ಬುಧವಾರ, ಮಾರ್ಚ್ 28, 2018

ಕೃಷಿ ಲೋಕ

            ಕರಿ ಭತ್ತಕ್ಕೆ "ಬಂಗಾರ" ದ ಬೆಲೆ ! BLACK PADDY 

    ಬರಹ : ಕೂಡಂಡ ರವಿ. 



 ಆರೋಗ್ಯ ಪೂರ್ಣ ಅಕ್ಕಿಯತ್ತ ಜನತೆಯ ಗಮನ ಹೊರಳುತ್ತಿದೆ. ಹಿಂದೆಲ್ಲಾ ಬೆಳ್ಳನೆಯ ಅಕ್ಕಿ,  ಕುಸಲಕ್ಕಿ , ಸಣ್ಣಕ್ಕಿ, ಸೋನಾ ಮಸ್ಸೂರಿ, ಬಿಟಿ ಅಕ್ಕಿ, ಸ್ಥಳೀಯವಾಗಿ ದೊರೆಯುತ್ತಿರುವ ವೈವಿಧ್ಯಮಯ ಅಕ್ಕಿಯನ್ನು ಸಿರಿವಂತರು ದೂರ ಮಾಡುತ್ತಿದ್ದಾರೆ. ಧನಿಕರಲ್ಲಿ ಬಹುತೇಕ ಮಂದಿಗೆ ಆರೋಗ್ಯವೇ ಚಿಂತೆಗೀಡು ಮಾಡುತ್ತಿದೆ. ಈ ಹಿನ್ನಲೆಯಲ್ಲಿ ಬಹುತೇಕರ ದೃಷ್ಟಿ ಆಹಾರದಿಂದ ಆರೋಗ್ಯವನ್ನು ವೃದ್ಧಿಸಿಕೊಳ್ಳುವುದು ಹೇಗೆ ಎಂಬ ಕಡೆಗೆ ನೆಟ್ಟಿದೆ.






 ಕಿಲೋಗ್ರಾಂಗೆ 250 ರೂಪಾಯಿ ! 
ಇದೀಗ ಕಪ್ಪು ಬಣ್ಣದ ಅಕ್ಕಿಗೂ ಬಂಗಾರದ ಬೆಲೆ ಬಂದಿದೆ. ವೈಶಿಷ್ಟ್ಯಪೂರ್ಣ ಕಪ್ಪು ಅಕ್ಕಿ ಪ್ರತಿ ಕಿಲೋ ಗ್ರಾಂಗೆ 250ಕ್ಕೂ ಅಧಿಕ ! ಅತಿಶಯೋಕ್ತಿಯೇನಲ್ಲ. ಕಪ್ಪಾಗಿ ಕಾಣುವ ಅಕ್ಕಿಗೂ ಆರೋಗ್ಯವರ್ಧನೆಗೆ ಸಹಕಾರಿ ಎಂಬ ಮನೋಭಾವ ನಿಧಾನವಾಗಿ ಹಲವೆಡೆ ನಿಧಾನವಾಗಿ ವ್ಯಾಪಿಸುತ್ತಿದೆ. ಹಲವರು ವಿವಿಧ ತಳಿಯ ಕಪ್ಪು ಭತ್ತವನ್ನು ಬೆಳೆದು ಆರ್ಥಿಕವಾಗಿ ಸಬಲರಾಗುತ್ತಿದ್ದಾರೆ. ಆದರೆ, ಬರ್ಮಾ ಕಪ್ಪು ಭತ್ತಕ್ಕೆ ರಾಜ್ಯದಲ್ಲಿ ಅಷ್ಟೇನೂ ಪ್ರಚಾರ ಸಿಕ್ಕಿಲ್ಲ. ತುಂಗಭದ್ರಾ ನದಿಯ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯ ಬಳ್ಳಾರಿ, ಕೊಪ್ಪಳ, ರಾಯಚೂರು ಜಿಲ್ಲೆಗಳಲ್ಲಿ ಹಿಂದೆ ವ್ಯಾಪಕವಾಗಿ ಸೋನಾ ಮಸ್ಸೂರಿ ಭತ್ತವನ್ನು ಬೆಳೆಯಲಾಗುತ್ತಿತ್ತು. ಕೆಲ ರೈತರು ವಿವಿಧ ಕಾರಣಗಳಿಂದಾಗಿ ಪರ್ಯಾಯ ಬೆಳೆಗಳತ್ತ ವಾಲುತ್ತಿದ್ದಾರೆ. ಇಂತಹ ಪ್ರಯೋಗ ಮಾಡಿ ಯಶಸ್ವಿಯಾದ ರೈತರೋರ್ವರು ಬರ್ಮಾದ ಕಪ್ಪು ಭತ್ತವನ್ನು ಬೆಳೆದು ಇತರರಿಗೆ ಮಾದರಿಯಾಗಿದ್ದಾರೆ. 





ಕ್ವಿಂಟಾಲ್‍ಗೆ 10ಸಾವಿರ ರೂಪಾಯಿ
ವಾಡಿಕೆಯಾಗಿ ಕರಾವಳಿ ಭಾಗಗಳಲ್ಲಿ ಬರ್ಮಾ ಕಪ್ಪು ಭತ್ತವನ್ನು ಬೆಳೆಯಲಾಗುತ್ತದೆ. ಆದರೆ, ಇದೀಗ ಶ್ರಮಜೀವಿಯಾದ ಸಿದ್ರಾಮಗೌಡ ಅವರ ಛಲದ ಫಲವಾಗಿ ಅದನ್ನು ಉತ್ತರ ಕರ್ನಾಟಕದಲ್ಲೂ ನೋಡುವಂತಾಗಿದೆ. 2016ರಲ್ಲಿ ಬೆಂಗಳೂರಿನಲ್ಲಿ ಆಯೋಜನೆಗೊಂಡಿದ್ದ ಕೃಷಿ ಮೇಳದಲ್ಲಿ ಗೌಡರ ಗಮನವನ್ನು ಭತ್ತ ಸೆಳೆದಿತ್ತು. ಈ ಭತ್ತವನ್ನು ಹೆಸರಾಂತ ಕಂಪೆನಿಗಳು ಪ್ರತಿ ಕ್ವಿಂಟಾಲ್‍ಗೆ 10 ಸಾವಿರ ರೂಪಾಯಿಗೆ ಖರೀದಿ ಮಾಡುತ್ತಿವೆ. ಆದರೆ, ಉತ್ತಮ ಗುಣಮಟ್ಟದ ಈ ಭತ್ತ ಬೆಳೆಯಲು ರಾಸಾಯನಿಕ ಗೊಬ್ಬರದ ಬದಲು ಸಾವಯವ ಗೊಬ್ಬರಗಳನ್ನು ಬಳಸಬೇಕಾಗುತ್ತದೆ. ಅದರಂತೆ , ಗೌಡ್ರರೂ ಕೂಡಾ ಎರೆಗೊಬ್ಬರ, ಪಂಚಗವ್ಯ, ಬೇವಿನ ಕಷಾಯ, ಬೇವಿನ ಬೀಜದ ಪುಡಿಗಳನ್ನು ಬಳಸಿ ಅದರಲ್ಲಿ ಯಶಸ್ಸು ಗಳಿಸಿದ್ದಾರೆ.


ಕ್ಯಾನ್ಸರ್ ನಿವಾರಕ ಅಕ್ಕಿ
ಬರ್ಮಾ ಬ್ಲಾಕ್ ಅಕ್ಕಿಯು ಕ್ಯಾನ್ಸರ್ ನಿವಾರಕ, ತೂಕ ಇಳಿಕೆಗೆ ನೆರವು ನೀಡಬಲ್ಲದು. ರಕ್ತದೊತ್ತಡ, ಸಕ್ಕರೆ ಕಾಯಿಲೆ ನಿಯಂತ್ರಣ ಮಾಡುವ ಅಪೂರ್ವ ಶಕ್ತಿಯನ್ನು ಹೊಂದಿದೆ ಎಂದು ಹೇಳಲಾಗುತ್ತಿದೆ. ವಿಟಮಿನ್ “ಬಿ” ಮತ್ತು ಧಾರಾಳ ನಾರಿನಂಶವನ್ನು ಕೂಡಾ ಇದು ಹೊಂದಿದೆ. ಇದರಲ್ಲಿ ಸುಮಾರು 35ಕ್ಕೂ ಅಧಿಕ ತಳಿಗಳಿವೆ. ಸುವಾಸನಾ ಭರಿತ ಅಕ್ಕಿಯನ್ನು ಫಲಾವ್ ಮಾಡಲು ಬಳಸಲಾಗುವುದು.  ಚಿಲ್ಲರೆ ಮಾರುಕಟ್ಟೆಯಲ್ಲಿ ಈ ಅಕ್ಕಿಯ ಬೆಲೆ 300 ರೂಪಾಯಿಗೂ ಅಧಿಕವಿದೆ. ಈ ಗುಣಗಳೇ ಈ ಅಕ್ಕಿ ದುಬಾರಿಯಾಗಲು ಪ್ರಮುಖ ಕಾರಣ.  


ಆನ್‍ಲೈನ್‍ನಲ್ಲಿಯೂ ಈ ಅಕ್ಕಿಯು ಭಾರೀ ಪ್ರಮಾಣದಲ್ಲಿ ಮಾರಾಟವಾಗುತ್ತಿದೆ. ಬೆಲೆ ಸುಮಾರು ಅರ್ಧ ಕಿಲೋ ಗ್ರಾಂಗೆ 195 ರೂಪಾಯಿಗೂ ಹೆಚ್ಚು !




 ಈ ಭತ್ತದ ತಳಿಯನ್ನು ನಮ್ಮ ಜಿಲ್ಲೆಯಲ್ಲಿಯೂ ಯಶಸ್ವಿಯಾಗಿ ಬೆಳೆಸಬಹುದೇ ಎಂಬ ಬಗ್ಗೆ ಆಸಕ್ತ ರೈತಾಪಿ ವರ್ಗದವರು ಪ್ರಯೋಗಶೀಲರಾಗಬೇಕಿದೆ.  ಅದು ಯಶಸ್ವಿಯಾದಲ್ಲಿ ರೈತಾಪಿ ವರ್ಗದವರು ಆರ್ಥಿಕವಾಗಿ ‘ಸಬಲ’ರಾದಂತೆ ಸರಿ. ಹಾಗಾದರೂ, ಪಾಳು ಬಿಟ್ಟ ಗದ್ದೆಗಳಲ್ಲಿ ಮತ್ತೆ ಭತ್ತ ತೆನೆ ಕಾಣಬಹುದೇನೋ ? ಬೀಜದ ಭತ್ತಕ್ಕಾಗಿ “ಕೃಷಿ ಮೇಳ” ಗಳಲ್ಲಿ ಪ್ರಯತ್ನಿಸಬಹುದು. 
   ಬೀಜದ ಭತ್ತವು ಆನ್ ಲೈನ್ ನಲ್ಲಿ ಸಿಗುತ್ತದೆ.

 100 ಮತ್ತು 1000 ಬೀಜಗಳ ಪ್ಯಾಕ್ ಲಭ್ಯವಿದೆ. 


ಮಾಹಿತಿ ಕೃಪೆ – ವಿಜಯವಾಣಿ 


ಶನಿವಾರ, ಮಾರ್ಚ್ 24, 2018

“ ಗೊಬ್ಬರದ” ಮರ Manure Tree........! Gliricidia maculata





 

ಗ್ಲಿರಿಸಿಡಿಯಾ ಎಂಬ “ಗೊಬ್ಬರದ” ಮರ 


     ಬರಹ: ಕೂಡಂಡ ರವಿ., ಹೊದ್ದೂರು. ಕೊಡಗು.



ಇದು ಬಹುವಾರ್ಷಿಕ, ಮಧ್ಯಮ ಗಾತ್ರದ (2-15 ಮೀಟರ್ ) ಎತ್ತರದ ಮರವಾಗಿದೆ. ಇದು ಶುಷ್ಕ ಋತುವಿನಲ್ಲಿ ಹೆಚ್ಚಾಗಿ ಮತ್ತು ಚೆನ್ನಾಗಿಯೂ  ಬೆಳೆಯುತ್ತದೆ. . ಆದರೆ,  ಆರ್ದ್ರ ಪ್ರದೇಶಗಳಲ್ಲಿ ನಿತ್ಯಹರಿದ್ವರ್ಣವಾಗಿ ಉಳಿಯುತ್ತದೆ.
ಗ್ಲಿರಿಸಿಡಿಯಾ ಎಂಬುದು ಪ್ರೋಟೀನ್-ಸಮೃದ್ಧ ಮೇವು ಮತ್ತು ಹೆಚ್ಚಿನ ಪೌಷ್ಟಿಕಾಂಶದ ಮೌಲ್ಯದಿಂದಾಗಿ ಪ್ರಮುಖ ಉಷ್ಣವಲಯದ ಮೇವು ಮರಗಳಲ್ಲಿ ಒಂದಾಗಿದೆ.. ಕತ್ತರಿಸಿದ ದಂಟು ಮತ್ತು ಎಲೆಗಳಿಂದ   ರಾಸುಗಳಿಗೆ ಮೇವು ತಯಾರಿಸಲು ಸಹ ಸಾಧ್ಯವಿದೆ, ಇದನ್ನು ಹುಲ್ಲು ಅಥವಾ ಮೆಕ್ಕೆ ಜೋಳದೊಂದಿಗೆ ಬೆರೆಸಬಹುದು.
ನಾಟಿ ವಿಧಾನ
ಗ್ಲಿರಿಸಿಡಿಯಾವನ್ನು ಬೀಜಗಳು ಅಥವಾ ಕಾಂಡದ ಕತ್ತರಿಸಿದ ಮೂಲಕ ನೆಡಬಹುದು. ಬೀಜಗಳನ್ನು ಬಳಸುವಾಗ, ಬೀಜಗಳನ್ನು ಪಾಲಿ ಚೀಲಗಳಲ್ಲಿ ಹೆಚ್ಚಿಸುವುದು ಉತ್ತಮ. ಬೀಜಗಳನ್ನು  ಬಿತ್ತುವ ಮೊದಲು ರಾತ್ರಿ ಬೀಜಗಳನ್ನು ನೆನೆಸಿ. ಬಹುತೇಕ ಎಲ್ಲಾ ಬೀಜಗಳು ವಾರದಲ್ಲಿ ಮೊಳಕೆಯೊಡೆಯುತ್ತವೆ. 6 ರಿಂದ 8 ವಾರಗಳ ನಂತರ ಸಸ್ಯಕ್ಷೇತ್ರಗಳಲ್ಲಿ ನೆಡಬಹುದು.


ಕಾಂಡದಿಂದ ಸಸ್ಯಾಭಿವೃದ್ಧಿ
ಗ್ಲಿರಿಸಿಡಿಯಾವನ್ನು ಕತ್ತರಿಸಿದಿಂದ ಕಾಂಡದಿಂದ  ಕೂಡಾ ಬೆಳೆಯಬಹುದು. ಕತ್ತರಿಸಿದ  ಕೊಂಬೆಗಳು  7 ಸೆಂಟಿ ಮೀಟರ್  ವ್ಯಾಸದಲ್ಲಿರಬೇಕು, ಅವುಗಳನ್ನು 45 ಡಿಗ್ರಿ ಕೋನದಲ್ಲಿ ವಾರೆಯಾಗಿ,  ತುದಿ ಚೂಪಾಗಿರುವಂತೆ ಕತ್ತರಿಸಬೇಕು.  ತೊಗಟೆ ಕಿತ್ತು ಹೋಗದಂತೆ ಎಚ್ಚರಿಕೆ ವಹಿಸುವುದು ಮುಖ್ಯ. ಬೇರೆ ಮರದ ಹಾರೆಯಂತಹ ಸಾಧನ ಬಳಸಿ ಗುಣಿ ಮಾಡಿ ಅದರಲ್ಲಿ ಈ ಕಾಂಡವನ್ನು ನೆಡಬೇಕು. 2 ಅಡಿಯಿಂದ 5 ಅಡಿ ಅಳತೆಯ ದಪ್ಪನೆಯ ಕಾಂಡವನ್ನು ನಾಟಿಗಾಗಿ ಬಳಸಿ. ಪ್ರತಿ ಕಾಂಡದಿಂದ ಕಾಂಡಕ್ಕೆ 2 ರಿಂದ 5 ಅಡಿಯವರೆಗೂ ನೆಡಬಹುದು. ಇವುಗಳು ಚೆನ್ನಾಗಿ ಚಿಗುರಿದ ಮೇಲೆ ಇದಕ್ಕೆ ತಂತಿಯನ್ನು ಮುಳ್ಳು ತಂತಿ ಸುತ್ತಿ ಬೇಲಿ ನಿರ್ಮಾಣ ಮಾಡಬಹುದು.


ಗಿಡಗಳ ನಾಟಿ
ಬೆಳೆದ ಸಸ್ಯಗಳ  ಕಡ್ಡಿಗಳನ್ನು ನಾಟಿಗಾಗಿ ಬಳಸಬಹುದು. ಆದರೆ, ಈ ಕಡ್ಡಿಗಳು ಚೆನ್ನಾಗಿ ಬಲಿತಿರಬೇಕು. ಮಳೆಗಾಲದ ಆರಂಭದಲ್ಲಿಯೇ ನಾಟಿ ಮಾಡಿ. ಬೀಜಗಳಿಂದಲೂ ಸಸ್ಯಾಭಿವೃದ್ಧಿ ಸಾಧ್ಯವಿದೆ. ಆದರೇ, ಇವು ಬೆಳೆಯಲು ಸಾಕಷ್ಟು ಸಮಯವಕಾಶ ಬೇಕು. ಸಾದ್ಯವಾದಷ್ಟು ಹಸಿರು ಬೇಲಿಗೆ ಇದನ್ನು ಬಳಸಬಹುದು. ಖಾಲಿ ಜಾಗ, ಕಲ್ಲು ಬಂಡಗಳಿರುವ ಪ್ರದೇಶಗಳಲ್ಲಿ , ರಸ್ತೆಯ ಅಂಚಿನಲ್ಲಿಯೂ ಇದನ್ನು ಧಾರಾಳವಾಗಿ ಬೆಳೆಸಬಹುದು..

