ಅಧುನಿಕ ತಂತ್ರಜ್ಞಾನ
ಕನ್ನಡದಲ್ಲಿ ಕೇಳುವ ಪುಸ್ತಕಗಳು ...!?
ಬರಹ: ಕೂಡಂಡ ರವಿ, ಕೊಡಗು.
ಬದಲಾವಣೆಯ ಕಾಲಘಟ್ಟದಲ್ಲಿ ಎಲ್ಲವೂ ವೇಗವಾಗಿ ಬದಲಾಗುತ್ತಿದೆ. ಇದಕ್ಕೆ ಯುಗವರ್ಗ ಹೆಚ್ಚಾಗಿ ಅಂಟಿಕೊಂಡಿದ್ದರೂ, ಇತರರು ಭಿನ್ನವಾಗಿಯೇನೂ ಇಲ್ಲ. ಹಿರಿಯರೂ ಅಧುನಿಕತೆಯಲ್ಲಿ ಯುವವರ್ಗದವರೊಂದಿಗೆ ಸ್ಪರ್ಧೆಗೆ ಇಳಿದಿರುವುದು ಉತ್ತಮ ಬೆಳವಣಿಗೆ. ಇವರನ್ನು ದೃಷ್ಟಿಯಲ್ಲಿಟ್ಟುಕೊಂಡು ವಿವಿಧ ಭಾಷಾ ಪುಸ್ತಕಗಳು, ಸಾಹಿತ್ಯವು ಆಡಿಯೋ ರೂಪಕ್ಕೆ ಪರಿವರ್ತಿತವಾಗುತ್ತಿವೆ. ಇದರಂತೆ, ಕನ್ನಡದ ಜನಪ್ರಿಯ ಸಾಹಿತಿಗಳು ಬರೆದ ಪುಸ್ತಕಗಳು ಸಿಡಿ ರೂಪದಲ್ಲಿ ಲಭ್ಯವಿದೆ. ಪುಸ್ತಕವನ್ನು ಓದುವ ಕಾಲ ನಿಧಾನವಾಗಿ ಮರೆಯಾಗುತ್ತಿದೆ. ಅಥವಾ ಆ ದಿಶೆಯಲ್ಲಿ ಸಾಗುವ ಸಮಯ ಸನ್ನಿಹಿತವಾಗುತ್ತಿದೆ. ಬಹುತೇಕ ಮಂದಿಯ ಬಳಿ ಮೊಬೈಲ್ ಫೋನ್ ಇರುವುದರಿಂದ ಇವುಗಳನ್ನು ಜನತೆ ಸುಲಭವಾಗಿ ಕೇಳುತ್ತಾ ಸಾಗಬಹುದು. ಬಸ್, ಕಾರು, ರೈಲುಗಳಲ್ಲಿ ಪ್ರಯಾಣ ಮಾಡುವ ಸಮಯ, ವ್ಯರ್ಥವಾಗಿ ಸರಿದು ಹೋಗಬಹುದಾದ ಸಮಯವನ್ನು ಸದ್ಭಳಕೆ ಮಾಡಲು ಇದು ಅತ್ಯುತ್ತಮ ಮಾರ್ಗ.
