ಕೃಷಿ ಲೋಕ.
ಕಂದಾಯಕ್ಕೆ ತಾರದ ಜಮೀನು-ಕೋಟಿಗಟ್ಟಲೆ ನಷ್ಟ !
ಬರಹ: ಕೂಡಂಡ ರವಿ, ಹೊದ್ದೂರು.
ನಮ್ಮಲ್ಲಿ ಬಹುತೇಕರಿಗೆ ಆಸ್ತಿಪಾಸ್ತಿಗಳಿವೆ. ಇವುಗಳಲ್ಲಿ ಕೆಲವು ಸ್ವಯಾರ್ಜಿತ. ಹಲವು ಪಿತ್ರಾರ್ಜಿತ. ಕೆಲವರು ತಮ್ಮ ಅಮೂಲ್ಯ ಕೃಷಿ ಯೋಗ್ಯ ಜಮೀನನ್ನು ಪಾಳು ಬಿಟ್ಟಿದ್ದಾರೆ. ಇವುಗಳಲ್ಲಿ ಬಹುತೇಕ ಜಮೀನಿಗೆ ಹಲವರು ದಶಕಗಳಿಂದ ಕಂದಾಯವನ್ನೇ ಪಾವತಿಸುತ್ತಿಲ್ಲ. ಇದರ ಪರಿಣಾಮ ಸರಕಾರಿ ಬೊಕ್ಕಸಕ್ಕೆ ಪ್ರತೀ ವರ್ಷವೂ ಕೋಟ್ಯಾಂತರ ರೂಪಾಯಿ ನಷ್ಟವಾಗುತ್ತಿದೆ ! ಈ ಜಮೀನನ್ನು ಕಂದಾಯಕ್ಕೆ ತರುವವರಾರು ಎಂಬುದೇ ಮಿಲಿಯನ್ ಡಾಲರ್ ಪ್ರಶ್ನೆ !
ದಲ್ಲಾಳಿಗಳ ದರ್ಬಾರು
ಕೊಡಗು ಜಿಲ್ಲೆಯಲ್ಲಿ ಬಹುತೇಕ ಕೌಟುಂಬಿಕ ಆಸ್ತಿಯು ಇನ್ನೂ ಜಂಟಿ ಖಾತೆಯಲ್ಲಿಯೇ ಮುಂದುವರಿಯುತ್ತಿವೆ. ಇನ್ನೂ ಒಂಟಿ ಖಾತೆಗೆ ಬದಲಾಗಿಲ್ಲ. ಕಂದಾಯ ಕಾಲಂ, ಬೆಳೆಗಳ ಕಾಲಂಗಳು ಸಂಪೂರ್ಣ ಖಾಲಿ ಖಾಲಿ ! ಈ ಪ್ರಕ್ರಿಯೆಗಾಗಿ ಬಹುತೇಕ ಸಣ್ಣ-ಅತೀ ಸಣ್ಣ ಭೂ ಹಿಡುವಳಿದಾರರು ಕಂದಾಯ ಇಲಾಖಾ ಕಛೇರಿಗಳಿಗೆ ಪ್ರತೀ ದಿನವೂ ಅಲೆಯುತ್ತಿದ್ದಾರೆ. ಈ ಅಲೆತದಿಂದಾಗಿ ಹಲವರ ಆಯುಷ್ಯವೇ ಮುಗಿದು ಹೋಗಿದೆ. ಇದರಿಂದ ಅವರ ಅಮೂಲ್ಯ ಸಮಯ-ಹಣ ವ್ಯರ್ಥವಾಗುತ್ತಿದೆ. ಆದರೂ, ಅವರಿಗೆ ಸಮರ್ಪಕ ಭೂ ದಾಖಲೆಗಳು ಲಭ್ಯವಾಗುತ್ತಿಲ್ಲ. ಹಲವರ ಜಮೀನಿಗೆ ಇನ್ನೂ ನಕ್ಷೆಗಳು