ಇದು ಬಹಳಷ್ಟು ಹಸಿರು ಸೊಪ್ಪನ್ನು ವೇಗವಾಗಿ ಉತ್ಪಾದಿಸುತ್ತದೆ. ಈ ಎಲೆಯು ಬೇಗನೆ ಕೊಳೆಯುತ್ತದೆ. ಗ್ಲಿರಿಸಿಡಿಯಾ ಎಲೆಗಳ ಅರ್ಧ-ಜೀವಿತಾವಧಿಯು ಸುಮಾರು 20 ದಿನಗಳು. ಸಸ್ಯವನ್ನು ಮಣ್ಣಿನ  ಗುಣಮಟ್ಟದ ಸುಧಾರಣೆಗಾಗಿ ಬೆಳೆಸಬಹುದು. ಇದರಿಂದಾಗಿ ಇದನ್ನು ಹಲವಾರು ಕಡೆಗಳಲ್ಲಿ “ ಗೊಬ್ಬರದ ಮರ” ಬ ಹೆಸರಿನಿಂದ ಕರೆಯಲಾಗುತ್ತದೆ. !



ಆಳವಾದ ಬೇರುಗಳು ಮತ್ತು ತ್ವರಿತ ಬೆಳವಣಿಗೆಯ ಕಾರಣ, ಇದನ್ನು ಗಾಳಿಯ ವೇಗ ತಡೆಗಾಗಿ  ಬಳಸಲಾಗುತ್ತದೆ. ಕಡಿದಾದ ಇಳಿಜಾರುಗಳಲ್ಲಿ ಅದು ಹುಲುಸಾಗಿ ಬೆಳೆಯುತ್ತದೆ . ಗ್ರಿರಿಸಿಡಿಯಾವನ್ನು ಸಾಮಾನ್ಯವಾಗಿ ಕಾಫಿ, ಚಹಾ, ಕೊಕೊ ನೆರಳು ಮರವಾಗಿ ಬಳಸಲಾಗುತ್ತದೆ, ಹಲವಾರು ಕಡೆ ಇದಕ್ಕೆ ಕಾಳು ಮೆಣಸಿನ ಗಿಡಗಳನ್ನು ಹಬ್ಬಲು ಆಶ್ರಯ ಮರವಾಗಿ ಬೆಳೆಲಾಗುತ್ತಿದೆ.  ಇದು ಮಣ್ಣಿನ ತಾಪಮಾನವನ್ನು ಕಡಿಮೆಗೊಳಿಸುತ್ತದೆ

ಮೂಲತಃ ಇದು ಮೆಕ್ಸಿಕೋ ಮತ್ತು ದಕ್ಷಿಣ ಅಮೆರಿಕಾದ ಮರ;  ತೊಗಟೆ ನಯವಾದ ಆದರೆ ಬಿಳಿ ಬೂದು ಬಣ್ಣದಿಂದ ಆಳವಾದ ಕೆಂಪು-ಕಂದು ಬಣ್ಣಕ್ಕೆ ಬದಲಾಗಬಹುದು. ಅಮೆರಿಕದ ವಿವಿಧ ಭಾಗಗಳಲ್ಲಿ, ತೊಗಟೆಯನ್ನು ಇಲಿ ವಿಷವಾಗಿ ಬಳಸಲಾಗುತ್ತದೆ “ ಫ್ಯಾಬೇಸಿಯ” ಕುಟುಂಬಕ್ಕೆ ಸೇರಿದ ಮರವಾಗಿದೆ. ಗ್ಲಿರಿಸಿಡಿಯಾ ಸೆಪಿಯಮ್ ಮಧ್ಯಮ ಗಾತ್ರದ ಮರ.  ಅದು 10 ರಿಂದ 12 ಮೀಟರ್ ಎತ್ತರದಲ್ಲಿ ಬೆಳೆಯುತ್ತದೆ. ತೊಗಟೆ ನಯವಾಗಿರುತ್ತದೆ, ಮತ್ತು ಅದರ ಬಣ್ಣವು ಬಿಳಿ ಬೂದು ಬಣ್ಣದಿಂದ ಆಳವಾದ ಕೆಂಪು-ಕಂದು ಬಣ್ಣದಲ್ಲಿರುತ್ತದೆ. ಇದು 30 ಸೆಂ ಉದ್ದವಿರುವ ಸಂಯುಕ್ತ ಎಲೆಗಳನ್ನು ಹೊಂದಿದೆ. ಕಂದು ಬೀಜಗಳನ್ನು ಉತ್ಪಾದಿಸುತ್ತದೆ.

ಅದರ ಸ್ಥಳೀಯ ವ್ಯಾಪ್ತಿಯ ಜೊತೆಗೆ, ಕೆರಿಬಿಯನ್, ದಕ್ಷಿಣ ಅಮೆರಿಕಾದ ಉತ್ತರ ಭಾಗಗಳು, ಮಧ್ಯ ಆಫ್ರಿಕಾ, ಭಾರತದ ಭಾಗಗಳು, ಮತ್ತು ಆಗ್ನೇಯ ಏಶಿಯಾ ಸೇರಿದಂತೆ ಅನೇಕ ಉಷ್ಣವಲಯದ ಮತ್ತು ಉಪೋಷ್ಣವಲಯದ ಪ್ರದೇಶಗಳಲ್ಲಿ ಇದನ್ನು ಬೆಳೆಸಲಾಗುತ್ತದೆ.

ಮರದ 4.5-6.2  ಪಿ ಹೆಚ್ ಹೊಂದಿರುವ ಆಮ್ಲೀಯ ಮಣ್ಣುಗಳಲ್ಲಿ ಚೆನ್ನಾಗಿ ಬೆಳೆಯುತ್ತದೆ. ಈ ಮರವು ಜ್ವಾಲಾಮುಖಿ ಮಣ್ಣುಗಳನ್ನು ಮಧ್ಯ ಅಮೇರಿಕ ಮತ್ತು ಮೆಕ್ಸಿಕೊದಲ್ಲಿನ ತನ್ನ ಸ್ಥಳೀಯ ವ್ಯಾಪ್ತಿಯಲ್ಲಿ ಕಂಡುಬರುತ್ತದೆ. ಆದಾಗ್ಯೂ, ಇದು ಮರಳು, ಮಣ್ಣಿನ ಮತ್ತು ಸುಣ್ಣದ ಮಣ್ಣುಗಳ ಮೇಲೆ ಸಹ ಬೆಳೆಯುತ್ತದೆ.

ಉಪಯೋಗಗಳು
 ಇಂದು ಇದನ್ನು  ಜೀವಂತ ಬೇಲಿಗಾಗಿ ( ಲೈವ್ ಫೆನ್ಸಿಂಗ್)  ಮೇವು, ಉರುವಲು, ಹಸಿರು ಗೊಬ್ಬರ ಮುಂತಾದವುಗಳಿಗೆ ಬಳಸುವರು. ಮಧ್ಯಕಾಲೀನ ಮತ್ತು ಇಲಿ ವಿಷ ಸೇರಿದಂತೆ ಹಲವು ಇತರ ಉದ್ದೇಶಗಳಿಗೆ ಬಳಸಲಾಗುತ್ತದೆ.   1980ರ ದಶಕದಲ್ಲಿ ಸೈಯೆಸೀಡ್ನಿಂದ ವ್ಯಾಪಕವಾಗಿ ವಿಘಟನೆಯಾಗುವಿಕೆಯ ನಂತರ ಇದರ ಬಳಕೆಯು ಅಪಾರವಾಗಿ ವಿಸ್ತರಿಸಿತು


ಜಾನುವಾರುಗಳ  ಮೇವಾಗಿ ಬಳಕೆ
ಮೇವು ಗ್ಲಿರಿಸಿಡಿಯಾ ಎಲೆಗಳು 25 ರಿಂದ 30% ರಷ್ಟು ಕಚ್ಚಾ ಪ್ರೋಟೀನ್ಗಳನ್ನು ಹೊಂದಿರುತ್ತವೆ. ಎಮ್ಮೆ, ಹಸುಗಳು ಮತ್ತು ಮೇಕೆ ಮುಂತಾದ ಮೆಲುಕು ಹಾಕುವವರಿಗೆ ಹೆಚ್ಚು ಜೀರ್ಣವಾಗಬಲ್ಲವು. ಕೆಲವು ಪ್ರಾಣಿಗಳು ವಾಸನೆಯ ಆಧಾರದ ಮೇಲೆ ಎಲೆಗಳನ್ನು ತಿರಸ್ಕರಿಸುತ್ತವೆ, ಅವುಗಳು ಸಾಮಾನ್ಯವಾಗಿ ರುಚಿ ಇಲ್ಲದೆ ತಿರಸ್ಕರಿಸುವುದುಂಟು.  ಅಂತಹ ಸಂದರ್ಭಗಳಲ್ಲಿ ಗ್ಲಿರಿಸಿಡಿಯಾದ ಸಣ್ಣ ಭಾಗಗಳನ್ನು ಇತರ ಮೇವುಗಳೊಂದಿಗೆ ಮಿಶ್ರಣ ಮಾಡಿ ಮತ್ತು ಉಪ್ಪು ಮತ್ತು ಬೆಲ್ಲವನ್ನು ಸೇರಿಸಿ ಕೊಡಲು ಪ್ರಯತ್ನಿಸಬಹುದು.  ಇದನ್ನು ಜಾನುವಾರು, ಕುರಿ ಮತ್ತು ಮೇಕೆಗಳಿಗೆ ಕತ್ತರಿಸಿ ಮೇವುಗಳ ಜೊತೆ ಮಿಶ್ರಣ ಮಾಡಿ ಬಳಸಲೂಬಹುದು..  ಹವಾಗುಣವನ್ನು ಅವಲಂಬಿಸಿ ಪ್ರತಿ 2 ರಿಂದ 4 ತಿಂಗಳುಗಳಲ್ಲಿ ಎಲೆಗಳನ್ನು ಕತ್ತರಿಸಿ ಬಳಸಬಹುದು.   
ರಾಸಾಯನಿಕ ಗೊಬ್ಬರಕ್ಕೆ ಬದಲಿ
ಈ ಮರಗಳನ್ನು ಭಾಗದಲ್ಲಿ ಅಂತರ್ ಬೆಳೆಗೆ ಬಳಸಲಾಗುತ್ತದೆ ಏಕೆಂದರೆ ಅವು ಮಣ್ಣಿನಲ್ಲಿ ಸಾರಜನಕವನ್ನು ಸರಿಪಡಿಸಿ ಕಡಿಮೆ ಮಣ್ಣಿನ ಫಲವತ್ತತೆಯನ್ನು ಸಹಿಸಿಕೊಳ್ಳುತ್ತವೆ, ಆದ್ದರಿಂದ ಅವು ಬೆಳೆಗಳೊಂದಿಗೆ ಅಂತರ್ಗತವಾಗಿರುತ್ತದೆಯಾದ್ದರಿಂದ ರಾಸಾಯನಿಕ ರಸಗೊಬ್ಬರಗಳ ಅಗತ್ಯವಿಲ್ಲದೆ ಬೆಳೆ ಇಳುವರಿಯನ್ನು ಗಣನೀಯವಾಗಿ ಹೆಚ್ಚಿಸಬಹುದು.

ಮಣ್ಣಿನ ಮೇಲ್ಮೈನ ಸವೆತವನ್ನು ತಡೆಗಟ್ಟಲು ಇದನ್ನು ಬೆಳೆಸಲಾಗುತ್ತದೆ.  ಕೃಷಿಯನ್ನು ರಕ್ಷಿಸಲು ಸಾಂಪ್ರದಾಯಿಕ ಲೈವ್ ಫೆನ್ಸಿಂಗ್ಗಾಗಿ ಬಳಸಲಾಗುವ ಅತ್ಯುತ್ತಮ ಸಸ್ಯಗಳಲ್ಲಿ ಇದೂ ಒಂದಾಗಿದೆ. ಹಲವರು ಇದರೊಂದಿಗೆ ಆಡುಸೋಗೆಯನ್ನು ಬೇಲಿಗಾಗಿ ಬೆಳೆಸುವರು.  


ಮಣ್ಣು ಮತ್ತು ವಾತಾವರಣದ ಸವಲತ್ತು
ಇದು  ವಿವಿಧ ಮಣ್ಣಿನ ಮತ್ತು ಹವಾಮಾನ ಪರಿಸ್ಥಿತಿಗಳು ಸಹಿಸಿಕೊಳ್ಳುತ್ತದೆ. ವಾರ್ಷಿಕ ಮಳೆ 900 ಮಿಲಿಮೀಟರ್  ಮೀರಿದ ಪ್ರದೇಶಗಳಲ್ಲಿ ಬೆಳವಣಿಗೆಯು ಹೆಚ್ಚು ವೇಗವಾಗಿರುತ್ತದೆ, ಆದರೆ ವಾರ್ಷಿಕವಾಗಿ 400 ಮಿಲಿ ಮೀಟರ್ ಮಳೆ ಬೀಳುವ ಕಡೆ ಇದರ ಬೆಳವಣಿಗೆ ಕೊಂಚ ನಿಧಾನ.
ಗ್ಲಿರಿಸಿಡಿಯಾ ಮಣ್ಣಿನ ಸವೆತ ಮತ್ತು ನೀರಿನ  ಓಡುವಿಕೆಯನ್ನು ನಿಲ್ಲಿಸುತ್ತದೆ. ಇದು ದ್ವಿದಳ  ಸಸ್ಯ - ಇದು ಸಾರಜನಕ ಉತ್ಪಾದಿಸುತ್ತದೆ ಮತ್ತು ಮಣ್ಣಿನ ಸಮೃದ್ಧಗೊಳಿಸುತ್ತದೆ ಮತ್ತು ಇದರಿಂದಾಗಿ ಇತರ ಬೆಳೆಗಳ ಉತ್ಪಾದಕತೆಯನ್ನು ಹೆಚ್ಚಿಸುತ್ತದೆ.

ಇತರ ಉದ್ದೇಶಗಳು
ಗ್ಲಿಸಿರಿಡಿಯಾವನ್ನು ಹಸಿರು ಗೊಬ್ಬರವಾಗಿ ಬಳಸಬಹುದು. ಒಂದು ಎಕರೆಯ ಬೇಲಿಯಲ್ಲಿ ಬೆಳೆದರೆ, 2 ಎಕರೆ ಭೂಮಿಗೆ ಬೇಕಾದಷ್ಟು ಹಸಿರು ಎಲೆಗೊಬ್ಬರವನ್ನು ಪೂರೈಸುತ್ತದೆ. ಇದನ್ನು ಎರೆಹುಳದ ಗೊಬ್ಬರ ತಯಾರಿಕೆಗಾಗಿಯೂ ಸಹ ಬಳಸಬಹುದು. ಹೆಚ್ಚಿನ ಪ್ರೋಟೀನ್ ಅಂಶದ ಕಾರಣ ಗ್ಲಿರಿಸಿಡಿಯಾವನ್ನು ಪೂರಕ ಮೇವಾಗಿ ಬಳಸಿದಾಗ  ಹಾಲು ಮತ್ತು ಮಾಂಸ ಉತ್ಪಾದನೆಯು ಹೆಚ್ಚಿದ ಬಗ್ಗೆ ವೈಜ್ಞಾನಿಕ ಸಂಶೋಧನೆಗಳು ಸಾರಿ ಹೇಳಿವೆ.  









ಶುಕ್ರವಾರ, ಮಾರ್ಚ್ 23, 2018

                          ಕಾಳು ಮೆಣಸು - ಪೊದೆ ಸಸಿಗಳ ಅಭಿವೃದ್ಧಿ 

                          Bush Pepper Plants- Produce 





                                       ಬರಹ : ಕೂಡಂಡ ರವಿ, ಹೊದ್ದೂರು. ಕೊಡಗು 








ಇತ್ತೀಚೆಗೆ ಹೆಚ್ಚು ಜನಪ್ರಿಯ ಗೊಳ್ಳುತ್ತಿರುವ ಕಾಳುಮೆಣಸು ಕೃಷಿ ಪದ್ಧತಿ. ಪಟ್ಟಣ - ನಗರ ಪ್ರದೇಶಗಳ ಆಸಕ್ತರು ಅಲಂಕಾರಕ್ಕಾಗಿ ಇದನ್ನು ಬೆಳೆಸುವತ್ತ ಆಕರ್ಷಿತರಾಗುತ್ತಿದ್ದಾರೆ. ಇದು ಮನಕ್ಕೆ ಮುದ ನೀಡುವ ಹವ್ಯಾಸವಾಗಿದ್ದು, ಮನೆಯ ಬಳಕೆಗಲ್ಲದೆ, ಗೃಹಿಣಿಯರ  ಮೇಲುಸಂಪಾದನೆಯ ಅತ್ಯತ್ತಮ ಮಾರ್ಗಗಳಲ್ಲಿ ಒಂದಾಗಿದೆ. 

ಇವುಗಳನ್ನು ಮನೆಯ ಆವರಣ, ಹಿತ್ತಲುವಿನಲ್ಲಿ , ಕುಂಡಗಳಲ್ಲಿ, ನೆಲದಲ್ಲಿಯೂ ಸಹಾ ಬೆಳೆಸಬಹುದಾಗಿದೆ. ಇದಕ್ಕೆ ಆಶ್ರಮ ಮರ ಬೇಕೆಂದೇನೂ ಇಲ್ಲ. ಆದರೆ, ಬಯಲು ಪ್ರದೇಶಗಳಲ್ಲಿ ನೆಟ್ಟ ಸಸಿಗಳು ಅಧಿಕ ಇಳುವರಿ ನೀಡಬಲ್ಲವು.







