ಮಂಗಳವಾರ, ಫೆಬ್ರವರಿ 21, 2017

              ಪೀಠೋಪಕರಣಗಳಾಗುತ್ತಿರುವ ಬಿದಿರು ...!


                                          ಬರಹ: ಕೂಡಂಡ ರವಿ, ಹೊದ್ದೂರು. 




ಬೆಂಕಿಗೆ ಆಹುತಿಯಾಗುತ್ತಿರುವ ಅಮೂಲ್ಯ ಮರ ..! 
ಕೊಡಗು ಜಿಲ್ಲೆ ಸೇರಿದಂತೆ  ಮಲೆನಾಡ ಬಹುತೇಕ ಕಡೆ ತೇಗ-ಬೀಟೆ ಮರಗಳು ಬಹುದೊಡ್ಡ ಪ್ರಮಾಣದಲ್ಲಿ ಬೆಳೆಗಾರರ ತೋಟದಲ್ಲಿ ಇವೆ. ಹಲವು ಕಡೆ ಬಿದ್ದ ಮತ್ತು ಸತ್ತ ಬೀಟೆ ಮತ್ತು ತೇಗ ವಿವಿಧ ಕಾಡುಜಾತಿಯ  ಮರಗಳನ್ನು ಅರಣ್ಯ ಇಲಾಖಾ  ಸಿಬ್ಬಂದಿ - ಅಧಿಕಾರಿ ವರ್ಗದವರ ಕಿರುಕುಳದಿಂದಾಗಿ ಬಹುತೇಕ ಬೆಳೆಗಾರರು ಅಮೂಲ್ಯ ಮರಗಳನ್ನು ಬೆಂಕಿಗೆ ಆಹುತಿ  ನೀಡುತ್ತಿದ್ಧಾರೆ. ನಮ್ಮ  ಜಿಲ್ಲೆಯ ಬಹುತೇಕ ಬೆಳೆಗಾರರಿಗೆ ಅರಣ್ಯ ಇಲಾಖೆಯವರೊಡನೆ ಕಛೇರಿಯಲಿ  ಬೇಕಾದವರಿಗೆ ಬೇಕಾದಷ್ಟು"  ಕೊಟ್ಟು ಕದನ" ಮಾಡುವ ಸಮಯ-ಆಸಕ್ತಿ ಎರಡೂ ಇಲ್ಲ. ಕಾಳಸಂತೆಯಲ್ಲಿ ಮಾರಾಟವಾಗುತ್ತಿರುವ ಮರದಿಂದ ಮಾಡಿದ ಬೆಲೆಬಾಳುವ ಮರಗಳಿಂದ ಮಾಡಿದ ಪೀಠೋಪಕರಣಗಳನ್ನು ಸಾಮಾನ್ಯರು ಖರೀದಿಸುವಂತಿಲ್ಲ ! ಇಂತಹವರು ತಮ್ಮ ಹಿತ್ತಲಲ್ಲಿ ಬೆಳೆದ ಬಿದಿರನ್ನು ಮನೆಯ ಒಳ ಮತ್ತು ಹೊರಭಾಗಗಳಿಗೆ ಶೋಭೆ ತರಬಲ್ಲಂತಹ  ಪೀಠೋಪಕರಣ-ಮಂಚ, ದಿವಾನ್ ಸೋಫಾ  ಮಾಡಲು ಉಪಯೋಗಿಸಿಕೊಳ್ಳಬಹುದಾಗಿದೆ.


