸಂದರ್ಭಗಳಲ್ಲಿ ಕೆಲವು ವರ್ತಕರು ಬೆಳೆಗಾರರಿಗೆ ಭಾರೀ ಪ್ರಮಾಣದ ಮೋಸ ಮಾಡುತ್ತಿರುವ ಪ್ರಕರಣಗಳು ಹೆಚ್ಚುತ್ತಿವೆ. ಇಂತಹ ಪ್ರಕರಣಕ್ಕೆ ಕುರಿತಂತೆ ಬೆಳೆಗಾರರು ಮಾಧ್ಯಮಗಳಿಗೆ ಅಧಿಕೃತ ಮಾಹಿತಿ ನೀಡಿರುವರು.
ಮೌನಕ್ಕೆ ಶರಣು
ಮೋಸಕ್ಕೆ ಬಲಿಯಾದವರು ಮೌನಕ್ಕೆ ಶರಣಾಗುತ್ತಿರುವುದು ವರ್ತಕರಿಗೆ ವರದಾನವಾಗುತ್ತಿದೆ. ಹಲವಾರು ಮಂದಿ ಬೆಳೆಗಾರರು ಕಾಫಿ ಮಾರಾಟದ ಸಂದರ್ಭ ಸುಲಿಗೆಗೆ ಒಳಗಾಗುತ್ತಿದ್ದಾರೆ. ಅದರೂ, ಇಂತಹವರು “ತುಟಿ ಪಿಟಿಕ್” ಎನ್ನುತ್ತಿಲ್ಲ. ಇದೇ ಹಲವಾರು ವರ್ತಕರಿಗೆ ಲಾಭವಾಗುತ್ತಿದೆ.
ಮೋಸ ಹೇಗೆಲ್ಲಾ ಮಾಡಬಹುದು ?
ಬೆಳೆಗಾರರ ತಾನು ಬೆಳೆದ ಕಾಫಿಯನ್ನು ಉತ್ತಮ ಧಾರಣೆ ಸಿಗುವ ಸಂದರ್ಭ ನೋಡಿ ಮಾರಾಟ ಮಾಡುವುದು ಸರ್ವೆ ಸಾಮಾನ್ಯ. ಇಂತಹ ಸಂದರ್ಭಗಳಲ್ಲಿ ಬೆಳೆಗಾರರು ಸಾಮಾನ್ಯವಾಗಿ ಕೊಂಚ ದುಡುಕುತ್ತಾರೆ.
“ನಾಳೆ ಬೆಲೆ ಇಳಿದೀತು” ಎಂಬ ಭಯ ಬಹುತೇಕ ಬೆಳೆಗಾರರನ್ನು ಅನುದಿನವೂ ಕಾಡುತ್ತಿರುತ್ತದೆ. ಇದರಿಂದಾಗಿ ಪತೀ ಬೆಳೆಗಾರರು ಆದಷ್ಟು ಬೇಗನೇ ಕಾಫಿ ಮಾರಿ ಉತ್ತಮ ಬೆಲೆ ಪಡೆಯಬೇಕೆಂಬ ಹಂಬಲ ಹೊಂದಿರುವುದು ಸ್ವಾಭಾವಿಕ. ಇಂತಹ ಮಿಕಗಳೆ ಬಲೆಗೆ ಬೀಳಲೆಂದು ಹಲವಾರು ವರ್ತಕರು ಹೊಂಚು ಹಾಕಿ ಕುಳಿತಿರುತ್ತಾರೆ.
ಇಂತಹ ಮೋಸಗಾರ ವರ್ತಕರು ಕೆಲವೇ ಲಕ್ಷ ರೂಪಾಯಿ ಬಂಡವಾಳ ಹಾಕುವರು.ನಂತರ ಪ್ರತೀ ವರ್ಷವೂ ಕೋಟ್ಯಾಂತರ ರೂಪಾಯಿ ಸಂಪಾದಿಸುವುದನ್ನು ನೀವೂ ನೋಡಿರಬಹುದು !
ಹಲವಾರು ಮಂದಿ ನುರಿತ ಬೆಳೆಗಾರರು ವರ್ತಕ ಸಮುದಾಯವು ಯಾವ ರೀತಿಯಲ್ಲಿ ಮೋಸ ಹೋಗಬಹುದೆಂದು ಅಂದಾಜಿಸಿ ಸಾಕಷ್ಟು ಮುನ್ನೆಚ್ಚರಿಕೆ ವಹಿಸುವರು. ಈ ಹಿಂದಿನ ವರ್ಷಗಳಲ್ಲಿ ಆದ ಅನುಭವವೂ ಹಲವಾರು ಬೆಳೆಗಾರರಿಗೆ ನೀತಿ ಪಾಠವನ್ನು ಕಲಿಸಿರುತ್ತದೆ ! ಆದರೂ, ವರ್ತಕ ಸಮುದಾಯ ಬೆಳೆಗಾರ ಚಾಪೆಯ ಕೆಳಗೆ ತೂರಿದರೆ, ವರ್ತಕ ರಂಗೋಲಿಯ ಕೆಳಗೆ ನುಸುಳುವ ಸಾಹಸ ಮಾಡಿ ಅದರಲ್ಲಿ ಯಶಸ್ವಿಯಾಗುತ್ತಾನೆ.