ಸಸಿಗಳ ಉತ್ಪಾದನೆ

ಇತರ ಕಾಳು ಮೆಣಸಿನ ಬಳ್ಳಿಗಳಂತೆ ಈ ಸಸಿಗಳನ್ನು ಧಾರಾಳವಾಗಿ ಸಸ್ಯಾಭಿವೃದ್ಧಿ ಮಾಡಬಹುದು. ಇದರಲ್ಲಿನ ಪ್ರಮುಖ ಮತ್ತು ಏಕೈಕ ವ್ಯತ್ಯಾಸವೆಂದರೆ, ಮರಗಳ ಮೇಲೆ ಹಬ್ಬಿದ , ಹಿಂದಿನ ವರ್ಷ ಫಸಲು ಕೊಯ್ಲು ಮಾಡಿದ ಕವಲು ಬಳ್ಳಿಗಳನ್ನು ಸಸಿಗಳ ಉತ್ಪಾದನೆಗಾಗಿ ಬಳಸಲಾಗುತ್ತದೆ.   ಸಾಮಾಜಿಕ ಮಾಧ್ಯಮಗಳಲ್ಲಿ ಇತ್ತೀಚೆಗೆ ಪೊದೆ ಕಾಳು ಮೆಣಸಿನ ಬಳ್ಳಿಗಳ ಉತ್ಪಾದನೆ ಬಗ್ಗೆ ಹಲವಾರು ಕುತೂಹಲದಿಂದ ಪ್ರಶ್ನಿಸಿದ್ದರು
. 
ಇದರಿಂದಾಗಿ ಈ ಬರಹವನ್ನು ಬರೆಯಬೇಕಾಯಿತು.   

.            ಹೆಚ್ಚಿನ ವಿವರಗಳು ನನ್ನ ಬ್ಲಾಗ್ನಲ್ಲಿವೆ. ಕಾಳು ಮೆಣಸಿನ ಸಸ್ಯಾಭಿವೃದ್ಧಿಯ ಬಗ್ಗೆ ವಿವರಗಳಿವೆ. ಓದಿ. 


Our Water is Our's........... ನಮ್ಮ ನೀರಿದು ನಮ್ಮದು ....!

                          ನಮ್ಮ ನೀರಿದು ನಮ್ಮದು ....!  Our Water !



                             ಬರಹ: ಕೂಡಂಡ ರವಿ, ಹೊದ್ದೂರು. 









ಮಳೆಯ ಬಗ್ಗೆ ವಿಚಾರ ವಿನಿಮಯ – ಚರ್ಚೆಯು ಬಂದಾಗ ಬಹುತೇಕ ಮಂದಿ  ಮಳೆ ಕಡಿಮೆಯಾಗುತ್ತಿದೆ, ಕಡಿಮೆಯಾಗಿದೆ ಎಂಬ ಉದ್ಘಾರ ತೆಗೆಯುವುದು ನಮ್ಮ-ನಿಮ್ಮ ಅನುಭವಗಳಿಗೆ ಬಂದ ವಿಚಾರ. 
ಆದರೆ, ಅದಂತೂ ಪೂರ್ಣ ಸತ್ಯವಲ್ಲ ? ನೂರಾರು ವರ್ಷಗಳ ಮಳೆಯ ಲೆಕ್ಕಾಚಾರವನ್ನು ಪರಿಗಣನೆಗೆ ತೆಗೆದುಕೊಂಡಾಗ ಸರಿಸುಮಾರು 60 ವರ್ಷಗಳಲ್ಲಿ ಸರಾಸರಿ ಮಳೆ ಬರಬಹುದು. ಉಳಿದ 40 ವರ್ಷಗಳಲ್ಲಿ ಕೊಂಚ ಇಲ್ಲವೇ ಅಧಿಕ ಏರಿಳಿತಗಳು ಕಾಣಬಹುದಾಗಿದೆ. 

ವೈಜ್ಞಾನಿಕ ಸಂರಕ್ಷಣೆ 

ಚಿತ್ರದುರ್ಗವು ಅತ್ಯಂತ ಕಡಿಮೆ ಮಳೆ ಬೀಳುವ ಪ್ರದೇಶಗಳಲ್ಲೊಂದು. ಅಲ್ಲಿ ವಾರ್ಷಿಕ ಸುಮಾರು 500 ಮಿಲಿ ಮೀಟರ್ ಮಳೆಯಾಗಬಹುದು. ಇಲ್ಲಿಗೆ ಬೀಳುವ ಮಳೆಯ ನೀರನ್ನು ವೈಜ್ಞಾನಿಕವಾಗಿ ಸಂರಕ್ಷಣೆ ಮಾಡಬಹುದು. ಇದರಿಂದಾಗಿ ಆಯಾ ಪ್ರದೇಶದ ಜನತೆಗೆ ಕುಡಿಯುವ ನೀರಿಗೆ ಕೊರತೆ ಕಾಣಿಸದು. ಈ ಪ್ರದೇಶಗಳ  30 ರ 40 ಮನೆಯ ನಿವೇಶನದಲ್ಲಿ ವಾರ್ಷಿಕ ಸುಮಾರು 60 ಸಾವಿರ ಲೀಟರ್ ಮಳೆ ನೀರು ಸಂಗ್ರಹಿಸಬಹುದು. ಚಿತ್ರದುರ್ಗ ಜಿಲ್ಲೆಯ ಒಂದು ಸಾವಿರ ಮನೆಗಳಲ್ಲಿ ಮಳೆಯ ನೀರನ್ನೇ ಕುಡಿಯಲು ಬಳಸಲಾಗುತ್ತಿದೆ. ಇದು ಕಲೆದ 20 ವರ್ಷಗಳಿಂದ ನಿರಂತರವಾಗಿ ಜಾರಿಯಲ್ಲಿದೆ.  ಆ ಪ್ರದೇಶದ ಒಂದು ಏಕರೆ ಕೃಷಿ ಭೂಮಿಯಲ್ಲಿ ವಾರ್ಷಿಕ 20 ಲಕ್ಷ ಲೀಟರ್ ನೀರು ಸಂಗ್ರಹ ಸಾಧ್ಯ. ಕೃಷಿ ಹೊಂಡ ನಿರ್ಮಾಣ ಮಾಡಿ, ನೀರನ್ನು ಆ ಹೊಂಡಗಳಲ್ಲಿ ಸಂಗ್ರಹಿಸಬಹುದು. ಹೆಚ್ಚುವರಿ ನೀರನ್ನು ಕೊಳವೆ  ಮತ್ತು ತೆರೆದ ಬಾವಿಗಳಿಗೆ ಮರು ಪೂರಣ ಮಾಡಲಾಗುತ್ತದೆ. 








ಇಸ್ರೇಲ್ ಅನ್ನು ಮೀರಿಸಿ

ನಾವು ಮಳೆಯ ನೀರನ್ನು ಅತ್ಯಂತ ಸಮರ್ಪಕವಾಗಿ ಬಳಸಿಕೊಂಡಲ್ಲಿ ಇಸ್ರೇಲ್ ಅನ್ನು ಮೀರಿಸಬಹುದಾಗಿದೆ. ಆ ದೇಶದಲ್ಲಿ ವಾರ್ಷೀಕ ಸರಾಸರಿ 100 ರಿಂದ 150 ಮಿಲಿ ಮೀಟರ್ ಮಳೆ ಮಾತ್ರ ಬೀಳುತ್ತದೆ. ನಮ್ಮಲ್ಲಿ ಅದಕ್ಕೂ ಎಷ್ಟೋ ಪಾಲು ಹೆಚ್ಚು ಬೀಳುತ್ತದೆ. ನಾವು ಮಳೆಯ ನೀರನ್ನೇ ನಂಬಿ ಕಡಿಮೆ ಬೀಳುವ ಪ್ರದೇಶಗಳಲ್ಲಿಯೂ ಸಮೃದ್ಧ ಕೃಷಿ ಮಾಡಬಹುದು. ಆದರೆ, ಇದಕ್ಕೆ ಪೂರ್ವ ಭಾವಿಯಾಗಿ ರೈತಾಪಿ ವರ್ಗದವರು ನಮ್ಮ ವಾತಾವರಣ, ಮಿತ ನೀರು ಬಳಕೆಯ ವಾತಾವರಣಕ್ಕೆ ತಕ್ಕ  ಬೆಳೆಗಳನ್ನು ಆರಿಸಿಕೊಳ್ಳಬೇಕು. ನೀರನ್ನು ಭೂಮಿಯ ಮೇಲೆ ಹರಿಸುವುದನ್ನು ಬಿಟ್ಟು ಹನಿ ನೀರಾವರಿಯನ್ನು ಕಡ್ಡಾಯವಾಗಿ ಅಳವಡಿಸಬೇಕು. ಈ ವಿಧಾನವನ್ನು ಪ್ರಗತಿ ಪರ ರೈತರು ಅಳವಡಿಸಿ, ಇತರರಿಗೂ ಮಾದರಿಯಾಗಬೇಕಿದೆ. 

ನಮ್ಮ ನೀರಿದು ನಮ್ಮದು !

 ಆಮೀನಿಗೆ ಬೀಳುವ ಮಳೆಯ ನೀರನ್ನು ಸಾಧ್ಯವಾದಷ್ಟು ಮಟ್ಟಿಗೆ ಇಂಗಿಸಲು ಪ್ರಯತ್ನಿಸಬೇಕು. ಓಡುವ ನೀರನ್ನು ನಡೆಯುವಂತೆ, ನಡೆಯುವ ನೀರನ್ನು ಇಂಗಿಸುವ ವ್ಯವಸ್ಥೆ ಮಾಡಿಕೊಳ್ಳಬೇಕು. ಸಾಧ್ಯವಾದೆಡೆಗಳಲ್ಲಿ ಚೆಕ್ ಡ್ಯಾಂ ನಿರ್ಮಿಸಬೇಕು. ಇಳಿಜಾರಿಗೆ ಅಡ್ಡಲಾಗಿ ಮಾಗಿ ಉಳುಮೆ ಮಾಡೆಬೇಕು. ನಮ್ಮ ಜಮೀನಿನ ನೀರನ್ನು ಹೊರ ಹರಿಯಲು ಬಿಡಬಾರದು. ಇದರ ಪರಿಣಾಮ ಸುಸ್ಥಿರ ಕೃಷಿ ಮಾಡಲು ಸಾಧ್ಯ. 







 ಮಲ್ಲೇಶಪ್ಪ ಎಂಬ ಸಾಹಸಿ

ಚಿತ್ರದುರ್ಗದ ಸಮೀಪವಿರುವ ಹುಣಸೇಕಟ್ಟೆಯ ರೈತ ಅಡಿಕೆ ಬೆಳೆಗಾರರು. ಬೋರ್ವೆಲ್ ನೀರಿನಲ್ಲಿ ಅಡಿಕೆ ಬೆಳೆಯುತ್ತಿದ್ದರು. 2001ರಲ್ಲಿ ಕಾಣಿಸಿಕೊಂಡ ಭೀಕರ ಬರಗಾಲ ಅವರ ಬೋರ್ವೆಲ್ ಅನ್ನು ಸಂಪೂರ್ಣ ಒಣಗಿಸಿ ಬಿಟ್ಟಿತು !
 ಹಲವಾರು ನೀರು ಹುಡುಕುವ ಮಂದಿ ಸಾಲು ಸಾಲಾಗಿ ಬಂದರು.  ಜಮೀನಿನಲ್ಲಿ ಅಲೆದರು. ಅವರು ಹೇಳಿದ ಕಡೆಗಳಲ್ಲಿ ಮಲ್ಲೇಶಪ್ಪ ಸತತವಾಗಿ ಏಳು ಬೋರ್‍ವೆಲ್‍ಗಳನ್ನು ಕೊರೆಸಿದರು. ಆದರೆ, ಎಲ್ಲೂ ಗಂಗಾದೇವಿ ದರ್ಶನ ನೀಡಲೇ ಇಲ್ಲ. !
ಅಂತಿಮ ಪ್ರಯತ್ನವೇನೋ ಎಂಬಂತೆ ಕೊರೆದ ಎಲ್ಲಾ ಎಂಟು ಬೋರ್ ವೆಲ್ ಗಳಿಗೂ ಮಳೆಕೊಯ್ಲ ಮೂಲಕ ಜಲ ಮರುಪೂರಣ ವ್ಯವಸ್ಥೆ ಮಾಡಿದರು.ಅವರ ಪ್ರಯತ್ನ ಫಲಿಸಿತು. ಹಲವಾರು ಬೋರ್‍ವೆಲ್‍ಗಳಲ್ಲಿ ನೀರು ಕಾಣಿಸಿಕೊಂಡಿತು. ಹನಿ ನೀರಾವರಿ ಮೂಲಕ ಮೂರು ಏಕರೆ ಪ್ರದೇಶಗಳಲ್ಲಿ ಈಗ 20ಕ್ಕೂ ಅಧಿಕ ಬಗೆಯ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಮಳೆಕೊಯ್ಲಿನ ಪ್ರತಿಫಲವಾಗಿ ಇಂದು ಕೊಳವೆ ಬಾವಿಯಲ್ಲಿ 2 ಇಂಚು ನೀರು ನಿರಂತರವಾಗಿ ದೊರೆಯುತ್ತಿದೆ. ಹೈನುಗಾರಿಕೆ, ಜೇನು ಸಾಕಾಣೆಯನ್ನೂ ಮಾಡುತ್ತಿದ್ದಾರೆ. ಅವರ ನಿರಂತರ ಶ್ರಮಕ್ಕೆ “ಕೃಷಿ ಪಂಡಿತ“ ಪ್ರಶಸ್ತಿಯೂ ಅವರಿಗೆ ದೊರೆತಿದೆ.



 ಕೊನೆ ಹನಿ : ನಾವು ಈ ರೀತಿ ನೀರನ್ನು ಗೆಲ್ಲಬೇಕು. ಹಾಗಾದಲ್ಲಿ ಮಾತ್ರ ರೈತ ಗೆಲ್ಲಲು ಸಾಧ್ಯ . ಚಿತ್ರದುರ್ಗ ಜಿಲ್ಲೆಯಲ್ಲಿ 3 ತಿಂಗಳ ಸಮಯದಲ್ಲಿ 5 ಸಾವಿರ ಬೋರ್‍ವೆಲ್‍ಗಳಿಗೆ ಈ ಹಿಂದೆ ಮರುಪೂರಣ ವ್ಯವಸ್ಥೆ ಮಾಡಲಾಗಿದೆ. ಅವರ ಈ ಸಾಧನೆಗಾಗಿ ಕೇಂದ್ರ ಸರಕಾರದ ಪ್ರಶಸ್ತಿಯೂ ಲಭಿಸಿದೆ.





ಪೂರಕ ಮಾಹಿತಿ: ಎಂ. ದೇವರಾಜ ರೆಡ್ಡಿ, ಜಲತಜ್ಞ, ಚಿತ್ರದುರ್ಗ. ಮೊಬೈಲ್: 9448125498






ಸೋಮವಾರ, ಮಾರ್ಚ್ 12, 2018

ಅಧುನಿಕ ತಂತ್ರಜ್ಞಾನ 


                         ಕನ್ನಡದಲ್ಲಿ ಕೇಳುವ ಪುಸ್ತಕಗಳು ...!?


                                    ಬರಹ: ಕೂಡಂಡ ರವಿ,  ಕೊಡಗು.





ಬದಲಾವಣೆಯ ಕಾಲಘಟ್ಟದಲ್ಲಿ ಎಲ್ಲವೂ ವೇಗವಾಗಿ ಬದಲಾಗುತ್ತಿದೆ. ಇದಕ್ಕೆ ಯುಗವರ್ಗ ಹೆಚ್ಚಾಗಿ ಅಂಟಿಕೊಂಡಿದ್ದರೂ, ಇತರರು ಭಿನ್ನವಾಗಿಯೇನೂ ಇಲ್ಲ.  ಹಿರಿಯರೂ ಅಧುನಿಕತೆಯಲ್ಲಿ ಯುವವರ್ಗದವರೊಂದಿಗೆ ಸ್ಪರ್ಧೆಗೆ ಇಳಿದಿರುವುದು ಉತ್ತಮ ಬೆಳವಣಿಗೆ. ಇವರನ್ನು ದೃಷ್ಟಿಯಲ್ಲಿಟ್ಟುಕೊಂಡು ವಿವಿಧ ಭಾಷಾ ಪುಸ್ತಕಗಳು, ಸಾಹಿತ್ಯವು ಆಡಿಯೋ ರೂಪಕ್ಕೆ ಪರಿವರ್ತಿತವಾಗುತ್ತಿವೆ. ಇದರಂತೆ,  ಕನ್ನಡದ ಜನಪ್ರಿಯ ಸಾಹಿತಿಗಳು ಬರೆದ ಪುಸ್ತಕಗಳು ಸಿಡಿ ರೂಪದಲ್ಲಿ ಲಭ್ಯವಿದೆ. ಪುಸ್ತಕವನ್ನು ಓದುವ ಕಾಲ ನಿಧಾನವಾಗಿ ಮರೆಯಾಗುತ್ತಿದೆ. ಅಥವಾ ಆ ದಿಶೆಯಲ್ಲಿ ಸಾಗುವ ಸಮಯ ಸನ್ನಿಹಿತವಾಗುತ್ತಿದೆ.   ಬಹುತೇಕ ಮಂದಿಯ ಬಳಿ ಮೊಬೈಲ್ ಫೋನ್ ಇರುವುದರಿಂದ ಇವುಗಳನ್ನು ಜನತೆ ಸುಲಭವಾಗಿ ಕೇಳುತ್ತಾ ಸಾಗಬಹುದು.  ಬಸ್, ಕಾರು, ರೈಲುಗಳಲ್ಲಿ ಪ್ರಯಾಣ ಮಾಡುವ ಸಮಯ, ವ್ಯರ್ಥವಾಗಿ ಸರಿದು ಹೋಗಬಹುದಾದ ಸಮಯವನ್ನು ಸದ್ಭಳಕೆ ಮಾಡಲು ಇದು ಅತ್ಯುತ್ತಮ ಮಾರ್ಗ.


