ಶುಕ್ರವಾರ, ಮಾರ್ಚ್ 23, 2018

Our Water is Our's........... ನಮ್ಮ ನೀರಿದು ನಮ್ಮದು ....!

                          ನಮ್ಮ ನೀರಿದು ನಮ್ಮದು ....!  Our Water !



                             ಬರಹ: ಕೂಡಂಡ ರವಿ, ಹೊದ್ದೂರು. 









ಮಳೆಯ ಬಗ್ಗೆ ವಿಚಾರ ವಿನಿಮಯ – ಚರ್ಚೆಯು ಬಂದಾಗ ಬಹುತೇಕ ಮಂದಿ  ಮಳೆ ಕಡಿಮೆಯಾಗುತ್ತಿದೆ, ಕಡಿಮೆಯಾಗಿದೆ ಎಂಬ ಉದ್ಘಾರ ತೆಗೆಯುವುದು ನಮ್ಮ-ನಿಮ್ಮ ಅನುಭವಗಳಿಗೆ ಬಂದ ವಿಚಾರ. 
ಆದರೆ, ಅದಂತೂ ಪೂರ್ಣ ಸತ್ಯವಲ್ಲ ? ನೂರಾರು ವರ್ಷಗಳ ಮಳೆಯ ಲೆಕ್ಕಾಚಾರವನ್ನು ಪರಿಗಣನೆಗೆ ತೆಗೆದುಕೊಂಡಾಗ ಸರಿಸುಮಾರು 60 ವರ್ಷಗಳಲ್ಲಿ ಸರಾಸರಿ ಮಳೆ ಬರಬಹುದು. ಉಳಿದ 40 ವರ್ಷಗಳಲ್ಲಿ ಕೊಂಚ ಇಲ್ಲವೇ ಅಧಿಕ ಏರಿಳಿತಗಳು ಕಾಣಬಹುದಾಗಿದೆ. 

ವೈಜ್ಞಾನಿಕ ಸಂರಕ್ಷಣೆ 

ಚಿತ್ರದುರ್ಗವು ಅತ್ಯಂತ ಕಡಿಮೆ ಮಳೆ ಬೀಳುವ ಪ್ರದೇಶಗಳಲ್ಲೊಂದು. ಅಲ್ಲಿ ವಾರ್ಷಿಕ ಸುಮಾರು 500 ಮಿಲಿ ಮೀಟರ್ ಮಳೆಯಾಗಬಹುದು. ಇಲ್ಲಿಗೆ ಬೀಳುವ ಮಳೆಯ ನೀರನ್ನು ವೈಜ್ಞಾನಿಕವಾಗಿ ಸಂರಕ್ಷಣೆ ಮಾಡಬಹುದು. ಇದರಿಂದಾಗಿ ಆಯಾ ಪ್ರದೇಶದ ಜನತೆಗೆ ಕುಡಿಯುವ ನೀರಿಗೆ ಕೊರತೆ ಕಾಣಿಸದು. ಈ ಪ್ರದೇಶಗಳ  30 ರ 40 ಮನೆಯ ನಿವೇಶನದಲ್ಲಿ ವಾರ್ಷಿಕ ಸುಮಾರು 60 ಸಾವಿರ ಲೀಟರ್ ಮಳೆ ನೀರು ಸಂಗ್ರಹಿಸಬಹುದು. ಚಿತ್ರದುರ್ಗ ಜಿಲ್ಲೆಯ ಒಂದು ಸಾವಿರ ಮನೆಗಳಲ್ಲಿ ಮಳೆಯ ನೀರನ್ನೇ ಕುಡಿಯಲು ಬಳಸಲಾಗುತ್ತಿದೆ. ಇದು ಕಲೆದ 20 ವರ್ಷಗಳಿಂದ ನಿರಂತರವಾಗಿ ಜಾರಿಯಲ್ಲಿದೆ.  ಆ ಪ್ರದೇಶದ ಒಂದು ಏಕರೆ ಕೃಷಿ ಭೂಮಿಯಲ್ಲಿ ವಾರ್ಷಿಕ 20 ಲಕ್ಷ ಲೀಟರ್ ನೀರು ಸಂಗ್ರಹ ಸಾಧ್ಯ. ಕೃಷಿ ಹೊಂಡ ನಿರ್ಮಾಣ ಮಾಡಿ, ನೀರನ್ನು ಆ ಹೊಂಡಗಳಲ್ಲಿ ಸಂಗ್ರಹಿಸಬಹುದು. ಹೆಚ್ಚುವರಿ ನೀರನ್ನು ಕೊಳವೆ  ಮತ್ತು ತೆರೆದ ಬಾವಿಗಳಿಗೆ ಮರು ಪೂರಣ ಮಾಡಲಾಗುತ್ತದೆ. 