ಮೋಸದ ದಾರಿಗಳು ಯಾವುದು ?
ತೂಕದ ಯಂತ್ರದಲ್ಲಿ
ಸ್ಕೇಲ್‌ನಲ್ಲಿ
ಆಧುನಿಕ ಯುಗದಲ್ಲಿ ನಾವಿಂದು ಹಲವಾರು ರೀತಿಯ ತೂಕದ ಯಂತ್ರಗಳನ್ನು ಕಾಣುತ್ತೇವೆ. ಆದರೆ, ಕಾಫಿ ಅಥವಾ ಇತರ ರೈತ ಉತ್ಪನ್ನಗಳಲ್ಲಿ ಸಾಮಾನ್ಯವಾಗಿ ಯಾನ್‌ಲಾಗ್ ಸ್ಕೇಲ್ ಅಥವಾ ಡಿಜಿಟಲ್ ತೂಕದ ಯಂತ್ರಗಳನ್ನು ಬಳಸಲಾಗುತ್ತದೆ. ಇದರ ಮೂಲಕ ಬೆಳೆಗಾರರನ್ನು ಸುಲಿಯುವುದು ಸುಲಭ !
ಯಾನ್‌ಲಾಗ್ ಸ್ಕೇಲ್‌ನಲ್ಲಿ ೫೦ ಕಿಲೋಗ್ರಾಂ ಇಟ್ಟು ಅದರ ಲಾಕ್ ತೆರೆದಲ್ಲಿ ಅದು ಪೂರ್ಣವಾಗಿ ಮೇಲೆ ಏರಿದ ಕೂಡಲೇ ಲಾಕ್ ಮಾಡಿದಲ್ಲಿ ಬೆಳೆಗಾರ ಹೆಚ್ಚು ಕಾಫಿಯನ್ನು ಕಳೆದುಕೊಳ್ಳುತ್ತಾನೆ. ಅದು ಮೇಲೆ ಕೆಳಗೆ ಏರಿ ಲಾಕ್‌ನ ಮಧ್ಯೆ ಓಲಾಡುತ್ತಾ ನಿಂತಲ್ಲಿ ಮಾತ್ರ ತೂಕ ಸರಿಯಾಗಿದೆ ಎಂದರ್ಥ.
ಇದರ ಸ್ಕೇಲ್ ಕುಣಿಯುತ್ತಿದ್ದಲ್ಲಿ, ಅಥವಾ ನಡುಗುತ್ತಿದ್ದಲ್ಲಿ ಸ್ಕೇಲ್ ಸರಿ ಇಲ್ಲ ಎಂದರ್ಥ.
ವರ್ತಕರು ಸಾಮಾನ್ಯವಾಗಿ ಸ್ಕೇಲ್ ಮೇಲೇರುತ್ತಿರುವಾಗಲೇ ಲಾಕ್ ಮಾಡುವುದುಂಟು.
ಕೆಲವರು ಸ್ಕೇಲ್ ಯಂತ್ರದ ತಳಭಾಗದಲ್ಲಿರುವ ಕಬ್ಬಿಣದ ಸಲಾಕೆಗಳನ್ನು ಹಗ್ಗದಿಂದ ಬಿಗಿದಿರುತ್ತಾರೆ. ಇಂತಹ ಯಂತ್ರದ ಮೂಲಕ ತೂಗಿದ್ದಲ್ಲಿ ಅಪಾರ ನಷ್ಟವಾಗುತ್ತದೆ.
ಡಿಜಿಟಲ್ ಯಂತ್ರದಲ್ಲಿ
ತೂಕದ ಯಂತ್ರಗಳಿಗೆ ರಿಮೋಟ್
ಉದಾಹರಣೆಗಾಗಿ ಕಾಫಿ ಬೆಳೆಗಾರ ೫೦ ಕಿಲೋಗ್ರಾಂ ತೂಕದ ನಾಲ್ಕು ಚೀಲಗಳನ್ನು ಈ ಯಂತ್ರದ ಮೇಲಿರಿಸಿದ್ದಲ್ಲಿ ಅದು ೨೦೦ ಕಿಲೋಗ್ರಾಂನ ಆಸುಪಾಸು ಅಥವಾ ಅದಕ್ಕೂ ಅಧಿಕ ಭಾರ ತೋರಬೇಕು. ಆದರೆ, ರಿಮೋಟ್ ಅಥವಾ ಮೊಬೈಲ್ ಫೋನ್ ಮೂಲಕ ಅದನ್ನು ೧೮೫ ಕಿಲೋಗ್ರಾಂಗೆ ಸರಿ ಹೊಂದಿಸಬಹುದು ! ಆಗ ಬೆಳೆಗಾರನಿಗೆ ಸರಾಸರಿ ೧೫ ಕಿಲೋಗ್ರಾಂಗೂ ಅಧಿಕ ಕಾಫಿ ನಷ್ಟವಾಗಬಹುದು.