ಜ್ಞಾನಭಂಡಾರದ ವಿಸ್ತರಣೆ

 ಪುಸ್ತಕ ಓದುಗರನ್ನು ಮೀರಿ, ಕೇಳುಗರಿಗೂ ಸಾಹಿತ್ಯ ಸಂಪದ್ಭರಿತವಾದ ಪುಸ್ತಕಗಳು ತಲುಪಬೇಕು ಎಂಬ ಹೊಸ ಪರಿಕಲ್ಪನೆಯಿಂದ ಆಡಿಯೋ ಪುಸ್ತಕಗಳನ್ನು ಬುಕ್‍ಸ್ಟಕ್ ಹೊರತಂದಿದೆ. ಕಾಲದ ವೇಗದೊಂದಿಗೆ ಜನರೂ ಇಂದಿನ ದಿನಗಳಲ್ಲಿ ಓಡುತ್ತಿರಲೇಬೇಕಾಗಿದೆ. ಪರಿಸ್ಥಿತಿ ಹೀಗಿರಬೇಕಾದರೆ ಕನ್ನಡ ಪುಸ್ತಕಗಳನ್ನು ಓದಬೇಕೆಂದರೂ,  ಓದಲು ಸಮಯವಾದರೂ ಎಲ್ಲಿ ? ಓದಲು ಅಂತಹ ಆಸಕ್ತಿ ಇಲ್ಲದವರು ಕೂಡ ಪುಸ್ತಕಗಳತ್ತ ಆಕರ್ಷಿಸುವ ಉದ್ದೇಶದಿಂದ ಕನ್ನಡದ ಪ್ರಖ್ಯಾತ ಲೇಖಕರ ಪುಸ್ತಕಗಳನ್ನು ಬುಕ್‍ಸ್ಟಕ್ ಆಡಿಯೋ ರೂಪದಲ್ಲಿ ತಂದಿದೆ. ಇದರಲ್ಲಿ ಶೋತೃಗಳು ಹತ್ತಾರು, ನೂರಾರು, ಸಹಸ್ರಾರು ಬಗೆಯ ಬೇರೆ ಬೇರೆ ಭಾಷೆಗಳ ಪುಸ್ತಕಗಳನ್ನು ಕೇಳಿ ತಮ್ಮ ಜ್ಞಾನಭಂಡಾರವನ್ನು  ಮತ್ತಷ್ಟು ವಿಸ್ತರಿಸಿ ಕೊಳ್ಳಬಹುದಾಗಿದೆ.

ಆನ್‍ಲೈನ್‍ನಲ್ಲಿ ಕನ್ನಡದ ಪುಸ್ತಕಗಳು 

ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ಅವರ ಸಣ್ಣಕಥೆ ಕೇಳಬೇಕೆ? ಡಾ. ಯು.ಆರ್. ಅನಂತಮೂರ್ತಿ ಅವರ ಸಂಸ್ಕಾರ ಪುಸ್ತಕದಲ್ಲೇನಿದೆ ತಿಳಿಯಬೇಕೆ ?  ಡಾ. ಎಸ್.ಎಲ್. ಭೈರಪ್ಪ ಅವರ ಕಾದಂಬರಿಯನ್ನು ತಿಳಿಯಬೇಕೆ? ಡಾ. ಚಂದ್ರಶೇಖರ ಕಂಬಾರರ ಸಿಂಗಾರೆವ್ವ , ಸುಧಾಮೂರ್ತಿ ಅವರ ಮನದ ಮಾತು ಪುಸ್ತಕ ಓದಿಲ್ಲವೆ? ಚಿಂತಿಸಬೇಡಿ. ಅವೆಲ್ಲವೂ ಆಡಿಯೋ ರೂಪದಲ್ಲಿ ಬುಕ್‍ಸ್ಟಕ್ ವೆಬ್‍ಸೈಟಿನಲ್ಲಿ ಕೈಗೆಟುಕುವ ಬೆಲೆಗೆ ಲಭ್ಯವಿವೆ. ಈ ಪುಸ್ತಕಗಳೆಲ್ಲವನ್ನು ರಂಗಕರ್ಮಿಗಳಾದ ಸಿ.ಆರ್.ಸಿಂಹ, ಋತ್ವಿಕ್‍ಸಿಂಹ, ಲಕ್ಷ್ಮೀ ಚಂದ್ರಶೇಖರ್ ಮುಂತಾದವರು ತಮ್ಮ ಅತ್ಯದ್ಭುತ ಕಂಠಸಿರಿಯೊಂದಿಗೆ ನಿರೂಪಣೆ ಮಾಡಿದ್ದಾರೆ. 2009ರ ನವೆಂಬರ್‍ನಲ್ಲಿ ಜೈ ಜೆಂಡೆ ಮತ್ತು ಜಯಶ್ರೀ ಮಂತ್ರಿ ಈಶ್ವರನ್  ಜಂಟಿಯಾಗಿ ಬೆಂಗಳೂರಿನಲ್ಲಿ ಬುಕ್‍ಸ್ಟಕ್ ಆರಂಭಿಸಿದರು. ಆಡಿಯೋ ಪುಸ್ತಕಗಳು ಅತೀ ವಿರಳವಾಗಿರುವುದೇ  ಈ ಸಾಹಸಕ್ಕೆ ಪ್ರೇರಣೆ. ಆಡಿಯೋ ಪುಸ್ತಕಗಳ ಮುಖಾಂತರ ಇನ್ನೂ ಹೆಚ್ಚಿನ ಕನ್ನಡಿಗರನ್ನು ತಲುಪುವುದು ಅಥವಾ ಕನ್ನಡ ಸಾಹಿತ್ಯವನ್ನು ಹೆಚ್ಚೆಚ್ಚು ಕನ್ನಡಿಗರಿಗೆ ತಲುಪಿಸುವುದು ಅವರ ಈ ಸಾಹಸದ ಹಿಂದಿನ ಮುಖ್ಯ ಉದ್ದೇಶ. ಆಡಿಯೋ ಪುಸ್ತಕಗಳಿಂದ ದೃಷ್ಟಿಹೀನರಿಗೆ, ಬೇರೆ ಬೇರೆ ಭಾಷೆಗಳ ಜ್ಞಾನವಿದ್ದೂ, ಕೇಳಿಸಿಕೊಳ್ಳಬಲ್ಲವರಿಗೆ ಇದು ವರದಾನವಾಗಲಿದೆ. ಕನ್ನಡದ ಅನೇಕ ಶ್ರೇಷ್ಠ ಸಾಹಿತ್ಯಗಳು, ಆಡಿಯೋ ಪುಸ್ತಕಗಳ ಮುಖಾಂತರ ಆಸಕ್ತರಿಗೆ ತಲುಪುತ್ತಿವೆ. ಅನಿವಾಸಿ ಭಾರತೀಯರಿಂದ ಕೂಡ ಆಡಿಯೋ ಪುಸ್ತಕಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಪ್ರತಿದಿನವೂ ಈ ಪಟ್ಟಿಗೆ ಹತ್ತಾರು ಪುಸ್ತಕಗಳು ಸೇರ್ಪಡೆಯಾಗುತ್ತಿವೆ. ಯೂ ಟ್ಯೂಬ್‍ನಲ್ಲಿಯೂ ಹಲವಾರು ಭಾಷೆಗಳ ಆಡಿಯೋ ಪುಸ್ತಕಗಳು ಲಭ್ಯವಿವೆ.

ಅನಕ್ಷರಸ್ಥರಿಗೂ ಪ್ರಯೋಜನಕಾರಿ 

ನಿಮಗೆ ಲಿಪಿ ತಿಳಿಯದೇ ಕೇವಲ ಭಾಷೆ ಅರ್ಥವಾಗುವಂತಿದ್ದರೆ, ಅನ್ಯ ಭಾಷೆಯ ಸಾಹಿತ್ಯದ ಜನಪ್ರಿಯ ಕೃತಿಗಳನ್ನು ಸಲೀಸಾಗಿ ಕೇಳಬಹುದು. ಉದಾಹರಣೆಗೆ ಕೊಡಗಿನ ಜನತೆಯಲ್ಲಿ ಬಹುಸಂಖ್ಯಾತರಿಗೆ ಮಲೆಯಾಳಂ, ತುಳು, ಬ್ಯಾರಿ, ತಮಿಳು, ತೆಲುಗು, ಮರಾಠಿ, ಕೊಂಕಣಿ, ಮರಾಠಿ, ಬಾಂಗ್ಲಾ, ಹಿಂದಿ, ಇಂಗ್ಲೀಷ್ .... ಸೇರಿದಂತೆ ವಿವಿಧ ಭಾಷೆಗಳ ಬಗ್ಗೆ ಅಪೂರ್ವ-ಅಪಾರ ಜ್ಞಾನವಿದೆ. ಅದರೆ, ಇವರಲ್ಲಿ ಬಹುತೇಕ ಮಂದಿಗೆ ಈ ಭಾಷೆಗಳನ್ನು ಓದಿ ಅರಗಿಸಿಕೊಳ್ಳುವುದು ಅಸಾಧ್ಯ. ಇಂತಹವರು ಅನ್ಯ ಭಾಷೆಗಳ ಸಾಹಿತ್ಯದ ಬಗ್ಗೆ ಒಲವು ಹೊಂದಿರುವವರು ಕೇಳುವಿಕೆಯ ಕೃತಿಗಳ ಲಾಭ ಪಡೆಯಬಹುದು.  ಉದಾಹರಣೆಗಾಗಿ ಸಾಹಿತ್ಯ ಅಭಿಮಾನಿಗೆ ಮಲೆಯಾಳಂ ಸಾಹಿತ್ಯದಲ್ಲಿ ಲಭ್ಯವಾಗುವ ಮಾಂತ್ರಿಕ ಕಥೆಗಳು ಇಷ್ಟವಾಗಬಹುದು. ಆದರೆ, ಅವುಗಳ ಅನುವಾದ ಕಾಲ-ಕಾಲಕ್ಕೆ ಲಭ್ಯವಿಲ್ಲ. ಅದೇ ರೀತಿ ತೆಲುಗಿನ ರಾಜಾ ಚೆಂಡೂರ್ ಅವರ ಅಪೂರ್ವ ಸಾಹಿತ್ಯ, ಯಂಡೂಮೂರಿ ವೀರೇಂದ್ರನಾಥ್ ಅವರ ಕುತೂಹಲ ಕೆರಳಿಸುವ  ಅಮೋಘ ಸಾಹಿತ್ಯವು ಶೋತೃಗಳ ಕಿವಿಯನ್ನು ತಲುಪಲು ಸಾಧ್ಯ.  ಅದೂ ಅತ್ಯಂತ ಕಡಿಮೆ ಬೆಲೆಯಲ್ಲಿ....!?
 ಬಹುಶ್ಯ ಈ ಪ್ರಕ್ರಿಯೆ ನಿರಂತರವಾಗಿ ಮುಂದುವರಿದರೆ,  ಮುಂಬರುವ ದಿನಗಳಲ್ಲಿ ಕೇಳುವ ಪುಸ್ತಕಗಳು ಮಾತ್ರ ಬಿಡುಗಡೆ ಕಾಣಬಹುದೇನೋ ಎಂಬ ಸಂಶಯ ಕಾಣುತ್ತಿದೆ-ಕಾಡುತ್ತಿದೆ. ಮಾಧ್ಯಮಗಳು ಕೂಡಾ ಕೇಳುವ ಪುಸ್ತಕಗಳಿಗೆ ಹೆಚ್ಚು-ಹೆಚ್ಚು  ಪ್ರಚಾರ ನೀಡಿದಲ್ಲಿ ಇದು ಸಾಹಿತ್ಯಾಸಕ್ತರನ್ನು ಶೀಘ್ರವಾಗಿ ತಲುಪೀತು. ಕೊಡಗಿನ ಸಾಹಿತಿಗಳು ಕೇವಲ ಮುದ್ರಣ ಮಾಧ್ಯಮದಲ್ಲಿ ಪುಸ್ತಕ ಹೊರತರುವುದರ ಬದಲು ಈ ಬಗ್ಗೆ ಚಿಂತನೆ ನಡೆಸುವಂತಾಗಬೇಕು. ಕನ್ನಡ ಭಾಷೆಯಲ್ಲಿ ಅತ್ಯಂತ ಕಡಿಮೆ ಪ್ರಮಾಣದ ಆಡಿಯೋ ಪುಸ್ತಕಗಳು “ಟೋಟಲ್ ಕನ್ನಡ ಡಾಟ್ ಕಾಂ” ನಲ್ಲಿ 10 ರಿಂದ 1200 ರೂಪಾಯಿಗಳವರೆಗೆ ಲಭ್ಯ.
 

ಉಚಿತ ಆನ್‍ಲೈನ್ ಪುಸ್ತಕಗಳು

ಜಗತ್ತಿನ ವಿವಿಧ ಭಾಷೆಯ ಓದುವ ಪುಸ್ತಕಗಳು ಉಚಿತವಾಗಿ ಆನ್‍ಲೈನ್‍ನಲ್ಲಿ ಲಭ್ಯವಿದೆ.  ಕೊಂಡು ಓದಬಹುದಾದ ಪುಸ್ತಕಗಳು ಇವೆ. ಕೆಲವನ್ನು ಡೌನ್‍ಲೋಡ್ ಮಾಡಿಕೊಂಡು ಆಫ್‍ಲೈನ್‍ನಲ್ಲಿಯೂ ಓದಬಹುದು. ಆದರೆ, ಕನ್ನಡ ಸಾಹಿತ್ಯದಲ್ಲಿ ಸಾಕಷ್ಟು ಸಂಖ್ಯೆಯ ಪುಸ್ತಕಗಳು (ಕೇಳುವ) ಆಸಕ್ತರಿಗೆ ಲಭ್ಯವಾಗಲು ಇನ್ನೂ ಅದೆಷ್ಟು ಸಮಯ ಬೇಕಾಗಬಹುದೇನೋ... ತಿಳಿದಿಲ್ಲ.  ಆದರೆ, ಉಚಿತ............!?

ಬಳಕೆಯಾಗದ ಅನುದಾನ

 ಕನ್ನಡ ಭಾಷೆಗೆ ಶಾಸ್ತೀಯ ಸ್ಥಾನಮಾನ ನೀಡಿದ್ದರ ಪರಿಣಾಮ ಭಾಷೆಯ ಬೆಳವಣಿಗೆಗಾಗಿ ಕೇಂದ್ರ ಸರಕಾರ ಭಾರೀ ಮೊತ್ತದ ಅನುದಾನ ನೀಡಿತ್ತು.  ಆದರೆ, ಕನ್ನಡಾಭಿಮಾನಿಗಳ ನಿರ್ಲಕ್ಷ ಮತ್ತು ಜ್ಞಾನದ ಕೊರತೆಯಿಂದಾಗಿ ಇದು ಇನ್ನೂ ಸದ್ಭಳಕೆಯಾಗಿಲ್ಲ. ಈ ಬೃಹತ್ ಮೊತ್ತವನ್ನು ಆಸಕ್ತ ಓದುಗರಿಗೆ ಆನ್‍ಲೈನ್‍ನಲ್ಲಿ ಉಚಿತ ಪುಸ್ತಕಗಳ ಓದಿಗಾಗಿ ಅದರ  ಬಳಕೆಗಾಗಿ ವಿನಿಯೋಗಿಸಬಹುದಿತ್ತು. ಈ ಬಗ್ಗೆ ಯಾವುದೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿಯೂ ಈವರೆಗೆ  ಯಾರೂ ಸಹಾ ಚಕಾರವನ್ನೂ ಎತ್ತಿಲ್ಲ ! ಆದರೆ, ನಮ್ಮವರು ಈ ನಿಟ್ಟಿನಲ್ಲಿ ಚಿಂತನೆಯನ್ನೇ ಮಾಡದಿರುವುದರಿಂದ ಕನ್ನಡ ಸಾಹಿತ್ಯಲೋಕಕ್ಕೆ  ಭರಿಸಲಾರದ ನಷ್ಟವಾಗಿದೆ ಎಂದೂ ಘಂಟಾಘೋಷವಾಗಿ ಹೇಳಬಹುದು.

ಸಾಹಿತ್ಯಾಸಕ್ತರಿಗೆ  ಮಾಹಿತಿ ಕೊರತೆ 

ವಯಸ್ಸಾದವರು ನನಗೆ ದೃಷ್ಟಿದೋಷವಿದೆ. ನಾನು ಇನ್ನು ಓದಲು ಸಾಧ್ಯವಿಲ್ಲ. ಎಂದೇನೂ ಇನ್ನು ಕೊರಗಬೇಕಿಲ್ಲ.  ಕೇಳಿಸಿದರೆ ಸಾಕು.  ಎಲ್ಲರಿಗೂ ಸುಲಭದಲ್ಲಿ ಸಾಹಿತ್ಯ ಜ್ಞಾನ ಲಭ್ಯ !  ಇದರ ಲಾಭವನ್ನು ನಿರಕ್ಷರಿಗಳೂ ಪಡೆಯಬಹುದಾಗಿದೆ. ಅದೇ ಇದರ ವೈಶಿಷ್ಟ್ಯ. ದುರಾದೃಷ್ಟವಶಾತ್ ಈ ವಿಚಾರ ಬಹುತೇಕ ಕನ್ನಡದ ಸಾಹಿತ್ಯಪ್ರಿಯರಿಗೆ ತಿಳಿದಿಲ್ಲ ಎಂದು ವಿಷಾದದಿಂದ ಹೇಳಬೇಕಾಗಿದೆ. ಅದೇನೇ ಇರಲಿ ಬಿಡಿ.... ಕೇಳುವ  ಕನ್ನಡ ಸಾಹಿತ್ಯಕ್ಕೆ ಸಾಕಷ್ಟು ಪ್ರಚಾರ ದೊರೆತಿಲ್ಲ ಎನ್ನುವುದಂತು ಕಟುಸತ್ಯ.  ಕನ್ನಡ ಸಾಹಿತ್ಯ ಪರಿಷತ್‍ನ  ರಾಜ್ಯ, ಜಿಲ್ಲಾ, ತಾಲೂಕು, ಹೋಬಳಿ ಘಟಕಗಳು ಕೇಳುವ ಪುಸ್ತಕಗಳನ್ನು ಶೋತೃಗಳಿಗೆ ನೀಡುವ  ಈ ನಿಟ್ಟಿನಲ್ಲಿ ಚಿಂತನ-ಮಂಥನ ನಡೆಸುವ ಅಗತ್ಯವಿದೆ. ಬದಲಾಗುತ್ತಿರುವ ಕಾಲಘಟ್ಟಕ್ಕೆ ತಕ್ಕಂತೆ ನಾವು ಕಾಲಕ್ಕೆ ತಕ್ಕಂತೆ ಬದಲಾದಲ್ಲಿ ಶ್ರಾವ್ಯ ಮಾಧ್ಯಮದಲ್ಲಿಯೂ ಪುಸ್ತಕಗಳನ್ನು ಬಿಡುಗಡೆ ಮಾಡುವ ಕುರಿತು ಸಾಹಿತಿಗಳು, ವಿಚಾರವಂತರು, ಸಾಹಿತ್ಯಾಸಕ್ತರು ಚಿಂತನೆ ನಡೆಸಿ, ಅದನ್ನು ತ್ವರಿತವಾಗಿ ಕಾರ್ಯರೂಪಕ್ಕೆ ತರಬೇಕಿದೆ.ಹೀಗಾದಲ್ಲಿ ಸಾಹಿತ್ಯವು ಕಡಿಮೆ ಸಮಯ ಮತ್ತು ಖರ್ಚಿನಲ್ಲಿ ಅಧಿಕ ಶೋತೃವರ್ಗಕ್ಕೆ ತಲುಪುವುದು ನಿಶ್ಚಿತ.