ಇಸ್ರೇಲ್ ಅನ್ನು ಮೀರಿಸಿ

ನಾವು ಮಳೆಯ ನೀರನ್ನು ಅತ್ಯಂತ ಸಮರ್ಪಕವಾಗಿ ಬಳಸಿಕೊಂಡಲ್ಲಿ ಇಸ್ರೇಲ್ ಅನ್ನು ಮೀರಿಸಬಹುದಾಗಿದೆ. ಆ ದೇಶದಲ್ಲಿ ವಾರ್ಷೀಕ ಸರಾಸರಿ 100 ರಿಂದ 150 ಮಿಲಿ ಮೀಟರ್ ಮಳೆ ಮಾತ್ರ ಬೀಳುತ್ತದೆ. ನಮ್ಮಲ್ಲಿ ಅದಕ್ಕೂ ಎಷ್ಟೋ ಪಾಲು ಹೆಚ್ಚು ಬೀಳುತ್ತದೆ. ನಾವು ಮಳೆಯ ನೀರನ್ನೇ ನಂಬಿ ಕಡಿಮೆ ಬೀಳುವ ಪ್ರದೇಶಗಳಲ್ಲಿಯೂ ಸಮೃದ್ಧ ಕೃಷಿ ಮಾಡಬಹುದು. ಆದರೆ, ಇದಕ್ಕೆ ಪೂರ್ವ ಭಾವಿಯಾಗಿ ರೈತಾಪಿ ವರ್ಗದವರು ನಮ್ಮ ವಾತಾವರಣ, ಮಿತ ನೀರು ಬಳಕೆಯ ವಾತಾವರಣಕ್ಕೆ ತಕ್ಕ  ಬೆಳೆಗಳನ್ನು ಆರಿಸಿಕೊಳ್ಳಬೇಕು. ನೀರನ್ನು ಭೂಮಿಯ ಮೇಲೆ ಹರಿಸುವುದನ್ನು ಬಿಟ್ಟು ಹನಿ ನೀರಾವರಿಯನ್ನು ಕಡ್ಡಾಯವಾಗಿ ಅಳವಡಿಸಬೇಕು. ಈ ವಿಧಾನವನ್ನು ಪ್ರಗತಿ ಪರ ರೈತರು ಅಳವಡಿಸಿ, ಇತರರಿಗೂ ಮಾದರಿಯಾಗಬೇಕಿದೆ. 

ನಮ್ಮ ನೀರಿದು ನಮ್ಮದು !

 ಆಮೀನಿಗೆ ಬೀಳುವ ಮಳೆಯ ನೀರನ್ನು ಸಾಧ್ಯವಾದಷ್ಟು ಮಟ್ಟಿಗೆ ಇಂಗಿಸಲು ಪ್ರಯತ್ನಿಸಬೇಕು. ಓಡುವ ನೀರನ್ನು ನಡೆಯುವಂತೆ, ನಡೆಯುವ ನೀರನ್ನು ಇಂಗಿಸುವ ವ್ಯವಸ್ಥೆ ಮಾಡಿಕೊಳ್ಳಬೇಕು. ಸಾಧ್ಯವಾದೆಡೆಗಳಲ್ಲಿ ಚೆಕ್ ಡ್ಯಾಂ ನಿರ್ಮಿಸಬೇಕು. ಇಳಿಜಾರಿಗೆ ಅಡ್ಡಲಾಗಿ ಮಾಗಿ ಉಳುಮೆ ಮಾಡೆಬೇಕು. ನಮ್ಮ ಜಮೀನಿನ ನೀರನ್ನು ಹೊರ ಹರಿಯಲು ಬಿಡಬಾರದು. ಇದರ ಪರಿಣಾಮ ಸುಸ್ಥಿರ ಕೃಷಿ ಮಾಡಲು ಸಾಧ್ಯ. 