ಲಭ್ಯವಾಗಿಲ್ಲ. ಕೆಲವರಿಗೆ ತಮ್ಮ ಜಮೀನುಗಳ ಮೋಜಣಿ ಸಂಖ್ಯೆ(ಸರ್ವೆ ನಂಬರ್) ತಿಳಿದಿಲ್ಲ. ಪರಿಣಾಮ ಅವರು ಆರ್ಥಿಕವಾಗಿ ಸಬಲರಾಗಲು ಹಿನ್ನೆಡೆಯಾಗುತ್ತಿದೆ. ಪಹಣಿಯ(ಆರ್‌ಟಿಸಿ) ೯ ನೇ ಕಾಲಂನಲ್ಲಿ ಜಮೀನು ಹಿಡುವಳಿದಾರರ ಹೆಸರು ಮಾತ್ರ ಇರಬೇಕು. ಆದರೆ, ಅಲ್ಲಿ ಇಡೀ ಕುಟುಂಬದವರ ಹೆಸರುಗಳಿವೆ. ಹಲವಾರು ಮಂದಿ ನಿಧನರಾಗಿ ಒಂದೆರಡು ದಶಕಗಳೇ ಕಳೆದರೂ, ಅಂತಹವರ ಹೆಸರು ಪಹಣಿಯಲ್ಲಿ ಯಥಾ ರೀತಿ ಮುಂದುವರಿದಿದೆ. ನಿಧನರಾದವರ ಮರಣ ಪತ್ರ ನೀಡಿದ ಬಳಿಕ ಅವರನು ಕಂದಾಯ ಇಲಾಖಾ ದಾಖಲೆಗಳಲ್ಲಿ ಮುಂದುವರಿಸುವ ಔಚಿತ್ಯವೇನು ? ಒಟ್ಟಿನಲ್ಲಿ ಕೊಡಗಿನಲ್ಲಿ ಕಂದಾಯ ಇಲಾಖೆಯ ಕಾರ್ಯ ವೈಖರಿಯನ್ನು ಕೇಳುವವರು ಇಲ್ಲವಾಗಿದ್ದಾರೆ. ಇಲಾಖೆಯಲ್ಲಿ ಬೆರಳೆಣಿಕೆಯ ಸಂಖ್ಯೆಯ ಪ್ರಾಮಾಣಿಕ ಅಧಿಕಾರಿ-ಸಿಬ್ಬಂದಿವರ್ಗದವರಿದ್ದಾರೆ. ಆದರೆ, ಬಹುಪಾಲು ಭ್ರಷ್ಟರು ! ಇದರಿಂದ “ಲಂಚ ಕೊಟ್ಟರೂ”, ಸಕಾಲಿಕವಾಗಿ ಶ್ರೀಸಾಮಾನ್ಯನ ಕಛೇರಿ ಕಾರ್ಯಗಳು ಆಗುತ್ತಿಲ್ಲ. ಎಲ್ಲೆಲ್ಲೂ ದಲ್ಲಾಳಿಗಳ ದರ್ಬಾರು ನಡೆಯುತ್ತಿವೆ. ಒಟ್ಟಿನಲ್ಲಿ ಕಂದಾಯ ಇಲಾಖಾ ಕಛೇರಿಗಳು ಸುಲಿಗೆಯ ಕೇಂದ್ರ ಬಿಂದುವಾಗಿದೆ. ನಮ್ಮ ಶಾಸಕ ವೃಂದಕ್ಕೆ ಇದೆಲ್ಲವೂ ಕಾಣಿಸುತ್ತಿಲ್ಲವೇ ? ಎಲ್ಲಾ ತಿಳಿದೂ ಅವರೆಲ್ಲಾ “ಜಾಣಮೌನ” ಕ್ಕೆ ಶರಣಾಗಿದ್ದಾರೆಯೇ ಎಂಬ ಸಂಶಯ ಹಲವರನ್ನು ಕಾಡಿದೆ-ಕಾಡುತ್ತಿದೆ.