ಕಾಳುಮೆಣಸಿಗೆ ಜೈವಿಕ ಗೊಬ್ಬರ


     

 ಕಾಳುಮೆಣಸಿಗೆ ಜೈವಿಕ ಗೊಬ್ಬರ ಏಕೆ ? ಹೇಗೆ ? 

              ಬರಹ : ಕೂಡಂಡ ರವಿ, ಹೊದ್ದೂರು.  


 

ಕೊಡಗು ಸೇರಿದಂತೆ ವಿವಿಧೆಡೆಗಳಲ್ಲಿ ಕಾಳು ಮೆಣಸನ್ನು ಹೆಚ್ಚಿನ ಪ್ರಮಾಣದಲ್ಲಿ ಮಿಶ್ರ ಬೆಳೆಯಾಗಿ ಬೆಳೆಯುವರು. ಇದನ್ನು ಕಡಿಮೆ ಖರ್ಚಿನಲ್ಲಿ  ಬೆಳೆದು  ಅಧಿಕ ಇಳುವರಿ ಪಡೆದ್ದಲ್ಲಿ  ಬೆಳೆಗಾರ ಬಮಧುಗಳಿಗೆ ವರದಾನವಾಗಲಿದೆ.  ಈ ನಿಟ್ಟಿನಲ್ಲಿ ಬೆಳೆಗಾರರಿಗೆ ಪ್ರಯೋಜನವಾಗುವ ನಿಟ್ಟಿನಲ್ಲಿ ಗೋಣಿಕೊಪ್ಪಲಿನ ಕೃಷಿ ವಿಜ್ಞಾನ ಕೇಂದ್ರವು ಹಲವಾರು ಯೋಜನೆಗಳನ್ನು ರೂಪಿಸಿದೆ. 

ಅದರಂತೆ  ಈ ಸಂಸ್ಥೆಯು ಅರ್ಕಾ ಸೂಕ್ಷ್ಮಾಣು ಜೀವಿಗಳ ಸಮೂಹ ಎಂಬ ಜೈವಿಕ ಗೊಬ್ಬರವನ್ನು ಕಾಳು ಮೆಣಸು ಬೆಳೆಯಲ್ಲಿ  ಬಳಸಿ ಶೀಘ್ರ ಸೊರಗು ಮತ್ತು ಹಳದಿ ರೋಗವನ್ನು ಹತೋಟಿ ಮಾಡಲು ಶಿಫಾರಸ್ಸು ಮಾಡಿರುವರು. ಬೆಳೆಗಾರ ಬಂಧುಗಳು ಈ ಸೂಕ್ಷ್ಮಾಣು ಜೀವಿಗಳ ಸಮೂಹವನ್ನು ಕಾಳುಮೆಣಸಿನಲ್ಲಿ ಬಳಸಿ ಇಳುವರಿ ಹೆಚ್ಚಿಸಬೇಕೆಂದು ಕೃಷಿ ವಿಜ್ಞಾನ ಕೇಂದ್ರದ ಸಸ್ಯ ಸಂರಕ್ಷಣಾ ತಜ್ಞ ಡಾ.ವೀರೇಂದ್ರ ಕುಮಾರ್ ಮನವಿ ಮಾಡಿದ್ದಾರೆ. 

        ಗೊಬ್ಬರದಿಂದ ರೋಗ ಹತೋಟಿ ! 

ಅರ್ಕಾ ಸೂಕ್ಷಾಣು  ಸಮೂಹವನ್ನು ಕಾಳುಮೆಣಸಿಗೆ ಬಳಸುವುದರಿಂದ ಬಳ್ಳಿಗಳು ಹೊಸದಾಗಿ ಚಿಗುರು ಬರಲು, ಶೀಘ್ರ ಸೋರಗು ರೋಗವನ್ನು ಹತೋಟಿ ಮಾಡಲು, ಕೊತ್ತು ಬೀಳುವ ಸಮಸ್ಯೆಯನ್ನು ಕಡಿಮೆಮಾಡಲು ಮತ್ತು ಉತ್ತಮವಾಗಿ ಬೇರು ಬರಲು ಸಹಾಯವಾಗಲಿದೆ ಎಂದು ಅವರು ತಿಳಿಸಿದ್ದಾರೆ.  

ಜೈವಿಕ ಗೊಬ್ಬರಗಳು ಸಾರಜನಕವನ್ನು ಸ್ಥಿರೀಕರಿಸುವ, ರಂಜಕ ಮತ್ತು ಸತುವನ್ನು ಕರಗಿಸುವ ಗುಣ ವಿಶೇಷತೆಯಿಂದ ಪ್ರಾಮುಖ್ಯತೆಯನ್ನು ಪಡೆದಿರುತ್ತವೆೆ. ಪ್ರಸ್ತುತ ಜೈವಿಕ ಗೊಬ್ಬರಗಳ ಬಳಕೆ ಬಗ್ಗೆ ಸರಿಯಾದ ಮಾಹಿತಿಯಿಲ್ಲದಿರುವುದರಿಂದ, ಜೈವಿಕ ಸಂಪನ್ಮೂಲಗಳ ಮತ್ತು ತಂತ್ರಜ್ಞಾನದ ಕೊರತೆಯಿಂದಾಗಿ ಜೈವಿಕ ಗೊಬ್ಬರಗಳ ಬಳಕೆ ಕಡಿಮೆಯಾಗಿರುತ್ತದೆ. ಈ ಕೊರತೆಯನ್ನು ನೀಗಿಸಲು ಮತ್ತು ಒಂದೇ ರೀತಿಯ ಜೈವಿಕ ಗೊಬ್ಬರಗಳ ಬಳಕೆಯಿಂದ ಉಂಟಾಗುವ ಅಧಿಕ ಖಚರ್ು ಮತ್ತು ಕಡಿಮೆ ಕಾರ್ಯ ಕ್ಷಮತೆಯ ನ್ಯೂನತೆಯನ್ನು ಹೋಗಲಾಡಿಸಲು  ಬೆಂಗಳೂರಿನ ಭಾರತೀಯ ತೋಟಗಾರಿಕಾ ಸಂಶೋಧನಾ  ಸಂಸ್ಥೆ,  ಜೈವಿಕ ಗೊಬ್ಬರ ಅಕರ್ಾ ಸೂಕ್ಷ್ಮಾಣು ಜೀವಿಗಳ ಸಮೂಹವನ್ನು ಉತ್ಕೃಷ್ಟ ತಂತ್ರಜ್ಞಾನದೊಂದಿಗೆ ಅಭಿವೃದ್ದಿಪಡಿಸಿದೆ ಎಂದು ಅವರು ತಿಳಿಸಿದ್ದಾರೆ.  

 


ಸೂಕ್ಷ್ಮಾಣು ಜೀವಿಗಳ ಸಮೂಹದ ಉಪಯೋಗಗಳು

* ಸಾರಜನಕವನ್ನು ಸ್ಥಿರೀಕರಿಸುವ, ರಂಜಕ ಮತ್ತು ಸತುವನ್ನು ಕರಗಿಸುವ ಹಾಗೂ ಸಸ್ಯ ಬೆಳವಣಿಗೆಯನ್ನು ಪ್ರಚೋದಿಸುವ (ಅಜಟೋಬ್ಯಾಕ್ಟರ್ ಟ್ರೋಪಿಕಾಲಸ್, ಬೆಸಿಲ್ಲಸ್ ಆರ್ಯಭಟ ಮತ್ತು ಸುಡೋಮೋನಾಸ್ ಥಾಯ್ವಾನೆನ್ಸಿಸ್) ಕಾರ್ಯಕ್ಷಮತೆಯನ್ನು ಹೊಂದಿರುತ್ತದೆ.

* ಈ ಸೂಕ್ಷ್ಮಾಣು ಜೀವಿಗಳ ಸಮೂಹವನ್ನು ಬಳಸುವುದರಿಂದ ಕಾಳುಮೆಣಸಿನ ಗಿಡ ಹಳದಿಯಾಗುವುದನ್ನು ತಡೆಗಟ್ಟುತ್ತದೆ ಹಾಗೂ ಬೇರಿನ ಬೆಳವಣಿಗೆ ಉತ್ತಮವಾಗಿದ್ದು, ಶೀಘ್ರ ಸೊರಗು ರೋಗವನ್ನು ಹತೋಟಿಯಲ್ಲಿಡುತ್ತದೆ. 

* ಅರ್ಕಾ ಸೂಕ್ಷ್ಮಾಣು ಜೀವಿಗಳ ಸಮೂಹದ ಬಳಕೆಯಿಂದ ಸಸ್ಯದ ಬೆಳವಣಿಗೆ,ರೋಗ ನಿಯಂತ್ರಣ ಮತ್ತು ಇಳುವರಿ ಅಧಿಕಗೊಳ್ಳುತ್ತದೆ. 

* ಜೈವಿಕ ಗೊಬ್ಬರವನ್ನು ಬೀಜೋಪಚಾರ, ಮಣ್ಣಿಗೆ, ಕೊಟ್ಟಿಗೆ ಗೊಬ್ಬರ ಮತ್ತು ಬೇವಿನ ಹಿಂಡಿಯ ಜೊತೆ ಮಿಶ್ರಣಮಾಡಿ ರೈತರು ಸುಲಭವಾಗಿ ಬಳಸಬಹುದು. 

* ಸಾರಜನಕವನ್ನು ಸ್ಥಿರೀಕರಿಸುವ, ರಂಜಕ ಮತ್ತು ಸತುವನ್ನು ಕರಗಿಸುವ ಹಾಗೂ ಸಸ್ಯ ಬೆಳವಣಿಗೆಯನ್ನು ಪ್ರಚೋದಿಸುವ ಸೂಕ್ಷ್ಮಾಣು ಜೀವಿಗಳನ್ನು ಬೇರೆ ಬೇರೆಯಾಗಿ ಹಾಕುವ ಅವಶ್ಯಕತೆಯಿಲ್ಲದೆ ರೈತರು ವಿವಿಧ ಬೆಳೆಗಳಿಗೆ ಬಳಸಬಹುದು.

ಬೀಜವು ಬೇಗ ಮೊಳೆಕೆಯೊಡೆಯುವಂತೆ ಮಾಡಿ ಸಸ್ಯದ ಬೆಳವಣಿಗೆ ಮತ್ತು ಧೃಡತೆಯನ್ನು ಹೆಚ್ಚಿಸುತ್ತದೆ.

 * ಶಿಫಾರಸ್ಸು ಮಾಡಿದ ಸಾರಜನಕ ಮತ್ತು ರಂಜಕಯುಕ್ತ ಗೊಬ್ಬರಗಳಲ್ಲಿ ಶೇ. 25 ರಷ್ಟು ಪ್ರಮಾಣವನ್ನು ಕಡಿಮೆ ಮಾಡುತ್ತದೆ.


ಬಳಸುವ ವಿಧಾನ 

ಕೊಟ್ಟಿಗೆ ಗೊಬ್ಬರ ಅಥವಾ ಕಹಿಬೇವಿನ ಹಿಂಡಿಗೆ ಸೇರಿಸುವ ವಿಧಾನ: 5 ಕೆ.ಜಿ ಅಕರ್ಾ ಸೂಕ್ಷ್ಮಾಣು ಜೀವಿಗಳ ಸಮೂಹವನ್ನು 500 ಕೆ.ಜಿ ಕೊಟ್ಟಿಗೆ ಗೊಬ್ಬರ ಅಥವಾ 2 ಕೆ.ಜಿ ಅಕರ್ಾ ಸೂಕ್ಷ್ಮಾಣು ಜೀವಿಗಳ ಸಮೂಹವನ್ನು 100 ಕೆ.ಜಿ ಕಹಿಬೇವಿನ ಹಿಂಡಿಯ ಜೊತೆ ಚೆನ್ನಾಗಿ ಮಿಶ್ರಣ ಮಾಡಿ ಕಾಳುಮೆಣಸು ಬೆಳೆಗಳಿಗೆ ಉಪಯೋಗಿಸಬೇಕು. 

ಬೆಳೆಗಳಿಗೆ ನೇರವಾಗಿ ಉಪಯೋಗಿಸುವ ವಿಧಾನ: 4 ಕೆ.ಜಿ ಅಕರ್ಾ ಸೂಕ್ಷ್ಮಾಣು ಜೀವಿಗಳ ಸಮೂಹ ಮತ್ತು ಒಂದು ಕೆ.ಜಿ ಬೆಲ್ಲವನ್ನು 200 ಲೀಟರ್ ನೀರಿನಲ್ಲಿ ಮಿಶ್ರಣ ಮಾಡಿ ಗಿಡದ ಬುಡ ಭಾಗಕ್ಕೆ ನೇರವಾಗಿ (4 ರಿಂದ 5 ಲೀಟರ್ನಷ್ಟು) ಮೇ-ಜೂನ್, ಆಗಸ್ಟ್ ಮತ್ತು ನವೆಂಬರ್ ತಿಂಗಳಿನಲ್ಲಿ ಸುರಿಯಬೇಕು ಎಂದು ಅವರು ಮಾಹಿತಿ ನೀಡಿರುವರು.  

     ಅರ್ಕಾ ಸೂಕ್ಷಾಣು ಜೀವಿಗಳ ಸಮೂಹವು ಗೋಣಿಕೊಪ್ಪಲುವಿನ  ಕೃಷಿ ವಿಜ್ಞಾನ ಕೇಂದ್ರ, ಲಭ್ಯವಿದೆ.   ಬೆಳೆಗಾರ ಬಂಧುಗಳು ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದಾಗಿದೆ. 


ಕಾರ್ಯಕ್ರಮ ಸಂಯೋಜಕರು, ಕೃಷಿ ವಿಜ್ಞಾನ ಕೇಂದ್ರ, ಗೋಣಿಕೊಪ್ಪಲು, ದೂರವಾಣಿ ಸಂಖ್ಯೆ: 08274-247274, ಇವರಿಂದ ಅಧಿಕ ಮಾಹಿತಿಯನ್ನು ಪಡೆಯಬಹುದಾಗಿದೆ. 


  


ಶುಕ್ರವಾರ, ಮಾರ್ಚ್ 9, 2018

ಕೃಷಿಯಲ್ಲಿ ಸುಣ್ಣದ ಬಳಕೆ ಏಕೆ-ಹೇಗೆ ? Lime In Agriculture



                          ಕೃಷಿಯಲ್ಲಿ ಸುಣ್ಣದ ಬಳಕೆ ಏಕೆ-ಹೇಗೆ ?  






ಬರಹ: ಕೂಡಂಡ ರವಿ,







 ಕೊಡಗು ಜಿಲ್ಲೆಯ ಬಹುತೇಕ ಕೃಷಿಕರು ವಿವಿಧ ಬೆಳೆಗಳಿಗೆ ಸುಣ್ಣವನ್ನು ಬಳಸುತ್ತಾರೆ. ಸರ್ವೇ ಸಾಮಾನ್ಯವಾಗಿ ಕಾಫಿ, ಅಡಿಕೆ, ಬಾಳೆ, ಭತ್ತ, ಶುಂಠಿ ಸೇರಿದಂತೆ ವಿವಿಧ ಬೆಳೆಗಳಿಗೆ ಇದನ್ನು ಬಳಸುತ್ತಿರುವುದು ಕಾಣಬರುತ್ತಿದೆ.

ಸುಣ್ಣದ ವಿಧಗಳು: 

ಜಿಲ್ಲೆಯ ಬೆಳೆಗಾರರು ಸಾಮಾನ್ಯವಾಗಿ ಕೃಷಿ ಸುಣ್ಣ, ಡೋಲೋಮೈಟ್ ಸುಣ್ಣ ಮತ್ತು ಚಿಪ್ಪು ಸುಣ್ಣವನ್ನು ಬಳಸುತ್ತಿರುವರು. ಕೃಷಿ ಸುಣ್ಣದ ಬಳಕೆಯಿಂದ ಕ್ಯಾಲ್ಸಿಯಂ ಕಾರ್ಬೋನೇಟ್, ಡೊಲೋಮೈಟ್ ಸುಣ್ಣದ ಬಳಕೆಯಿಂದ ಬೆಳೆಗಳಿಗೆ ಕ್ಯಾಲ್ಸಿಯಂ ಕಾರ್ಬೋನೇಟ್, ಮತ್ತು ಮೆಗ್ನೇಷಿಯಂ ಕಾರ್ಬೋನೆಟ್‍ಗಳು ದೊರೆಯುತ್ತವೆ.






