ಶುಕ್ರವಾರ, ಜನವರಿ 20, 2023

KSRTC Bus pass problms ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯು ವಿದ್ಯಾರ್ಥಿಗಳಿಗೆ ಬಸ್ ಪಾಸ್

 

ಬಸ್ ಪಾಸ್ ನೀಡುವ ನಿಯಮಗಳನ್ನು ಸುಲಭೀಕರಿಸಿ.





 ನೀಡುತ್ತಿದೆ. ಕಾಲಘಟ್ಟಕ್ಕೆ ಅನುಗುಣವಾಗಿ, ಇದರಲ್ಲಿ ಹಲವಾರು ಬದಲಾವಣೆಗಳನ್ನು ಮಾಡುತ್ತಾ ಬಂದಿದೆ. ಆದರೆ, ಕಾರಣಾಂತರಗಳಿಂದ ಕೆಲವು ವಿದ್ಯಾರ್ಥಿಗಳು ಪಾಸ್ ಅನ್ನು ಕಳೆದುಕೊಳ್ಳುವರು. ಅಂತಹ ಸಂದರ್ಭಗಳಲ್ಲಿ ಉಳಿದ ಶೈಕ್ಷಣಿಕ ಅವಧಿಗೆ ಹೊಸ ಪಾಸ್ ನೀಡಲು ಹಲವಾರು ಕಠಿಣ ನಿಯಮ–ಷರತ್ತುಗಳಿವೆ. ಅವುಗಳನ್ನು ಚಾಚೂ ತಪ್ಪದೆ, ಪಾಲಿಸುವರು. ಆದರೂ, ವಿದ್ಯಾರ್ಥಿಗಳಿಗೆ ಸಕಾಲಿಕವಾಗಿ ಎರಡನೆ ಬಾರಿ ಪಾಸ್ ದೊರೆಯುತ್ತಿಲ್ಲ. ಹೊಸ ಪಾಸ್ ಪಡೆಯಲು ಸುಮಾರು ಒಂದು ತಿಂಗಳಿಗೂ ಅಧಿಕ ಸಮಯ ಬೇಕಾಗುತ್ತದೆ. ಈ ವಿನಾ ಕಾರಣ  ಸಂಸ್ಥೆಯ ಹಿರಿಯಾಧಿಕಾರಿಗಳು ಮನಸ್ಸು ಮಾಡಿದ್ದಲ್ಲಿ ವೃಥಾ ವಿಳಂಬವನ್ನು ತಪ್ಪಿಸಲು ಸಾಧ್ಯ. ನಿಯಮವಾಳಿಗಳನ್ನು  ಈ ರೀತಿ ಸುಲಭೀಕರಿಸಬಹುದು.

ಬಸ್ ಪಾಸ್ ಕಳೆದುಕೊಂಡ ವಿದ್ಯಾರ್ಥಿ ಈ ಬಗ್ಗೆ  ಪೊಲೀಸ್ ದೂರಿನ ವಿವರ, ಸವಿವರವಾದ ಮಾಹಿತಿ, ಸೂಕ್ತ ದಾಖಲಾತಿಗಳನ್ನು ಸಂಚಾರಿ ನಿಯಂತ್ರಕರಿಗೆ ನೀಡಬೇಕು. ಅವರು, ಅದನ್ನು ಸಮಗ್ರವಾಗಿ ಪರಿಶೀಲಿಸಿ, ಏಳು ದಿನಗಳಲ್ಲಿ ಹೊಸ ಪಾಸ್ ನೀಡಬಹುದು. ಸಂಚಾರಿ ನಿಯಂತ್ರಕರ ಬಳಿ ವಿದ್ಯಾರ್ಥಿ ಈ ಹಿಂದೆ ನೀಡಿದ ಎಲ್ಲಾ ಮಾಹಿತಿಯು ಇರುತ್ತದೆ. ಇದರಿಂದಾಗಿ ವಿದ್ಯಾರ್ಥಿಯ ವ್ಯರ್ಥ ಅಲೆದಾಟ, ಸಂಚಾರಿ ನಿಯಂತ್ರಕರಿಂದ ಜಿಲ್ಲಾ ಸಾರಿಗೆ ಕಛೇರಿ ನಂತರ ವಿಭಾಗೀಯ ಕಛೇರಿಗಳಿಗೆ ಆಫ್‌ಲೈನ್ ಪತ್ರ ವ್ಯವಹಾರ ನಡೆಸುವುದು ತಪ್ಪಲಿದೆ. ಈ ಪ್ರಕ್ರಿಯೆಯನ್ನು ಆನ್‌ಲೈನ್‌ನಲ್ಲಿ ನಡೆಸುವುದರಿಂದ ವಿನಾ ಕಾರಣ ವಿಳಂಬವನ್ನು ಕೊಂಚ ತಪ್ಪಿಸಬಹುದಾಗಿದೆ. ಈ ಹಿನ್ನೆಲೆಯಲ್ಲಿ ಆಯಾ ಸಂಚಾರಿ ನಿಯಂತ್ರಕರು ಕೇವಲ ೭ ದಿನಗಳಿಗೂ ಮುನ್ನಾ  ಹೊಸ ಪಾಸ್ ಅನ್ನು ವಿದ್ಯಾರ್ಥಿಗೆ ನೀಡಲು ಪ್ರಯತ್ನಿಸಿ.  

ಈ ಪ್ರಕ್ರಿಯೆಯನ್ನು ವಿದ್ಯಾರ್ಥಿಗಳಿಗೆ ಹೊಸ ಪಾಸ್ ನೀಡುವಂತೆ ದ್ವಿತೀಯ ಬಾರಿ ಪಾಸ್ ನೀಡುವದನ್ನು ಆನ್‌ಲೈನ್ ಮೂಲಕ ಮಾಡಿದ್ದಲ್ಲಿ, ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಹುತೇಕ ಕೆಲಸ ಕಾರ್ಯಗಳು ಆನ್‌ಲೈನ್‌ನಲ್ಲಿ ಅತ್ಯಧಿಕ ವೇಗದಲ್ಲಿ ನಡೆಯುತ್ತಿವೆ. ಆದರಂತೆ, ಈ ಕಾರ್ಯವನ್ನು ಆನ್‌ಲೈನ್ ಮೂಲಕ ತ್ವರಿತಗತಿಯಲ್ಲಿ ನಡೆಸಬಹುದು.

ಸೇವಾ ಸಿಂಧು ಪೋರ್ಟಲ್‌ನಲ್ಲಿ ವಿದ್ಯಾರ್ಥಿಯು ನೇರವಾಗಿ ದ್ವಿತೀಯ ಬಾರಿಯೂ ಹೊಸ ಪಾಸ್‌ಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಬೇಕು. ಪಾಸ್ ಕಳೆದುಕೊಂಡವರಿಗೆ ದಂಡ ಪಾವತಿಯ ಬಳಿಕ ಜರೂರಾಗಿ, ಪಾಸ್ ನವೀಕರಣಕ್ಕೆ ಮುಕ್ತ ಅವಕಾಶಗಳು ದೊರೆಯಬೇಕು.

ಹೊಸ ಪಾಸ್ ದೊರೆಯುವವರೆಗೆ ಸಂಬಂಧಿತ ಸಂಚಾರಿ ನಿಯಂತ್ರಕರ ಪತ್ರ ಅಥವಾ ಪಾಸ್‌ನ ಛಾಯಾಪ್ರತಿ(ಜೆರಾಕ್ಸ್) ಪ್ರತಿಯ ದೃಡೀಕರಣದೊಂದಿಗೆ ವಿದ್ಯಾರ್ಥಿಗಳು ಬಸ್‌ನಲ್ಲಿ ಪಯಣಿಸುವ ಅವಕಾಶ ಕಲ್ಪಿಸಬೇಕಿದೆ.

ಈ ಬಗ್ಗೆ ಕರ್ನಾಟಕ ಸರಕಾರದ ಸಾರಿಗೆ ಸಚಿವರು, ಸಂಸ್ಥೆಯ ಹಿರಿಯಾಧಿಕಾರಿ ವರ್ಗ ಚಿಂತನ – ಮಂಥನ ನಡೆಸಿ. ವಿದ್ಯಾರ್ಥಿಗಳಿಗೆ ಒಳಿತಾಗುವ ಕ್ರಮಗಳನ್ನು ಕ್ಷಿಪ್ರ ಜಾರಿಗಾಗಿ,  ರಾಜ್ಯದ ಎಲ್ಲಾ ವಿದ್ಯಾರ್ಥಿಗಳ ಪರವಾಗಿ ಕೋರುತ್ತೇನೆ.

  -ಕೂಡಂಡ ಪ್ರಣವ್ ರವಿ, ಹೊದ್ದೂರು-ಮೂರ್ನಾಡು.

ಮಂಗಳವಾರ, ಫೆಬ್ರವರಿ 1, 2022

Buying coffee: extortion of growers! ಕಾಫಿ ಖರೀದಿ: ಬೆಳೆಗಾರರ ಸುಲಿಗೆ !

ಕಾಫಿ ಖರೀದಿ: ಬೆಳೆಗಾರರ ಸುಲಿಗೆ !

                 ಮೋಸದ ಸಂಕೋಲೆಯಲ್ಲಿ ಬಂಧಿಯಾದ ಬೆಳೆಗಾರ ! 

                ತೂಕ, ಔಟ್ ಟರ್ನ್, ತೇವಾಂಶ, ಹಸ್ಕ್ಗಳಿಂದ ಮೋಸ 

                                         ಬರಹ: ಕೂಡಂಡ ರವಿ, ಹೊದ್ದೂರು. ಕೊಡಗು. 





ಕಾಫಿ ಮಾರಾಟದ ಸಂದರ್ಭಗಳಲ್ಲಿ ಕೆಲವು ವರ್ತಕರು ಬೆಳೆಗಾರರಿಗೆ ಭಾರೀ ಪ್ರಮಾಣದ ಮೋಸ ಮಾಡುತ್ತಿರುವ ಪ್ರಕರಣಗಳು ಹೆಚ್ಚುತ್ತಿವೆ. ಇಂತಹ ಪ್ರಕರಣಕ್ಕೆ ಕುರಿತಂತೆ ಬೆಳೆಗಾರರು ಮಾಧ್ಯಮಗಳಿಗೆ ಅಧಿಕೃತ ಮಾಹಿತಿ ನೀಡಿರುವರು. 