ಸಾವಿರಾರು ರೂಪಾಯಿ ನಷ್ಟ- ೨೦೦ ರೂಪಾಯಿ ಲಾಭ !
ಇಂತಹ ಮೋಸಗಾರ ವರ್ತಕರು ಅಧಿಕ ಬೆಲೆ ನೀಡುವುದಾಗಿ ಜನತೆಯನ್ನು ನಂಬಿಸುತ್ತಾರೆ. ಆದರೆ, ತೂಕದಲ್ಲಿ ೨೦೦ ಕಿಲೋಗ್ರಾಂಗೆ ಕನಿಷ್ಠ ಸರಾಸರಿ ೧೫ ರಿಂದ ೨೦ ಕಿಲೋಗ್ರಾಂ ಮೋಸ ಮಾಡಬಹುದಾಗಿದೆ.
೫೦ ಕಿಲೋಗ್ರಾಂ ಕಾಫಿಗೆ ೪ಸಾವಿರ ರೂಪಾಯಿ ಬೆಲೆ ಇದ್ದಲ್ಲಿ ಬೆಳೆಗಾರನಿಗೆ ಸುಮಾರು ೪ ರಿಂದ ೬ ಸಾವಿರ ನಷ್ಟ ಮಾಡಿದ ಆತ, ಪ್ರತಿ ಚೀಲಕ್ಕೆ ೧೦೦- ೨೦೦ ರೂಪಾಯಿ ಹೆಚ್ಚಾಗಿ ನೀಡಿದಂತೆ ನಟಿಸುತ್ತಾನೆ ! ಕಾಫಿ ಮಿಲ್‌ಗಳಲ್ಲಿ ಇಂತಹ ಮೋಸಗಳ ಪ್ರಮಾಣ ಹೆಚ್ಚು ಎನ್ನಬಹುದು. ಮಿಲ್‌ಗಳಲ್ಲಿ ಬಹುತೇಕ ಕಡೆಗಳಲ್ಲಿ ನಾಲ್ಕಾರು ಚೀಲಗಳನ್ನು ಒಮ್ಮೆ ತೂಗುವ ಆಧುನಿಕ ಎಲೆಕ್ಟಾನಿಕ್ ಯಂತ್ರಗಳಿರುತ್ತವೆ. ಇದರಲ್ಲಿ ಮೋಸ ಮಾಡುವುದು ಬಹಳ ಸುಲಭ. ಉಳಿದ ಕಡೆಗಳಲ್ಲಿಯೂ ಇಂತಹ ಪ್ರಕರಣಗಳು ವರದಿಯಾಗುತ್ತಿವೆ.
ಉದಾಹರಣೆಗಾಗಿ ನ್ಯಾಯಬೆಲೆ ಅಂಗಡಿಗಳಲ್ಲಿ ಇಂತಹ ಪ್ರಕರಣಗಳು ಹೆಚ್ಚಾಗಿರುತ್ತವೆ. ಡಿಜಿಟಲ್ ಯಂತ್ರದಲ್ಲಿ ತೂಗಿದ ಅಕ್ಕಿ – ಗೋಧಿಯನ್ನು ಯಾನ್ ಲಾಗ್ ಸ್ಕೇಲ್‌ನಲ್ಲಿ ಅತ್ಯಂತ ನಿಖರವಾಗಿ ತೂಗಿದಲ್ಲಿ ಮಾತ್ರ ಇಂತಹ ಪ್ರಕರಣಗಳ ಮೋಸ ನಿಮಗೆ ತಿಳಿಯಬಹುದಾಗಿದೆ.
ಸರ್ವೆ ಸಾಮಾನ್ಯವಾಗಿ ತೂಕದ ಯಂತ್ರಗಳು ಬ್ಯಾಟರಿ ಅಥವಾ ವಿದ್ಯುತ್‌ನಿಂದ ಚಾಲನೆಯಾಗುತ್ತವೆ. ಯಂತ್ರಕ್ಕೆ ಬರುವ ವಿದ್ಯುತ್ ಅನ್ನು ನಿಲ್ಲಿಸಿದ್ದಲ್ಲಿ ಅದಕ್ಕೆ ಈ ಹಿಂದೆ ಅಳವಡಿಸಿದ ಮೋಸದಾಟವು ಅಳಿಸಿ ಹೋಗುತ್ತದೆ. ಇದರಿಂದ ಗ್ರಾಹಕರು ಮೋಸ ಹೋಗುವುದನ್ನು ತಡೆಯಲು ಅದರ ವಿದ್ಯುತ್ ನಿಲ್ಲಿಸಿ ಮತ್ತೆ, ಆನ್ ಮಾಡಿ ತೂಕ ಮಾಡುವುದು ಉತ್ತಮ.