ಕೊಡಗು ಸೇರಿದಂತೆ ಮಳೆ ಹೆಚ್ಚಾಗಿ ಬೀಳುವ ಪ್ರದೇಶಗಳಲ್ಲಿ ಮಣ್ಣಿನ ರಸಸಾರವು ಕೊಚ್ಚಿಹೋಗುತ್ತದೆ. ರೈತರು ನಿರಂತರವಾಗಿ ತಮ್ಮ ತೋಟ ಗದ್ದೆಗಳಿಗೆ ರಾಸಾಯನಿಕ ಗೊಬ್ಬರಗಳನ್ನು ಹಾಕುವುದರಿಂದ ಮಣ್ಣಿನಲ್ಲಿ ರಸಸಾರ(ಪಿ.ಹೆಚ್ ಮೌಲ್ಯ) ವ್ಯತ್ಯಾಸವಾಗುತ್ತದೆ. ಇದನ್ನು ತಡೆಯುವ ಸಲುವಾಗಿ ಕನಿಷ್ಠ ಪ್ರತಿ ಮೂರು ವರ್ಷಗಳಿಗೊಮ್ಮೆ, ರೈತಾಪಿ ವರ್ಗದವರು ತಮ್ಮ ಗದ್ದೆ ತೋಟಗಳಿಗೆ ನಿಗದಿತ ಪ್ರಮಾಣದಲ್ಲಿ ಸುಣ್ಣ ಹಾಕುವಂತೆ ಕೃಷಿ ವಿಜ್ಞಾನಿಗಳು ಸಲಹೆ ನೀಡುತ್ತಾರೆ.








 ಸಾಮಾನ್ಯವಾಗಿ ಮಣ್ಣಿನ ರಸಸಾರವು 5.8ರಿಂದ 6.2ರ ಮಧ್ಯೆ ಇರಬೇಕು. ಆದರೆ, ರೈತಾಪಿ ವರ್ಗದವರು ನಿರಂತರವಾಗಿ ಸುಣ್ಣ ಬಳಸದೇ ರಾಸಾಯನಿಕ ಗೊಬ್ಬರ ಬಳಸುವುದರಿಂದ ಮತ್ತು ಅಧಿಕ ಮಳೆಯಿಂದಾಗಿ ಮಣ್ಣಿನ ಪಿ. ಹೆಚ್. ಮೌಲ್ಯದಲ್ಲಿ ಏರುಪೇರಾಗುತ್ತದೆ. ಇದರ ಪರಿಣಾಮ ಬೆಳೆಗಾರರು ಹಾಕಿದ ಗೊಬ್ಬರವನ್ನು ತೋಟ ಮತ್ತು ಗದ್ದೆಗಳಲ್ಲಿರುವ ಬೆಳೆಗಳು ಪಡೆಯಲು ವಿಫಲವಾಗುತ್ತದೆ. ಗೊಬ್ಬರವು ಪೋಲಾಗುತ್ತದೆ. ಇವೆಲ್ಲದರ ಪರಿಣಾಮ ನಿಗದಿತ ಬೆಳೆಗಳಲ್ಲಿ ಇಳುವರಿಯ ಪ್ರಮಾಣ ಗಣನೀಯವಾಗಿ ಕುಸಿಯುತ್ತದೆ. 







 ಮಣ್ಣು ಪರೀಕ್ಷೆ ಅತ್ಯಗತ್ಯ: 

ಬೆಳೆಗಾರರು ಕಾಲ-ಕಾಲಕ್ಕೆ ತಕ್ಕಂತೆ ತಮ್ಮ ಜಮೀನುಗಳ ಮಣ್ಣನ್ನು ಪರೀಕ್ಷೆ ಮಾಡಿಸಬೇಕು. ಅದರ ಫಲಿತಾಂಶವನ್ನು ಆದರಿಸಿ ತಜ್ಞರು ಶಿಫಾರಸ್ಸು ಮಾಡಿದಂತೆ ಕಾಲಕ್ಕನುಗುಣವಾಗಿ ಗೊಬ್ಬರ, ಸುಣ್ಣ ಇತ್ಯಾದಿಗಳನ್ನು ನೀಡಬೇಕು. ಇದನ್ನು ಅನುಸರಿಸದೇ ರೈತಾಪಿವರ್ಗದವರು ಮನಸೋ ಇಚ್ಛೆ ಗೊಬ್ಬರ-ಸುಣ್ಣ ಹಾಕಿದಲ್ಲಿ ಹಣ, ಶ್ರಮ ವ್ಯರ್ಥವಾಗುತ್ತದೆ. ಅಧಿಕ ರಾಸಾಯನಿಕ ಗೊಬ್ಬರ ಬಳಕೆಯಿಂದಾಗಿ ಮಣ್ಣಿನಲ್ಲಿ ರಸಸಾರದ ಸಮತೋಲನ ತಪ್ಪಿ, ಭೂಮಿಯು ಬರಡಾಗುವ ಸಾಧ್ಯತೆ ಇದೆ. ಕೆಲವೆಡೆಗಳಲ್ಲಿ ಶುಂಠಿ ಬೆಳೆದ ಪ್ರದೇಶಗಳಲ್ಲಿ ಭೂಮಿ ಬಂಜರಾಗುತ್ತಿರುವುದು ಇದೇ ಕಾರಣದಿಂದಲೇ. ಇದು ಅಧಿಕ ರಾಸಾಯನಿಕ ಗೊಬ್ಬರದ ದುರ್ಬಳಕೆಯ ಒಂದು ಉದಾಹರಣೆ ಮಾತ್ರ. ಮೂರು ವರ್ಷಗಳಿಗೊಮ್ಮೆ ಸುಣ್ಣ: ಮಣ್ಣು ಪರೀಕ್ಷೆಯನ್ನು ಆಧಾರವಾಗಿಟ್ಟು ಕೊಂಡು ಜಿಲ್ಲೆಯ ಕೃಷಿಕ ಬಾಂಧವರು ಪ್ರತಿ ಮೂರು ವರ್ಷಗಳಿಗೊಮ್ಮೆ ಪ್ರತಿ ಎಕರೆಗೆ ಸುಮಾರು ಅರ್ಧ ಟನ್‍ನಿಂದ ಒಂದು ಟನ್‍ವರೆಗೆ ಸುಣ್ಣ ನೀಡಬೇಕು. ಮೂರು ವರ್ಷಗಳಿಗೊಮ್ಮೆ ಕೃಷಿ ಸುಣ್ಣವನ್ನು ಜಮೀನಿಗೆ ನೀಡಿದರೆ, ನಂತರದ ಮೂರು ವರ್ಷಕ್ಕೆ ಡೋಲೋಮೈಟ್ ಸುಣ್ಣ ನೀಡಬೇಕು. ಚಿಪ್ಪು ಸುಣ್ಣವು ದುಬಾರಿಯಾಗಿರುವುದರಿಂದ ಬೆಳೆಗಾರರು ಅದನ್ನು ಬಳಸಬಾರದು




.
 ಸಿಂಪಡಣೆ ಸುಣ್ಣವನ್ನು ಬೋಡೋ ದ್ರಾವಣದ ಮಿಶ್ರಣಕ್ಕೆ ಮಾತ್ರ ಬಳಸಬೇಕು. ಉಳಿದ ಉದ್ದೇಶಗಳಿಗೆ ಇದನ್ನು ಬಳಸುವುದು ಸೂಕ್ತವಲ್ಲ. ಈ ಸುಣ್ಣವನ್ನು ಅಧಿಕ ಪ್ರಮಾಣದಲ್ಲಿ ಜಮೀನಿನಲ್ಲಿ ಬಳಸುವುದರಿಂದ ಬೆಳೆಗಳ ಸೂಕ್ಮ ಮತ್ತು ಸಣ್ಣಬೇರುಗಳಿಗೆ ಹಾನಿಯಾಗಬಹುದು ನಿಯಮಿತವಾಗಿ ಜಮೀನಿಗೆ ಸುಣ್ಣವನ್ನು ಬಳಸುವುದರಿಂದಾಗಿ ಸೂಕ್ಮಾಣು ಜೀವಿಗಳ ಪ್ರಮಾಣ ಹೆಚ್ಚಾಗುತ್ತದೆ. ಈ ಹಿನ್ನೆಲೆಯಲ್ಲಿ ಎಲ್ಲಾ ಕೃಷಿಕರು ಸೂಕ್ತ ಸಮಯದಲ್ಲಿ ಸುಣ್ಣವನ್ನು ತಪ್ಪದೇ ಬಳಸಬೇಕು.




 ಸುಣ್ಣವನ್ನೂ ಪರೀಕ್ಷೆ ಮಾಡಿಸಿ

: ಸುಣ್ಣದಲ್ಲಿ ರಸಸಾರದ ಪ್ರಮಾಣ ಶೇ.80 ಇರುತ್ತದೆ. ಕೆಲವರು ಕೊಡಗು ಜಿಲ್ಲೆಯ ವಿವಿಧೆಡೆಗಳಿಗೆ ಸುಣ್ಣವನ್ನು ಸರಬರಾಜು ಮಾಡುತ್ತಿದ್ದಾರೆ. ಕೃಷಿಕರಿಗೆ ಸುಣ್ಣದ ಗುಣಮಟ್ಟದ ಬಗ್ಗೆ ಸಂಶಯ ಬಂದಲ್ಲಿ ಸಮೀಪದ (ಕೊಡಗಿನ ಕೃಷಿಕರು ಚೆಟ್ಟಳ್ಳಿಯ) ಪರೀಕ್ಷಾ ಕೇಂದ್ರದಲ್ಲಿ ಸುಣ್ಣವನ್ನು ಪರೀಕ್ಷೆ ಮಾಡಿಸಿದ ಬಳಿಕವಷ್ಟೇ ಬಳಸುವುದು ಸೂಕ್ತ. ಜಿಲ್ಲೆಯ ಬೆಳೆಗಾರರು ಚಿಪ್ಪು ಸುಣ್ಣವನ್ನು ಬಳಸುವುದಾದರೇ, ಪ್ರತಿ ಏಕರೆಗೆ ಅರ್ಧ ಟನ್ ಸುಣ್ಣವನ್ನು ಬಳಸಬೇಕು. ಸುಣ್ಣ-ಸೂಕ್ತ ಸಮಯ: ಕಾಫಿ, ಅಡಿಕೆ, ಭತ್ತ ಇತ್ಯಾದಿ ಬೆಳೆಗಳ ಕೊಯ್ಲು ಮುಗಿದ ನಂತರ ಸುಣ್ಣವನ್ನು ಜಮೀನಿಗೆ ಚೆಲ್ಲಬೇಕು. ಹೂಮಳೆ ಬರುವುದಕ್ಕೂ ಮುನ್ನಾ ತೋಟದೆಲ್ಲೆಡೆ ಸಮಾನವಾಗಿ ಹರಡುವಂತೆ ಸುಣ್ಣವನ್ನು ಮಣ್ಣಿಗೆ ಸೇರಿಸಬೇಕು. ಆದರೆ, ಕಾಳುಮೆಣಸಿನ ಬಳ್ಳಿಗಳ ಬುಡಕ್ಕೆ ಸುಣ್ಣ ತಾಗದಂತೆ ಎಚ್ಚರಿಕೆ ವಹಿಸಬೇಕು. ಸುಣ್ಣದ ಧೂಲು ಮಾತ್ರ ಅದರ ಬುಡ ತಾಕುವಂತೆ ಸುಣ್ಣ ಎರೆಚಬಹುದಾಗಿದೆ. ತುಂತುರು ನೀರಾವರಿ ಮಾಡುವ ಬೆಳೆಗಾರರು ಅದಕ್ಕೂ ಮುನ್ನಾ ಸುಣ್ಣ ಹಾಕುವುದು ಒಳ್ಳೆಯದು. ಸುಣ್ಣ ಹಾಕುವಾಗ ಮಣ್ಣಿನಲ್ಲಿ ತೇವಾಂಶವಿದ್ದಲ್ಲಿ ಉತ್ತಮ. ತೋಟಗಳಿಗೆ ಸುಣ್ಣ ಹಾಕಿದ ತಿಂಗಳ ಬಳಿಕವೇ ಗೊಬ್ಬರ ನೀಡಬೇಕು.









 (ಮಾಹಿತಿ ಕೃಪೆ: ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರಿನ ಕೇಂದ್ರೀಯ ಕಾಫಿ ಸಂಶೋಧನಾ ಕೇಂದ್ರದ ಹಿರಿಯ ವಿಜ್ಞಾನಿ ನಾಗರಾಜ್ ನೀಡಿದ ಮಾಹಿತಿ ಆಧರಿಸಿ ಲೇಖನವನ್ನು ಸಿದ್ಧಪಡಿಸಲಾಗಿದೆ.)

                        Pepper Nursery   ಕಾಳು ಮೆಣಸು - ಸಸ್ಯಾಭಿವೃದ್ಧಿ      

ಕೊಡಗಿನಲ್ಲಿ ಕಾಳು ಮೆಣಸು ಬಳ್ಳಿಗಳ ಸಸ್ಯಾಭಿವೃದ್ಧಿಗೆ  ಈ ತಿಂಗಳು ಸೂಕ್ತ ಕಾಲವಾಗಿದೆ. ಈ ಹಿನ್ನೆಲೆಯಲ್ಲಿ ಕೃಷಿ ವಿಜ್ಞಾನಿಗಳು, ಪರಿಣಿತರು ಆಸಕ್ತರಿಗೆ ಈ ಕೆಳಕಂಡ ವಿವರಗಳನ್ನು ನೀಡಿದ್ದಾರೆ.

ಸಸ್ಯಾಭಿವೃದ್ಧಿ

ಉಪಯುಕ್ತವಿರುವ ಸಸ್ಯಗಳನ್ನು ಆರಿಸಿ ಕ್ರಮಬದ್ಧ ರೀತಿಯಲ್ಲಿ ವೃದ್ಧಿಪಡಿಸುವುದಕ್ಕೆ ಸಸ್ಯಾಭಿವೃದ್ಧಿ ಎನ್ನುತ್ತೇವೆ. ಆದರೆ, ವಾಣಿಜ್ಯವಾಗಿ ಹೆಚ್ಚಿನ ಇಳುವರಿಯನ್ನು ಪಡೆಯಲು ಹರಿದಾಡುವ ಕಾಂಡದ ತುಂಡುಗಳನ್ನು ಬಳಸುವುದು ಸೂಕ್ತ. 
ವಿವಿಧ ಬಗೆಯ ಕಾಂಡಗಳು : ಕಾಳುಮೆಣಸಿನಲ್ಲಿ ಐದು ವಿವಿಧ ಬಗೆಯ ಕಾಂಡಗಳನ್ನು ಗುರುತಿಸಬಹುದು. ಈ ಕಾಂಡಗಳು ಜೀವ ಶಾಸ್ತ್ರೀಯವಾಗಿ ವಿಭಿನ್ನ ಕಾರ್ಯಗಳನ್ನು ನಿರ್ವಹಿಸುತ್ತವೆ.


ಮುಖ್ಯ ಕಾಂಡಗಳು

ಇದು ಭೂಮಿಯಿಂದ ನೇರವಾಗಿ ಬೆಳೆದು ಆಧಾರ ಮರಕ್ಕೆ ಅಂಟಿಕೊಂಡಿರುತ್ತದೆ.
ಹರಿದಾಡುವ ಕಾಂಡಗಳು: ಇದು ಮುಖ್ಯವಾಗಿ ಕಾಂಡದ ಕೆಳಭಾಗದಲ್ಲಿ ನೆಲದ ಮೇಲೆ ಹರಡಿಕೊಂಡು ಹೋಗುತ್ತವೆ. ಇಂತಹ ಹರಿದಾಡುವ ಕಾಂಡಗಳನ್ನು ಕಾಳುಮೆಣಸಿನ ಗಿಡಗಳನ್ನು ಉತ್ಪಾದಿಸಲು ಬಳಸಬೇಕು.
ಫಸಲು ಬಿಡುವ ಕಾಂಡಗಳು: ಈ ಕಾಂಡಗಳಿಂದ ಕಾಳುಮೆಣಸಿನ ಹೂಗೊಂಚಲುಗಳು ಮೂಡುತ್ತವೆ. ಆದ್ದರಿಂದ ಫಸಲು ಬಿಡುವ ಕಾಂಡಗಳನ್ನು ಪೆÇದೆ ಮೆಣಸು ಗಿಡಗಳನ್ನು ಉತ್ಪಾದಿಸಲು ಬಳಸಬೇಕು.


ಮೇಲಕ್ಕೆ ಹಬ್ಬುವ ಕಾಂಡಗಳು (ಚಿಗುರು ಬಳ್ಳಿ)

 ಈ ಕಾಂಡಗಳು ಮುಖ್ಯ ಕಾಂಡದಿಂದ ನೇರವಾಗಿ ಆಧಾರ ಮರಕ್ಕೆ ಅಂಟಿಕೊಂಡು ಬೆಳೆಯುತ್ತವೆ.
ನೇತಾಡುವ ಕಾಂಡಗಳು: ಈ ಕಾಂಡಗಳು ಫಸಲನ್ನು ಬಿಡದೆ ಕಡೆ ನೇತಾಡುತ್ತಿರುತ್ತವೆ. ಕಾಳುಮೆಣಸಿನಲ್ಲಿ ಹಲವು ಬಗೆಯ ಕಾಂಡಗಳಿದ್ದರೂ ಪ್ರತಿಯೊಂದು ಕಾಂಡಗಳು ವಿಶಿಷ್ಟವಾದ ಕಾರ್ಯಗಳನ್ನು ನಿರ್ವಹಿಸುತ್ತವೆ. ಕಾಳುಮೆಣಸಿನ ಸಸ್ಯಾಭಿವೃದ್ದಿಗಾಗಿ ಹರಿದಾಡುವ ಕಾಂಡಗಳನ್ನು ಮಾತ್ರ ಉಪಯೋಗಿಸಬೇಕು.