ಮೌನಕ್ಕೆ ಶರಣು

ಮೋಸಕ್ಕೆ ಬಲಿಯಾದವರು ಮೌನಕ್ಕೆ ಶರಣಾಗುತ್ತಿರುವುದು ವರ್ತಕರಿಗೆ ವರದಾನವಾಗುತ್ತಿದೆ. ಹಲವಾರು ಮಂದಿ ಬೆಳೆಗಾರರು ಕಾಫಿ ಮಾರಾಟದ ಸಂದರ್ಭ ಸುಲಿಗೆಗೆ ಒಳಗಾಗುತ್ತಿದ್ದಾರೆ. ಅದರೂ, ಇಂತಹವರು “ತುಟಿ ಪಿಟಿಕ್” ಎನ್ನುತ್ತಿಲ್ಲ. ಇದೇ ಹಲವಾರು ವರ್ತಕರಿಗೆ ಲಾಭವಾಗುತ್ತಿದೆ. 






ಮೋಸ ಹೇಗೆಲ್ಲಾ ಮಾಡಬಹುದು ? 

ಬೆಳೆಗಾರರ ತಾನು ಬೆಳೆದ ಕಾಫಿಯನ್ನು ಉತ್ತಮ ಧಾರಣೆ ಸಿಗುವ ಸಂದರ್ಭ ನೋಡಿ ಮಾರಾಟ ಮಾಡುವುದು ಸರ್ವೆ ಸಾಮಾನ್ಯ. ಇಂತಹ ಸಂದರ್ಭಗಳಲ್ಲಿ ಬೆಳೆಗಾರರು ಸಾಮಾನ್ಯವಾಗಿ ಕೊಂಚ ದುಡುಕುತ್ತಾರೆ. 

“ನಾಳೆ ಬೆಲೆ ಇಳಿದೀತು” ಎಂಬ ಭಯ ಬಹುತೇಕ ಬೆಳೆಗಾರರನ್ನು ಅನುದಿನವೂ ಕಾಡುತ್ತಿರುತ್ತದೆ. ಇದರಿಂದಾಗಿ ಪತೀ ಬೆಳೆಗಾರರು ಆದಷ್ಟು ಬೇಗನೇ ಕಾಫಿ ಮಾರಿ ಉತ್ತಮ ಬೆಲೆ ಪಡೆಯಬೇಕೆಂಬ ಹಂಬಲ ಹೊಂದಿರುವುದು ಸ್ವಾಭಾವಿಕ. ಇಂತಹ ಮಿಕಗಳೆ ಬಲೆಗೆ ಬೀಳಲೆಂದು ಹಲವಾರು ವರ್ತಕರು ಹೊಂಚು ಹಾಕಿ ಕುಳಿತಿರುತ್ತಾರೆ. 

ಇಂತಹ ಮೋಸಗಾರ ವರ್ತಕರು ಕೆಲವೇ ಲಕ್ಷ ರೂಪಾಯಿ ಬಂಡವಾಳ ಹಾಕುವರು.ನಂತರ ಪ್ರತೀ ವರ್ಷವೂ ಕೋಟ್ಯಾಂತರ ರೂಪಾಯಿ ಸಂಪಾದಿಸುವುದನ್ನು ನೀವೂ ನೋಡಿರಬಹುದು !

ಹಲವಾರು ಮಂದಿ ನುರಿತ ಬೆಳೆಗಾರರು ವರ್ತಕ ಸಮುದಾಯವು ಯಾವ ರೀತಿಯಲ್ಲಿ ಮೋಸ ಹೋಗಬಹುದೆಂದು ಅಂದಾಜಿಸಿ ಸಾಕಷ್ಟು ಮುನ್ನೆಚ್ಚರಿಕೆ ವಹಿಸುವರು. ಈ ಹಿಂದಿನ ವರ್ಷಗಳಲ್ಲಿ ಆದ ಅನುಭವವೂ ಹಲವಾರು ಬೆಳೆಗಾರರಿಗೆ ನೀತಿ ಪಾಠವನ್ನು ಕಲಿಸಿರುತ್ತದೆ ! ಆದರೂ, ವರ್ತಕ ಸಮುದಾಯ ಬೆಳೆಗಾರ ಚಾಪೆಯ ಕೆಳಗೆ ತೂರಿದರೆ, ವರ್ತಕ ರಂಗೋಲಿಯ ಕೆಳಗೆ ನುಸುಳುವ ಸಾಹಸ ಮಾಡಿ ಅದರಲ್ಲಿ ಯಶಸ್ವಿಯಾಗುತ್ತಾನೆ. 

ಮೋಸದ ದಾರಿಗಳು ಯಾವುದು ? 

 ತೂಕದ ಯಂತ್ರದಲ್ಲಿ 

ಸ್ಕೇಲ್‌ನಲ್ಲಿ 


ಆಧುನಿಕ ಯುಗದಲ್ಲಿ ನಾವಿಂದು ಹಲವಾರು ರೀತಿಯ ತೂಕದ   ಯಂತ್ರಗಳನ್ನು ಕಾಣುತ್ತೇವೆ. ಆದರೆ, ಕಾಫಿ ಅಥವಾ ಇತರ ರೈತ ಉತ್ಪನ್ನಗಳಲ್ಲಿ ಸಾಮಾನ್ಯವಾಗಿ ಯಾನ್‌ಲಾಗ್ ಸ್ಕೇಲ್ ಅಥವಾ ಡಿಜಿಟಲ್ ತೂಕದ ಯಂತ್ರಗಳನ್ನು ಬಳಸಲಾಗುತ್ತದೆ. ಇದರ ಮೂಲಕ ಬೆಳೆಗಾರರನ್ನು ಸುಲಿಯುವುದು ಸುಲಭ !

ಯಾನ್‌ಲಾಗ್ ಸ್ಕೇಲ್‌ನಲ್ಲಿ ೫೦ ಕಿಲೋಗ್ರಾಂ ಇಟ್ಟು ಅದರ ಲಾಕ್ ತೆರೆದಲ್ಲಿ ಅದು ಪೂರ್ಣವಾಗಿ ಮೇಲೆ ಏರಿದ ಕೂಡಲೇ ಲಾಕ್ ಮಾಡಿದಲ್ಲಿ ಬೆಳೆಗಾರ ಹೆಚ್ಚು ಕಾಫಿಯನ್ನು ಕಳೆದುಕೊಳ್ಳುತ್ತಾನೆ. ಅದು ಮೇಲೆ ಕೆಳಗೆ ಏರಿ ಲಾಕ್‌ನ ಮಧ್ಯೆ ಓಲಾಡುತ್ತಾ ನಿಂತಲ್ಲಿ ಮಾತ್ರ ತೂಕ ಸರಿಯಾಗಿದೆ ಎಂದರ್ಥ. 

ಇದರ ಸ್ಕೇಲ್ ಕುಣಿಯುತ್ತಿದ್ದಲ್ಲಿ, ಅಥವಾ ನಡುಗುತ್ತಿದ್ದಲ್ಲಿ ಸ್ಕೇಲ್ ಸರಿ ಇಲ್ಲ ಎಂದರ್ಥ. 

 ವರ್ತಕರು ಸಾಮಾನ್ಯವಾಗಿ ಸ್ಕೇಲ್ ಮೇಲೇರುತ್ತಿರುವಾಗಲೇ ಲಾಕ್ ಮಾಡುವುದುಂಟು.

ಕೆಲವರು ಸ್ಕೇಲ್ ಯಂತ್ರದ ತಳಭಾಗದಲ್ಲಿರುವ ಕಬ್ಬಿಣದ ಸಲಾಕೆಗಳನ್ನು ಹಗ್ಗದಿಂದ ಬಿಗಿದಿರುತ್ತಾರೆ. ಇಂತಹ ಯಂತ್ರದ ಮೂಲಕ ತೂಗಿದ್ದಲ್ಲಿ ಅಪಾರ ನಷ್ಟವಾಗುತ್ತದೆ. 

ಡಿಜಿಟಲ್ ಯಂತ್ರದಲ್ಲಿ

ತೂಕದ ಯಂತ್ರಗಳಿಗೆ ರಿಮೋಟ್ 

ಕೆಲವು ಮೋಸಗಾರ ವರ್ತಕರು ತಮ್ಮ ಬಳಿ ಇರುವ ಎಲೆಕ್ಟಾನಿಕ್ ತೂಕದ ಯಂತ್ರಗಳಿಗೆ ರಿಮೋಟ್ ಕಂಟ್ರೋಲ್ ಗಳನ್ನು ಅಳವಡಿಸಿರುತ್ತಾರೆ. ಇದರಿಂದ ತಮಗೆ ಬೇಕಾದ ಹಾಗೇ ಯಂತ್ರಗಳನ್ನು ಆಯಾ ಕಾಲಕ್ಕೆ ಸರಿಯಾಗಿ ಸರಿಹೊಂದಿಸುತ್ತಾ ಸಾಗಬಹುದು.

  ಉದಾಹರಣೆಗಾಗಿ ಕಾಫಿ ಬೆಳೆಗಾರ ೫೦ ಕಿಲೋಗ್ರಾಂ ತೂಕದ ನಾಲ್ಕು ಚೀಲಗಳನ್ನು ಈ ಯಂತ್ರದ ಮೇಲಿರಿಸಿದ್ದಲ್ಲಿ ಅದು ೨೦೦ ಕಿಲೋಗ್ರಾಂನ ಆಸುಪಾಸು ಅಥವಾ ಅದಕ್ಕೂ ಅಧಿಕ ಭಾರ ತೋರಬೇಕು. ಆದರೆ, ರಿಮೋಟ್ ಅಥವಾ ಮೊಬೈಲ್ ಫೋನ್ ಮೂಲಕ ಅದನ್ನು ೧೮೫ ಕಿಲೋಗ್ರಾಂಗೆ ಸರಿ ಹೊಂದಿಸಬಹುದು ! ಆಗ ಬೆಳೆಗಾರನಿಗೆ ಸರಾಸರಿ ೧೫ ಕಿಲೋಗ್ರಾಂಗೂ ಅಧಿಕ ಕಾಫಿ ನಷ್ಟವಾಗಬಹುದು. 


ಸಾವಿರಾರು ರೂಪಾಯಿ ನಷ್ಟ- ೨೦೦ ರೂಪಾಯಿ ಲಾಭ ! 