ಪ್ರತೀ ಪ್ಲಾಸ್ಟಿಕ್ ಖಾಲಿ ಚೀಲ ಬರೇ ೦. ೫೦ ಗ್ರಾಂ ತೂಗುತ್ತದೆ. ಕೆಲ ವರ್ತಕರು ಪ್ರತೀ ಚೀಲಕ್ಕೂ ೨೦೦, ೧೦೦ ಗ್ರಾಂ ಎಂದು ಒಟ್ಟಾರೆ ಲೆಕ್ಕದಲ್ಲಿ ಕಳೆಯುತ್ತಾರೆ. ಇದೂ ಒಂದು ಬಗೆಯ ಮೋಸ. ಇದನ್ನೆಲ್ಲಾ ಬೆಳೆಗಾರರು ಪರಿಗಣಿಸುವುದೇ ಇಲ್ಲ !
ಔಟ್‌ಟರ್ನ್ನಿಂದ ಮೋಸ ಹೇಗೆ ?
ವರ್ತಕರು ಜನತೆಯನ್ನು-ಬೆಳೆಗಾರರನ್ನು ವಿವಿಧ ರೀತಿಯಲ್ಲಿ ಶೋಷಣೆ ಮಾಡುವುದು ಹೊಸತೇನಲ್ಲ. ಅದೇ ರೀತಿ ಅವರು ಕಾಫಿ ಬೆಳೆಗಾರರ ಶೋಷಣೆಗೆ ನೂರಾರು ಹೊಸ ದಾರಿಗಳನ್ನು ಹುಡುಕುತ್ತಿದ್ದಾರೆ. ಅದರಲ್ಲೊಂದು “ಔಟ್‌ಟರ್ನ್”...!
ಮಾದರಿ ಕಾಫಿ ಸಂಗ್ರಹದಲ್ಲಿ ಮೋಸ !
ಇದರ ಪ್ರಕಾರ ವರ್ತಕರು ತಮ್ಮ ಬಳಿಗೆ ಕಾಫಿಯನ್ನು ತರುವ ಬೆಳೆಗಾರರಿಂದ ಮಾದರಿ(ಸ್ಯಾಂಪಲ್)ಗಳನ್ನು ತಮ್ಮದೇ ಆದ ವಿಧಾನ ಬಳಸಿ ಪಡೆಯುತ್ತಾರೆ. ಇದು ಮೊನಚಾದ ಕಬ್ಬಿಣದ ಸಾಧನ. ಇದರ ಒಂದು ಬದಿ ಟೊಳ್ಳಾಗಿದ್ದು ಕಾಫಿ ಚೀಲವನ್ನು ಬಿಚ್ಚದೆಯೇ ಅದರ ಒಳಭಾಗದಲ್ಲಿರುವ ಕಾಫಿಯ ಮಾದರಿ ಸಂಗ್ರಹಿಸಬಹುದಾಗಿದೆ. ಆದರೆ, ಇದರ ತುದಿ ಮೊನಚಾಗಿರುವ ಕಡೆ ತೀರಾ ಸಣ್ಣ ಕಾಫಿ ಮಾತ್ರ ಸಂಗ್ರಹವಾಗುತ್ತದೆ. ಮಾದರಿ ಸಂಗ್ರಹದ ಸಾಧನದ ಕೊನೆಯ ಭಾಗ ಕೊಂಚ ದಪ್ಪಕ್ಕಾಗುತ್ತಾ ಕೆಳಭಾಗ ಕೊಂಚ ಹೆಚ್ಚು ದಪ್ಪವಾಗಿ ಇರುತ್ತದೆ. ದಪ್ಪವಿರುವ ಭಾಗದಲ್ಲಿ ಮಾತ್ರ ದಪ್ಪವಿರುವ ಕೆಲವು (?) ಕಾಫಿ ಸಂಗ್ರಹವಾಗುತ್ತದೆ. ಈ ಕಡ್ಡಿಯ ಮಾದರಿಯ ಉಪಕರಣದಲ್ಲಿ ಸಂಗ್ರಹಿತವಾದ ಕಾಫಿಯಲ್ಲಿ ಶೇಕಡ ೭೫ಭಾಗ ಸಣ್ಣ ಕಾಫಿಯೇ ಇರುವುದು ವಿಶೇಷ ! ಇದರಲ್ಲಿ ದೊಡ್ಡ ಕಾಫಿ ಹಿಡಿಸದಂತೆ ರಚಿಸಲಾಗಿರುತ್ತದೆ.
ಇದರಿಂದ ಕಾಫಿ ಮಾರುವವರಿಗೆ ಭಾರೀ ಮೋಸವಾಗುತ್ತಿದೆ. ಸಣ್ಣ ಕಾಫಿಯಿಂದ ಔಟ್ ಟರ್ನ್ ಬಹಳ ಕಡಿಮೆ ಬರುತ್ತದೆ.