ಪೀಠೋಪಕರಣದಿಂದ ಅಪಾರ ಲಾಭ 

ನಮ್ಮ ಜಿಲ್ಲೆಯಲ್ಲಿಯೂ ಸಹಾ ವಿವಿಧ ಬಿದಿರನ್ನು ಅಲ್ಲಲ್ಲಿ ಬೆಳೆಯಲಾಗುತ್ತಿದೆ. ಇದರಲ್ಲಿ ಸಣ್ಣ ಪ್ರಮಾಣದ ಬಿದಿರು ಮಾತ್ರ ಸದುಪಯೋಗವಾಗುತ್ತಿದೆ. ಕೆಲವು ಬಿದಿರು ಕಾಳು ಮೆಣಸಿನ ಕೊಯ್ಲಿಗೆ ಏಣಿಯಾಗಿ ಬಳಕೆಯಾಗುತ್ತಿದೆ. ಇನ್ನೂ ಕೆಲವು ಬಿದಿರು ಆರ್ ಸಿಸಿ  ಹಾಕುವಲ್ಲಿ ಕಂಬಗಳಾಗಿ ಬಳಕೆಯಾಗುತ್ತಿದೆ. ಇದರಿಂದಾಗಿ ಬಿದಿರು ಬೆಳೆದ ಬೆಳೆಗಾರರಾಗಿ ತೀರಾ ಕಡಿಮೆ ಹಣ ದೊರೆಯುತ್ತಿದೆ. ಇದೇ ಬಿದಿರನ್ನು ಪೀಠೋಪಕರಣ ಮಾಡಿ ಮಾರಾಟ ಮಾಡಿದ್ದಲ್ಲಿ ಅಪಾರ ಲಾಭವು ಬೆಳೆಗಾರರಿಗೆ ದೊರೆಯಬಹುದಾಗಿದೆ.
ಸಾಮಾನ್ಯರಿಗೆ ದುಬಾರಿ ಬೆಲೆಯ ಗುಣಮಟ್ಟದ ಮರಗಳ ಪೀಠೋಪಕರಣಗಳನ್ನು ಕೊಳ್ಳುವುದು ಕನಸಿನ ಮಾತಾಗಿದೆ. ಸರ್ವೆ ಸಾಮಾನ್ಯವಾಗಿ ರಸ್ತೆ ಬದಿಯಲ್ಲಿ ಮಾರಾಟವಾಗುತ್ತಿರುವ ಸಿಂಗಾಪುರ ತೇಗದ ಮರದ ಸೋಫಾಸೆಟ್ಗೂ ಸುಮಾರು 20 ಸಾವಿರಕ್ಕೂ ಅಧಿಕ ಬೆಲೆ  ನೀಡಬೇಕಾದಂತಹ ಪರಿಸ್ಥಿತಿ ನಿಮರ್ಣವಾಗಿದೆ. ಅದೇ ಪೀಠೋಪಕರಣವನ್ನು ಬಿದಿರಿನಿಂದ ಮಾಡಿಸಿದ್ದಲ್ಲಿ ಅತೀ ಕಡಿಮೆ ವೆಚ್ಚವಾಗಲಿದೆ.
ನಮ್ಮಲ್ಲಿನ ಬಿದಿರು
ಕೊಡಗು ಜಿಲ್ಲೆಯ ಬಹುತೇಕ ಬೆಳೆಗಾರರು ತಮ್ಮ ತೋಟದ ಅನಾವಶ್ಯಕ ಸ್ಥಳದಲ್ಲಿ ಬಿದಿರಿನ ಪೊದೆಗಳನ್ನು ಬೆಳೆಸಿರುತ್ತಾರೆ. ಅವುಗಳಲ್ಲಿ ಬರ್ಮ ಬಿದಿರು , ಸಿಲೋನ್ ಬಿದಿರು, ಡೆಕೋರೇಶನ್ ಬಂಬು ಇತ್ಯಾದಿಗಳು ಸೇರಿವೆ.
ನಮ್ಮ ಜಿಲ್ಲೆಯ ಬಹುತೇಕ ಬೆಳೆಗಾರರಿಗೆ ಹತ್ತು ಹಲವು ಏಕರೆ ಖಾಲಿ ಜಾಗವೂ ಇದೆ. ಇವುಗಳನ್ನು ಬಿದಿರನ್ನು ಬೆಳಸಲು ಉಪಯೋಗಿಸಿ, ಅವುಗಳಿಂದ ಪೀಠೋಪಕರಣಗಳನ್ನು ಮಾಡಿಸಿ, ಮಾರಿದಲ್ಲಿ ಅಪಾರ ಹಣ ಗಳಿಕೆ ಸಾಧ್ಯ. ಈ ನಿಟ್ಟಿನಲ್ಲಿ ಕೊಡಗಿನ ಬೆಳೆಗಾರರು ಚಿಂತನ- ಮಂಥನ ನಡೆಸುವ ಅವಶ್ಯಕತೆ ಇದೆ.