 ಮಲ್ಲೇಶಪ್ಪ ಎಂಬ ಸಾಹಸಿ

ಚಿತ್ರದುರ್ಗದ ಸಮೀಪವಿರುವ ಹುಣಸೇಕಟ್ಟೆಯ ರೈತ ಅಡಿಕೆ ಬೆಳೆಗಾರರು. ಬೋರ್ವೆಲ್ ನೀರಿನಲ್ಲಿ ಅಡಿಕೆ ಬೆಳೆಯುತ್ತಿದ್ದರು. 2001ರಲ್ಲಿ ಕಾಣಿಸಿಕೊಂಡ ಭೀಕರ ಬರಗಾಲ ಅವರ ಬೋರ್ವೆಲ್ ಅನ್ನು ಸಂಪೂರ್ಣ ಒಣಗಿಸಿ ಬಿಟ್ಟಿತು !
 ಹಲವಾರು ನೀರು ಹುಡುಕುವ ಮಂದಿ ಸಾಲು ಸಾಲಾಗಿ ಬಂದರು.  ಜಮೀನಿನಲ್ಲಿ ಅಲೆದರು. ಅವರು ಹೇಳಿದ ಕಡೆಗಳಲ್ಲಿ ಮಲ್ಲೇಶಪ್ಪ ಸತತವಾಗಿ ಏಳು ಬೋರ್‍ವೆಲ್‍ಗಳನ್ನು ಕೊರೆಸಿದರು. ಆದರೆ, ಎಲ್ಲೂ ಗಂಗಾದೇವಿ ದರ್ಶನ ನೀಡಲೇ ಇಲ್ಲ. !
ಅಂತಿಮ ಪ್ರಯತ್ನವೇನೋ ಎಂಬಂತೆ ಕೊರೆದ ಎಲ್ಲಾ ಎಂಟು ಬೋರ್ ವೆಲ್ ಗಳಿಗೂ ಮಳೆಕೊಯ್ಲ ಮೂಲಕ ಜಲ ಮರುಪೂರಣ ವ್ಯವಸ್ಥೆ ಮಾಡಿದರು.ಅವರ ಪ್ರಯತ್ನ ಫಲಿಸಿತು. ಹಲವಾರು ಬೋರ್‍ವೆಲ್‍ಗಳಲ್ಲಿ ನೀರು ಕಾಣಿಸಿಕೊಂಡಿತು. ಹನಿ ನೀರಾವರಿ ಮೂಲಕ ಮೂರು ಏಕರೆ ಪ್ರದೇಶಗಳಲ್ಲಿ ಈಗ 20ಕ್ಕೂ ಅಧಿಕ ಬಗೆಯ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಮಳೆಕೊಯ್ಲಿನ ಪ್ರತಿಫಲವಾಗಿ ಇಂದು ಕೊಳವೆ ಬಾವಿಯಲ್ಲಿ 2 ಇಂಚು ನೀರು ನಿರಂತರವಾಗಿ ದೊರೆಯುತ್ತಿದೆ. ಹೈನುಗಾರಿಕೆ, ಜೇನು ಸಾಕಾಣೆಯನ್ನೂ ಮಾಡುತ್ತಿದ್ದಾರೆ. ಅವರ ನಿರಂತರ ಶ್ರಮಕ್ಕೆ “ಕೃಷಿ ಪಂಡಿತ“ ಪ್ರಶಸ್ತಿಯೂ ಅವರಿಗೆ ದೊರೆತಿದೆ.



 ಕೊನೆ ಹನಿ : ನಾವು ಈ ರೀತಿ ನೀರನ್ನು ಗೆಲ್ಲಬೇಕು. ಹಾಗಾದಲ್ಲಿ ಮಾತ್ರ ರೈತ ಗೆಲ್ಲಲು ಸಾಧ್ಯ . ಚಿತ್ರದುರ್ಗ ಜಿಲ್ಲೆಯಲ್ಲಿ 3 ತಿಂಗಳ ಸಮಯದಲ್ಲಿ 5 ಸಾವಿರ ಬೋರ್‍ವೆಲ್‍ಗಳಿಗೆ ಈ ಹಿಂದೆ ಮರುಪೂರಣ ವ್ಯವಸ್ಥೆ ಮಾಡಲಾಗಿದೆ. ಅವರ ಈ ಸಾಧನೆಗಾಗಿ ಕೇಂದ್ರ ಸರಕಾರದ ಪ್ರಶಸ್ತಿಯೂ ಲಭಿಸಿದೆ.





ಪೂರಕ ಮಾಹಿತಿ: ಎಂ. ದೇವರಾಜ ರೆಡ್ಡಿ, ಜಲತಜ್ಞ, ಚಿತ್ರದುರ್ಗ. ಮೊಬೈಲ್: 9448125498






ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