ಬೆಳೆಗಾರ ಮಾರಾಟಕ್ಕೆ ತಂದ ವಿವಿಧ ಚೀಲಗಳಿಂದ ೦.೫೦ಗ್ರಾಂ ಕಾಫಿಯನ್ನು ಆರಿಸಿ, ವರ್ತಕರ ಬಳಿ ಇರುವ ಯಂತ್ರದ ಮೂಲಕ ಸುಲಿಯಲಾಗುತ್ತದೆ. ಕೆಲ ವರ್ತಕರು ಒಣ ಕಾಫಿಯನ್ನು ಬಾಯಲ್ಲಿ ಕಚ್ಚಿ ಸುಲಿಯುತ್ತಾರೆ. ಕೆಲವರು ಕಚ್ಚಿ ಸುಲಿಯುವಾಗ ಬೇಳೆಗಳನ್ನು ನುಂಗುವುದುAಟು ! ಈ ರೀತಿ ಹೊರಬರುವ ಕಾಫಿ ಬೇಳೆಯನ್ನು“ಔಟ್ ಟರ್ನ್” ಎಂದು ಕರೆಯಲಾಗುತ್ತದೆ.
ಇಂತಹ ಸಂದರ್ಭದಲ್ಲಿ ಕೆಲ ಬೇಳೆಗಳು ಕೈ ತಪ್ಪಿ ನೆಲ ಸೇರುವುದು ಉಂಟು. ಹಲವಾರು ವರ್ತಕರೇ ಒಂದೆರಡು ಬೇಳೆಗಳನ್ನು ನೆಲಕ್ಕೆ ಹಾಕುವುದುಂಟು. ಇದರಲ್ಲಿ ತುಂಡಾದ ಬೇಳೆಗಳನ್ನು ಕೆಲವರು ಲೆಕ್ಕಕ್ಕೆ ತೆಗೆದುಕೊಳ್ಳುವುದಿಲ್ಲ. ಕಾಫಿಯ ಔಟ್‌ಟರ್ನ್ ನೋಡುವಾಗ ಒಂದು ಬೇಳೆ ಕಾಣದೆ ಮಾಡಿ, ನಿಮಗೆ ಸಾವಿರಾರು ರೂಪಾಯಿಗಳನ್ನು ಕಣ್ಣೆದುರೆ ಮೋಸ ಮಾಡಲಾಗುತ್ತದೆ. ಇಂತಹವರು ಕೆಲವೊಮ್ಮೆ ಸಿಕ್ಕಿ ಬಿದ್ದು ಬೆಳೆಗಾರರಿಂದ “ಕಪಾಳ ಮೋಕ್ಷ”ವನ್ನು ಅನುಭವಿಸಿದ್ದಾರೆ.
ಕೆಲವು ಕಡೆ ಕಾಫಿ ಬೇಳೆ ಮಾಡುವ ಯಂತ್ರವಿರುತ್ತದೆ. ಇದಕ್ಕೆ ೩೫೦ ಗ್ರಾಂ ಕಾಫಿಯನ್ನು ಬೇಳೆ ಮಾಡಲು ಸುರಿಯಲಾಗುತ್ತದೆ. ಇದರಲ್ಲಿ ಬೇಳೆ ಮಾಡುವಾಗ ಕೆಲವು ಕಾಫಿ ಅದರೊಳಗೆ ಬಾಕಿಯಾಗಬಹುದು. ಅಥವಾ ಸಿಪ್ಪೆಯೊಡನೆ ಹೊರಹೋಗಬಹುದು. ಬಹುತೇಕ ಸಂದರ್ಭಗಳಲ್ಲಿ ಇವುಗಳನ್ನು ಬೆಳೆಗಾರರು ಗಮನಿಸುವುದೇ ಇಲ್ಲ !
೫೦ಗ್ರಾಂ ಚೆರಿಕಾಫಿಯಲ್ಲಿ ಹೊರಬಂದ ಬೇಳೆಯನ್ನು ತೂಕ ಮಾಡಲಾಗುತ್ತದೆ. ಈ ಬೇಳೆ ಸುಮಾರು ೨೨ಗ್ರಾಂನಿAದ ೨೮ಗ್ರಾಂವರೆಗೆ ತೂಗುತ್ತದೆ. ಆದರೆ, ವರ್ತಕರು ಸಂಗ್ರಹಿಸಿದ ಮಾದರಿಯಲ್ಲಿ ಪ್ರತಿ ೫೦ಗ್ರಾಂ ಕಾಫಿಯಿಂದ ಕೇವಲ ೨೨-೨೬ಗ್ರಾಂ ಬೇಳೆ ಮಾತ್ರ ಬರುತ್ತದೆ. ಹಲವಾರು ಬಾರಿ ಇನ್ನೂ ಕಡಿಮೆ. ಬೆಳೆಗಾರನ ಮೇಲೆ ಇದು ಅವಲಂಬಿಸರುತ್ತದೆ !
ಡಿಜಿಟಲ್ ಮಾಪಕ
ಅವಶ್ಯವೆಂದು ಕಂಡುಬAದಲ್ಲಿ ಕಾಫಿ ಬೇಳೆಯನ್ನು ‘ಡಿಜಿಟಲ್ ತೇವಾಂಶ ಮಾಪಕ’ ಯಂತ್ರದ ಮೂಲಕ ಕಾಫಿಯಲ್ಲಿರುವ ತೇವಾಂಶವನ್ನು ಅಳೆಯಲಾಗುತ್ತದೆ.