ಜ್ಞಾನಭಂಡಾರದ ವಿಸ್ತರಣೆ
ಪುಸ್ತಕ ಓದುಗರನ್ನು ಮೀರಿ, ಕೇಳುಗರಿಗೂ ಸಾಹಿತ್ಯ ಸಂಪದ್ಭರಿತವಾದ ಪುಸ್ತಕಗಳು ತಲುಪಬೇಕು ಎಂಬ ಹೊಸ ಪರಿಕಲ್ಪನೆಯಿಂದ ಆಡಿಯೋ ಪುಸ್ತಕಗಳನ್ನು ಬುಕ್‍ಸ್ಟಕ್ ಹೊರತಂದಿದೆ. ಕಾಲದ ವೇಗದೊಂದಿಗೆ ಜನರೂ ಇಂದಿನ ದಿನಗಳಲ್ಲಿ ಓಡುತ್ತಿರಲೇಬೇಕಾಗಿದೆ. ಪರಿಸ್ಥಿತಿ ಹೀಗಿರಬೇಕಾದರೆ ಕನ್ನಡ ಪುಸ್ತಕಗಳನ್ನು ಓದಬೇಕೆಂದರೂ, ಓದಲು ಸಮಯವಾದರೂ ಎಲ್ಲಿ ? ಓದಲು ಅಂತಹ ಆಸಕ್ತಿ ಇಲ್ಲದವರು ಕೂಡ ಪುಸ್ತಕಗಳತ್ತ ಆಕರ್ಷಿಸುವ ಉದ್ದೇಶದಿಂದ ಕನ್ನಡದ ಪ್ರಖ್ಯಾತ ಲೇಖಕರ ಪುಸ್ತಕಗಳನ್ನು ಬುಕ್‍ಸ್ಟಕ್ ಆಡಿಯೋ ರೂಪದಲ್ಲಿ ತಂದಿದೆ. ಇದರಲ್ಲಿ ಶೋತೃಗಳು ಹತ್ತಾರು, ನೂರಾರು, ಸಹಸ್ರಾರು ಬಗೆಯ ಬೇರೆ ಬೇರೆ ಭಾಷೆಗಳ ಪುಸ್ತಕಗಳನ್ನು ಕೇಳಿ ತಮ್ಮ ಜ್ಞಾನಭಂಡಾರವನ್ನು ಮತ್ತಷ್ಟು ವಿಸ್ತರಿಸಿ ಕೊಳ್ಳಬಹುದಾಗಿದೆ.ಆನ್‍ಲೈನ್‍ನಲ್ಲಿ ಕನ್ನಡದ ಪುಸ್ತಕಗಳು
ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ಅವರ ಸಣ್ಣಕಥೆ ಕೇಳಬೇಕೆ? ಡಾ. ಯು.ಆರ್. ಅನಂತಮೂರ್ತಿ ಅವರ ಸಂಸ್ಕಾರ ಪುಸ್ತಕದಲ್ಲೇನಿದೆ ತಿಳಿಯಬೇಕೆ ? ಡಾ. ಎಸ್.ಎಲ್. ಭೈರಪ್ಪ ಅವರ ಕಾದಂಬರಿಯನ್ನು ತಿಳಿಯಬೇಕೆ? ಡಾ. ಚಂದ್ರಶೇಖರ ಕಂಬಾರರ ಸಿಂಗಾರೆವ್ವ , ಸುಧಾಮೂರ್ತಿ ಅವರ ಮನದ ಮಾತು ಪುಸ್ತಕ ಓದಿಲ್ಲವೆ? ಚಿಂತಿಸಬೇಡಿ. ಅವೆಲ್ಲವೂ ಆಡಿಯೋ ರೂಪದಲ್ಲಿ ಬುಕ್‍ಸ್ಟಕ್ ವೆಬ್‍ಸೈಟಿನಲ್ಲಿ ಕೈಗೆಟುಕುವ ಬೆಲೆಗೆ ಲಭ್ಯವಿವೆ. ಈ ಪುಸ್ತಕಗಳೆಲ್ಲವನ್ನು ರಂಗಕರ್ಮಿಗಳಾದ ಸಿ.ಆರ್.