ಬ್ರಿಟಿಷರ ಕಾಲದ ಮೋಜಣಿ
ಬ್ರಿಟಿಷರ ಕಾಲದಲ್ಲಿ ಭಾರತ ದೇಶದ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೂ ಮೋಜಣಿ (ಸರ್ವೆ)ಮಾಡಿಸಲಾಗಿತ್ತು. ನಿಗದಿತ ಗಡಿ ಗುರುತಿಸಿ, ಅವಶ್ಯವಿರುವ ಕಡೆ ಭೂಮಿ ಮೇಲೆ ಮತ್ತು ಆಳದಲ್ಲಿ ಕಲ್ಲುಗಳನ್ನು ನೆಡಲಾಗಿತ್ತು. ಅದಕ್ಕೆ ತಕ್ಕ ಅತ್ಯಂತ ಸುಸಜ್ಜಿತವಾದ ನಕ್ಷೆಯನ್ನು ಸಿದ್ಧಪಡಿಸಲಾಗಿತ್ತು. ಇದರ ಆಧಾರದಲ್ಲಿಯೇ ಇಂದು ನಮ್ಮ ದೇಶದಲ್ಲಿ ಮೋಜಣಿ ನಡೆಯುತ್ತಿದೆ. ಆದರೂ, ನಮ್ಮ ಭೂಮಿಯನ್ನು ಅಳೆದು ಅದಕ್ಕೆ ಕಂದಾಯ ನಿಗದಿ ಮಾಡಲು ಇಂದಿನ ಸರಕಾರಗಳಿಗೆ ಸಾಧ್ಯವಾಗುತ್ತಿಲ್ಲ. ಎಂತಹಾ ನಾಚಿಕೆಗೇಡು !? ಇದರ ಪರಿಣಾಮ ಶ್ರೀಸಾಮಾನ್ಯರಿಗೆ ಭೂ ನಕ್ಷೆಗಳು ಸಕಾಲಿಕವಾಗಿ ಲಭ್ಯವಾಗುತ್ತಿಲ್ಲ. ಜೊತೆಗೆ ಭೂ ಅಭಿವೃದ್ಧಿ ಮತ್ತು ಆರ್ಥಿಕಾಭಿವೃದ್ಧಿಗೆ ತೀವ್ರ ಹಿನ್ನೆಡೆಯಾಗಿದೆ. ಕೃಷಿ ಆಶ್ರಿತರು ಸರಕಾರದ ಸಹಾಯ ಸವಲತ್ತುಗಳಿಂದ ವಂಚಿತರಾಗುತ್ತಿದ್ಧಾರೆ. ಇದರ ಫಲವಾಗಿ ಕೃಷಿ ಭೂಮಿಗೆ ಆರ್ಥಿಕ ಮೌಲ್ಯವೂ ಕುಸಿದಿದೆ. ದೇಶ ಸ್ವತಂತ್ರವಾಗಿ ೮ ದಶಕಗಳು ಸಮೀಸುತ್ತಿದ್ದರೂ. ಆಸ್ತಿಯ ನೈಜ ವಾರೀಸುದಾರರಿಗೆ ಅದರ ಸಂಪೂರ್ಣ ಹಕ್ಕು ದೊರೆತೇ ಇಲ್ಲ. ಇಣತಹ ಆಸ್ತಿಗಳನ್ನು ಅಡಮಾನವಿರಿಸಿ ಸಾಲ ಪಡೆಯಲು ಸಾಧ್ಯವೇ ಇಲ್ಲ. ಇದರಿಂದ ನಗರ ಪ್ರದೇಶದವರಂತೆ ಗ್ರಾಮೀಣ ಭಾಗದವರಿಗೆ ಯಾವುದೇ ಹಣಕಾಸಿ ಲಾಭಗಳು ಲಭಿಸುತ್ತಿಲ್ಲ. ಇದು ಕೃಷಿಕ ಸಮುದಾಯದವರು ಆರ್ಥಿಕವಾಗಿ ಹಿನ್ನೆಡೆ ಅನುಭವಿಸಲು ಪ್ರಬಲ ಕಾರಣವಾಗಿದೆ.