ಉತ್ತಮವಾಗಿ ಒಣಗಿದ ಕಾಫಿಯು ಎಷ್ಟು ತೇವಾಂಶದಿAದ ಕೂಡಿರಬೇಕು ಎಂಬ ಬಗೆ ಖರೀದೀದಾರರಾದ ವರ್ತಕರ ಬಳಿ ಒಮ್ಮತದ ಅಭಿಪ್ರಾಯ ಕೇಳಿ ಬಂದಿಲ್ಲ. ಕೆಲವರು ೧೩ ಇರಬೇಕೆಂದರೆ, ಇನ್ನೂ ಕೆಲವರು ೧೩.೫ ಇರಬೇಕೆನ್ನುತ್ತಾರೆ. ಹಲವರು ಕಾಫಿ ಕಡಿಮೆ ಮಾರುಕಟ್ಟೆಗೆ ಬರಿಉವ ಸಮಯದಲ್ಲಿ (ಅನ್ ಸೀಝನ್‌ನಲ್ಲಿ) ೧೪ ತೇವಾಂಶವಿದ್ದರೂ, ಅದನ್ನು ಮರು ಮಾತಿಲ್ಲದೆ ಖರೀದಿಸುವರು.
ಇಂತಹ ಯಂತ್ರವು ಅತ್ಯಂತ ನಿಖರವಾಗಿ ಇರುವುದೇನೂ ಇಲ್ಲ. ಇದನ್ನು ವರ್ತಕರು ತಮಗೆ ಬೇಕಾದಂತೆ ಸರಿ ಹೊಂದಿಸಿ ಕೊಳ್ಳಬಹುದು. ಕಡಿಮೆ ತೇವಾಂಶವಿದ್ದರೂ, ಈ ಯಂತ್ರ ಕೆಲವೊಮ್ಮೆ ಹೆಚ್ಚು ತೇವಾಂಶವನ್ನು ತೋರಿಸುತ್ತದೆ. ಉದಾಹರಣೆ: ನೀವು ಮಾರಾಟಕ್ಕೆ ತಂದ ಕಾಫಿಯು ೧೭. ೨ಕ್ಕೂ ತೇವಾಂಶವಿದೆಯೆAದು ಈ ಯಂತ್ರ ತೋರಿಸುತ್ತದೆ. ಇಂತಹ ಕಾಫಿಯನ್ನು ವರ್ತಕರು ಮನಬಂದAತೆ ಅತ್ಯಂತ ಕಡಿಮೆ ಬೆಲೆಗೆ ಖರೀದಿಸಬಹುದು.
ಆದಿಉದರಿಂದ ಬೆಳೆಗಾರರು ತಾವು ಮಾರಾಟ ಮಾಡಲು ಬಯಸುವ ಕಾಫಿಯನ್ನು ನಾಲ್ಕಾರು ಕಡೆ ಅದರ ಔಟ್‌ಟರ್ನ್, ತೇವಾಂಶಗಳನ್ನು ಪರೀಕ್ಷೆ ಮಾಡಿ ಬಳಿಕ ಮಾರಾಟ ಮಾಡುವ ನಿರ್ಧಾರ ಕೈಗೊಳ್ಳುವುದು ಉತ್ತಮ. ಅಥವಾ ಅಗತ್ಯವಿರುವವರು ತಾವೇ ಕಾಫಿ ಬೇಳೆ ಮಾಡುವ ಮತ್ತು ತೇವಾಂಶ ಪರೀಕ್ಷಾ ಯಂತ್ರಗಳನ್ನು ಖರೀದಿಸಿಟ್ಟು ಕೊಳ್ಳುವುದು ಒಳ್ಳೆಯದು.
ಇವೆರಡರ ಮೇಲೆ ಬೆಳೆಗಾರ ವರ್ತಕರ ಬಳಿ ಕೊಂಡೊಯ್ದ ಕಾಫಿಯ ಬೆಲೆ ನಿಗಧಿ ಪಡಿಸಲಾಗುತ್ತದೆ. ಸಿರಿವಂತ ಬೆಳೆಗಾರರ ಕಾಫಿಯ ಮಾದರಿ ಸಂಗ್ರಹಿಸುವದಿರಲಿ, ಅದನ್ನು ತೂಕ ಮಾಡಲು ವರ್ತಕರು ಮುಂದಾಗುವುದಿಲ್ಲ ! ಅಥವಾ ಹಿಂದೇಟು ಹಾಕುತ್ತಾರೆ. ದೊಡ್ಡ ಬೆಳೆಗಾರರು ತೂಕ ಮಾಡಿಟ್ಟ ಕಾಫಿ ಚೀಲವನ್ನು ಮರು ಮಾತಿಲ್ಲದೆ, ಕೊಂಡೊಯ್ಯತ್ತಾರೆ. ಅಂತಹವರಿಗೆ ಅವಶ್ಯಕತೆ ಇದ್ದಲ್ಲಿ ಸಾಕಷ್ಟು ಮುಂಚಿತವಾಗಿಯೂ, ಅಥವಾ ವರ್ಷದ ನಂತರವೂ ಹಣವನ್ನು ಪಾವತಿಸುತ್ತಾರೆ.