ಇಂತಹ ಮೋಸಗಾರ ವರ್ತಕರು ಅಧಿಕ ಬೆಲೆ ನೀಡುವುದಾಗಿ ಜನತೆಯನ್ನು ನಂಬಿಸುತ್ತಾರೆ. ಆದರೆ, ತೂಕದಲ್ಲಿ ೨೦೦ ಕಿಲೋಗ್ರಾಂಗೆ ಕನಿಷ್ಠ ಸರಾಸರಿ ೧೫ ರಿಂದ ೨೦ ಕಿಲೋಗ್ರಾಂ ಮೋಸ ಮಾಡಬಹುದಾಗಿದೆ. 

೫೦ ಕಿಲೋಗ್ರಾಂ ಕಾಫಿಗೆ ೪ಸಾವಿರ ರೂಪಾಯಿ ಬೆಲೆ ಇದ್ದಲ್ಲಿ ಬೆಳೆಗಾರನಿಗೆ ಸುಮಾರು ೪ ರಿಂದ ೬ ಸಾವಿರ ನಷ್ಟ ಮಾಡಿದ ಆತ, ಪ್ರತಿ ಚೀಲಕ್ಕೆ ೧೦೦- ೨೦೦ ರೂಪಾಯಿ ಹೆಚ್ಚಾಗಿ ನೀಡಿದಂತೆ ನಟಿಸುತ್ತಾನೆ ! ಕಾಫಿ ಮಿಲ್‌ಗಳಲ್ಲಿ ಇಂತಹ ಮೋಸಗಳ ಪ್ರಮಾಣ ಹೆಚ್ಚು ಎನ್ನಬಹುದು. ಮಿಲ್‌ಗಳಲ್ಲಿ ಬಹುತೇಕ ಕಡೆಗಳಲ್ಲಿ ನಾಲ್ಕಾರು ಚೀಲಗಳನ್ನು ಒಮ್ಮೆ ತೂಗುವ ಆಧುನಿಕ ಎಲೆಕ್ಟಾನಿಕ್ ಯಂತ್ರಗಳಿರುತ್ತವೆ. ಇದರಲ್ಲಿ ಮೋಸ ಮಾಡುವುದು ಬಹಳ ಸುಲಭ. ಉಳಿದ ಕಡೆಗಳಲ್ಲಿಯೂ ಇಂತಹ ಪ್ರಕರಣಗಳು ವರದಿಯಾಗುತ್ತಿವೆ. 

ಉದಾಹರಣೆಗಾಗಿ ನ್ಯಾಯಬೆಲೆ ಅಂಗಡಿಗಳಲ್ಲಿ ಇಂತಹ ಪ್ರಕರಣಗಳು ಹೆಚ್ಚಾಗಿರುತ್ತವೆ. ಡಿಜಿಟಲ್ ಯಂತ್ರದಲ್ಲಿ ತೂಗಿದ ಅಕ್ಕಿ – ಗೋಧಿಯನ್ನು ಯಾನ್ ಲಾಗ್ ಸ್ಕೇಲ್‌ನಲ್ಲಿ ಅತ್ಯಂತ ನಿಖರವಾಗಿ ತೂಗಿದಲ್ಲಿ ಮಾತ್ರ ಇಂತಹ ಪ್ರಕರಣಗಳ ಮೋಸ ನಿಮಗೆ ತಿಳಿಯಬಹುದಾಗಿದೆ. 


ಸರ್ವೆ ಸಾಮಾನ್ಯವಾಗಿ ತೂಕದ ಯಂತ್ರಗಳು ಬ್ಯಾಟರಿ ಅಥವಾ ವಿದ್ಯುತ್‌ನಿಂದ ಚಾಲನೆಯಾಗುತ್ತವೆ. ಯಂತ್ರಕ್ಕೆ ಬರುವ ವಿದ್ಯುತ್ ಅನ್ನು ನಿಲ್ಲಿಸಿದ್ದಲ್ಲಿ ಅದಕ್ಕೆ ಈ ಹಿಂದೆ ಅಳವಡಿಸಿದ ಮೋಸದಾಟವು ಅಳಿಸಿ ಹೋಗುತ್ತದೆ. ಇದರಿಂದ ಗ್ರಾಹಕರು ಮೋಸ ಹೋಗುವುದನ್ನು ತಡೆಯಲು ಅದರ ವಿದ್ಯುತ್ ನಿಲ್ಲಿಸಿ ಮತ್ತೆ, ಆನ್ ಮಾಡಿ ತೂಕ ಮಾಡುವುದು ಉತ್ತಮ.

ಪ್ರತೀ ಪ್ಲಾಸ್ಟಿಕ್ ಖಾಲಿ ಚೀಲ ಬರೇ ೦. ೫೦ ಗ್ರಾಂ ತೂಗುತ್ತದೆ. ಕೆಲ ವರ್ತಕರು ಪ್ರತೀ ಚೀಲಕ್ಕೂ ೨೦೦, ೧೦೦ ಗ್ರಾಂ ಎಂದು ಒಟ್ಟಾರೆ ಲೆಕ್ಕದಲ್ಲಿ ಕಳೆಯುತ್ತಾರೆ. ಇದೂ ಒಂದು ಬಗೆಯ ಮೋಸ. ಇದನ್ನೆಲ್ಲಾ ಬೆಳೆಗಾರರು ಪರಿಗಣಿಸುವುದೇ ಇಲ್ಲ !


ಔಟ್‌ಟರ್ನ್ನಿಂದ ಮೋಸ ಹೇಗೆ ? 



ಸರ್ವೆ ಸಾಮಾನ್ಯವಾಗಿ ಬಹುತೇಕ ವರ್ತಕರು ಔಟ್‌ಟರ್ನ್ ನೋಡಿ ವ್ಯಾಪಾರ ಮಾಡುತ್ತಾರೆ. ವ್ಯಾಪಾರ ಅಂದರೆ, ಮೋಸ ಎನ್ನುವುದು ಬಹುತೇಕರಿಗೆ ತಿಳಿಯದ ವಿಚಾರವೇನಲ್ಲ. ಕಾಫಿ ವರ್ತಕರಿಗೆ ಔಟ್‌ಟರ್ನ್ ಎಂಬುವುದು ಮೋಸ ಮಾಡುವ ದಾರಿಯಲ್ಲೊಂದು ! 

ವರ್ತಕರು ಜನತೆಯನ್ನು-ಬೆಳೆಗಾರರನ್ನು ವಿವಿಧ ರೀತಿಯಲ್ಲಿ ಶೋಷಣೆ ಮಾಡುವುದು ಹೊಸತೇನಲ್ಲ. ಅದೇ ರೀತಿ ಅವರು ಕಾಫಿ ಬೆಳೆಗಾರರ ಶೋಷಣೆಗೆ ನೂರಾರು ಹೊಸ ದಾರಿಗಳನ್ನು ಹುಡುಕುತ್ತಿದ್ದಾರೆ. ಅದರಲ್ಲೊಂದು “ಔಟ್‌ಟರ್ನ್”...!

ಮಾದರಿ ಕಾಫಿ ಸಂಗ್ರಹದಲ್ಲಿ ಮೋಸ !

ಇದರ ಪ್ರಕಾರ ವರ್ತಕರು ತಮ್ಮ ಬಳಿಗೆ ಕಾಫಿಯನ್ನು ತರುವ ಬೆಳೆಗಾರರಿಂದ ಮಾದರಿ(ಸ್ಯಾಂಪಲ್)ಗಳನ್ನು ತಮ್ಮದೇ ಆದ ವಿಧಾನ ಬಳಸಿ ಪಡೆಯುತ್ತಾರೆ. ಇದು ಮೊನಚಾದ ಕಬ್ಬಿಣದ ಸಾಧನ. ಇದರ ಒಂದು ಬದಿ ಟೊಳ್ಳಾಗಿದ್ದು ಕಾಫಿ ಚೀಲವನ್ನು ಬಿಚ್ಚದೆಯೇ ಅದರ ಒಳಭಾಗದಲ್ಲಿರುವ ಕಾಫಿಯ ಮಾದರಿ ಸಂಗ್ರಹಿಸಬಹುದಾಗಿದೆ. ಆದರೆ, ಇದರ ತುದಿ ಮೊನಚಾಗಿರುವ ಕಡೆ ತೀರಾ ಸಣ್ಣ ಕಾಫಿ ಮಾತ್ರ ಸಂಗ್ರಹವಾಗುತ್ತದೆ. ಮಾದರಿ ಸಂಗ್ರಹದ ಸಾಧನದ ಕೊನೆಯ ಭಾಗ ಕೊಂಚ ದಪ್ಪಕ್ಕಾಗುತ್ತಾ ಕೆಳಭಾಗ ಕೊಂಚ ಹೆಚ್ಚು ದಪ್ಪವಾಗಿ ಇರುತ್ತದೆ. ದಪ್ಪವಿರುವ ಭಾಗದಲ್ಲಿ ಮಾತ್ರ ದಪ್ಪವಿರುವ ಕೆಲವು (?) ಕಾಫಿ ಸಂಗ್ರಹವಾಗುತ್ತದೆ. ಈ ಕಡ್ಡಿಯ ಮಾದರಿಯ ಉಪಕರಣದಲ್ಲಿ ಸಂಗ್ರಹಿತವಾದ ಕಾಫಿಯಲ್ಲಿ ಶೇಕಡ ೭೫ಭಾಗ ಸಣ್ಣ ಕಾಫಿಯೇ ಇರುವುದು ವಿಶೇಷ ! ಇದರಲ್ಲಿ ದೊಡ್ಡ ಕಾಫಿ ಹಿಡಿಸದಂತೆ ರಚಿಸಲಾಗಿರುತ್ತದೆ. 

ಇದರಿಂದ ಕಾಫಿ ಮಾರುವವರಿಗೆ ಭಾರೀ ಮೋಸವಾಗುತ್ತಿದೆ. ಸಣ್ಣ ಕಾಫಿಯಿಂದ ಔಟ್ ಟರ್ನ್ ಬಹಳ ಕಡಿಮೆ ಬರುತ್ತದೆ. 

ಬೆಳೆಗಾರ ಮಾರಾಟಕ್ಕೆ ತಂದ ವಿವಿಧ ಚೀಲಗಳಿಂದ ೦.೫೦ಗ್ರಾಂ ಕಾಫಿಯನ್ನು ಆರಿಸಿ, ವರ್ತಕರ ಬಳಿ ಇರುವ ಯಂತ್ರದ ಮೂಲಕ ಸುಲಿಯಲಾಗುತ್ತದೆ. ಕೆಲ ವರ್ತಕರು ಒಣ ಕಾಫಿಯನ್ನು ಬಾಯಲ್ಲಿ ಕಚ್ಚಿ ಸುಲಿಯುತ್ತಾರೆ. ಕೆಲವರು ಕಚ್ಚಿ ಸುಲಿಯುವಾಗ ಬೇಳೆಗಳನ್ನು ನುಂಗುವುದುAಟು ! ಈ ರೀತಿ ಹೊರಬರುವ ಕಾಫಿ ಬೇಳೆಯನ್ನು“ಔಟ್ ಟರ್ನ್” ಎಂದು ಕರೆಯಲಾಗುತ್ತದೆ. 