೧೯೬೫ರ ಕಂದಾಯ ಕಾನೂನು
ಈ ವಿಚಾರಗಳು ನಮ್ಮ ಅಧಿಕಾರಿ- ಆಡಳಿತ ವರ್ಗಕ್ಕೆ ತಿಳಿಯದ ವಿಚಾರವೇನಲ್ಲ. ಕಂದಾಯ ಇಲಾಖೆಯ ಅಸಡ್ಡೆಯ ಪರಿಣಾಮ ಸರಕಾರಕ್ಕೆ ಪುರಾತನ ಕಾಲದಲ್ಲಿ ನಿಗದಿಯಾದ ಕನಿಷ್ಠ ಕಂದಾಯ ಮಾತ್ರ ಪಾವತಿಯಾಗುತ್ತಿದೆ. ಇದಕ್ಕೆ ಇಂದಿನ ಆಡಳಿತ ರೂಡರೂ, ಅಧಿಕಾರಿ ವರ್ಗದವರೇ ಮೂಲ ಕಾರಣ. ಅದನ್ನು ಇಂದಿನ ಕಾಲಘಟ್ಟಕ್ಕೆ ಸರಿಹೊಂದುವAತೆ ಪರಿಷ್ಕರಣೆ ಮಾಡುವ ಅಗತ್ಯವಿದೆ. ಪೆಟ್ರೋಲ್, ಡಿಸೇಲ್‌ಗಳಿಗೆ ಪ್ರತೀ ದಿನವೂ ದರ ಪರಿಷ್ಕರಣೆ ಮಾಡಿ ಗ್ರಾಹಕರಿಗೆ ಬರೆ ಹಾಕುವುದರ ಬದಲು ಈ ಕಾರ್ಯದ ಜರೂರತ್ತಿದೆ. ಇಂತಹ ಗಂಭೀರ ವಿಚಾರವನ್ನು ನಮ್ಮ ಜನಪ್ರತಿನಿಧಿಗಳು ಸದನದಲ್ಲಿ ಚರ್ಚಿಸಬೇಕಿದೆ. ತನ್ಮೂಲಕ ಕೊಡಗು ಜಿಲ್ಲೆಯಲ್ಲಿರುವ ಖಾಸಗಿ ಮತ್ತು ಸರಕಾರಿ ಜಮೀನುಗಳ ವರ್ಗಿಕರಣ ಮಾಡಬೇಕು. ಇವುಗಳ ಜತೆಗೆ ಕರ್ನಾಟಕದ ಭೂ ಕಂದಾಯ ಅಧಿ ನಿಯಮ – ೧೯೬೫ನ್ನು ಕೊಡಗಿನಲ್ಲಿಯೂ ಯಥಾವತ್ ಅನುಷ್ಠಾನಕ್ಕೆ ತರಬೇಕಿದೆ. ಆ ಮೂಲಕ ಕೊಡಗಿನ ಕಂದಾಯ ಇಲಾಖೆಯಲ್ಲಿ ಅಮೂಲಾಗ್ರ ಬದಲಾವಣೆ ಮಾಡಬೇಕಿದೆ. ಕಂದಾಯ ಇಲಾಖೆಯ ಸಂಪೂರ್ಣ ಪಾರದರ್ಶಕವಾಗಿ ಜನತೆಯ ಇಲಾಖೆಯಾಗಿ ಪರಿವರ್ತನೆ ಮಾಡಬೇಕು. ಆದರೆ, “ಬೆಕ್ಕಿನ ಕೊರಳಿಗೆ ಘಂಟೆ ಕಟ್ಟುವರಾರು ? “ಎಂಬ ಪ್ರಶ್ನೆಯ ಬಹುತೇಕ ಕೊಡಗಿನ ನಿವಾಸಿಗಳನ್ನು ಕಾಡುತ್ತಿದೆ.