ಸಸ್ಯಾಭಿವೃದ್ದಿ ಕ್ರಮ-ವಿವಿಧ ಹಂತಗಳು

ತಾಯಿ ಬಳ್ಳಿಯನ್ನು ಗುರುತಿಸುವುದು.: ಸಸ್ಯಾಭಿವೃದ್ಧಿಗಾಗಿ ವಿಶೇಷವಾದ ಗುಣಗಳಿರುವ ತಾಯಿ ಬಳ್ಳಿಗಳನ್ನು ಗುರುತಿಸಬೇಕು. ಅಂದರೆ ಅಧಿಕ ಇಳುವರಿ ಕೊಡುವ 5 ರಿಂದ 12 ವರ್ಷದೊಳಗಿನ ಸದೃಡವಾಗಿ ಬೆಳೆದ, ಅತಿ ಹೆಚ್ಚು ಕಾಯಿಗೊಂಚಲುಗಳಿರುವ ಹಾಗೂ ರೋಗ ಮುಕ್ತ ಮತ್ತು ರೋಗಗಳನ್ನು ಸಹಿಸಿಕೊಳ್ಳುವ, ನೆಲದ ಮೇಲೆ ಹರಿದು ಹೋಗುವ ಹಂಬು ಬಳ್ಳಿಗಳನ್ನು ಗುರುತಿಸಬೇಕು. ಗುರುತಿಸಿದ ಬಳ್ಳಿಗಳನ್ನು ಡಿಸೆಂಬರ್ – ಜನವರಿ ತಿಂಗಳಿನಲ್ಲಿ ಸುರಳಿ ಸುತ್ತಿ ಆಧಾರ ಮರಕ್ಕೆ ಕಟ್ಟಿ ಇಟ್ಟುಕೊಳ್ಳಬೇಕು. ಗುರುತಿಸಿದ ಹಂಬು ಬಳ್ಳಿಯು ನೆಲದಲ್ಲಿ ಹರಡಿ ಬೇರು ಬಿಡದ ಹಾಗೆ ನೋಡಿಕೊಳ್ಳಬೇಕು.

ಮಿಶ್ರಣ ತಯಾರಿಕೆ

 ಕಾಡು ಮಣ್ಣು, ಕೊಟ್ಟಿಗೆ ಗೊಬ್ಬರ ಹಾಗೂ ಮರಳನ್ನು 2:1:1 ರ ಪ್ರಮಾಣದಲ್ಲಿ ಪದರ ಪದರವಾಗಿ ಹಾಕಿ 30 ದಿನಗಳವರೆಗೆ ಬಿಡಬೇಕು. ಈ ಮಿಶ್ರಣದ ಮೇಲೆ ಚೆನ್ನಾಗಿ ನೀರನ್ನು ಹಾಕಿದ ಮೇಲೆ ಕಪ್ಪು ಪಾಲಿಥೀನ್ ಹಾಳೆಯಿಂದÀ  ಗಾಳಿ ಹೋಗದಂತೆ 30 ದಿನಗಳು ಮುಚ್ಚುವುದರಿಂದ ಮಿಶ್ರಣದ ಉಷ್ಣಾಂಶ ಹೆಚ್ಚಾಗಿ ಕಳೆಯ ಬೀಜಗಳು ಹಾಗೂ ಮಣ್ಣಿನಲ್ಲಿರುವ ಕೀಟಗಳ ಮೊಟ್ಟೆಗಳು ಮತ್ತು ರೋಗಾಣುಗಳು ಸಾಯುತ್ತವೆ. ಈ ರೀತಿ ಮಾಡಿದ ಮಿಶ್ರಣದಿಂದ ರಂಧ್ರವಿರುವ 5 7 ಇಂಚುಗಳ ಅಳತೆಯಿರುವ ಪಾಲಿಥೀನ್ ಚೀಲಗಳನ್ನು ಬಿಗಿಯಾಗಿ ತುಂಬಿಸಬೇಕು. ಈ ಮಿಶ್ರಣವನ್ನು ಪಾಲಿಥೀನ್ ಚೀಲಗಳಿಗೆ ತುಂಬುವ ಮೊದಲು ಸ್ವಲ್ಪ ಪ್ರಮಾಣದ ಶಿಲಾರಂಜಕ ಮತ್ತು ಟ್ರೈಕೊಡರ್ಮಾವೆಂಬ ಜೈವಿಕ ಜೀವಾಣು ಅಥವಾ ಸೂಕ್ಷ್ಮಾಣು ಜೀವಿಗಳ ಸಮೂಹವನ್ನು ಮಿಶ್ರಣಕ್ಕೆ ಸೇರಿಸಿ ಪಾಲಿಥೀನ್ ಚೀಲಗಳಿಗೆ ತುಂಬಬೇಕು.
ಕಾಂಡಗಳ ತಯಾರಿಕೆ: ಆಯ್ಕೆ ಮಾಡಿದ ಹಂಬು ಬಳ್ಳಿಯ ಕಾಂಡಗಳನ್ನು ತಾಯಿ ಬಳ್ಳಿಯಿಂದ ಬೇರ್ಪಡಿಸಿ 1/3 ನೇ ಮಧ್ಯ ಭಾಗದ ತುಂಡುಗಳನ್ನು ಕತ್ತರಿಸಿ ತೆಗೆಯಬೇಕು. ಯಾಕೆಂದರೆ ಗೆಡ್ಡೆಯ ಹಾಗೂ ತುದಿಯ ಭಾಗದ ತುಂಡುಗಳಿಂದ ಸರಿಯಾದ ಬೇರುಗಳು ಮೂಡುವುದಿಲ್ಲ. ಮಧ್ಯಭಾಗದ ತುಂಡುಗಳಿಂದ ಎಲ್ಲಾ ಎಲೆಗಳನ್ನು ಬೇರ್ಪಡಿಸಿ ಒಂದು ಗೆಣ್ಣುಗಳಿರುವಂತೆ ಕತ್ತರಿಸಿ, ತುಂಡಿನ ಕೆಳಭಾಗವನ್ನು (ನೆಡುವ ಭಾಗ) ಚೂಪಾಗಿಸಬೇಕು. ಇದು ಹೆಚ್ಚು ಬೇರು ಬಿಡುವಿಕೆಯಲ್ಲಿ ಸಹಕಾರಿಯಾಗುತ್ತದೆ.

ಕಾಂಡಗಳ ಉಪಚಾರ

ನಾಟಿಗೆ ಉಪಯೋಗಿಸುವ ತುಂಡುಗಳ ತೇವಾಂಶವು ಕಡಿಮೆಯಾಗದಂತೆ ಎಚ್ಚರ ವಹಿಸಬೇಕು.ಈ ಕಾಂಡದ ತುಂಡುಗಳನ್ನು ನರ್ಸರಿಗಳಲ್ಲಿರುವ ಪಾಲಿಥೀನ್ ಚೀಲಗಳಲ್ಲಿ ನಾಟಿಮಾಡುವ ಮೊದಲು 2 ಗ್ರಾಂ ಕಾರ್ಬೆಂಡೆಜಿಮ್ ಎಂಬ ಶಿಲೀಂದ್ರನಾಶಕವನ್ನು ಪ್ರತಿ ಲೀಟರ್ ನೀರಿನಲ್ಲಿ ಮಿಶ್ರಣ ಮಾಡಿದ ದ್ರಾವಣದಲ್ಲಿ 15 ನಿಮಿಷಗಳ ಕಾಲ ಅದ್ದಬೇಕು. ಇದರಿಂದ ಶಿಲೀಂದ್ರದಿಂದ ಬರುವ ರೋಗಗಳನ್ನು ಹತೋಟಿಯಲ್ಲಿಡಬಹುದು.  ಅನಂತರ ಶಿಲೀಂದ್ರದ ದ್ರಾವಣದಲ್ಲಿ ಉಪಚರಿಸಿದ ಕಾಂಡದ ತುಂಡುಗಳನ್ನು ಹೊರ ತೆಗೆದು, ಶೀಘ್ರವಾಗಿ ಬೇರು ಬರಲು ಕಾಂಡದ 2 ಸೆಂ.ಮಿ. ಕೆಳಭಾಗವನ್ನು 1 ನಿಮಿಷಗಳ ಕಾಲ 1000 ಪಿ.ಪಿ.ಎಂ ಐ.ಬಿ.ಎ ಎಂಬ ಬೇರು ಪ್ರಚೋದಕದಲ್ಲಿ ಬಳ್ಳಿಯ ಕಡ್ಡಿಯನ್ನು ತಾಕಿಸಿಬೇಕು.  1000 ಪಿ.ಪಿ.ಎಂ ಐ.ಬಿ.ಎ ದ್ರಾವಣವನ್ನು ತಯಾರಿಸಲು 1 ಗ್ರಾಂ ಐ.ಬಿ.ಎ ಪುಡಿಯನ್ನು ಸ್ವಲ್ಪ ಆಲ್ಕೋಹಾಲ್‍ನಲ್ಲಿ ಕರಗಿಸಿ 1 ಲೀಟರ್ ಸ್ವಚ್ಚವಾದ ನೀರಿನಲ್ಲಿ ಚೆನ್ನಾಗಿ ಬೆರೆಸಬೇಕು.

 ತುಂಡುಗಳನ್ನಾಟಿ

ಸುಧಾರಿತ ಪದ್ಧತಿಯನ್ನು ಅನುಸರಿಸಿ ತಯಾರಿಸಿ ತುಂಬಿದ ಪಾಲಿಥೀನ್ ಚೀಲಗಳಲ್ಲಿ ಉಪಚಾರ ಮಾಡಿದ ಒಂದು ಕಣ್ಣಿನ 2 ತುಂಡುಗಳನ್ನು ಚೀಲದ ಮಧ್ಯಭಾಗದಲ್ಲಿರಿಸಿ ಉಳಿದ ಪಾಲಿಥೀನ್ ಚೀಲದ ಭಾಗವನ್ನು ಮಿಶ್ರಣದಿಂದ ತುಂಬಿಸಬೇಕು. ಇದು ಚಿಗುರೊಡೆಯಲು ಹಾಗೂ ಬೇರು ಬಿಡಲು ಸಹಕಾರಿಯಾಗುತ್ತದೆ
.
ಪಾಲಿಥೀನ್ ಚೀಲಗಳ ಜೋಡಣೆ  
ನಾಟಿ ಮಾಡಿದ ಪಾಲಿಥೀನ್ ಚೀಲಗಳಿಗೆ ಚೆನ್ನಾಗಿ ನೀರು ಉಣಿಸಿ ನಂತರ ಪಾಲಿಥೀನ್ ಚೀಲಗಳನ್ನು ಸಾಲಾಗಿ ಜೋಡಿಸಿ ಪಾಲಿಥೀನ್ ಹಾಳೆಯಿಂದ ಕಮಾನ್ ಹಾಕಾರದಲ್ಲಿ ಮುಚ್ಚಬೇಕು. 15 ರಿಂದ 20 ದಿನಗಳ ನಂತರ ಪಾಲಿಥೀನ್ ಹಾಳೆಯನ್ನು ತೆಗೆದು ಬೆಳೆದಿರುವ ಕಳೆಗಳನ್ನು ತೆಗೆದು ನೀರು ಕೊಟ್ಟು ಪುನ; ಮುಚ್ಚಬೇಕು. ನೀರನ್ನು ಕೊಡುವುದರಿಂದ ಆದ್ರತೆ ಹೆಚ್ಚಾಗಿ 25 ರಿಂದ 30 ದಿನಗಳÀಲ್ಲಿ ಚಿಗುರೊಡೆದು ಬೇರನ್ನು ಬಿಡÀಲಾರಂಬಿಸುತ್ತವೆ.  ಈ ಹಂತದಲ್ಲಿ ಮುಚ್ಚಿದ ಪಾಲಿಥೀನ್ ಹಾಳೆಯನ್ನು ತೆಗೆದು ನೀರನ್ನು ಕೊಡಲು ಪ್ರಾರಂಭಿಸಬೇಕು. ತದನಂತರ ಬೆಳೆದು ತೋಟದಲ್ಲಿ ನಾಟಿ ಮಾಡಲು ಸಿದ್ದವಾಗುತ್ತವೆÉ.
ಗಿಡಗಳ ನಿರ್ವಹಣೆ: ಕಾಂಡದ ತುಂಡುಗಳು ಬೇರು ಬಿಟ್ಟು ಚಿಗುರಿ 3 – 4 ಎಲೆಗಳು ಬಂದ ಮೇಲೆ ಗಿಡಗಳು ಸದೃಡವಾಗಿ ಬೆಳೆಯಲು ನೀರಿನಲ್ಲಿ ಕರಗುವ ರಸಗೊಬ್ಬರಗಳಾದ 19:19:19 (5 ಗ್ರಾಂ ಪ್ರತಿ ಲೀ. ನೀರಿಗೆ) ದ್ರಾವಣವನ್ನು 2 ರಿಂದ 3 ಬಾರಿ 15 ದಿನಗಳ ಅಂತರದಲ್ಲಿ ಎಲೆಗಳ ಮೇಲೆ ಸಿಂಪಡಿಸಬೇಕು.

ರೋಗ-ಕೀಟಗಳ ನಿರ್ವಹಣೆ 

ಬೇರು ಬಿಟ್ಟ ಕಾಂಡಗಳನ್ನು ಅತಿ ಹೆಚ್ಚು ನೆರಳಿರುವ ಪ್ರದೇಶಗಳಲ್ಲಿ ಇಟ್ಟರೆ ರಸ ಹೀರುವ ಕೀಟಗಳಾದ ಥ್ರೀಪ್ಸ್ ಮತ್ತು ಹಿಟ್ಟು ತಿಗಣೆಗಳ ಬಾಧೆಯು ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ. ಇವುಗಳ ಹತೋಟಿಗಾಗಿ 2 ಮಿ.ಲಿ ಡೈಮಿಥೋಯೆಟ್ ಅಥವಾ 0.5 ಮಿ.ಮಿ. ಇಮೀಡಾಕ್ಲೋಪ್ರಿಡ್ ಕೀಟನಾಶಕವನ್ನು ಪ್ರತಿ ಲೀ. ನೀರಿಗೆ ಬೆರಸಿ ಸಿಂಪಡಿಸಬೇಕು.  ನರ್ಸರಿ ಪ್ರದೇಶದಲ್ಲಿ ಅತಿಯಾದ ನೆರಳು ಮತ್ತು ಆದ್ರತೆ ಇದ್ದರೆ ಶಿಲೀಂದ್ರದಿಂದ ಬರುವ ರೋಗಗಳಾದ ಎಲೆಕೊಳೆ ರೋಗ ಹಾಗೂ ಬೇರು ಕೊಳೆ ರೋಗ ಕಾಣಿಸಿಕೊಳ್ಳುತ್ತದೆ. ಇವುಗಳ ಹತೋಟಿಗಾಗಿ 3 ಗ್ರಾಂ ತಾಮ್ರದ ಆಕ್ಸಿಕ್ಲೋರೈಡ್‍ನ್ನು ಪ್ರತಿ ಲೀ. ನೀರಿಗೆ ಬೆರಸಿ ಸಿಂಪಡಿಸಬೇಕು.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ - ವೀರೇಂದ್ರ ಕುಮಾರ್. ಕೆ.ವಿ ಮತ್ತು ಡಾ.ಸಾಜೂ ಜಾರ್ಜ್ ಐ.ಸಿ.ಎ.ಆರ್-ಕೃಷಿ ವಿಜ್ಞಾನ ಕೇಂದ್ರ, ಗೋಣಿಕೊಪ್ಪಲು , ದೂರವಾಣಿ: 08274-247274

ಬುಧವಾರ, ಮಾರ್ಚ್ 7, 2018

ಆನ್ಲೈನ್‍ನಲ್ಲಿ ಅಮರ ಚಿತ್ರ ಕಥೆಗಳು... ! Amara Chithra Katha in Online


                                                 ಆನ್ಲೈನ್‍ನಲ್ಲಿ ಅಮರ ಚಿತ್ರ ಕಥೆಗಳು... ! 


ಬರಹ: ಕೂಡಂಡ ರವಿ



50 ವರ್ಷಗಳ ಹಿಂದೆ ಆರಂಭವಾದ ಅಮರ ಚಿತ್ರ ಕಥೆಯ ಮೂಲ ಉದ್ಧೇಶ ಅಬಾಲ ವೃದ್ಧರಲ್ಲಿ ಓದುವ ಪ್ರವೃತ್ತಿಯನ್ನು ಬೆಳೆಸುವುದಾಗಿತ್ತು.  ತನ್ಮೂಲಕ ಜ್ಞಾನ ಸಂವರ್ಧನೆ ಜೊತೆಗೆ ಭಾರತೀಯ ಪುರಾಣಗಳ ಬಗ್ಗೆ ಓದುಗರಲ್ಲಿ ಅರಿವು ಮೂಡಿಸುವುದಾಗಿತ್ತು. ಈ  ಹಾಸ್ಯ ಸರಣಿ ಪುಸ್ತಕಗಳು ಮಹಾಕಾವ್ಯಗಳು, ಪುರಾಣಗಳು, ನೀತಿಕಥೆಗಳು, ಹಾಸ್ಯ ಸೇರಿದಂತೆ ವಿವಿಧ ಪ್ರಕಾರಗಳಲ್ಲಿ ಕೇಂದ್ರೀಕೃತವಾಗಿದೆ. ಇದು ಭಾರತದ ಪ್ರಥಮ ಮತ್ತು ಅತ್ಯಂತ ಜನಪ್ರಿಯವಾದ ಚಿತ್ರ ಕಥಾ ಸರಣಿಯಾಗಿದೆ.