ಇಂತಹ ಸಂದರ್ಭದಲ್ಲಿ ಕೆಲ ಬೇಳೆಗಳು ಕೈ ತಪ್ಪಿ ನೆಲ ಸೇರುವುದು ಉಂಟು. ಹಲವಾರು ವರ್ತಕರೇ ಒಂದೆರಡು ಬೇಳೆಗಳನ್ನು ನೆಲಕ್ಕೆ ಹಾಕುವುದುಂಟು. ಇದರಲ್ಲಿ ತುಂಡಾದ ಬೇಳೆಗಳನ್ನು ಕೆಲವರು ಲೆಕ್ಕಕ್ಕೆ ತೆಗೆದುಕೊಳ್ಳುವುದಿಲ್ಲ. ಕಾಫಿಯ ಔಟ್‌ಟರ್ನ್ ನೋಡುವಾಗ ಒಂದು ಬೇಳೆ ಕಾಣದೆ ಮಾಡಿ, ನಿಮಗೆ ಸಾವಿರಾರು ರೂಪಾಯಿಗಳನ್ನು ಕಣ್ಣೆದುರೆ ಮೋಸ ಮಾಡಲಾಗುತ್ತದೆ. ಇಂತಹವರು ಕೆಲವೊಮ್ಮೆ ಸಿಕ್ಕಿ ಬಿದ್ದು ಬೆಳೆಗಾರರಿಂದ “ಕಪಾಳ ಮೋಕ್ಷ”ವನ್ನು ಅನುಭವಿಸಿದ್ದಾರೆ. 

 ಕೆಲವು ಕಡೆ ಕಾಫಿ ಬೇಳೆ ಮಾಡುವ ಯಂತ್ರವಿರುತ್ತದೆ. ಇದಕ್ಕೆ ೩೫೦ ಗ್ರಾಂ ಕಾಫಿಯನ್ನು ಬೇಳೆ ಮಾಡಲು ಸುರಿಯಲಾಗುತ್ತದೆ. ಇದರಲ್ಲಿ ಬೇಳೆ ಮಾಡುವಾಗ ಕೆಲವು ಕಾಫಿ ಅದರೊಳಗೆ ಬಾಕಿಯಾಗಬಹುದು. ಅಥವಾ ಸಿಪ್ಪೆಯೊಡನೆ ಹೊರಹೋಗಬಹುದು. ಬಹುತೇಕ ಸಂದರ್ಭಗಳಲ್ಲಿ ಇವುಗಳನ್ನು ಬೆಳೆಗಾರರು ಗಮನಿಸುವುದೇ ಇಲ್ಲ ! 

೫೦ಗ್ರಾಂ ಚೆರಿಕಾಫಿಯಲ್ಲಿ ಹೊರಬಂದ ಬೇಳೆಯನ್ನು ತೂಕ ಮಾಡಲಾಗುತ್ತದೆ. ಈ ಬೇಳೆ ಸುಮಾರು ೨೨ಗ್ರಾಂನಿAದ ೨೮ಗ್ರಾಂವರೆಗೆ ತೂಗುತ್ತದೆ. ಆದರೆ, ವರ್ತಕರು ಸಂಗ್ರಹಿಸಿದ ಮಾದರಿಯಲ್ಲಿ ಪ್ರತಿ ೫೦ಗ್ರಾಂ ಕಾಫಿಯಿಂದ ಕೇವಲ ೨೨-೨೬ಗ್ರಾಂ ಬೇಳೆ ಮಾತ್ರ ಬರುತ್ತದೆ. ಹಲವಾರು ಬಾರಿ ಇನ್ನೂ ಕಡಿಮೆ. ಬೆಳೆಗಾರನ ಮೇಲೆ ಇದು ಅವಲಂಬಿಸರುತ್ತದೆ ! 

ಡಿಜಿಟಲ್ ಮಾಪಕ 


ಅವಶ್ಯವೆಂದು ಕಂಡುಬAದಲ್ಲಿ ಕಾಫಿ ಬೇಳೆಯನ್ನು ‘ಡಿಜಿಟಲ್ ತೇವಾಂಶ ಮಾಪಕ’ ಯಂತ್ರದ ಮೂಲಕ ಕಾಫಿಯಲ್ಲಿರುವ ತೇವಾಂಶವನ್ನು ಅಳೆಯಲಾಗುತ್ತದೆ.

ಉತ್ತಮವಾಗಿ ಒಣಗಿದ ಕಾಫಿಯು ಎಷ್ಟು ತೇವಾಂಶದಿAದ ಕೂಡಿರಬೇಕು ಎಂಬ ಬಗೆ ಖರೀದೀದಾರರಾದ ವರ್ತಕರ ಬಳಿ ಒಮ್ಮತದ ಅಭಿಪ್ರಾಯ ಕೇಳಿ ಬಂದಿಲ್ಲ. ಕೆಲವರು ೧೩ ಇರಬೇಕೆಂದರೆ, ಇನ್ನೂ ಕೆಲವರು ೧೩.೫ ಇರಬೇಕೆನ್ನುತ್ತಾರೆ. ಹಲವರು ಕಾಫಿ ಕಡಿಮೆ ಮಾರುಕಟ್ಟೆಗೆ ಬರಿಉವ ಸಮಯದಲ್ಲಿ (ಅನ್ ಸೀಝನ್‌ನಲ್ಲಿ) ೧೪ ತೇವಾಂಶವಿದ್ದರೂ, ಅದನ್ನು ಮರು ಮಾತಿಲ್ಲದೆ ಖರೀದಿಸುವರು. 

ಇಂತಹ ಯಂತ್ರವು ಅತ್ಯಂತ ನಿಖರವಾಗಿ ಇರುವುದೇನೂ ಇಲ್ಲ. ಇದನ್ನು ವರ್ತಕರು ತಮಗೆ ಬೇಕಾದಂತೆ ಸರಿ ಹೊಂದಿಸಿ ಕೊಳ್ಳಬಹುದು. ಕಡಿಮೆ ತೇವಾಂಶವಿದ್ದರೂ, ಈ ಯಂತ್ರ ಕೆಲವೊಮ್ಮೆ ಹೆಚ್ಚು ತೇವಾಂಶವನ್ನು ತೋರಿಸುತ್ತದೆ. ಉದಾಹರಣೆ: ನೀವು ಮಾರಾಟಕ್ಕೆ ತಂದ ಕಾಫಿಯು ೧೭. ೨ಕ್ಕೂ ತೇವಾಂಶವಿದೆಯೆAದು ಈ ಯಂತ್ರ ತೋರಿಸುತ್ತದೆ. ಇಂತಹ ಕಾಫಿಯನ್ನು ವರ್ತಕರು ಮನಬಂದAತೆ ಅತ್ಯಂತ ಕಡಿಮೆ ಬೆಲೆಗೆ ಖರೀದಿಸಬಹುದು.

ಆದಿಉದರಿಂದ ಬೆಳೆಗಾರರು ತಾವು ಮಾರಾಟ ಮಾಡಲು ಬಯಸುವ ಕಾಫಿಯನ್ನು ನಾಲ್ಕಾರು ಕಡೆ ಅದರ ಔಟ್‌ಟರ್ನ್, ತೇವಾಂಶಗಳನ್ನು ಪರೀಕ್ಷೆ ಮಾಡಿ ಬಳಿಕ ಮಾರಾಟ ಮಾಡುವ ನಿರ್ಧಾರ ಕೈಗೊಳ್ಳುವುದು ಉತ್ತಮ. ಅಥವಾ ಅಗತ್ಯವಿರುವವರು ತಾವೇ ಕಾಫಿ ಬೇಳೆ ಮಾಡುವ ಮತ್ತು ತೇವಾಂಶ ಪರೀಕ್ಷಾ ಯಂತ್ರಗಳನ್ನು ಖರೀದಿಸಿಟ್ಟು ಕೊಳ್ಳುವುದು ಒಳ್ಳೆಯದು. 

 ಇವೆರಡರ ಮೇಲೆ ಬೆಳೆಗಾರ ವರ್ತಕರ ಬಳಿ ಕೊಂಡೊಯ್ದ ಕಾಫಿಯ ಬೆಲೆ ನಿಗಧಿ ಪಡಿಸಲಾಗುತ್ತದೆ. ಸಿರಿವಂತ ಬೆಳೆಗಾರರ ಕಾಫಿಯ ಮಾದರಿ ಸಂಗ್ರಹಿಸುವದಿರಲಿ, ಅದನ್ನು ತೂಕ ಮಾಡಲು ವರ್ತಕರು ಮುಂದಾಗುವುದಿಲ್ಲ ! ಅಥವಾ ಹಿಂದೇಟು ಹಾಕುತ್ತಾರೆ. ದೊಡ್ಡ ಬೆಳೆಗಾರರು ತೂಕ ಮಾಡಿಟ್ಟ ಕಾಫಿ ಚೀಲವನ್ನು ಮರು ಮಾತಿಲ್ಲದೆ, ಕೊಂಡೊಯ್ಯತ್ತಾರೆ. ಅಂತಹವರಿಗೆ ಅವಶ್ಯಕತೆ ಇದ್ದಲ್ಲಿ ಸಾಕಷ್ಟು ಮುಂಚಿತವಾಗಿಯೂ, ಅಥವಾ ವರ್ಷದ ನಂತರವೂ ಹಣವನ್ನು ಪಾವತಿಸುತ್ತಾರೆ. 

