ಹೂ ಅರಳಿದರೂ ಮುದುಡಿದ ಮನ. . .!
ವಿಶೇಷ ವರದಿ_ ಕೂಡಂಡ ರವಿ
ಭಾರತದ ಕೃಷಿಕನ ಜೊತೆ ಮಳೆರಾಯ ಜೂಜಾಡುತ್ತಿದ್ದಾನೆ ಎಂಬ ಮಾತು ಜಿಲ್ಲೆಯ ಕಾಫಿ ಬೆಳೆಗಾರರ ಪಾಲಿಗೆ ಅಕ್ಷರಶಃ ನಿಜವಾಗಿದೆ. ವಾಡಿಕೆಯ ಮಳೆ ಈ ಬಾರಿ ಸಾಕಷ್ಟು ಮುಂಚಿತವಾಗಿ ಸುರಿದಿದೆ. ಒಂದೆಡೆ ಬಂದ ಫಸಲನ್ನು ಕೊಯ್ಲು ಮಾಡುವುದೋ ಎಂಬ ಗೊಂದಲದಲ್ಲಿಯೇ ಮುಂದಿನ ಫಸಲಿನ ನಿರೀಕ್ಷೆಗಾಗಿ ಭರ್ಜರಿ ಸಿದ್ಧತೆ ಮಾಡಿಕೊಳ್ಳುವುದೋ ಎಂಬ ತ್ರಿಶಂಕು ಸ್ಥಿತಿಯಲ್ಲಿ ಬೆಳೆಗಾರನಿದ್ದಾನೆ. ಇತ್ತೀಚೆಗೆ ಬಿದ್ದ ಅಕಾಲಿಕ ಮಳೆಯ ಪರಿಣಾಮ ಬೆಳೆಗಾರರು ಅಡಕತ್ತರಿಗೆ ಸಿಲುಕಿದ್ದಾರೆ. ಒಂದು ಕಡೆ ಕಾಫಿ ಕೊಯ್ಲಿನ ಪರದಾಟ ಮತ್ತೊಂದು ಆಕಾಶದೆಡೆ ನಿರಂತರ ವೀಕ್ಷಣೆಯ ಮಧ್ಯೆ ಕೊಡಗಿನ ಬೆಳೆಗಾರಿದ್ದಾರೆ.
ಇನ್ನೂ ಬಾರದ ಹಿಮ್ಮಳೆ
ವಾಡಿಕೆಯ ಮಳೆಯು ಮುಂದಾಗಿ ಆಗಮಿಸಿರುವುದರಿಂದ ಸಕಾಲಿಕವಾಗಿ ಹಿಮ್ಮಳೆ ಸಿಗುವ ಸಾಧ್ಯತೆ ಕಡಿಮೆ ಇದೆ ಎಂದು ಹೇಳಲಾಗುತ್ತಿದೆ. ಅದರಂತೆ ಈವರೆಗೂ ಮತ್ತೆ ಮಳೆಯಾಗಿಲ್ಲ. ಅರೆಬರೆ ಮಳೆಯಾದ ಕಡೆ ಬೆಳೆಗಾರರು ತುಂತುರು ನೀರಾವರಿ ಮಾಡುತ್ತಿರುವುದು ಜಿಲ್ಲೆಯ ಕೆಲವೆಡೆಗಳಲ್ಲಿ ಗೋಚರವಾಗಿದೆ. ಹೂಮಳೆ ಬಿದ್ದು ಸುಮಾರು ಒಂದು ತಿಂಗಳು ಸಮೀಪಿಸುತ್ತಿದ್ದರೂ, ಹಿಮ್ಮಳೆಯೇ ಇನ್ನೂ ಗೋಚರವಾಗದಿರುವುದು ಬೆಳೆಗಾರರ ಆತಂಕಕ್ಕೆ ಕಾರಣವಾಗಿದೆ. ಮಳೆಯ ಪರಿಣಾಮ ಹೂ ಮುಂದುವರಿದಿರುವುದರಿಂದ ಕಾಫಿ ಕೊಯ್ಲಿಗೆ ತೀವ್ರ ಹಿನ್ನಡೆಯಾಗಿತ್ತು.