ಸಿಂಹ, ಋತ್ವಿಕ್‍ಸಿಂಹ, ಲಕ್ಷ್ಮೀ ಚಂದ್ರಶೇಖರ್ ಮುಂತಾದವರು ತಮ್ಮ ಅತ್ಯದ್ಭುತ ಕಂಠಸಿರಿಯೊಂದಿಗೆ ನಿರೂಪಣೆ ಮಾಡಿದ್ದಾರೆ. 2009ರ ನವೆಂಬರ್‍ನಲ್ಲಿ ಜೈ ಜೆಂಡೆ ಮತ್ತು ಜಯಶ್ರೀ ಮಂತ್ರಿ ಈಶ್ವರನ್ ಜಂಟಿಯಾಗಿ ಬೆಂಗಳೂರಿನಲ್ಲಿ ಬುಕ್‍ಸ್ಟಕ್ ಆರಂಭಿಸಿದರು. ಆಡಿಯೋ ಪುಸ್ತಕಗಳು ಅತೀ ವಿರಳವಾಗಿರುವುದೇ ಈ ಸಾಹಸಕ್ಕೆ ಪ್ರೇರಣೆ. ಆಡಿಯೋ ಪುಸ್ತಕಗಳ ಮುಖಾಂತರ ಇನ್ನೂ ಹೆಚ್ಚಿನ ಕನ್ನಡಿಗರನ್ನು ತಲುಪುವುದು ಅಥವಾ ಕನ್ನಡ ಸಾಹಿತ್ಯವನ್ನು ಹೆಚ್ಚೆಚ್ಚು ಕನ್ನಡಿಗರಿಗೆ ತಲುಪಿಸುವುದು ಅವರ ಈ ಸಾಹಸದ ಹಿಂದಿನ ಮುಖ್ಯ ಉದ್ದೇಶ. ಆಡಿಯೋ ಪುಸ್ತಕಗಳಿಂದ ದೃಷ್ಟಿಹೀನರಿಗೆ, ಬೇರೆ ಬೇರೆ ಭಾಷೆಗಳ ಜ್ಞಾನವಿದ್ದೂ, ಕೇಳಿಸಿಕೊಳ್ಳಬಲ್ಲವರಿಗೆ ಇದು ವರದಾನವಾಗಲಿದೆ. ಕನ್ನಡದ ಅನೇಕ ಶ್ರೇಷ್ಠ ಸಾಹಿತ್ಯಗಳು, ಆಡಿಯೋ ಪುಸ್ತಕಗಳ ಮುಖಾಂತರ ಆಸಕ್ತರಿಗೆ ತಲುಪುತ್ತಿವೆ. ಅನಿವಾಸಿ ಭಾರತೀಯರಿಂದ ಕೂಡ ಆಡಿಯೋ ಪುಸ್ತಕಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಪ್ರತಿದಿನವೂ ಈ ಪಟ್ಟಿಗೆ ಹತ್ತಾರು ಪುಸ್ತಕಗಳು ಸೇರ್ಪಡೆಯಾಗುತ್ತಿವೆ. ಯೂ ಟ್ಯೂಬ್‍ನಲ್ಲಿಯೂ ಹಲವಾರು ಭಾಷೆಗಳ ಆಡಿಯೋ ಪುಸ್ತಕಗಳು ಲಭ್ಯವಿವೆ.ಅನಕ್ಷರಸ್ಥರಿಗೂ ಪ್ರಯೋಜನಕಾರಿ
ನಿಮಗೆ ಲಿಪಿ ತಿಳಿಯದೇ ಕೇವಲ ಭಾಷೆ ಅರ್ಥವಾಗುವಂತಿದ್ದರೆ, ಅನ್ಯ ಭಾಷೆಯ ಸಾಹಿತ್ಯದ ಜನಪ್ರಿಯ ಕೃತಿಗಳನ್ನು ಸಲೀಸಾಗಿ ಕೇಳಬಹುದು. ಉದಾಹರಣೆಗೆ ಕೊಡಗಿನ ಜನತೆಯಲ್ಲಿ ಬಹುಸಂಖ್ಯಾತರಿಗೆ ಮಲೆಯಾಳಂ, ತುಳು, ಬ್ಯಾರಿ, ತಮಿಳು, ತೆಲುಗು, ಮರಾಠಿ, ಕೊಂಕಣಿ, ಮರಾಠಿ, ಬಾಂಗ್ಲಾ, ಹಿಂದಿ, ಇಂಗ್ಲೀಷ್ .... ಸೇರಿದಂತೆ ವಿವಿಧ ಭಾಷೆಗಳ ಬಗ್ಗೆ ಅಪೂರ್ವ-ಅಪಾರ ಜ್ಞಾನವಿದೆ. ಅದರೆ, ಇವರಲ್ಲಿ ಬಹುತೇಕ ಮಂದಿಗೆ ಈ ಭಾಷೆಗಳನ್ನು ಓದಿ ಅರಗಿಸಿಕೊಳ್ಳುವುದು ಅಸಾಧ್ಯ. ಇಂತಹವರು ಅನ್ಯ ಭಾಷೆಗಳ ಸಾಹಿತ್ಯದ ಬಗ್ಗೆ ಒಲವು ಹೊಂದಿರುವವರು ಕೇಳುವಿಕೆಯ ಕೃತಿಗಳ ಲಾಭ ಪಡೆಯಬಹುದು. ಉದಾಹರಣೆಗಾಗಿ ಸಾಹಿತ್ಯ ಅಭಿಮಾನಿಗೆ ಮಲೆಯಾಳಂ ಸಾಹಿತ್ಯದಲ್ಲಿ ಲಭ್ಯವಾಗುವ ಮಾಂತ್ರಿಕ ಕಥೆಗಳು ಇಷ್ಟವಾಗಬಹುದು. ಆದರೆ, ಅವುಗಳ ಅನುವಾದ ಕಾಲ-ಕಾಲಕ್ಕೆ ಲಭ್ಯವಿಲ್ಲ. ಅದೇ ರೀತಿ ತೆಲುಗಿನ ರಾಜಾ ಚೆಂಡೂರ್ ಅವರ ಅಪೂರ್ವ ಸಾಹಿತ್ಯ, ಯಂಡೂಮೂರಿ ವೀರೇಂದ್ರನಾಥ್ ಅವರ ಕುತೂಹಲ ಕೆರಳಿಸುವ ಅಮೋಘ ಸಾಹಿತ್ಯವು ಶೋತೃಗಳ ಕಿವಿಯನ್ನು ತಲುಪಲು ಸಾಧ್ಯ. ಅದೂ ಅತ್ಯಂತ ಕಡಿಮೆ ಬೆಲೆಯಲ್ಲಿ....!?ಬಹುಶ್ಯ ಈ ಪ್ರಕ್ರಿಯೆ ನಿರಂತರವಾಗಿ ಮುಂದುವರಿದರೆ, ಮುಂಬರುವ ದಿನಗಳಲ್ಲಿ ಕೇಳುವ ಪುಸ್ತಕಗಳು ಮಾತ್ರ ಬಿಡುಗಡೆ ಕಾಣಬಹುದೇನೋ ಎಂಬ ಸಂಶಯ ಕಾಣುತ್ತಿದೆ-ಕಾಡುತ್ತಿದೆ. ಮಾಧ್ಯಮಗಳು ಕೂಡಾ ಕೇಳುವ ಪುಸ್ತಕಗಳಿಗೆ ಹೆಚ್ಚು-ಹೆಚ್ಚು ಪ್ರಚಾರ ನೀಡಿದಲ್ಲಿ ಇದು ಸಾಹಿತ್ಯಾಸಕ್ತರನ್ನು ಶೀಘ್ರವಾಗಿ ತಲುಪೀತು. ಕೊಡಗಿನ ಸಾಹಿತಿಗಳು ಕೇವಲ ಮುದ್ರಣ ಮಾಧ್ಯಮದಲ್ಲಿ ಪುಸ್ತಕ ಹೊರತರುವುದರ ಬದಲು ಈ ಬಗ್ಗೆ ಚಿಂತನೆ ನಡೆಸುವಂತಾಗಬೇಕು. ಕನ್ನಡ ಭಾಷೆಯಲ್ಲಿ ಅತ್ಯಂತ ಕಡಿಮೆ ಪ್ರಮಾಣದ ಆಡಿಯೋ ಪುಸ್ತಕಗಳು “ಟೋಟಲ್ ಕನ್ನಡ ಡಾಟ್ ಕಾಂ” ನಲ್ಲಿ 10 ರಿಂದ 1200 ರೂಪಾಯಿಗಳವರೆಗೆ ಲಭ್ಯ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