ಅದೇ ಬಡ ಬೆಳೆಗಾರ ಅಂದಿನ ಕಾಫಿಯ ಧಾರಣೆಯನ್ನು ದೂರವಾಣಿ ಮೂಲಕ ತಿಳಿದೇ ವ್ಯಾಪಾರಿಯ ಬಳಿಗೆ ಒಯ್ಯುತ್ತಾರೆ. ಆದರೆ, ಅವರ ದುರಾದೃಷ್ಟವೋ ಏನೋ ಅಲ್ಲಿಗೆ ತಲುಪಿದ ಬಳಿಕ ಔಟ್‌ಟರ್ನ್ ಅನ್ನು ಪರೀಕ್ಷಿಸಿಸುತ್ತಾರೆ. ಕೆಲವರು ಔಟ್‌ಟರ್ನ್ ಅನ್ನು ಮುಂದಾಗಿಯೇ ಪರೀಕ್ಷೆ ಮಾಡಿ ಬಳಿಕ ಮಾರುವುದುಂಟು ! ಕೆಲವರು ತಮ್ಮಲ್ಲಿನ ಕಾಫಿಯ ಸ್ಯಾಂಪಲ್ ಹೇಗಿದ್ದರೂ, ಬಡ ರೈತ ಒಮ್ಮೆ ಮನೆಯಿಂದ ತಂದ ಕಾಫಿಯನ್ನು ಮತ್ತೆ ಮನೆಗೆ ಒಯ್ಯುವ ಸ್ಥಿತಿಯಲ್ಲಿ ಇರುವುದಿಲ್ಲ. ಇದನ್ನೆಲ್ಲಾ ವ್ಯಾಪಾರಿಗಳು ಚೆನ್ನಾಗಿ ಅರಿತಿರುತ್ತಾರೆ.

ಕೆಲವು ಬಾರಿ ವರ್ತಕರು ಸಣ್ಣ ಬೆಳೆಗಾರರಿಂದ ಕಾಫಿಯ ಮಾದರಿಯನ್ನು ಸುಮಾರು ಹತ್ತಾರು ಕಾಫಿ ಚೀಲಗಳಿಂದ ಸಂಗ್ರಹಿಸುತ್ತಾರೆ. ಇದರಲ್ಲಿ ಸರಿ ಸುಮಾರು ೨-೩ ಕಾಫಿಯನ್ನು ತೆಗೆದುಕೊಂಡು ಹೋಗುತ್ತಾರೆ. ಅದನ್ನು ಪಟ್ಟಣಕ್ಕೆ ಒಯ್ದು ತಮ್ಮ ನಿಕಟವರ್ತಿಗಳೊಡನೆ ಸಾಕಷ್ಟು ಚರ್ಚೆ-ವಿಚರ್ಚೆ ನಡೆಸುತ್ತಾರೆ. ಕೊನೆಗೆ ಬೆಳೆಗಾರರೊಡನೆ ಬೆಲೆ ನಿಗದಿ ಪಡಿಸುವರು. ಬಳಿಕವಷ್ಟೇ ತಮ್ಮ ವಾಹನವನ್ನು ಬೆಳೆಗಾರರ ಮನೆಗೋ, ಆವರ ಕಾಫಿ ಸಂಗ್ರಹಿಸಿದ ಗೋದಾಮಿಗೆ ಕಳುಹಿಸುವರು. ಆ ವೇಳೆಗಾಗಲೇ ವಿವಿಧ ಕಡೆಗಳಿಂದ ಮಾಡಿದ ಸಾಲ ಮರು ಪಾವತಿಗೆ ಸಮಯ ಸನ್ನಿಹಿತವಾಗಿರುತ್ತದೆ. ಇಲ್ಲವೇ ಸಕಾಲಿಕ ಸಾಲ ಮರು ಪಾವತಿಯ ಗಡುವು ಮುಗಿದಿರುತ್ತದೆ. ಸರ್ವೆ ಸಾಮಾನ್ಯವಾಗಿ ಮಾರ್ಚ್ ಅಂತ್ಯದೊಳಗಾಗಿ ಸಹಕಾರಿ ಕ್ಷೇತ್ರದ ಸಾಲವನ್ನು ಮರು ಪಾವತಿಸಬೇಕಾಗುತ್ತದೆ. ಇಲ್ಲವಾದಲ್ಲಿ ಮುಂಬರುವ ಸಾಲಿನಲ್ಲಿ ಸಾಲ ಮಂಜೂರಾತಿಗೆ ಸಾಕಷ್ಟು ಸಮಯವಕಾಶ ಬೇಕಾಗುತ್ತದೆ. ಇದನ್ನೇ ದಾಳವನ್ನಾಗಿಸಿಕೊಳ್ಳುವ ಬಹುತೇಕ ವರ್ತಕರು ಸಣ್ಣ ಮತ್ತು ಅತಿ ಸಣ್ಣ ಬೆಳೆಗಾರರನ್ನು ಶೋಷಣೆ ಮಾಡುವರು ಎಂಬ ಆರೋಪಗಳು ಬೆಳೆಗಾರ ಕಡೆಯಿಂದ ಕೇಳಿಬಂದಿವೆ. ಇದನ್ನು ವರ್ತಕ ಸಮುದಾಯ ಒಪ್ಪಲು ಸಿದ್ಧವಿಲ್ಲ. 

ಸಿಪ್ಪೆಗೆ ಚಿಕ್ಕಾಸು ಇಲ್ಲ. 




ವರ್ತಕರು ಬರೇ ಕಾಫಿಯಿಂದ ದೊರಕುವ ಕಾಫಿ ಬೇಳೆಗೆ ಮಾತ್ರ ಧಾರಣೆ ನೀಡುತ್ತಾರೆ. ಅವರಿಗೆ ಕಾಫಿ ಬೇಳೆಯನ್ನು ತೆಗೆಯುವಾಗ ಉಳಿಯುವ ಸಿಪ್ಪೆಯನ್ನು ನಮ್ಮ ಬೆಳೆಗಾರರು ಪೂರ್ತಿ ಉಚಿತವಾಗಿಯೇ ನೀಡುತ್ತಾರೆ ! ಅವರು ಈ ಸಿಪ್ಪೆಯಿಂದ ಪ್ರತೀ ವರ್ಷವೂ ಕೋಟ್ಯಾಂತರ ರೂಪಾಯಿ ಸಂಪಾದಿಸುತ್ತಾರೆ. ಉದಾಹರಣೆಗಾಗಿ ೦.೫೦ ಗ್ರಾಂ ಕಾಫಿಯಿಂದ ೨೫ ಗ್ರಾಂ ಔಟ್‌ಟರ್ನ್ ಬಂದಲ್ಲಿ ಅಷ್ಟೇ ಪ್ರಮಾಣದ ಸಿಪ್ಪೆಯು ಸಿಗುತ್ತದಲ್ಲ. ಅದರರ್ಥ ಎರಡು ಕಿಲೋಗ್ರಾಂ ಕಾಫಿಗೆ ಒಂದು ಕಿಲೋಗ್ರಾಂ ಸಿಪ್ಪೆಯನ್ನು ಮಿಲ್ ಮಾಲೀಕರಿಗೆ ಬೆಳೆಗಾರರು “ಉಚಿತ”ವಾಗಿ ಕೊಡುತ್ತಾರೆ. ಅವರು ಅದನ್ನು ಸಾವಯವ ಗೊಬ್ಬರ ಮಾಡಲಿಕ್ಕೆ ಪ್ರತೀ ಲಾರಿ ಲೋಡ್ ಸಿಪ್ಪೆಯನ್ನು ಲಕ್ಷಾಂತರ ರೂಪಾಯಿಗಳಿಗೆ ಮಾರುತ್ತಾರೆ. ಇದರಿಂದಲೇ ಮಿಲ್ ಮಾಲೀಕರು ಒಂದೇ ವರ್ಷದಲ್ಲಿ ಕೋಟ್ಯಾಂತರ ರೂಪಾಯಿಗಳನ್ನು ಅತ್ಯಂತ ಸುಲಭವಾಗಿ ಸಂಪಾದಿಸುತ್ತಾರೆ ! 

ಸತ್ಯಮಾಪನ ಮುದ್ರೆ ಇಲ್ಲದ ತೂಕದ ಯಂತ್ರಗಳು !

ಸರಕಾರಿ ನಿಯಮದ ಪ್ರಕಾರ ಪ್ರತೀ ವರ್ಷವೂ ತೂಕ ಮತ್ತು ಅಳತೆಯ ಯಂತ್ರಗಳನ್ನು ಕಾನೂನು ಮಾಪನ ಶಾಸ್ತç ಇಲಾಖೆಯ ಮೂಲಕ ಸತ್ಯಮಾಪನ ಮುದ್ರೆ ಹಾಕಿಸಬೇಕು. ಆದರೆ, ಬಹುತೇಕ ವರ್ತಕರ ತೂಕದ ಯಂತ್ರಗಳಿಗೆ ಮುದ್ರೆಯನ್ನೇ ಹಾಕುತ್ತಿಲ್ಲ. ಹಾಕಿದರೂ ಅದು ನಾಮಕಾವಸ್ಥೆಗೆ ಸೀಮಿತ. ಅದೇ ಯಂತ್ರದಲ್ಲಿ ಮತ್ತೆ ಮೋಸ !

 ಉದಾಹರಣೆಗೆ ಪೆಟ್ರೋಲ್ ಬಂಕ್‌ಗಳ ಡಿಜಿಟಲ್ ಅಳತೆ ಮಾಪನದಲ್ಲಿನ ಮೋಸ ? ಡಿಜಿಟಲ್ ಯಂತ್ರದ ಪರಿಯೂ ಇದೇ ? ಎಲ್ಲೆಲ್ಲೂ ಬೆಳೆಗಾರರಿಗೆ ಮೋಸದ ಸರಪಣಿ-ಸಂಕೋಲೆ ! 

 ಕೊನೆ ಹನಿ : ಕೆಲ ವರ್ತಕರ ಶೋಷಣೆಯಿಂದಾಗಿ ಬೆಳೆಗಾರರು ಇಡೀ ವರ್ತಕ ಸಮುದಾಯವನ್ನೇ ಸಂಶಯದಿAದ ನೋಡುವ ಸ್ಥಿತಿ ನಿರ್ಮಾಣವಾಗಿದೆ. ಎಲ್ಲಾ ವರ್ತಕರು ಮೋಸಗಾರರಲ್ಲ. ಅದೇ ರೀತಿ, ಎಲ್ಲಾ ವರ್ತಕರು ಪ್ರಾಮಾಣಿಕರಲ್ಲ ! ಕೆಲವರ ಮೋಸದಾಟ ಇಡೀ ವರ್ತಕ ಸಮುದಾಯಕ್ಕೆ ಕಳಂಕ ತಂದಿದೆ-ತರುತ್ತಿದೆ ಎಂದರೆ ತಪ್ಪೇನಿಲ್ಲ.

ಸೋಮವಾರ, ಅಕ್ಟೋಬರ್ 11, 2021

ವೈಯುಕ್ತಿಕ ಪಹಣಿ ಅಭಿಯಾನ Individual RTC Campion

 

ಕೃಷಿ ಲೋಕ.