ನೀರಾವರಿಗೆ ಸಕಲ ರೀತಿಯಲ್ಲಿ ಸಿದ್ಧರಾದ ಬೆಳೆಗಾರರು ಈಗಾಗಲೇ ಹಲವೆಡೆಗಳಲ್ಲಿ ತುಂತುರು ನೀರಾವರಿ ಹನಿಸಲು ಆರಂಭಿಸಿದ್ದಾರೆ. ಕಾಫಿ ಕೊಯ್ಲು ಮುಗಿಯದ ಕಾರಣ ಹಲವಾರು ಬೆಳೆಗಾರರು ನೀರಾವರಿ ಮಾಡುತ್ತಿರುವ ಕೃಷಿಕರನ್ನು ಕಂಡು ಕೈಹಿಸುಕಿಕೊಳ್ಳಲಾರಂಭಿಸಿದ್ದಾರೆ
ಧರಾಶಾಹಿಯಾಗುತ್ತಿರುವ ಕಾಫಿ
ಹೆಚ್ಚು ಬಿಸಿಲು ಬೀಳುವ ಕಡೆಗಳಲ್ಲಿ ಕಾಫಿ ಹಣ್ಣು ಮಾಗಿ ಕಪ್ಪು ಬಣ್ಣಕ್ಕೆ ತಿರುಗಿತ್ತು. ಆ ಸಮಯಕ್ಕೆ ಸರಿಯಾಗಿ ಮಳೆ ಬಂತು. ಪರಿಣಾಮ ಕಪ್ಪು ಬಣ್ಣಕ್ಕೆ ತಿರುಗಿದ ಕಾಫಿ ಮಳೆ ಬಂದು ಒಂದೆರಡು ದಿನಗಳ ತರುವಾಯ ಉದುರಲಾರಂಭವಾಯಿತು. ಇತ್ತೀಚೆಗೆ ಬಿದ್ದ ಅಕಾಲಿಕ ಮಳೆಯ ಪರಿಣಾಮ ಕಪ್ಪು ಬಣ್ಣಕ್ಕೆ ತಿರುಗಿದ ಕಾಫಿ ಸಂಪೂರ್ಣ ಧರಾಶಾಹಿಯಾಗುತ್ತಿದೆ. ಇನ್ನೂ ಹೆಚ್ಚಾಗಿ ಹಣ್ಣಾಗಿರುವ ಕಾಫಿ ಅಕಾಲಿಕ ಮಳೆಯ ಪರಿಣಾಮ ಒಣಗಿ ನೆಲಕ್ಕೆ ಉರುಳುತ್ತಿರುವುದು ಗೋಚರವಾಗಿದೆ. ಪರಿಣಾಮ ಕಾಫಿ ಗಿಡದಲ್ಲಿರುವುದಕ್ಕಿಂತ ಹೆಚ್ಚು ಕಾಫಿ ನೆಲದಲ್ಲಿಯೂ ಗೋಚರವಾಗುತ್ತಿದೆ.