ಅದೇ ಬಡ ಬೆಳೆಗಾರ ಅಂದಿನ ಕಾಫಿಯ ಧಾರಣೆಯನ್ನು ದೂರವಾಣಿ ಮೂಲಕ ತಿಳಿದೇ ವ್ಯಾಪಾರಿಯ ಬಳಿಗೆ ಒಯ್ಯುತ್ತಾರೆ. ಆದರೆ, ಅವರ ದುರಾದೃಷ್ಟವೋ ಏನೋ ಅಲ್ಲಿಗೆ ತಲುಪಿದ ಬಳಿಕ ಔಟ್‌ಟರ್ನ್ ಅನ್ನು ಪರೀಕ್ಷಿಸಿಸುತ್ತಾರೆ. ಕೆಲವರು ಔಟ್‌ಟರ್ನ್ ಅನ್ನು ಮುಂದಾಗಿಯೇ ಪರೀಕ್ಷೆ ಮಾಡಿ ಬಳಿಕ ಮಾರುವುದುಂಟು ! ಕೆಲವರು ತಮ್ಮಲ್ಲಿನ ಕಾಫಿಯ ಸ್ಯಾಂಪಲ್ ಹೇಗಿದ್ದರೂ, ಬಡ ರೈತ ಒಮ್ಮೆ ಮನೆಯಿಂದ ತಂದ ಕಾಫಿಯನ್ನು ಮತ್ತೆ ಮನೆಗೆ ಒಯ್ಯುವ ಸ್ಥಿತಿಯಲ್ಲಿ ಇರುವುದಿಲ್ಲ. ಇದನ್ನೆಲ್ಲಾ ವ್ಯಾಪಾರಿಗಳು ಚೆನ್ನಾಗಿ ಅರಿತಿರುತ್ತಾರೆ.
ಕೆಲವು ಬಾರಿ ವರ್ತಕರು ಸಣ್ಣ ಬೆಳೆಗಾರರಿಂದ ಕಾಫಿಯ ಮಾದರಿಯನ್ನು ಸುಮಾರು ಹತ್ತಾರು ಕಾಫಿ ಚೀಲಗಳಿಂದ ಸಂಗ್ರಹಿಸುತ್ತಾರೆ. ಇದರಲ್ಲಿ ಸರಿ ಸುಮಾರು ೨-೩ ಕಾಫಿಯನ್ನು ತೆಗೆದುಕೊಂಡು ಹೋಗುತ್ತಾರೆ. ಅದನ್ನು ಪಟ್ಟಣಕ್ಕೆ ಒಯ್ದು ತಮ್ಮ ನಿಕಟವರ್ತಿಗಳೊಡನೆ ಸಾಕಷ್ಟು ಚರ್ಚೆ-ವಿಚರ್ಚೆ ನಡೆಸುತ್ತಾರೆ. ಕೊನೆಗೆ ಬೆಳೆಗಾರರೊಡನೆ ಬೆಲೆ ನಿಗದಿ ಪಡಿಸುವರು. ಬಳಿಕವಷ್ಟೇ ತಮ್ಮ ವಾಹನವನ್ನು ಬೆಳೆಗಾರರ ಮನೆಗೋ, ಆವರ ಕಾಫಿ ಸಂಗ್ರಹಿಸಿದ ಗೋದಾಮಿಗೆ ಕಳುಹಿಸುವರು. ಆ ವೇಳೆಗಾಗಲೇ ವಿವಿಧ ಕಡೆಗಳಿಂದ ಮಾಡಿದ ಸಾಲ ಮರು ಪಾವತಿಗೆ ಸಮಯ ಸನ್ನಿಹಿತವಾಗಿರುತ್ತದೆ. ಇಲ್ಲವೇ ಸಕಾಲಿಕ ಸಾಲ ಮರು ಪಾವತಿಯ ಗಡುವು ಮುಗಿದಿರುತ್ತದೆ. ಸರ್ವೆ ಸಾಮಾನ್ಯವಾಗಿ ಮಾರ್ಚ್ ಅಂತ್ಯದೊಳಗಾಗಿ ಸಹಕಾರಿ ಕ್ಷೇತ್ರದ ಸಾಲವನ್ನು ಮರು ಪಾವತಿಸಬೇಕಾಗುತ್ತದೆ. ಇಲ್ಲವಾದಲ್ಲಿ ಮುಂಬರುವ ಸಾಲಿನಲ್ಲಿ ಸಾಲ ಮಂಜೂರಾತಿಗೆ ಸಾಕಷ್ಟು ಸಮಯವಕಾಶ ಬೇಕಾಗುತ್ತದೆ. ಇದನ್ನೇ ದಾಳವನ್ನಾಗಿಸಿಕೊಳ್ಳುವ ಬಹುತೇಕ ವರ್ತಕರು ಸಣ್ಣ ಮತ್ತು ಅತಿ ಸಣ್ಣ ಬೆಳೆಗಾರರನ್ನು ಶೋಷಣೆ ಮಾಡುವರು ಎಂಬ ಆರೋಪಗಳು ಬೆಳೆಗಾರ ಕಡೆಯಿಂದ ಕೇಳಿಬಂದಿವೆ. ಇದನ್ನು ವರ್ತಕ ಸಮುದಾಯ ಒಪ್ಪಲು ಸಿದ್ಧವಿಲ್ಲ.