             ವೈಯುಕ್ತಿಕ ಪಹಣಿ ಅಭಿಯಾನ

ಬರಹ: ಕೂಡಂಡ ರವಿ. ಹೊದ್ದೂರು.



ಇತ್ತೀಚಿನ ದಿನಗಳಲ್ಲಿ ರೈತರಿಗೆ ಬೆಳೆಗಾರರಿಗೆ ಸರಕಾರ ನೀಡುತ್ತಿರುವ ಹತ್ತಾರು ಸೌಲಭ್ಯಗಳು ದುರುಪಯೋಗವಾಗುತ್ತಿದೆ ಎಂಬ ಆರೋಪಗಳು ಕೇಳಿ ಬರುತ್ತಿದೆ. ಇದನ್ನು ತಡೆಯಲು ಸರಕಾರವು ವೈಯುಕ್ತಿಕ ಪಹಣಿ(ಆರ್‌ಟಿಸಿ)ಯನ್ನು ಕಡ್ಡಾಯಗೊಳಿಸಿದೆ. ಇದರಿಂದ ಪ್ರತಿಯೊಬ್ಬರು ತಮ್ಮ ಅನುಭವ ಸ್ವಾದೀನ ಆಸ್ತಿಪಾಸ್ತಿಗೆ ಸಮರ್ಪಕ ಭೂ ದಾಖಲೆಗಳನ್ನು ಮಾಡಿಸಿಕೊಳ್ಳುವುದು ಅನಿವಾರ್ಯ. ವಿಪರ್ಯಾಸ ಎಂದರೆ, ಅಧಿಕಾರಿವರ್ಗ ಮತ್ತು ಜನಪ್ರತಿನಿಧಿಗಳು ಈ ಕುರಿತು ಚಕಾರವೆತ್ತುತ್ತಿಲ್ಲ.

ವೈಯುಕ್ತಿಕ ಪಹಣಿ

ಕೊಡಗು ಜಿಲ್ಲೆಯ ಬಹುತೇಕ ಕುಟುಂಬಗಳಲ್ಲಿ ಆಸ್ತಿಪಾಸ್ತಿಯು ಜಂಟಿಖಾತೆಯಲ್ಲಿದೆ. ಹಲವರು ಈಗಾಗಲೇ ವೈಯುಕ್ತಿಕ ಖಾತೆಗಳಿಗೆ ತಮ್ಮ ಭೂ ದಾಖಲೆಗಳನ್ನು ವರ್ಗಾವಣೆ ಮಾಡಿಕೊಂಡಿದ್ದಾರೆ. ಹಲವರು ಈಗಾಗಲೇ, ರಾಜ್ಯದಲ್ಲಿ ನಡೆಯುತ್ತಿರುವ ಪೌತಿಖಾತೆ ಅಭಿಯಾನದಡಿ “ವೈಯುಕ್ತಿಕ ಪಹಣಿ” ಮಾಡಿಸಲು ಮುಂದಾಗಿದ್ದಾರೆ.

ಇದರಿಂದಾಗಿ, ಅವರವರ ಪಾಲಿಗೆ ಬಂದಿರುವ ಕುಟುಂಬದ ಆಸ್ತಿಯು (ಅನುಭವ ಸ್ವಾದೀನ) ಅವರವರ ಹೆಸರಿನಲ್ಲಿರುತ್ತದೆ.  ಆಧಾರ್ ಕಾಡ್೵ನ ಹೆಸರಿನಲ್ಲಿರುವಂತೆ ಇದು ಬದಲಾಗಲಿದೆ.  ತದ ನಂತರ ಪಹಣಿಯ ೯ನೇ ಕಾಲಂನಲ್ಲಿ ಒಂದೇ ಹೆಸರು ಇರುತ್ತದೆ.( ಹಳೆ ಜಮಾಬಂದಿಯ ಕಾಫಿಯು ಆರ್ಟಿಸಿಯಾಗಿರುವುದರಿಂದ ಅದರಲ್ಲಿ ಕುಟುಂಬ ಸದಸ್ಯರ ಹಲವಾರು ಹೆಸರುಗಳನ್ನು ನಾವು  ಇಂದು ಕಾಣಬಹುದು.) ಇದನ್ನು ಕುಟುಂಬದ ಸದಸ್ಯರು “ವೈಯುಕ್ತಿಕ”ವಾಗಿ ಅಥವಾ “ಸಾಮೂಹಿಕ”ವಾಗಿ ಮಾಡಿಸಿಕೊಳ್ಳಲು ಸಾಧ್ಯವಿದೆ. ಸಾಮೂಹಿಕ ಪ್ರಕ್ರಿಯೆಯಿಂದ ‘ಆರ್ಥಿಕ ಹೊರೆ’ ಕೊಂಚ ಕಡಿಮೆಯಾಗಬಹುದು. ಇದರಿಂದ ಆಸ್ತಿ ಹೊಂದಿದವರಿಗೆ ಅದರ ವಿಕ್ರಯ, ಸಾಲ ಪಡೆಯುವುದು, ನೋಂದಣಿ ಮುಂತಾದ ಪ್ರಕ್ರಿಯೆಗಳು ಅತ್ಯಂತ ಸುಲಭವಾಗಲಿವೆ. ಈ ಪ್ರಕ್ತಿಯೆಯಿಂದ ಜಂಟಿ ಖಾತೆಯು “ಒಂಟಿಖಾತೆ”ಯಾಗಿ ಬದಲಾಗಲಿದೆ.

ಬೇಕಾಗುವ ದಾಖಲೆಗಳು

ಈ ಪ್ರಕ್ರಿಯೆಗಾಗಿ ಪಹಣಿಯಲ್ಲಿ ಹೆಸರಿರುವ ಪ್ರತಿಯೊಬ್ಬರ ೨ ಪಾಸ್ ಪೋರ್ಟ್ ಆಳತೆಯ ಭಾವಚಿತ್ರಗಳು, ಸ್ವಯಂ ದೃಡೀಕೃತ ಆಧಾರ್ ಗುರುತಿನ ಚೀಟಿಯ ನಕಲು ಪ್ರತಿ ಬೇಕಾಗುತ್ತದೆ. ಜೊತೆಗೆ, ಪಹಣಿಯಲ್ಲಿ ಹೆಸರಿದ್ದು, ಅಂತಹವರು ಮರಣ ಹೊಂದಿದ್ದಲ್ಲಿ ಅಂತಹವರ ಮರಣ ದೃಡೀಕರಣ ಪತ್ರದ ನಕಲು ಪ್ರತಿಯು ಅವಶ್ಯ. ಜೊತೆಗೆ ಕುಟುಂಬ ಸದಸ್ಯರ ಒಪ್ಪಿಗೆ ಪತ್ರವೂ ಬೇಕು.  ಈಗಾಗಲೇ, ರಾಜ್ಯದಲ್ಲಿ “ಪೌತಿ ಖಾತೆಯ ಆಂದೋಲನ” ಚಾಲನೆಯಲ್ಲಿರುವುದರಿಂದ ವೈಯುಕ್ತಿಕ ಪಹಣಿ ಮಾಡಿಸುವುದು ಸುಲಭ ಎನ್ನಲಾಗಿದೆ.

ವೈಯುಕ್ತಿಕ ಪಹಣಿ ಆಂದೋಲನ

ಕುಟುAಬದ ಸದಸ್ಯರು ಈ ಸುವರ್ಣವಕಾಶವನ್ನು ಬಳಸಿಕೊಂಡು “ವೈಯುಕ್ತಿಕ ಪಹಣಿ” ಮಾಡಿಸಿಕೊಳ್ಳಬಹುದು. ಕುಟುಂಬದ ಸದಸ್ಯರು ತಮ್ಮಲ್ಲಿರಬಹುದಾದ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಅಗತ್ಯವಿರುವವರಿಗೆ ಸಂಬAಧಪಟ್ಟ ದಾಖಲೆಗಳನ್ನು ನೀಡಿ . ಈ ಪ್ರಕ್ರಿಯೆಗೆ ಸರ್ವರು ಸಕಲ ರೀತಿಯಲ್ಲಿ ಸಹಕರಿಸಿದ್ದಲ್ಲಿ ವೈಯುಕ್ತಿಕ ಅಭಿವೃದ್ಧಿಯ ಜೊತೆಗೆ ಕುಟುಂಬದ ಸರ್ವತೋಮುಖ ಶ್ರೇಯೋಭಿವೃದ್ಧಿ ಸಾಧ್ಯ. ಇದರಿಂದಾಗಿ ಕುಟುಂಬದವರು “ವೈಯುಕ್ತಿಕ ಪಹಣಿ” ಮಾಡಿಸಲು ಕೂಡಲೇ ಕಾರ್ಯ ಪ್ರವೃತ್ತರಾಗಬಹುದು,  

ಗೊಬ್ಬರಕ್ಕೆ ಸಹಾಯಧನವಿಲ್ಲ !

ವೈಯುಕ್ತಿಕ ಪಹಣಿ ಇಲ್ಲವಾದಲ್ಲಿ ಮುಂಬರುವ ದಿನಗಳಲ್ಲಿ ಸಹಾಯಧನದ ಮೂಲಕ ದೊರೆಯುವ ರಾಸಾಯನಿಕ ಗೊಬ್ಬರ ಕೂಡಾ ದೊರೆಯುವುದಿಲ್ಲ ಎಂಬ  ದಟ್ಟ “ವದಂತಿ”ಗಳು ಕೇಳಿಬಂದಿದೆ. ಮುಂಬರುವ ದಿನಗಳಲ್ಲಿ ವೈಯುಕ್ತಿಕ ಖಾತೆದಾರರಿಗೆ ಮಾತ್ರ ಸಹಕಾರ ಸಂಘಗಳಿಂದ ವಿವಿಧ ಸಾಲಗಳು ದೊರೆಯಲಿದೆ. ಹಲವಾರು ಬ್ಯಾಂಕ್ಗಳು ಈಗಾಗಲೇ ಈ ನಿಯಮಾವಳಿಗಳನ್ನು ಜಾರಿ ಮಾಡಿದೆ. ಈ ಹಿನ್ನೆಲೆಯಲ್ಲಿ ಬೆಳೆಗಾರರು, ರೈತಾಪಿ ವರ್ಗದವರು ಕೂಡಲೇ ಕಾರ್ಯ ಪ್ರವೃತ್ತರಾಗಬೇಕಿದೆ.