ಜನಪ್ರತಿನಿಧಿಗಳು ಕಾರ್ಯ ಪ್ರವೃತ್ತರಾಗಿ
ಜಿಲ್ಲೆಯ ಜನತೆ ಅತಿರಥ-ಮಹಾರಥರಾಗಿರುವ, ಅನುಭವಿ ರಾಜಕಾರಣಿಗಳನ್ನು, ಹಿರಿಯ ಮುತ್ಸದಿಗಳನ್ನೇ ಸದನಗಳಿಗೆ ಆರಿಸಿ ಕಳುಹಿಸಿದೆ. ಅವರು ತಮ್ಮ ಜವಾಬ್ಧಾರಿಗಳನ್ನು ಅರಿತು ಶೀಘ್ರವೇ ಕಾರ್ಯ ಪ್ರವೃತ್ತರಾಬೇಕಿದೆ. ಈ ನಿಟ್ಟಿನಲ್ಲಿ ನಮ್ಮ ಮಾಧ್ಯಮ ಮಿತ್ರರು ತಮ್ಮ ಜವಾಬ್ಧಾರಿ ಅರಿತು ಜನತಾ ಜರ್ನಾದನರನ್ನು ಎಚ್ಚರಿಸಬೇಕಿದೆ. ಹಿರಿಯ ಶಾಸಕರು ತಮ್ಮ ಇಚ್ಛಾಶಕ್ತಿಯನ್ನು ಪ್ರದರ್ಶಿಸಿದ್ದಲ್ಲಿ ಈ ಕಾರ್ಯ “ಕನ್ನಡಿಯೊಳಗಿನ ಗಂಟೇ”ನೂ ಅಲ್ಲ. ಸದನದಲ್ಲಿನ “ಅಮೂಲ್ಯ ಸಮಯ” ಪೋಲು ಮಾಡುವ ಬದಲು ಇಂತಹ ಜನಪರ ಕಾರ್ಯಕ್ಕೆ ವಿನಿಯೋಗಿಸಲು ಮುಂದಾಗಬೇಕಿದೆ. ಆ ಮೂಲಕ ಚಾಕಚಕ್ಯತೆ ಪ್ರದರ್ಶಿಸಬೇಕು. ಔನ್ಯತೆ ಮೆರೆಯವತ್ತ ಚಿಂತನ-ಮAಥನ ನಡೆಸಬೇಕಿದೆ. ಹಾಗಾದಲ್ಲಿ ಶಾಸಕ ವೃಂದದ ವರ್ಚಸ್ಸು ವೃದ್ದಿಸೀತು. ಈಗಿನ ಶಾಸಕ ವೃಂದ ರಾಜಕೀಯ, ಪಕ್ಷ ರಹಿತವಾಗಿ ಈ ಕಾರ್ಯ ಮಾಡಿದ್ದಲ್ಲಿ ಅವರು ರೈತಾಪಿ ವರ್ಗದವರ ಪಾಲಿಗೆ ಪೂಜನೀಯರಾಗುವುದರಲ್ಲಿ, ಪ್ರಾತಃಸ್ಮರಣೀಯರಾಗುವುದರಲ್ಲಿ ಎಳ್ಳಷ್ಟು ಸಂಶಯವಿಲ್ಲ.ಕೃಷಿಕ ಸಮುದಾಯದ ನೆಚ್ಚಿನ ಕಾರ್ಯ ಮಾಡಿದ್ದಲ್ಲಿ ಅದು ಕೊಡಗಿನ ಜನತೆಗೆ ಅತ್ಯಮೂಲ್ಯ ಕೊಡುಗೆಯಾಗುವುದರ ಬಗ್ಗೆ ಎರಡು ಮಾತಿಲ್ಲ.
ಬಹು ಜನತೆಯ ಇಂತಹ ಸಮಸ್ಯೆಗಳನ್ನು ನಾಲ್ವರು ಶಾಸಕರು ಸವಾಲುಗಳಾಗಿ ಪರಿಗಣಿಸಿ, ಅದನ್ನು ಸಮರ್ಥವಾಗಿ ಪರಿಹರಿಸಿ. ತಮ್ಮ ಜನಪರ ಕಾಳಜಿಯನ್ನು , ಕಾರ್ಯವೈಖರಿ ಮತ್ತು ಕರ್ತವ್ಯಪ್ರಜ್ಞೆ, ಸ್ವಸಾಮಾರ್ಥ್ಯವನ್ನು ಜನತೆಯ ಎದುರು ಸಾಬೀತು ಪಡಿಸಲು ಇದೊಂದು ಸುವರ್ಣಾವಕಾಶ.
ಹಾಗಾದಲ್ಲಿ ಮಾತ್ರ, ಕೊಡಗಿನ ಸಣ್ಣ ಮತ್ತು ಅತೀ ಸಣ್ಣ ಭೂ ಹಿಡುವಳಿದಾರರು ನೆಮ್ಮದಿಯ ಜೀವನ ನಡೆಸುವುದು ಸಾಧ್ಯ. ಹಾಗಾಗಲೀ ಎಂಬುದೇ ಎಲ್ಲಾ ಜನತೆಯ ಪರವಾಗಿ ನನ್ನ ಸದಾಶಯ.
I like this msg
ಪ್ರತ್ಯುತ್ತರಅಳಿಸಿ