ಸಿಪ್ಪೆಗೆ ಚಿಕ್ಕಾಸು ಇಲ್ಲ.
ವರ್ತಕರು ಬರೇ ಕಾಫಿಯಿಂದ ದೊರಕುವ ಕಾಫಿ ಬೇಳೆಗೆ ಮಾತ್ರ ಧಾರಣೆ ನೀಡುತ್ತಾರೆ. ಅವರಿಗೆ ಕಾಫಿ ಬೇಳೆಯನ್ನು ತೆಗೆಯುವಾಗ ಉಳಿಯುವ ಸಿಪ್ಪೆಯನ್ನು ನಮ್ಮ ಬೆಳೆಗಾರರು ಪೂರ್ತಿ ಉಚಿತವಾಗಿಯೇ ನೀಡುತ್ತಾರೆ ! ಅವರು ಈ ಸಿಪ್ಪೆಯಿಂದ ಪ್ರತೀ ವರ್ಷವೂ ಕೋಟ್ಯಾಂತರ ರೂಪಾಯಿ ಸಂಪಾದಿಸುತ್ತಾರೆ. ಉದಾಹರಣೆಗಾಗಿ ೦.೫೦ ಗ್ರಾಂ ಕಾಫಿಯಿಂದ ೨೫ ಗ್ರಾಂ ಔಟ್‌ಟರ್ನ್ ಬಂದಲ್ಲಿ ಅಷ್ಟೇ ಪ್ರಮಾಣದ ಸಿಪ್ಪೆಯು ಸಿಗುತ್ತದಲ್ಲ. ಅದರರ್ಥ ಎರಡು ಕಿಲೋಗ್ರಾಂ ಕಾಫಿಗೆ ಒಂದು ಕಿಲೋಗ್ರಾಂ ಸಿಪ್ಪೆಯನ್ನು ಮಿಲ್ ಮಾಲೀಕರಿಗೆ ಬೆಳೆಗಾರರು “ಉಚಿತ”ವಾಗಿ ಕೊಡುತ್ತಾರೆ. ಅವರು ಅದನ್ನು ಸಾವಯವ ಗೊಬ್ಬರ ಮಾಡಲಿಕ್ಕೆ ಪ್ರತೀ ಲಾರಿ ಲೋಡ್ ಸಿಪ್ಪೆಯನ್ನು ಲಕ್ಷಾಂತರ ರೂಪಾಯಿಗಳಿಗೆ ಮಾರುತ್ತಾರೆ. ಇದರಿಂದಲೇ ಮಿಲ್ ಮಾಲೀಕರು ಒಂದೇ ವರ್ಷದಲ್ಲಿ ಕೋಟ್ಯಾಂತರ ರೂಪಾಯಿಗಳನ್ನು ಅತ್ಯಂತ ಸುಲಭವಾಗಿ ಸಂಪಾದಿಸುತ್ತಾರೆ !
ಸತ್ಯಮಾಪನ ಮುದ್ರೆ ಇಲ್ಲದ ತೂಕದ ಯಂತ್ರಗಳು !
ಸರಕಾರಿ ನಿಯಮದ ಪ್ರಕಾರ ಪ್ರತೀ ವರ್ಷವೂ ತೂಕ ಮತ್ತು ಅಳತೆಯ ಯಂತ್ರಗಳನ್ನು ಕಾನೂನು ಮಾಪನ ಶಾಸ್ತç ಇಲಾಖೆಯ ಮೂಲಕ ಸತ್ಯಮಾಪನ ಮುದ್ರೆ ಹಾಕಿಸಬೇಕು. ಆದರೆ, ಬಹುತೇಕ ವರ್ತಕರ ತೂಕದ ಯಂತ್ರಗಳಿಗೆ ಮುದ್ರೆಯನ್ನೇ ಹಾಕುತ್ತಿಲ್ಲ. ಹಾಕಿದರೂ ಅದು ನಾಮಕಾವಸ್ಥೆಗೆ ಸೀಮಿತ. ಅದೇ ಯಂತ್ರದಲ್ಲಿ ಮತ್ತೆ ಮೋಸ !
ಉದಾಹರಣೆಗೆ ಪೆಟ್ರೋಲ್ ಬಂಕ್‌ಗಳ ಡಿಜಿಟಲ್ ಅಳತೆ ಮಾಪನದಲ್ಲಿನ ಮೋಸ ? ಡಿಜಿಟಲ್ ಯಂತ್ರದ ಪರಿಯೂ ಇದೇ ? ಎಲ್ಲೆಲ್ಲೂ ಬೆಳೆಗಾರರಿಗೆ ಮೋಸದ ಸರಪಣಿ-ಸಂಕೋಲೆ !