ಈ ಬಗ್ಗೆ ಅಧಿಕ ಮಾಹಿತಿಗಾಗಿ ಕಂದಾಯ ಇಲಾಖಾಧಿಕಾರಿಗಳು-ಸಿಬ್ಬಂದಿವರ್ಗದವರನ್ನು ಸಂಪರ್ಕಿಸಬಹುದು.

ಭಾನುವಾರ, ಅಕ್ಟೋಬರ್ 10, 2021

 ಕೃಷಿ ಲೋಕ.

ಕಂದಾಯಕ್ಕೆ  ತಾರದ ಜಮೀನು-ಕೋಟಿಗಟ್ಟಲೆ ನಷ್ಟ !


                                  ಬರಹ: ಕೂಡಂಡ ರವಿ, ಹೊದ್ದೂರು. 


ನಮ್ಮಲ್ಲಿ ಬಹುತೇಕರಿಗೆ ಆಸ್ತಿಪಾಸ್ತಿಗಳಿವೆ. ಇವುಗಳಲ್ಲಿ ಕೆಲವು ಸ್ವಯಾರ್ಜಿತ. ಹಲವು ಪಿತ್ರಾರ್ಜಿತ. ಕೆಲವರು ತಮ್ಮ ಅಮೂಲ್ಯ ಕೃಷಿ ಯೋಗ್ಯ ಜಮೀನನ್ನು ಪಾಳು ಬಿಟ್ಟಿದ್ದಾರೆ. ಇವುಗಳಲ್ಲಿ ಬಹುತೇಕ ಜಮೀನಿಗೆ ಹಲವರು ದಶಕಗಳಿಂದ ಕಂದಾಯವನ್ನೇ ಪಾವತಿಸುತ್ತಿಲ್ಲ. ಇದರ ಪರಿಣಾಮ ಸರಕಾರಿ ಬೊಕ್ಕಸಕ್ಕೆ ಪ್ರತೀ ವರ್ಷವೂ ಕೋಟ್ಯಾಂತರ ರೂಪಾಯಿ ನಷ್ಟವಾಗುತ್ತಿದೆ ! ಈ ಜಮೀನನ್ನು ಕಂದಾಯಕ್ಕೆ ತರುವವರಾರು ಎಂಬುದೇ ಮಿಲಿಯನ್ ಡಾಲರ್ ಪ್ರಶ್ನೆ !

 ದಲ್ಲಾಳಿಗಳ ದರ್ಬಾರು

 ಕೊಡಗು ಜಿಲ್ಲೆಯಲ್ಲಿ ಬಹುತೇಕ ಕೌಟುಂಬಿಕ ಆಸ್ತಿಯು ಇನ್ನೂ ಜಂಟಿ ಖಾತೆಯಲ್ಲಿಯೇ ಮುಂದುವರಿಯುತ್ತಿವೆ. ಇನ್ನೂ ಒಂಟಿ ಖಾತೆಗೆ ಬದಲಾಗಿಲ್ಲ. ಕಂದಾಯ ಕಾಲಂ, ಬೆಳೆಗಳ ಕಾಲಂಗಳು ಸಂಪೂರ್ಣ ಖಾಲಿ ಖಾಲಿ ! ಈ ಪ್ರಕ್ರಿಯೆಗಾಗಿ ಬಹುತೇಕ ಸಣ್ಣ-ಅತೀ ಸಣ್ಣ ಭೂ ಹಿಡುವಳಿದಾರರು ಕಂದಾಯ ಇಲಾಖಾ ಕಛೇರಿಗಳಿಗೆ ಪ್ರತೀ ದಿನವೂ ಅಲೆಯುತ್ತಿದ್ದಾರೆ. ಈ ಅಲೆತದಿಂದಾಗಿ ಹಲವರ ಆಯುಷ್ಯವೇ ಮುಗಿದು ಹೋಗಿದೆ. ಇದರಿಂದ ಅವರ ಅಮೂಲ್ಯ ಸಮಯ-ಹಣ ವ್ಯರ್ಥವಾಗುತ್ತಿದೆ. ಆದರೂ, ಅವರಿಗೆ ಸಮರ್ಪಕ ಭೂ ದಾಖಲೆಗಳು ಲಭ್ಯವಾಗುತ್ತಿಲ್ಲ. ಹಲವರ ಜಮೀನಿಗೆ ಇನ್ನೂ ನಕ್ಷೆಗಳು ಲಭ್ಯವಾಗಿಲ್ಲ. ಕೆಲವರಿಗೆ ತಮ್ಮ ಜಮೀನುಗಳ ಮೋಜಣಿ ಸಂಖ್ಯೆ(ಸರ್ವೆ ನಂಬರ್) ತಿಳಿದಿಲ್ಲ. ಪರಿಣಾಮ ಅವರು ಆರ್ಥಿಕವಾಗಿ ಸಬಲರಾಗಲು ಹಿನ್ನೆಡೆಯಾಗುತ್ತಿದೆ. ಪಹಣಿಯ(ಆರ್‌ಟಿಸಿ) ೯ ನೇ ಕಾಲಂನಲ್ಲಿ ಜಮೀನು ಹಿಡುವಳಿದಾರರ ಹೆಸರು ಮಾತ್ರ ಇರಬೇಕು. ಆದರೆ, ಅಲ್ಲಿ ಇಡೀ ಕುಟುಂಬದವರ ಹೆಸರುಗಳಿವೆ. ಹಲವಾರು ಮಂದಿ ನಿಧನರಾಗಿ ಒಂದೆರಡು ದಶಕಗಳೇ ಕಳೆದರೂ, ಅಂತಹವರ ಹೆಸರು ಪಹಣಿಯಲ್ಲಿ ಯಥಾ ರೀತಿ ಮುಂದುವರಿದಿದೆ. ನಿಧನರಾದವರ ಮರಣ ಪತ್ರ ನೀಡಿದ ಬಳಿಕ ಅವರನು ಕಂದಾಯ ಇಲಾಖಾ ದಾಖಲೆಗಳಲ್ಲಿ ಮುಂದುವರಿಸುವ ಔಚಿತ್ಯವೇನು ? ಒಟ್ಟಿನಲ್ಲಿ ಕೊಡಗಿನಲ್ಲಿ ಕಂದಾಯ ಇಲಾಖೆಯ ಕಾರ್ಯ ವೈಖರಿಯನ್ನು ಕೇಳುವವರು ಇಲ್ಲವಾಗಿದ್ದಾರೆ. ಇಲಾಖೆಯಲ್ಲಿ ಬೆರಳೆಣಿಕೆಯ ಸಂಖ್ಯೆಯ ಪ್ರಾಮಾಣಿಕ ಅಧಿಕಾರಿ-ಸಿಬ್ಬಂದಿವರ್ಗದವರಿದ್ದಾರೆ. ಆದರೆ, ಬಹುಪಾಲು ಭ್ರಷ್ಟರು ! ಇದರಿಂದ “ಲಂಚ ಕೊಟ್ಟರೂ”, ಸಕಾಲಿಕವಾಗಿ ಶ್ರೀಸಾಮಾನ್ಯನ ಕಛೇರಿ ಕಾರ್ಯಗಳು ಆಗುತ್ತಿಲ್ಲ. ಎಲ್ಲೆಲ್ಲೂ ದಲ್ಲಾಳಿಗಳ ದರ್ಬಾರು ನಡೆಯುತ್ತಿವೆ. ಒಟ್ಟಿನಲ್ಲಿ ಕಂದಾಯ ಇಲಾಖಾ ಕಛೇರಿಗಳು ಸುಲಿಗೆಯ ಕೇಂದ್ರ ಬಿಂದುವಾಗಿದೆ. ನಮ್ಮ ಶಾಸಕ ವೃಂದಕ್ಕೆ ಇದೆಲ್ಲವೂ ಕಾಣಿಸುತ್ತಿಲ್ಲವೇ ? ಎಲ್ಲಾ ತಿಳಿದೂ ಅವರೆಲ್ಲಾ “ಜಾಣಮೌನ” ಕ್ಕೆ ಶರಣಾಗಿದ್ದಾರೆಯೇ ಎಂಬ ಸಂಶಯ ಹಲವರನ್ನು ಕಾಡಿದೆ-ಕಾಡುತ್ತಿದೆ. 

ಬ್ರಿಟಿಷರ ಕಾಲದ ಮೋಜಣಿ

ಬ್ರಿಟಿಷರ ಕಾಲದಲ್ಲಿ ಭಾರತ ದೇಶದ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೂ ಮೋಜಣಿ (ಸರ್ವೆ)ಮಾಡಿಸಲಾಗಿತ್ತು. ನಿಗದಿತ ಗಡಿ ಗುರುತಿಸಿ, ಅವಶ್ಯವಿರುವ ಕಡೆ ಭೂಮಿ ಮೇಲೆ ಮತ್ತು ಆಳದಲ್ಲಿ ಕಲ್ಲುಗಳನ್ನು ನೆಡಲಾಗಿತ್ತು. ಅದಕ್ಕೆ ತಕ್ಕ ಅತ್ಯಂತ ಸುಸಜ್ಜಿತವಾದ ನಕ್ಷೆಯನ್ನು ಸಿದ್ಧಪಡಿಸಲಾಗಿತ್ತು. ಇದರ ಆಧಾರದಲ್ಲಿಯೇ ಇಂದು ನಮ್ಮ ದೇಶದಲ್ಲಿ ಮೋಜಣಿ ನಡೆಯುತ್ತಿದೆ. ಆದರೂ, ನಮ್ಮ ಭೂಮಿಯನ್ನು ಅಳೆದು ಅದಕ್ಕೆ ಕಂದಾಯ ನಿಗದಿ ಮಾಡಲು ಇಂದಿನ ಸರಕಾರಗಳಿಗೆ ಸಾಧ್ಯವಾಗುತ್ತಿಲ್ಲ. ಎಂತಹಾ ನಾಚಿಕೆಗೇಡು !? ಇದರ ಪರಿಣಾಮ ಶ್ರೀಸಾಮಾನ್ಯರಿಗೆ ಭೂ ನಕ್ಷೆಗಳು ಸಕಾಲಿಕವಾಗಿ ಲಭ್ಯವಾಗುತ್ತಿಲ್ಲ. ಜೊತೆಗೆ ಭೂ ಅಭಿವೃದ್ಧಿ ಮತ್ತು ಆರ್ಥಿಕಾಭಿವೃದ್ಧಿಗೆ ತೀವ್ರ ಹಿನ್ನೆಡೆಯಾಗಿದೆ. ಕೃಷಿ ಆಶ್ರಿತರು ಸರಕಾರದ ಸಹಾಯ ಸವಲತ್ತುಗಳಿಂದ ವಂಚಿತರಾಗುತ್ತಿದ್ಧಾರೆ. ಇದರ ಫಲವಾಗಿ ಕೃಷಿ ಭೂಮಿಗೆ ಆರ್ಥಿಕ ಮೌಲ್ಯವೂ ಕುಸಿದಿದೆ. ದೇಶ ಸ್ವತಂತ್ರವಾಗಿ  ೮ ದಶಕಗಳು ಸಮೀಸುತ್ತಿದ್ದರೂ. ಆಸ್ತಿಯ ನೈಜ ವಾರೀಸುದಾರರಿಗೆ ಅದರ ಸಂಪೂರ್ಣ ಹಕ್ಕು ದೊರೆತೇ ಇಲ್ಲ. ಇಣತಹ ಆಸ್ತಿಗಳನ್ನು ಅಡಮಾನವಿರಿಸಿ ಸಾಲ ಪಡೆಯಲು ಸಾಧ್ಯವೇ ಇಲ್ಲ. ಇದರಿಂದ ನಗರ ಪ್ರದೇಶದವರಂತೆ ಗ್ರಾಮೀಣ ಭಾಗದವರಿಗೆ ಯಾವುದೇ ಹಣಕಾಸಿ ಲಾಭಗಳು ಲಭಿಸುತ್ತಿಲ್ಲ. ಇದು ಕೃಷಿಕ ಸಮುದಾಯದವರು ಆರ್ಥಿಕವಾಗಿ ಹಿನ್ನೆಡೆ ಅನುಭವಿಸಲು ಪ್ರಬಲ ಕಾರಣವಾಗಿದೆ.  