100 ಮಿಲಿಯನ್  ಮಾರಾಟ ! 
ಈವರೆಗೆ ಸುಮಾರು 100 ಮಿಲಿಯನ್‍ಗಿಂತಲೂ ಅಧಿಕ ಪ್ರತಿಗಳು 50ಕ್ಕೂ ಅಧಿಕ ಭಾಷೆಗಳಲ್ಲಿ ನೂರಾರು ಬಗೆಯ ಹಾಸ್ಯಮಯ, ವಿನೋದಮಯ ಪುಸ್ತಕಗಳನ್ನು ಸರಣಿ ರೂಪದಲ್ಲಿ ಪ್ರಕಟಿಸಿವೆ. ಇವುಗಳು ಅಂದಿನ ಕಾಲಘಟ್ಟದಲ್ಲಿ ಬೃಹತ್ ಪುಸ್ತಕ ಮಳಿಗೆಗಳಿಂದ ಸಣ್ಣ ಪುಟ್ಟ ಅಂಗಡಿಗಳವರೆಗೆ ಎಲ್ಲಾ ಕಡೆ ಧಾರಾಳವಾಗಿ ದೊರೆಯುತ್ತಿದ್ದವು. ಇವುಗಳಲ್ಲಿ ಸಂಪೂರ್ಣ ಕಥೆಯು ಸಚಿತ್ರದಿಂದ ಕೂಡಿದ್ದು, ಅಬಾಲ ವೃದ್ಧಾದಿಗಳನ್ನು ಸಲೀಸಾಗಿ ಓದಿಸಿಕೊಂಡು ಹೋಗುವಂತಿತ್ತು. ಅನಂತ್ ಪೈಯವರ ಪರಿಶ್ರಮದಿಂದಾಗಿ ಭಾರತದ ಮಹಾಕಾವ್ಯಗಳು, ಪುರಾಣಗಳು, ಇತಿಹಾಸಗಳು, ಸಾಹಿತ್ಯ ಲೋಕದಲ್ಲಿ ಬೃಹತ್ ಸುನಾಮಿಯನ್ನೇ ಎಬ್ಬಿಸಿತು. ಈ ಮಾಲಿಕೆಯು ಕೋಟ್ಯಾಂತರ ಮನೆ-ಮನಗಳಿಗೆ ಅತ್ಯಂತ ವೇಗವಾಗಿ ಲಗ್ಗೆಯಿಟ್ಟಿತು.



ಭಾರತೀಯ ಪರಂಪರೆಯ ಪರಿಚಯ
 “ಭಾರತದ ಖಜಾನೆಗಳು“ ಎಂಬ ಹೆಸರಿನಲ್ಲಿ  ವಿಶ್ವಮಟ್ಟದಲ್ಲಿ ತನ್ನ ಚಂದಾದಾರಿಕೆಯನ್ನು ಆರಂಭಿಸಿತು. ಪರಿಣಾಮವಾಗಿ ಎಲ್ಲಾ ವಯಸ್ಸಿನವರೂ ಈ ಮಾಲಿಕೆಗಳ ಪುಸ್ತಕಗಳನ್ನು ಖರೀದಿಸಿ ಓದಲು  ತೊಡಗಿದರು. ಪರಿಣಾಮ ಭವ್ಯ ಭಾರತದ ಪರಂಪರೆಯು ಎಲ್ಲರ ಮನಗಳಲ್ಲಿ ಹಾಸುಹೊಕ್ಕಾಂತಾಯಿತು ! ಇದು ಅಂದಿನ ಕಾಲದಲ್ಲಿ ಎಷ್ಟು ಅದೆಷ್ಟು ಪ್ರಭಾವಶಾಲಿಯಾಗಿತೆಂದರೆ, ಬಹುತೇಕ ವಾಣಿಜ್ಯ ಉತ್ಪನ್ನಗಳು ತಮ್ಮ ವಸ್ತುಗಳಲ್ಲಿ ಅಮರ ಚಿತ್ರ ಕಥೆಗಳ ಚಿತ್ರಗಳನ್ನು ಮುದ್ರಿಸುವಂತಾಗಿತ್ತು ! ಇದು ಆರಂಭವಾದ ಕೆಲವೇ ಸಮಯದಲ್ಲಿ ಹಲವಾರು ತಲೆಮಾರುಗಳ ಓದುಗರಿಗೆ ಅಚ್ಚುಮೆಚ್ಚಿನ ವಸ್ತುವಾಗಿ ಮಾರ್ಪಟ್ಟಿತ್ತು. ಬಳಿಕ  ಪ್ರಾದೇಶಿಕ ಭಾಷೆಗಳಿಗೂ ಈ ಕಥಾ ಸಾಮ್ರಾಜ್ಯದ ವಿಸ್ತರಣೆಯಾಯಿತು. ಅದಕ್ಕೆ ಸರಿಸಮಾನವಾಗಿ ಆಯಾ ಪ್ರಾದೇಶಿಕ ವೀರರು-ಶೂರರು, ರಾಜ- ಮಹಾರಾಜರು ಸೇರಿದಂತೆ ಹಿಂದೂ ದೇವಾನುದೇವತೆಗಳಾದ ಕೃಷ್ಣ, ರಾಮ, ದುರ್ಗಾ ಸೇರಿದಂತೆ ಶಾಸ್ತೀಯ ಕಥೆಗಳೂ ಚಿತ್ರಿಸಲ್ಪಟ್ಟವು. 1970ರ  ದಶಕದಲ್ಲಿ ಮಧ್ಯಯುಗದ ರಾಜರುಗಳಾದ ಶಿವಾಜಿ, ಅಕ್ಬರ್ ಮತ್ತು ಭಗತ್ ಸಿಂಗ್, ಗಾಂಧೀಜಿ ಸೇರಿದಂತೆ ವಿವಿಧ ಸ್ವಾತಂತ್ರ್ಯ ಹೋರಾಟಗಾರನ್ನು ಒಳಗೊಂಡಂತೆ ಭಾರತೀಯ ಐತಿಹಾಸಿಕ ಅಂಶಗಳ ಸೇರ್ಪಡೆ ಮಾಡಲಾಯಿತು.  ತರುವಾಯ ಸಮಾಜ ಸುಧಾರಕರು ಕಥೆಗಳು ಸೇರ್ಪಡೆಗೊಂಡವು.  ಕಳೆದ ಕೆಲ ದಶಕಗಳಲ್ಲಿ ಈ ಇಂಗ್ಲೀಷ್ ಭಾಷೆಯ ಕಾಮಿಕ್ಸ್ ಸರಣಿಯು ಮಧ್ಯಮ ವರ್ಗದ ಭಾರತ ಮತ್ತು ಜಾಗತಿಕ ಭಾರತೀಯ ವಲಸಿಗರೊಂದಿಗೆ ವ್ಯಾಪಕವಾಗಿ ಜನಪ್ರಿಯವಾಯಿತು.



ಸರಳ ಭಾಷಾ ಶೈಲಿ
ಇದು ಒಂದು ರೀತಿಯಲ್ಲಿ ಎಲ್ಲಾ ವಯೋಮಾನದ ಓದುಗರ ಧಾರ್ಮಿಕ ಮತ್ತು ರಾಷ್ಟ್ರೀಯ ಶಿಕ್ಷಣದ ಮೂಲಭೂತ ಪಠ್ಯಗಳು ಎಂಬಂತಾದವು. ಈ ಸರಣಿಯ ಕಥಾ ಮಾಲಿಕೆಗಳು ವಿದ್ವಾಂಸರಿಗೆ ಗಂಭೀರ ಅಧ್ಯಯನ ಮಾಡಲು ಹೊಸ ವಿಷಯ ಮತ್ತು ಪ್ರೇರಪಣೆಯನ್ನು ನೀಡಿತು ಎನ್ನಬಹುದು. ಇದು ಅತ್ಯಂತ ಸರಳವಾದ ಭಾಷೆಯಲ್ಲಿದ್ದು, ಮಕ್ಕಳು, ಜನಸಾಮಾನ್ಯರು, ಯಾರ ಸಹಾಯವಿಲ್ಲದೆ ಮನೋರಂಜನೆ ಮತ್ತು ಜ್ಞಾನವನ್ನು ಪಡೆಯಬಹುದಾಗಿದೆ.  ಅಂದು ಈ ಕಾಮಿಕ್ ಪುಸ್ತಕಗಳನ್ನು ಜನತೆಯೇ, ಗ್ರಂಥಾಲಯಗಳ ಸಹಾಯವಿಲ್ಲದೇ ನೇರವಾಗಿ ಎರವಲು ಪಡೆಯುತ್ತಿದ್ದರು. ಇದರಲ್ಲಿ ಪಂಚತಂತ್ರ ಕಥೆಗಳನ್ನು ಮತ್ತು ನೀತಿಕಥೆಗಳನ್ನು ಸುಮಾರು 50ಕ್ಕೂ ಅಧಿಕ ಭಾಷೆಗಳಿಗೆ ಭಾಷಾಂತರಿಸಲಾಗಿದೆ. ಬಣ್ಣ-ಬಣ್ಣದ ಚಿತ್ರಗಳು ಮಕ್ಕಳ ಮನಸೂರೆಗೊಳ್ಳುವಲ್ಲಿ ಯಶಸ್ವಿಯಾಯಿತು. ಅತ್ಯಂತ ಕಡಿಮೆ ಪುಟಗಳನ್ನು ಹೊಂದಿದ ಕಿರು ಹೊತ್ತಿಗೆಗಳು ಅತ್ಯಂತ ಕಡಿಮೆ ಸಮಯದಲ್ಲಿ ಎಲ್ಲರ ಹೃನ್ಮನವನ್ನು ಸೂರೆಗೊಂಡವು. ಮಕ್ಕಳಿಗೆಂದು ಖರೀದಿಸಿ ತಂದ ಪುಸ್ತಕಗಳು ಪೋಷಕರ ಮನಗೆಲ್ಲಲಾರಂಭಿಸಿದವು. ಪರಿಣಾಮ ಹಿರಿಯರು ಸಹಾ ಈ ಪುಸ್ತಕಗಳನ್ನು ಕೊಳ್ಳಲಾರಂಭಿಸಿದರು. ಈ ಕಾಮಿಕ್ ಸರಣಿ ಕಾಲಕಳೆದಂತೆ ಬ್ರಹ್ಮಾಂಡದ ಸುತ್ತಲೂ ತಿರುಗಿತು. ಇದರಲ್ಲಿ ಫ್ಯಾಂಟಮ್, ಮಾಂಡ್ರೆಕ್ ಸೇರಿದಂತೆ ಇತರ ಕಥೆಗಳು ಸೇರಿಕೊಂಡವು. ಇವು ಅಂದಿನ ದಿನಗಳಲ್ಲಿ ಅದೆಷ್ಟು ಜನಪ್ರಿಯವಾಗಿತ್ತೆಂದರೆ ಹೊಸ ಸರಣಿಯ ಪುಸ್ತಕಗಳು ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಬಿಸಿ ದೋಸೆಯಂತೆ ಮಾರಾಟವಾಗಿ ಬಿಡುತ್ತಿದ್ದವು.
ಡಿಜಿಟಲ್ ಅಂಗಡಿಯಲ್ಲಿ: ಎಎಂಕೆ ಕಾಮಿಕ್ಸ್ ಅಪ್ಲಿಕೇಶನ್ಸ್ ಅಮರ ಚಿತ್ರ  ಕಥೆಯ ಡಿಜಿಟಲ್ ಅಂಗಡಿ. ಈಗ ಆಂಡ್ರಾಯಿಡ್ ಟ್ಯಾಬ್ಲೆಟ್‍ಗಳು, ಮತ್ತು ಮೊಬೈಲ್‍ಗಳಿಗಾಗಿ ದೊರೆಯುತ್ತದೆ.ಇದರ ಮೂಲಕ ಹಲವಾರು ಕಾಮಿಕ್ ಕಥೆಗಳನ್ನು ಉಚಿತವಾಗಿ ಡೌನ್‍ಲೋಡ್ ಮಾಡಬಹುದು. ಇದರಲ್ಲಿ ಮಾಸಿಕ, ವಾರ್ಷಿಕ ಚಂದಾದಾರಿಕೆಯು ಲಭ್ಯವಿದೆ. ಹೊಸ ಓದುಗರಿಗೆ ಚಂದಾ ತೀರಾ ಕಡಿಮೆ ಇದೆ. ಜೊತೆಗೆ ಫೇಸ್‍ಬುಕ್‍ನ ಪುಟದಲ್ಲಿ ಅಮರ ಚಿತ್ರ ಕಥೆಯು ಲಭ್ಯವಿದೆ. ಈ ಪುಸ್ತಕ ಸರಣಿಯನ್ನು ಪ್ರಪಂಚದಾದ್ಯಂತದ ಶಿಕ್ಷಕರು ಕಲಿಕೆಗಾಗಿಯೂ ಶಿಫಾರಸ್ಸು ಮಾಡಿದ್ದಾರೆ.



ವೈವಿಧ್ಯಮಯ ಆವೃತ್ತಿಗಳು 

  ವೆಬ್ ಸೈಟ್‍ನಲ್ಲಿ ಓದುಗರಿಗೆ ಅನುಕೂಲವಾಗುವಂತೆ ಅಮರ ಚಿತ್ರಕಥೆಗಳು ಪಿಡಿಎಫ್, ಇ ಪಬ್, ಪ್ಲೈನ್ ಟೆಕ್ಸ್ಟ್ , ಡೈಸಿ ಮತ್ತು ಕಿಂಡಲ್ ಆವೃತ್ತಿಗಳಲ್ಲಿ ಲಭ್ಯವಿದೆ. ಪ್ರತಿ ಪುಸ್ತಕವು ಸುಮಾರು 4 ರಿಂದ 9, 500 ಕೆ. ಬಿ  ಗಾತ್ರವನ್ನು ಹೊಂದಿದೆ. ಇದಕ್ಕೆ ಸಂಬಂಧಿಸಿದಂತೆ ಹಲವಾರು ಅಂತರ್ ಜಾಲತಾಣಗಳಿವೆ. ಕೆಲವು ಮಕ್ಕಳಿಗಾಗಿ ಶೇಕಡಾ 60ರವರೆಗೆ ರಿಯಾಯ್ತಿಯನ್ನು ನೀಡುತ್ತಿವೆ. ಕೆಲವು ವೆಬ್‍ಸೈಟ್‍ಗಳಲ್ಲಿ ಪುಸ್ತಕಗಳು 31 ರೂಪಾಯಿಗಳಿಂದ ಆರಂಭ. “ ಯೂ ಟ್ಯೂಬ್”  ಸೇರಿದಂತೆ ವಿವಿಧ ಕಡೆಗಳಲ್ಲಿ ಆಮರ ಚಿತ್ರ ಕಥೆಗಳ ಆನಿಮೇಟೆಡ್ ವಿಡಿಯೋ ಕಥೆಗಳು, ಚಲನಚಿತ್ರಗಳು ಉಚಿತವಾಗಿ ದೊರೆಯುತ್ತವೆ.
ಜನಪ್ರಿಯತೆಯ ಉತ್ತುಂಗದಲ್ಲಿ: ಅಂದಿನ ಕಾಲದಲ್ಲಿ  ವಿವಿಧ ಪತ್ರಿಕೆಗಳಲ್ಲಿ ಬರುತ್ತಿದ್ದ ಮೊದ್ದುಮಣಿ, ಡಾಬೂ, ಮಜನೂ, ಕಪೀಶ, ಫ್ಯಾಂಟಮ್, ಶೂಜ, ವಿಕ್ರಮ್, ಪುಟ್ಟೂ ಮುಂತಾದ ಕಾರ್ಟೂನ್ ಪಾತ್ರಗಳಿಗೆ ಜೀವ ತುಂಬಿದ್ದ ಕಲಾವಿದರೆಂದರೆ ಪ್ರಾಣ್ ಕುಮಾರ್ ಶರ್ಮ. ಉದಯವಾಣಿಯಲ್ಲಿ ಪ್ರಕಟವಾಗುತ್ತಿದ್ದ  ರಾಮು-ಶ್ಯಾಮು ಅಂಕಲ್ ಪೈಯವರ ರಚನೆಯಾಗಿತ್ತು.  ಇವುಗಳು ಅಂದಿನ ದಿನಗಳಲ್ಲಿ ಜನಪ್ರಿಯತೆಯ ಉತ್ತುಂಗವನ್ನೇರಿತ್ತು ಎಂಬುವುದನ್ನು ಓದುಗರು ಇಂದಿಗೂ ನೆನಪಿಸಿಕೊಳ್ಳುತ್ತಿದ್ದಾರೆ.
 
ಅಜರಾಮರ ಅಂಕಲ್ ಪೈ 
 ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದ್ರೆಯ ಅನಂತ್ ಪೈ 1967ರಲ್ಲಿ ಅಮರ ಚಿತ್ರ ಕಥೆಯ ಮೂಲ ಸೃಷ್ಟಿಕರ್ತೃ.  ಇವರು ಅಂಕಲ್ “ಪೈ” ಎಂದು ಪ್ರಖ್ಯಾತರಾಗಿದ್ದರು. ಇವರನ್ನು ಭಾರತದ ಕಾಮಿಕ್ಸ್ ಕಥೆಗಳ “ಪಿತಾಮಹ” ಎನ್ನಬಹುದು. ಇದೀಗ ಈ ಕಥಾ ಸರಣಿಗೆ 50ರ ಸಂಭ್ರಮ (ಸುವರ್ಣ ಮಹೋತ್ಸವ ವರ್ಷ) . ಪೈ ಅಮರ ಚಿತ್ರ ಕಥೆಗಳನ್ನು ಓದುಗರಿಗೆ ನೀಡಿ ಓದುಗರ ಮನದಲ್ಲಿ ಅಜರಾಮರರಾದರು. ಈ ಮೂಲಕ ಅವರನ್ನು ನೆನಪಿಸಿಕೊಳ್ಳುತ್ತಾ ಅಗಲಿದ ಆತ್ಮಕ್ಕೆ “ಅಕ್ಷರಾಂಜಲಿ” ಸಮರ್ಪಿಸೋಣ. ಭಾರತದ ಶಿಕ್ಷಣ ವ್ಯವಸ್ಥೆಯೂ ಇಂದೂ ಸಹಾ ಬ್ರಿಟಿಷ್ ಆಡಳಿತ ಶಾಹಿಗಳು ಹಿಂದೆ ನಿರ್ದೆಶಿಸಿದ ಪಠ್ಯಕ್ರಮವನ್ನು ಹೊಂದಿವೆ. ಇದನ್ನು ಅಮರ ಚಿತ್ರ ಕಥೆಗಳನ್ನು ಬಳಸಿ,  ಕೊಂಚ ಬದಲಾಯಿಸಲೂ ಸಾಧ್ಯತೆಗಳಿವೆ. ಈ ಬಗ್ಗೆ ಪಠ್ಯ ಪುಸ್ತಕ ರಚನಾ ಮಂಡಳಿ, ಪ್ರಾಥಮಿಕ ಶಾಲಾ ಆಡಳಿತ ಮಂಡಳಿಗಳು ಚಿಂತನ-ಮಂಥನ ನಡೆಸುವ ಅವಶ್ಯಕತೆ ಇದೆ.