ಶೇ. 10-20 ಹೂ ಬಾಕಿ
ಅಕಾಲಿಕ ಮಳೆಯ ಪರಿಣಾಮ ಕಾಫಿ ತೋಟದಲ್ಲಿನ ಶೇ. 50 ಭಾಗ ಹೂ ಅರಳಿದ್ದು, ಅಷ್ಟೇ ಪ್ರಮಾಣದ ಹೂ ಅರಳಲು ಬಾಕಿ ಇದೆ. ಅರಳಿದ ಹೂವಿಗೆ ಕಾಯಿ ಕಟ್ಟಲು ಸಕಾಲಿಕ ಮಳೆ ಬೇಕಾಗಿದೆ. ನೆಲಕ್ಕುರುಳಿದ ಕಾಫಿಯನ್ನು ಆರಿಸುವುದು ಬೆಳೆಗಾರರಿಗೆ ತ್ರಾಸದಾಯವೆನಿಸಲಿದೆ. ಒಂದೆಡೆ ನೆಲಕ್ಕುರುಳಿರುವ ಕಾಫಿ ಆರಿಸುವುದೋ, ಮತ್ತೊಂದೆಡೆ ಮುಂದಿನ ವರ್ಷದ ಕಾಫಿ ಫಸಲಿಗಾಗಿ ತುಂತುರು ನೀರು ಹಾಯಿಸುವುದೋ ಎಂದು ಕೆಲವರು ಗೊಂದಲದಲ್ಲಿದ್ದಾರೆ. ಮತ್ತೆ ಕೆಲವರು ನೀರು, ಯಂತ್ರೋಪಕರಣ, ಆಳು-ಕಾಳು ಇದ್ದವರು ನೀರಾವರಿ ಮಾಡುವಲ್ಲಿ ತಲ್ಲೀನರಾಗಿರುವರು.
ಮಳೆ ಬೇಗನೇ ಬಂದಿದ್ದು ಕೆಲವರಿಗೆ ಅನಾನುಕೂಲವಾದರೂ, ಬಹುತೇಕ ಮಂದಿಗೆ ಪ್ರಯೋಜನವಾಗಿದೆ. ನೀರಿನಾಶ್ರಯವಿರುವವರು ಮತ್ತೆ ತುಂತುರು ನೀರಾವರಿ ಮಾಡಿದ್ದಲ್ಲಿ ಕಾಫಿ ಕಾಯಿ ಕಟ್ಟಲು ಸಹಕಾರಿಯಾದೀತು. ಮತ್ತೇ ಮಳೆ ಬಂದರೆ ಎಲ್ಲರಿಗೂ ಅನುಕೂಲ.
ನೆರವಂಡ ರವಿ, ಕಾಫಿ ಬೆಳೆಗಾರ, ಹೊದ್ದೂರು
ಮಳೆಯು ಯಾವಾಗ ಮತ್ತೆ ಬರುವುದೆಂದು ಕಾಯುವುದು ಕಷ್ಟ. ನಮ್ಮ ಬಳಿ ನೀರಿದೆ, ಯಂತ್ರವೂ ಇದೆ. ಆಳು ಕಾಳುಗಳಿದ್ದಾರೆ. ಅದುದರಿಂದ ತುಂತುರು ನೀರಾವರಿ ಆರಂಭಿಸಿದ್ದೇವೆ. ಮಳೆ ಮತ್ತೊಮ್ಮೆ ಜನತೆಯ ಅಪಾರ ಹಣ ಉಳಿಯುತ್ತಿತ್ತು. ಗ್ರಾಮೀಣ ಪ್ರದೇಶಗಳಲ್ಲಿ ಹಬ್ಬಗಳು ಆರಂಭವಾಗಿರುವುದರಿಂದ ಮಳೆಯ ನಿರೀಕ್ಷೆಯಲ್ಲಿರುವೆವು
ಚೌರೀರ ಸಿ ದೇವಯ್ಯ, ಕಾಫಿ ಬೆಳೆಗಾರ, ಹೊದ್ದೂರು.
ಮಳೆಯನ್ನೇ ಕಾಯದೇ ಬೇಗನೇ ತುಂತುರು ನೀರಾವರಿ ಕೆಲಸ ಮುಗಿಸಬೇಕೆಂದು ನಮ್ಮ ತೋಟದ ಮಾಲೀಕರು ನಿರ್ದೇಶನ ನೀಡಿದ್ದಾರೆ. . ಅದರಂತೆ ಕಳೆದ ಕೆಲವು ದಿನಗಳಿಂದ ಹಗಲಿರಳೂ ನಿರಂತರವಾಗಿ ನೀರಾವರಿ ಕೆಲಸದಲ್ಲಿ ತೊಡಗಿದ್ಧೇವೆ.
ಕಾಫಿ ತೋಟದ ಮೇಲ್ವಿಚ್ಛಾರಕ, ಮೂರ್ನಾಡು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