೧೯೬೫ರ ಕಂದಾಯ ಕಾನೂನು 

ಈ ವಿಚಾರಗಳು ನಮ್ಮ ಅಧಿಕಾರಿ- ಆಡಳಿತ ವರ್ಗಕ್ಕೆ ತಿಳಿಯದ ವಿಚಾರವೇನಲ್ಲ. ಕಂದಾಯ ಇಲಾಖೆಯ ಅಸಡ್ಡೆಯ ಪರಿಣಾಮ ಸರಕಾರಕ್ಕೆ ಪುರಾತನ ಕಾಲದಲ್ಲಿ ನಿಗದಿಯಾದ ಕನಿಷ್ಠ ಕಂದಾಯ ಮಾತ್ರ ಪಾವತಿಯಾಗುತ್ತಿದೆ. ಇದಕ್ಕೆ ಇಂದಿನ ಆಡಳಿತ ರೂಡರೂ, ಅಧಿಕಾರಿ ವರ್ಗದವರೇ ಮೂಲ ಕಾರಣ.  ಅದನ್ನು ಇಂದಿನ ಕಾಲಘಟ್ಟಕ್ಕೆ ಸರಿಹೊಂದುವAತೆ ಪರಿಷ್ಕರಣೆ ಮಾಡುವ ಅಗತ್ಯವಿದೆ.  ಪೆಟ್ರೋಲ್, ಡಿಸೇಲ್‌ಗಳಿಗೆ ಪ್ರತೀ ದಿನವೂ ದರ ಪರಿಷ್ಕರಣೆ ಮಾಡಿ ಗ್ರಾಹಕರಿಗೆ ಬರೆ ಹಾಕುವುದರ ಬದಲು ಈ ಕಾರ್ಯದ ಜರೂರತ್ತಿದೆ. ಇಂತಹ ಗಂಭೀರ ವಿಚಾರವನ್ನು ನಮ್ಮ ಜನಪ್ರತಿನಿಧಿಗಳು ಸದನದಲ್ಲಿ ಚರ್ಚಿಸಬೇಕಿದೆ. ತನ್ಮೂಲಕ ಕೊಡಗು ಜಿಲ್ಲೆಯಲ್ಲಿರುವ ಖಾಸಗಿ ಮತ್ತು ಸರಕಾರಿ ಜಮೀನುಗಳ ವರ್ಗಿಕರಣ ಮಾಡಬೇಕು. ಇವುಗಳ ಜತೆಗೆ ಕರ್ನಾಟಕದ ಭೂ ಕಂದಾಯ ಅಧಿ ನಿಯಮ – ೧೯೬೫ನ್ನು ಕೊಡಗಿನಲ್ಲಿಯೂ ಯಥಾವತ್ ಅನುಷ್ಠಾನಕ್ಕೆ ತರಬೇಕಿದೆ. ಆ ಮೂಲಕ ಕೊಡಗಿನ ಕಂದಾಯ ಇಲಾಖೆಯಲ್ಲಿ ಅಮೂಲಾಗ್ರ ಬದಲಾವಣೆ ಮಾಡಬೇಕಿದೆ. ಕಂದಾಯ ಇಲಾಖೆಯ ಸಂಪೂರ್ಣ ಪಾರದರ್ಶಕವಾಗಿ ಜನತೆಯ ಇಲಾಖೆಯಾಗಿ ಪರಿವರ್ತನೆ ಮಾಡಬೇಕು. ಆದರೆ, “ಬೆಕ್ಕಿನ ಕೊರಳಿಗೆ ಘಂಟೆ ಕಟ್ಟುವರಾರು ? “ಎಂಬ ಪ್ರಶ್ನೆಯ ಬಹುತೇಕ ಕೊಡಗಿನ ನಿವಾಸಿಗಳನ್ನು ಕಾಡುತ್ತಿದೆ. 

ಜನಪ್ರತಿನಿಧಿಗಳು ಕಾರ್ಯ ಪ್ರವೃತ್ತರಾಗಿ 

ಜಿಲ್ಲೆಯ ಜನತೆ  ಅತಿರಥ-ಮಹಾರಥರಾಗಿರುವ, ಅನುಭವಿ ರಾಜಕಾರಣಿಗಳನ್ನು, ಹಿರಿಯ ಮುತ್ಸದಿಗಳನ್ನೇ ಸದನಗಳಿಗೆ ಆರಿಸಿ ಕಳುಹಿಸಿದೆ. ಅವರು ತಮ್ಮ ಜವಾಬ್ಧಾರಿಗಳನ್ನು ಅರಿತು ಶೀಘ್ರವೇ ಕಾರ್ಯ ಪ್ರವೃತ್ತರಾಬೇಕಿದೆ. ಈ ನಿಟ್ಟಿನಲ್ಲಿ ನಮ್ಮ ಮಾಧ್ಯಮ ಮಿತ್ರರು ತಮ್ಮ ಜವಾಬ್ಧಾರಿ ಅರಿತು ಜನತಾ ಜರ್ನಾದನರನ್ನು ಎಚ್ಚರಿಸಬೇಕಿದೆ. ಹಿರಿಯ ಶಾಸಕರು ತಮ್ಮ ಇಚ್ಛಾಶಕ್ತಿಯನ್ನು ಪ್ರದರ್ಶಿಸಿದ್ದಲ್ಲಿ ಈ ಕಾರ್ಯ “ಕನ್ನಡಿಯೊಳಗಿನ ಗಂಟೇ”ನೂ ಅಲ್ಲ. ಸದನದಲ್ಲಿನ  “ಅಮೂಲ್ಯ ಸಮಯ” ಪೋಲು ಮಾಡುವ ಬದಲು ಇಂತಹ ಜನಪರ ಕಾರ್ಯಕ್ಕೆ ವಿನಿಯೋಗಿಸಲು ಮುಂದಾಗಬೇಕಿದೆ. ಆ ಮೂಲಕ ಚಾಕಚಕ್ಯತೆ ಪ್ರದರ್ಶಿಸಬೇಕು. ಔನ್ಯತೆ ಮೆರೆಯವತ್ತ ಚಿಂತನ-ಮAಥನ ನಡೆಸಬೇಕಿದೆ. ಹಾಗಾದಲ್ಲಿ ಶಾಸಕ ವೃಂದದ ವರ್ಚಸ್ಸು ವೃದ್ದಿಸೀತು. ಈಗಿನ ಶಾಸಕ ವೃಂದ  ರಾಜಕೀಯ, ಪಕ್ಷ ರಹಿತವಾಗಿ ಈ ಕಾರ್ಯ ಮಾಡಿದ್ದಲ್ಲಿ ಅವರು ರೈತಾಪಿ ವರ್ಗದವರ ಪಾಲಿಗೆ ಪೂಜನೀಯರಾಗುವುದರಲ್ಲಿ, ಪ್ರಾತಃಸ್ಮರಣೀಯರಾಗುವುದರಲ್ಲಿ ಎಳ್ಳಷ್ಟು ಸಂಶಯವಿಲ್ಲ.ಕೃಷಿಕ ಸಮುದಾಯದ ನೆಚ್ಚಿನ ಕಾರ್ಯ ಮಾಡಿದ್ದಲ್ಲಿ ಅದು ಕೊಡಗಿನ ಜನತೆಗೆ ಅತ್ಯಮೂಲ್ಯ ಕೊಡುಗೆಯಾಗುವುದರ ಬಗ್ಗೆ ಎರಡು ಮಾತಿಲ್ಲ.

ಬಹು ಜನತೆಯ ಇಂತಹ ಸಮಸ್ಯೆಗಳನ್ನು ನಾಲ್ವರು ಶಾಸಕರು ಸವಾಲುಗಳಾಗಿ ಪರಿಗಣಿಸಿ, ಅದನ್ನು ಸಮರ್ಥವಾಗಿ ಪರಿಹರಿಸಿ. ತಮ್ಮ ಜನಪರ ಕಾಳಜಿಯನ್ನು , ಕಾರ್ಯವೈಖರಿ ಮತ್ತು ಕರ್ತವ್ಯಪ್ರಜ್ಞೆ, ಸ್ವಸಾಮಾರ್ಥ್ಯವನ್ನು ಜನತೆಯ ಎದುರು ಸಾಬೀತು ಪಡಿಸಲು ಇದೊಂದು ಸುವರ್ಣಾವಕಾಶ. 

ಹಾಗಾದಲ್ಲಿ ಮಾತ್ರ, ಕೊಡಗಿನ ಸಣ್ಣ ಮತ್ತು ಅತೀ ಸಣ್ಣ ಭೂ ಹಿಡುವಳಿದಾರರು ನೆಮ್ಮದಿಯ ಜೀವನ ನಡೆಸುವುದು ಸಾಧ್ಯ. ಹಾಗಾಗಲೀ ಎಂಬುದೇ ಎಲ್ಲಾ ಜನತೆಯ ಪರವಾಗಿ ನನ್ನ ಸದಾಶಯ.