ತೊಟ್ಟಿಲಿನಿಂದ ಚಟ್ಟದವರೆಗೆ 
ನಾವು ದಿನನಿತ್ಯದ ಬಹುತೇಕ ಕಾರ್ಯಗಳಲ್ಲಿ ಬಿದಿರನ್ನು ಅವಲಂಬಿಸುತ್ತಿದ್ದೇವೆ. ಇದೇ ಹಿನ್ನೆಲೆಯಲ್ಲಿ " ತೊಟ್ಟಿಲಿನಿಂದ ಚಟ್ಟದವರೆಗೆ ಬಿದಿರು"  ಎಂಬ ಮಾತೂ ಚಾಲ್ತಿಯಲ್ಲಿದೆ. ಆಧುನಿಕ ಜಗತ್ತಿನಲ್ಲಿ  ಪೀಠೋಪಕರಣಗಳಿಗೆ ಎಲ್ಲಿಲ್ಲದ ಬೇಡಿಕೆ ಇದೆ. ಈ ಉದ್ದೇಶಕ್ಕಾಗಿ ಬಹುತೇಕ ಎಲ್ಲೆಡೆಯೂ ವೈವಿಧ್ಯಮಯ ಬಿದಿರನ್ನು ಬಳಸಲಾಗುತ್ತಿದೆ. ಕೊಡಗಿನ  ಕೆಲ ಪ್ರಮುಖ ಪಟ್ಟಣಗಳಲ್ಲಿ ಅಸ್ಸಾಂನಿಂದ ತಂದು ತಯಾರಿಸಲಾದ ಬಿದಿರು-ಬೆತ್ತಗಳಿಂದಲೂ ಪೀಠೋಪಕರಣಗಳನ್ನು ತಯಾರಿಸಿ ಮಾರಾಟ ಮಾಡಲಾಗುತ್ತಿದೆ. ಜಿಲ್ಲೆಯ ಗ್ರಾಹಕರು ಮುಗಿಬಿದ್ದು ಅವುಗಳನ್ನು ಖರೀದಿಸುವುದು ಹಲವೆಡೆಗಳಲ್ಲಿ ಕಂಡುಬರುತ್ತಿತ್ತು. ಎಲ್ಲಿಂದಲೂ ತಂದ ಬಿದಿರಿನ ಪೀಠೋಪಕರಣಗಳನ್ನು ದುಬಾರಿ ಬೆಲೆ ಕೊಟ್ಟು ಖರೀದಿಸುವುದಕ್ಕಿಂತ ನಮ್ಮಲ್ಲಿ ದೊರೆಯುವ ಬಿದಿರಿನಿಂದ ಪೀಠೋಪಕರಣ ತಯಾರಿಸಿದ್ದಲ್ಲಿ ಜನತೆಗೆ ಅವು ಕಡಿಮೆ ಬೆಲೆಗೆ ದೊರೆಯಬಹುದಾಗಿದೆ. ಇದರಿಂದಾಗಿ ಸಹಸ್ರಾರು ಮಂದಿ ಉದ್ಯೋಗವು ದೊರೆತಿತು.
ಅಸ್ಸಾಂ ರಾಜ್ಯದಲ್ಲಿ ಬಿದಿರಿನಿಂದ ಸೋಫಾಸೆಟ್, ಮಂಚ, ದಿವಾನ್, ಗುಡಿಸಲು, ಕಪಾಟು, ಬಾರ್ಕೌಂಟರ್, ಡ್ರೆಸ್ಸಿಂಗ್ ಟೇಬಲ್, ಡೈನಿಂಗ್ ಸೆಟ್, ಅರಾಂ ಕುರ್ಛಿ , ಮರದ ಮನೆ, ಬಂಕರ್ ಬೆಡ್ ಇತ್ಯಾದಿಗಳನ್ನು ತಯಾರಿಸುತ್ತಾರೆ. ಕೊಡಗಿನಲ್ಲಿಯೂ ಈ ರೀತಿಯ ಪ್ರಯೋಗಗಳು ನಡೆಯಬೇಕಿದೆ.




ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